..
kruti by prasanna shreenivasaru ಪ್ರಸನ್ನ ಶ್ರೀನಿವಾಸದಾಸರು
ಶ್ರೀ ಸತ್ಯ ಸಂಧರ ಚರಿತ್ರೆ
ಸತ್ಯ ಸಂಧಾರ್ಯರೆ ಶರಣಾದೆ ನಿಮ್ಮಲ್ಲಿ
ಭೃತ್ಯನಾ ಎಂದೆಣಿಸಿ ನಿತ್ಯ ಪಾಲಿಸುವುದು
ಸತ್ಯಾರುಕ್ಷ್ಮಿಣೀ ರಮಣ ಕೃಷ್ಣನೃಹರಿ ರಾಮ
ಸತ್ಯಜ್ಞಾನಾನಂತನಿಗೆ ಪ್ರಿಯ ಯತೀಂದ್ರ ಪ
ನಿರ್ದೋಷ ಗುಣಸಿಂಧು ಸುಖಪೂರ್ಣ ಹಂಸನಿಗೆ
ವಿಧಿ ಸನಕ ಮೊದಲಾದ ಗುರು ಪರಂಪರೆಗೆ
ಯತಿವರ್ಯ ಅಚ್ಚುತಪ್ರೇಕ್ಷರಿಗೆ ಆನಂದ
ತೀರ್ಥರಾಂಬುಜ ಪಾದಗಳಿಗೆ ಆನಮಿಪೆ 1
ಪದ್ಮನಾಭ ನರಹರಿ ಮಾಧವ ಅಕ್ಷೋಭ್ಯರ
ಪದ್ಮಾಂಘ್ರಿಗಳ ನಮಿಸಿ ಜಯತೀರ್ಥರ
ವಿದ್ಯಾಧಿರಾಜರ ಪಾದ ಪಂಕಜಕ್ಕೆರಗಿ
ವಿದ್ಯಾಧಿರಾಜರು ಈರ್ವರಿಗೂ ನಮಿಪೆ 2
ನಮಿಸುವೆ ರಾಜೇಂದ್ರ ಕವೀಂದ್ರ ವಾಗೀಶರಿಗೆ
ರಾಮಚಂದ್ರರಿಗೆ ಆ ಯತಿವರರ ಹಸ್ತ
ಕಮಲಜರು ವಿಭುದೇಂದ್ರ ವಿದ್ಯಾನಿಧಿಗಳಿಗೆ
ನಮೋ ಎಂಬೆ ವಿದ್ಯಾನಿಧಿಗಳ ವಂಶಕ್ಕೆ 3
ವೇದಾಂತ ಕೋವಿದರು ರಘುನಾಥ ರಘುವರ್ಯ
ಪದವಾಕ್ಯ ತತ್ವಜ್ಞ ರಘೂತ್ತಮಾರ್ಯರಿಗೆ
ವೇದ ವ್ಯಾಸಾಭಿದ ಯತಿ ವಿದ್ಯಾಧೀಶರಿಗೆ
ವೇದನಿಧಿಗಳಿಗೆ ನಾ ಬಾಗುವೆ ಶಿರವ 4
ಸತ್ಯವ್ರತ ಸತ್ಯನಿಧಿ ಸತ್ಯನಾಥರಿಗೆ
ಸತ್ಯಾಭಿನವ ಸತ್ಯ ಪೂರ್ಣರಿಗೆ ನಮಿಪೆ
ಸತ್ಯ ವಿಜಯರಿಗೆ ಸತ್ಯ ಪ್ರಿಯರಿಗೆ ಸತ್ಯ
ಬೋಧರಿಗೆ ಎನ್ನ ವಂದನೆ ಅರ್ಪಿಸುವೆ 5
ಸತ್ಯಬೋಧಾರ್ಯರ ಕರಕಮಲ ಸಂಜಾತ
ಸತ್ಯಸಂಧರ ಮಹಿಮೆ ಬಹು ಬಹು ಬಹಳ
ವೇದ್ಯ ಕಿಂಚಿತ್ ಮಾತ್ರ ಎನಗೆ ಶ್ರೀಹರಿ ವಾಯು
ಪ್ರೀತಿಯಾಗಲಿ ಇಲ್ಲಿ ಪೇಳಿರುವೆ ಸ್ವಲ್ಪ 6
ಪೂರ್ವಾಶ್ರಮದಲ್ಲಿ ರಾಮಚಂದ್ರಾಚಾರ್ಯ
ಹಾವೇರಿಯವರು ಈ ಯತಿವರ ಮಹಂತ
ದೇವ ಸ್ವಭಾವರು ವೇದಾಂತ ಕೋವಿದರು
ಸರ್ವದಾ ಹರಿನಾಮ ಸಂಸ್ಮರಿಸುವವರು 7
ರಾಮಚಂದ್ರಾಚಾರ್ಯ ಸರ್ವಪ್ರಕಾರದಲು
ತಮ್ಮ ಸಂಸ್ಥಾನ ಪೀಠಾರ್ಹರು ಎಂದು
