ankita ಲಕುಮೀಶ
ರಾಗ: [ಆರಭಿ] ತಾಳ: [ಆದಿ]
ಪಾಲಿಸು ಎನ್ನನು ಬಾಲಕನೆನುತಲಿ ರಾಘವೇಂದ್ರ ರಾಘವೇಂದ್ರ ಪ
ಭೂಲೋಲಸುತೆ ತುಂಗಕೂಲ ಸು-
ನಿಲಯನೆ ರಾಘವೇಂದ್ರ ರಾಘವೇಂದ್ರ ಅ ಪ
ಶ್ರೀಶನ ಪೊಂದಿದ ದಾಸರ ಸಂಗಾಬ್ಧಿ
ಈಸುವಂದದಿ ಮಾಡೋ ರಾಘವೇಂದ್ರ ರಾಘವೇಂದ್ರ
ಹೇಸಿ ಜನರ ಸಹವಾಸ ಬಿಡಿಸಿ ಶ್ರೀನಿವಾಸನ ತೋ-
ರಿಸೋ ರಾಘವೇಂದ್ರ ರಾಘವೇಂದ್ರ 1
ಈರನಶಾಸ್ತ್ರ ಪೇಳಿ ಕೀರನ ತಂದಿಯ
ಸಾರುವ ಭಾಗ್ಯವ ಕೊಡು ರಾಘವೇಂದ್ರ ರಾಘವೇಂದ್ರ
ಬಾರಿಬಾರಿಗೆ ಕಂಸಾರಿಯೇ ಜಗದ್ರಥ
ಸಾರಥಿ ಎಂದು ತಿಳಿಸೋ ರಾಘವೇಂದ್ರ ರಾಘವೇಂದ್ರ 2
ಮೂರೆರಡುರೂಪ ಹರಿಯ ಮೂರೆರಡುಭೇದವ
ಮೂರುಕಾಲದಿ ತಿಳಿಸೋ ರಾಘವೇಂದ್ರ ರಾಘವೇಂದ್ರ
ಮೂರಿಂದ ಸುಖವಿಲ್ಲ ಮೂರು ಮಾತ್ರ ನೀಡಯ್ಯ
ಮೂರೊಂದವತಾರಿ ರಾಘವೇಂದ್ರ ರಾಘವೇಂದ್ರ 3
ಹಿಂದೆ ಪ್ರಹ್ಲಾದನಾಗಿ ತಂದೆಗೆ ನರಹರಿಯ
ಅಂದು ಸ್ತಂಭದಿ ತೋರ್ದ ರಾಘವೇಂದ್ರ ರಾಘವೇಂದ್ರ
ನಂದನಂದನ ಪದ ಛಂದದಿ ದ್ವಾಪರದಿ
ವಂದಿಸಿದ ಬಾಹ್ಲೀಕ ರಾಘವೇಂದ್ರ ರಾಘವೇಂದ್ರ 4
ಕಲಿಯುಗದಲಿ ಬುದ್ಧಿ ಕಲಿಸಲು ಪುಟ್ಟಿ ಹರಿಯ
ಒಲಿಸಿದ ವ್ಯಾಸರಾಜ ರಾಘವೇಂದ್ರ ರಾಘವೇಂದ್ರ
ಚಲುವ ವ್ಯಾಸತ್ರಯಗಳ ರಚಿಸಿ ಜ್ಞಾನದ
ಹೊಳೆ ಹರಿಸಿದ ಸಿರಿ ರಾಘವೇಂದ್ರ ರಾಘವೇಂದ್ರ 5
ಹರಿಬಿಲದಿ ವಾಸಗೈದ ಹರಿವರದಿಂದ ಪುಟ್ಟಿ
ವರ ವೆಂಕಟಾಖ್ಯನಾದ ರಾಘವೇಂದ್ರ ರಾಘವೇಂದ್ರ
ಮರುತಶಾಸ್ತ್ರಾಬ್ಧಿ ಮಚ್ಛ ಗುರುಸುಧೀಂದ್ರರ ಕರ-
ಸರಸಿಜೋದ್ಭವನಾದ ರಾಘವೇಂದ್ರ ರಾಘವೇಂದ್ರ 6
ಜಡಮತಿ ಮತರನು ಪುಡಿಪುಡಿ ಮಾಡಿ ಸುಧೆಗೆ
ಬಿಡದೆ ಪರಿಮಳಗೈದ ರಾಘವೇಂದ್ರ ರಾಘವೇಂದ್ರ
ಪೊಡವಿಜ್ಯಾಣ್ಮ ಮೂಲ ಒಡೆಯ ಲಕುಮೀಶ
ಅಡಿದಾವರೆಭೃಂಗ ರಾಘವೇಂದ್ರ ರಾಘವೇಂದ್ರ 7
***
ಮೂರೆರಡುರೂಪ=3+2=ಪಂಚ ರೂಪ-ಅನಿರುದ್ಧ,
ಪ್ರದ್ಯುಮ್ನ, ಸಂಕರ್ಷಣ, ವಾಸುದೇವ,
ನಾರಾಯಣ; ಮೂರೆರಡು ಭೇದ=ಪಂಚಭೇದÀ;
ಮೂರಿಂದ=ಹೊನ್ನು, ಹೆಣ್ಣು, ಮಣ್ಣು;
ಮೂರು ಮಾತ್ರ=ಜ್ಞಾನ, ಭಕ್ತಿ, ವೈರಾಗ್ಯ;
ಮೂರೊಂದವತಾರಿ=ಪ್ರಹ್ಲಾದ, ಬಾಹ್ಲೀಕ,
ವ್ಯಾಸರಾಜ, ರಾಘವೇಂದ್ರ;
**