..
ವರ್ಣಿಸಲು ಸಾಧ್ಯವೆ ಧರೆಯೊಳಿನ್ನು
ಗುರುವರ್ಯಸುಶೀಲೇಂದ್ರ ತೀರ್ಥರ ಮಹಿಮೆಯನ್ನು ಪ
ಭಾನುನಂದನನಂತೆ ದೀನ ಮಾನವರಿಗೆ
ಸಾನುರಾಗದಿ ಕೊಡುವ ದಾನ ನೋಡಿ ||
ಏನು ಹೇಳಲಿ ದಿವಿಜಧೇನು ಭೂರುಹಮಣಿ
ಕ್ಷೋಣಿಯೊಳು ಜಡಪಶು ರೂಪ ತಾಳಿದವು 1
ಪರಮಠಾಧೀಶರು ಪರಿಪರಿಯಲಿಂದವರ
ಪರಮ ಔದಾರ್ಯಗುಣ ಪರೀಕ್ಷಿಸುತಲಿ
ಬೆರಳು ಕಚ್ಚುತಲಿ ಬೆರಗಾಗಿ ಜಗದೊಳಗೆ
ಸರಿ ಇವರಿಗಿಲ್ಲೆಂದು ಶಿರದೂಗಿ ಹೊಗಳಿದರು 2
ಧೀಮಂತ ಜನರೊಡೆಯ ಶ್ರೀಮಂತಮಂದಿರದ
ಸ್ವಾಮಿಗಳ ಪೂರ್ಣ ಪ್ರೇಮ ಪಡೆದು |
ತಾಮರಸ ಭಾವ ಪೂಜ್ಯ ಶಾಮಸುಂದರ ಮೂಲ
ರಾಮ ಮೂರ್ತಿಯನು ಭೂಮಿಯೊಳು ಮೆರೆಸಿದರು 3
***