ನೇಮದಿಂ ಪ್ರಣವೋಪದೇಶ ಅಭಿಷೇಕ
ಸಂಮುದದಿ ಮಾಡಿದರು ಸತ್ಯಬೋಧಾರ್ಯ 8
ಹರಿಕ್ಷೇತ್ರ ತೀರ್ಥಯಾತ್ರೆ ಮಾಡಿ ಅಲ್ಲಲ್ಲಿ
ಹರಿತತ್ವ ಯೋಗ್ಯರಿಗೆ ಸಮ್‍ಯುಕ್ ಬೋಧಿಸುತ
ಧರೆಯಲ್ಲಿ ಜ್ಞಾನಿ ಶ್ರೇಷ್ಠರು ಎಂದು ಸ್ತುತಿಕೊಂಡ
ಧೀರ ಗುರುವರ ಸತ್ಯಸಂಧರಿಗೆ ನಮಿಪೆ 9
ಸತ್ಯಂ ವಿದಾತಂ ನಿಜ ಭೃತ್ಯ ಭಾಷಿತಂ
ಅಂದು ಕಂಬದಿ ತೋರ್ದ ಹರಿ ಪ್ರಹ್ಲಾದನಿಗೆ
ಇಂದು ವಟು ರೂಪದಿ ಬಂದು ವಿಠ್ಠಲ ಸತ್ಯ
ಸಂಧರಿಗೆ ತೋರಿದನು ತನ್ನಿಚ್ಛೆಯಿಂದ 10
ವಿಠ್ಠಲನ್ನ ವಂದಿಸಿ ಪಂಡರೀಪುರದಿಂದ
ಮಠ ಪರಿವಾರ ಸಹ ಇನ್ನೂ ಬಹು ಕ್ಷೇತ್ರ
ಅಟನ ಮಾಡಿ ಬಾಗೀರಥಿ ಪೂಜೆ ಮಾಡುತ್ತ
ಪಠವಾಳಿ ಉಡುಗೊರೆಯ ಕೊಟ್ಟರು ಗಂಗೆಗೆ 11
ಕಾಶಿ ನಗರದಿ ಜನರು ಪ್ರತ್ಯಕ್ಷ ನೋಡಿಹರು
ವಸ್ತ್ರ್ರಾದಿಗಳ ಗಂಗೆ ಮೂರ್ತಿಮತ್ ಬಂದು
ನಸುನಗುತ ತುಷ್ಟಿಯಲಿ ಕರದಿಂ ಸ್ವೀಕರಿಸಿದ್ದು
ಯಶವೇ ವರ್ಣಿಸಲು ಈ ಮಹಾತ್ಮರ ಮಹಿಮೆ 12
ಶ್ರೀವಿಷ್ಣು ಪಾದ ಮಂದಿರದ ಮುಖದ್ವಾರ
ಅವಿವೇಕದಲಿ ಗಯಾವಾಳರು ಬಂಧಿಸಲು
ಶ್ರೀವರನ್ನ ಸ್ಮರಿಸಿ ನಿಂತರು ಸತ್ಯಸಂಧರು
ವಿಶ್ವವಿಷ್ಣು ವಷಟ್ಕಾರನು ವಲಿದ 13
ನೆರೆದಿದ್ದ ಜನರೆಲ್ಲ ನೋಡುತಿರೆ ಬಾಗಲ
ಭಾರಿ ಕೀಲುಗಳೆಲ್ಲ ಬಿದ್ದವು ಕೆಳಗೆ
ಈ ರೀತಿ ಅದ್ಬುತವು ಜರುಗಿದ್ದು ಕಂಡು
ಎರಗಿ ಕೊಂಡಾಡಿದರು ಅಲ್ಲಿದ್ದ ಜನರು 14
ತಮ್ಮ ತಪ್ಪುಗಳನ್ನು ಮನ್ನಿಸೆ ಕ್ಷಮೆ ಬೇಡಿ
ತಮ್ಮನ್ನು ಕರಕೊಂಡು ಹೋಗಿ ಗುರುಗಳಿಗೆ
ಹೇಮ ರತ್ನಾದಿಗಳ ಕಾಣಿಕೆ ಅರ್ಪಿಸಿ
ನಮಿಸಿ ಪೂಜಿಸಿದರು ಗಯಾವಾಳರು 15
ಸೂರಿ ಕುಲ ತಿಲಕರು ಸತ್ಯ ಸಂಧಾರ್ಯರು
ಹರಿ ಪೂಜೆ ಮಾಡುವಾಗ ಹರಿ ಶಿರಿ ವಾಯು
ಸುರನಿಕರ ಸಾನಿಧ್ಯ ಇರುವುದು ಅನುಭವಕ್ಕೆ
ಬರುವುದು ನೋಡುವ ಯೋಗ್ಯ ಭಕ್ತರಿಗೆ 16
ಶ್ರೀ ಹರಿ ಅರ್ಚನೆಗೆ ಸ್ವಾಮಿಗಳು ಕುಳಿತರು
