Audio by Vidwan Sumukh Moudgalya
ಶ್ರೀ ವಿಜಯದಾಸಾರ್ಯ ವಿರಚಿತ ನವತಿರುಪತಿ ಮಹಾತ್ಮೆ ( ತಾಮ್ರಪರ್ಣಿತೀರ ) ಸುಳಾದಿ
ರಾಗ : ರೀತಿಗೌಳ
ಧ್ರುವತಾಳ
ಉತ್ತರಭಾಗದಲ್ಲಿ ಮೈತ್ರಾವರಣ ಮುನಿ
ಪೋತ್ತುಮನ್ನಾ ಶಿಷ್ಯ ವಿಂದ್ಯಾಯೆಂಬುವನೂ
ಮಿತ್ರತಾರಾಗಣ ಮೀರಿ ಬೆಳೆದು ಜಗಕೆ
ಕತ್ತಲೆ ಮಾಡಲು ಸುರರು ಕಂಗೆಡಲು
ಎತ್ತಣ ನೋಡಿದರತ್ತ ನಿತ್ಯಾನೈಮಿತ್ಯಗಳು
ತತ್ತಳಗೊಳುತಿರೆ ಹೊತ್ತು ತೋರದಾಲೆ
ಚಿತ್ತಪಲ್ಲಟರಾಗಿ ಸರ್ವಜೀವಾದಿಗಳೂ
ಎತ್ತಣದದ್ಭುತವೆಂದು ಯೋಚಿಸುತ್ತ
ಚಿತ್ರಚಾರಿತ ನಮ್ಮ ವಿಜಯವಿಠಲ ದೇ-
ವೋತ್ತುಮಾ ಕಾಶಿವಾಸ ಬಿಂದುಮಾಧವ ಎಲ್ಲಾ-
ರುತ್ತುಮಾಂಗವೆ ಬಾಗಿ ತುತಿಸಾಲಿನಿತಾ ॥1॥
ಮಟ್ಟತಾಳ
ಕರಿಸಿಕೊಂಡನ ಮಗನಾ ಕರುಣದಿಂದಲಿ ಬಂದಾ
ದುರಿತವ ಹರಿಸೆಂದು ಹರಿ ನಿರೂಪಿಸಲು
ವರಮುನಿ ಕೇಳುತಲೆ ಕರಗಳನೇ ಮುಗಿದು
ನಿರುತದಲಿ ಮಣಿ ಕರಣಿಕೆ ಸ್ನಾನ
ಪರಮ ಲಾಭವನು ಬಿಟ್ಟಿರಲಾರೆನು ಎಂದು
ಹರಿಯ ಶ್ರೀ ಚರಣಕ್ಕೆ ಎರಗಲು ನಸುನಗುತ
ಶರಣರ ಮನೋಹರ ವಿಜಯವಿಠಲರೇಯಾ
ಪರಮ ಮುನಿಗೆ ಉತ್ತರವನು ಕರುಣಿಸಿದ ॥2॥
ರೂಪಕತಾಳ
ಕಮಂಡಲದ ಒಳಗೆ ಈಮಣಿಕರಣಿಕಿಯಾ
ಕಮಲಾವನ್ನು ತುಂಬಿ ಗಮಕಾದಿಂದಲಿ ನೀನು
ಯಮನ ದಿಕ್ಕಿನಲಿ ತಪೋಕ್ರಮವನ್ನು ಮಾಡೆಂದು
ರಮೆಯರಸಾ ಪೇಳಲಾಗ ಮುನಿ ಅಗಸ್ತ್ಯ
ಗಮನವಾದನು ಅನುಕ್ರಮದಿಂದಲಿ ಬರುತ
ಕುಮತಿಯನು ವಂಚಿಸಿ ಶ್ರಮವೆಲ್ಲ ಪರಿಹರಿಸಿ
ಹಿಮಕರ ಚರಣ ಶ್ರೀ ವಿಜಯವಿಠಲನಿಗೆ
ನಮಿಸಿ ಆತನ ಗುಣಸಮುದಾಯಾ ಪೊಗಳುತ್ತಾ ॥3॥
ಝಂಪೆತಾಳ
ಕಾಶಿಯಿಂದಲಿ ಬಂದು ಮಲಯಾಚಲದಲ್ಲಿ
ವಾಸವಾಗಲು ಭೂಮಿ ಸಮನಾಯಿತೂ
ಲೇಸಾಗಿ ದೇವಗಣ ಭೇರಿಗಳು ಹೊಯ್ಯೆ, ಮು-
ನೀಶನು ಮೌನವಾದನು ಪುನರಪಿ
ಆ ಸಲಿಲ ದಿವ್ಯ ಕಮಂಡಲದೊಳಗಿರಲು
