ಶ್ರೀ ವಿದ್ಯಾಪ್ರಸನ್ನತೀರ್ಥರು
ರಾಗ: ಮೋಹನ ತಾಳ: ಆದಿ
ಗುರುವರ್ಯರನು ಭಜಿಸೋ ರಾಘವೇಂದ್ರ
ಗುರುವರ್ಯರನು ಭಜಿಸೋ ಪ
ಧರೆತಲದಲಿ ಅವತರಿಸಿ ಸುಜನರನು
ಪರಿಪÀರಿ ವಿಧದಲಿ ಪೊರೆಯುತಲಿರುವ ಸದ್ ಅ.ಪ
ನಳಿನನಾಭ ಶ್ರೀರಾಮರ ರುಚಿರ ಪದಗಳ ಸಂತತದಿ ಭಜಿಸಿ
ಖಳರ ದುರ್ಮತಗಳನಳಿಸಿ ದಶಪ್ರಮತಿ-
ಗಳ ದಿವ್ಯ ಶಾಸ್ತ್ರಾರ್ಥಗಳನು ಸುಲಭದಲಿ
ಇಳೆಯೊಳು ಸುಜನಕೆ ತಿಳಿಯುವ ತೆರದಲಿ
ಬೆಳಗುತಿರುವ ಪರಿಮಳ ಮುಖವರಗ್ರಂಥ-
ಗಳನು ರಚಿಸುತ ಉಳಿಸಿ ಸುಮತಿಯನು
ಇಳೆಯೊಳು ವರಮಂತ್ರ ನಿಲಯದಿ ನೆಲೆಸಿದ 1
ಮಂಗಳಕರಳೆಂದು ಚರಿತೆಯುಳ್ಳ ತುಂಗಾತೀರದಿ ನೆಲೆಸಿ
ಕಂಗೊಳಿಸುತ ಚರಣಂಗಳ ಭಜಿಪರ
ಸಂಘಕ್ಕೆ ತಮ್ಮ ಅಪಾಂಗ ವೀಕ್ಷಣದಿಂದ
ಮಂಗಳ ತತಿಗಳ ನೀಡಿ ಅವರ ಅಘ
ಭಂಗವಗೈಯುತ ಅನುದಿನದಲಿ ದ್ವಿಜ-
ಪುಂಗವ ನಿಕರದಿ ಪೂಜೆಯಗೊಂಬ ಉ-
ತ್ತುಂಗಚರಿತ ರಥಾಂಗಧರ ಪ್ರಿಯ 2
ಮುನ್ನ ಪ್ರಹ್ಲಾದನೆನಿಸಿ ಶ್ರೀ ನರಹರಿಯನ್ನು ಸತತ ಭಜಿಸಿ
ಇನ್ನೊಂದು ಜನುಮದಿ ಮಾನ್ಯ ಶ್ರೀ ವ್ಯಾಸಮುನಿ
ಯೆನ್ನಿಸಿ ಖಳಮತವನ್ನು ಖಂಡಿಸುತಲಿ
ಚೆನ್ನ ಶ್ರೀಕೃಷ್ಣನ ಉನ್ನತ ಮಹಿಮೆಗ-
ಳನ್ನು ಬೋಧಿಸುತ ತನ್ನ ಭಕುತಜನ-
ರನ್ನು ಹರುಷದಲಿ ಧನ್ಯರೆನಿಸಿದ ಪ್ರ-
ಸನ್ನ ಶ್ರೀರಾಮರ ಭಕುತ ಶಿರೋಮಣಿ 3
****