..
ನಿನಗಿನ್ನ ನಾನಧಿಕ ಇಂದಿರೇಶಾ ಎನಗೆ ನಾಥನು ಉಂಟು ಅನಾಥನು ನೀನು ಪ
ಕುಲಗೋತ್ರ ನಿನಗಿಲ್ಲ ಕುಲಗೋತ್ರ ಎನಗುಂಟು ಲಲಿತರೂಪನು ನಾನು ಅ
ರೂಪ ನೀನೂ ಚೆಲುವ ಸುಗುಣಿಯು ನಾನು ಅಗುಣರೂಪನು ನೀನು ಬಲಹೀನನು ನೀನು ಸಬಲ ನಾನು ದೇವಾ 1
ನಾಮಧೇಯನು ನಾ ಅನಾಮಧೇಯನು ನೀನು ಕಾಮಕಾಮುಕ ನಾ ಅಕಾಮಿ ನೀನು ಪಾರನು ನಾ ಅಪಾರನು ನೀನಯ್ಯಾ ನೇಮಬದ್ಧನು ನಾ ಅನೇಮಿ ನೀನು 2
ಗತಿಯು ನೀನೆಗೈಯ್ಯ ಸದ್ಗತಿಯು ನಿನಗಾರಯ್ಯ ವ್ರತನೇಮ ಎನಗುಂಟು ನಿನಗಾವುವೋ ಸತತಮಾನಿಯು ನಾನು ಅಮಾನಿ ನೀನಯ್ಯ ವಿತತಕರ್ಮಿಯು ನಾನು ಕರ್ಮಹೀನನು ನೀನು 3
ಪತಿತಪಾತಕಿ ನಾನು ಪತಿತಪಾವನನು ನೀನು ರತಿಬದ್ಧನು ನಾ ವಿರತಿಯು ನೀನು ಶ್ರೀತಜನರಪಾಲ ಆಶ್ರಿತ ನಾನು ನಿನಗೈಯ್ಯ ಸತತಪಾಲಕ ನೀನು ಪಾಲ್ಯ ನಾನು 4
ದೂತರಾಧಮ ನಾನು ದೂತವತ್ಸಲ ನೀನು ಆತುರನು ನಾನು ನಿಜದಾತ ನೀನು ನೀತ ಗುರುಜಗನ್ನಾಥವಿಠಲರೇಯ ತಾತ ನೀ ಎನಗಯ್ಯ ನಿನಗಾವ ತಾತಾ 5
***