ಬ್ರಾಹ್ಮಣ ಮಹಾಪುರುಷ ಓರ್ವನು ಬಂದ
ಸಹಸ್ರದಳ ಸುಂದರತರ ಕಮಲಪುಷ್ಪವ
ಶ್ರೀಹರಿಗರ್ಪಿಸೆ ಕೊಟ್ಟು ಅದೃಶ್ಯನು ಆದ 17
ಪ್ರಣವ ಅಷ್ಟಾಕ್ಷರಿ ಮೊದಲಾದ ಮಂತ್ರಗಳ
ಆಮ್ನಾಯ ಋಗ್ ಯಜುಸ್ಸಾಮಾಥರ್ವಣದ
ಅನುಪಮ ಮಹಾ ಇತಿಹಾಸ ಎರಡರಸಾರ
ವಿಷ್ಣು ಸಹಸ್ರನಾಮಗಳಿರುತಿವೆಯು 18
ಉತ್ಕøಷ್ಟತಮ ವಿಷ್ಣು ಸಹಸ್ರ ನಾಮಂಗಳ
ಶ್ರೀ ಕೃಷ್ಣ ಸುಪ್ರೀತಿ ಕರ ವ್ಯಾಖ್ಯಾನ
ಸಂ ರಚಿಸಿ ಪ್ರತಿನಿತ್ಯ ಅರ್ಚಿಪರು ವಿಷ್ಣು
ಸೂರಿವರಧೀರರು ಸತ್ಯ ಸಂಧಾರ್ಯ 19
ವೇದಾಂತ ಸಾಮ್ರಾಜ್ಯ ದಶವತ್ಸರ ಆಳಿ
ವೃಂದಾವನದಿ ಕೂಡುವ ಕಾಲ ಬರಲು
ಭೂದೇವಿ ಪತಿ ವಕ್ತ್ರದಿಂದುದಿತ
ಸಾಧು ಸುಪವಿತ್ರ ತೀರಕ್ಕೆ ಬಂದಿಹರು 20
ಹದಿನೇಳು ನೂರು ಹದಿನಾರನೇ ಶಾಲಿ ಶಕ
ಆನಂದ ಸಂವತ್ಸರ ಜೇಷ್ಠ ಶುದ್ಧ
ದ್ವಿತೀಯ ಪುಣ್ಯತಮ ದಿನದಲ್ಲಿ ಶ್ರೀಹರಿಯ
ಪಾದ ಯೆಯ್ದಿದರು ಈ ಗುರುವರ ಮಹಂತ 21
ಉಡುಪಿಯಿಂದುತ್ತರಕ್ಕೆ ಬರುವ ಮಾರ್ಗದಲಿ
ದೊಡ್ಡದಲ್ಲದ ಗ್ರಾಮ ಮಹಿಷಿ ಎಂಬುವಲಿ
ಕ್ರೋಡಜಾ ತೀರಸ್ಥ ವೃಂದಾವನ ಸದನ
ಮಾಡಿ ಕುಳಿತರು ಮತ್ತೊಂದು ಅಂಶದಲಿ 22
ವೃಂದಾವನದೊಳು ಇಹ ಸತ್ಯಸಂಧರೊಳು
ನಿಂತಿಹನು ಸತ್ಯಸಂಧನು ಮುಖ್ಯವಾಯು
ವಾತ ದೇವನೊಳು ಸತ್ಯಸಂಧ ನಾಮಾವಿಷ್ಣು
ಸತ್ಯಜ್ಞಾನಾನಂತಾನಂದ ವಾಯು ಇಹನು 23
ವೃಂದಾವನಸ್ಥರ ಈ ರೀತಿ ತಿಳಿಯುತ್ತ
ಬಂದು ಸೇವಿಸುವವರಿಗೂ ಸ್ಮರಿಸುವವರಿಗೂ
ಕುಂದು ಕೊರತೆ ನೀಗಿ ಇಷ್ಟಾರ್ಥ ಲಭಿಸುವವು
ಇಂದಿರಾಪತಿ ದಯಾಸಿಂಧು ಪಾಲಿಸುವನು 24
ಹನುಮಸ್ತ ಅಜನಪಿತ `ಶ್ರೀ ಪ್ರಸನ್ನ ಶ್ರೀನಿವಾಸ'
ಮೀನ ಕಮಠ ಕ್ರೋಡ ನೃಹರಿ ವಟು ಪರಶು
ದನುರ್ಧರ ಶ್ರೀಕೃಷ್ಣ ಜಿನ ಕಲ್ಕಿ ಶ್ರೀಶ
ಗುಣನಿಧಿ ಪ್ರಿಯ ಸತ್ಯ ಸಂಧಾರ್ಯ ಶರಣು 25
|| ಇತಿ ಶ್ರೀ ಸತ್ಯಸಂಧ ಚರಿತ್ರೆ ಸಂಪೂರ್ಣಂ ||
***