ಸೂಸಿತೊಂದು ಜೀವ ನಿರ್ಮಾಣವಾಗಿ
ಈಶಾದ್ಯರು ಬಂದು ಮನ್ನಿಸಿ ತಾಮ್ರಪ
ರ್ನಿಸಂತೆಂದು ಪೆಸರಲೀ ಕರೆಸಿದರು
ದೇಶಾಧಿಪತಿ ನಮ್ಮ ವಿಜಯವಿಠಲ ಕರು -
ಣಾಶರಧಿ ಎಂದು ಮುನಿ ಕೊಂಡಾಡಿದ ॥4॥
ತ್ರಿವಿಡಿತಾಳ
ಪೊಗಳಿ ಹರಿಯಾ ಚರಣಯುಗಳಕ್ಕೆ ವಂದಿಸಿ
ಯುಗದಲ್ಲಿ ನದಿಯಲ್ಲಿ ಮೂಲ ಕಲಿ
ಪೋಗದಿರಲೆಂದು ತಪಸಿಗಳನು ತವಕದಿಂದ
ನಗುತ ಮನದೊಳಗಗಣಿತಾರ್ಚನೆ ಮಾಡೆ
ನಗಧರ ವೈಕುಂಠ ನಗಧೀಶ, ನವ-
ಬಗೆ ರೂಪನಾಗಿ ಮುನಿಗೆ ವರವನಿತ್ತಾ
ಸುಗುಣ ಸಾಹಸಮಲ್ಲ ವಿಜಯವಿಠಲನು , ತ್ರಿ -
ಜಗದೊಳಗೀ ಧರೆಯಾಮಿಗೆ ಮಾಡಿ ತೋರಿದಾ ॥5॥
ಅಟ್ಟತಾಳ
ಕಳಸಜನಿಂದ ವೆಗ್ಗಳವಾಯಿತೀ ನದಿ
ಮಲರಹಿತವಾಗೆ ಪೊಳವುತಿದೆ ನೋಡಿ
ಕಲಿಯಾ ಸಂಚಾರ ಘಳಿಗೆಯಾದರು ಇಲ್ಲ
ಇಳಿಯೊಳು ಇದು ಪುಣ್ಯಾನೆಲವೆನ್ನಿ, ನೆಲವೆನ್ನಿ
ಕಲಿಯುಗಾಂತ್ಯದಕಲಿ ಹಲವುಕಡೆ ಧರ್ಮ-
ವಳಿವಾದು ಇಲ್ಲೀಗ ಉಳಿದಿಪ್ಪುದೇ
ಕಲಿಹನ ವಿಜಯವಿಠಲ ವೈಕುಂಠಾಧೀಶಾ
ಸಲಹುವಾ ಕೆಲಕಾಲಾ ವೊಲಿದು ಸಜ್ಜನರ ॥6॥
ಆದಿತಾಳ
ಏಳು ಯೋಜನ ತೀರದಾ
ಗಾಳಿ ಬೀಸಿದರೆ ಮೂರು
ಏಳುಕುಲದವರು ತಮ್ಮ
ಪೀಳಿಗಿಯ ಸಹಿತದಲ್ಲಿ
ಕಾಲನಯಾತನೆ ಭಂಗಾ
ಸೀಳಿಕೊಂಡು ಪೋಗಿ ಸಿರಿ
ಲೋಲನಾ ಪಟ್ಟಣದಲ್ಲಿ
ಖ್ಯಾಳಮ್ಯಾಳವಾಗುವರು
ಹೇಳಲೇನು ಜ್ಞಾನಿ ಬಂದು
ಕಾಲಘಳಿಗೆ ವಾಸವಾಗಿ
ಮೇಲುಲೋಕಾ ಕೊಡುವದಕ್ಕೆ
ಸಾಲದೆಂಬಾರಾವಲೋಕ
ಕೇಳಿಬಲ್ಲವರಿದರ
ಆಲೋಚನೆ ಸಲ್ಲ ಪುಣ್ಯದ
ಮಾಲೆ ಹಾಕಿದಂತೆ ಅನು-
ಗಾಲಾ ಶುಚಿಯಾ ಕಂಠದಲ್ಲಿ
ನಾಳಿಗೆಂಬಾಲಶ್ಯವಿಲ್ಲ ವಿಜಯವಿಠಲ ತನ್ನ
ಊಳಿಗವನಿತ್ತು ನಿಜದಾಳಿನೊಳು ಕೂಡಿಸುವ ॥7॥
ಜತೆ
ಶ್ರದ್ಧೆಯಿಂದಲಿ ಯಾತ್ರೆ ತಿಳಿದು ಪುಣ್ಯರಾಗಿ
ಅದ್ವೈತಾ ಬಿಡಿ ನಮ್ಮ ವಿಜಯವಿಠಲ ಸುಳಿವ ॥8॥
*******