ರಾಗ ಮಧ್ಯಮಾವತಿ ಖಂಡಛಾಪುತಾಳ
ಶ್ರೀ ಗುರುಗೋಪಾಲದಾಸರ ಕೃತಿ
ಪಾಲಿಸೆನ್ನನು ದೇವಾ । ಭುವನತ್ರಯಂಗಳ ।
ಲೀಲೆಯಿಂದಲಿ ಕಾವಾ । ಹರಿಯೆ ಅನಾದಿ ।
ಮೂಲಸುಸ್ವಭಾವ । ಪವನಂಗೆ ಜೀವಾ ॥ ಪ ॥
ಶ್ರೀಲಕುಮಿಪತಿ ಅಜಜನಕ ಅ -
ನಾದಿನಿತ್ಯ ಮುಕುತಾಮುಕುತರ
ಕಾಲಕಾಲಕೆ ಪೊರೆವದಾತ ವಿ -
ಶಾಲ ಮಹಿಮನೆ ಮೇಲುಕರುಣದಿ ॥ ಅ ಪ ॥
ವಿಜಯಸಾರಥಿವೀರ । ವಿಶ್ವೇಶ ವಿಭುವರ ।
ಸುಜನಮನ ಸಂಚಾರ । ಶುಭಗುಣ ಗಣಾಂಬುಧಿ ।
ರಜ ತಮೋ ಗುಣದೂರ । ಪರತತ್ವಸಾರ ॥
ಕುಜನಮರ್ದನ ಕುಮುದಸಖಮುಖ
ಕುಬ್ಜಮೂರುತಿಯೆ ಕುಮುದಭಂಜನ
ಕುಜಪ್ರದಾಯಕ ಕುಟಿಲವರ್ಜಿತ
ಸುಜನಮನ ಅಂಬುಜ ದಿವಾಕರ ॥
ಭುಜಗಶಯನನೆ ಭೂರಮಣ ಹರೇ
ದ್ವಿಜಧ್ವಜನೆ ಅಂಬುಜದಳೇಕ್ಷಣ
ಭಜಕಜನ ಚಕೋರಚಂದ್ರ
ವ್ರಜಜನಂಗಳ ಕಾಯಿದ ಕೃಷ್ಣ ॥
ಅಜರಾಮರಣ ಅಪ್ರಮೇಯ
ನಿಜಪೂರ್ಣಸುಖ ನಿತ್ಯನಿರ್ಮಲ
ಗಜವರದ ಗಂಭೀರನಿಜವರ
ಅಜನಿರಂಜನ ಅಘನಿವಾರಣ ॥
ನಿಜಜನರ ಪೊರೆವಂತೆ ದೇವನೆ
ತ್ರಿಜಗದಲಿ ನಿನ್ಹೊರತು ಕಾಣೆನೊ
ದ್ವಿಜರ ರಕ್ಷಿಸಿ ನಿಜರ ಈ ಮನ
ತ್ಯಜಿಸದಂದದಿ ಮಾಡು ಸರ್ವದಾ ॥ 1 ॥
ಪಟುತರಾಂಗನೆ ದೇವಾ । ಜೀವೇಶ ಭಕುತರ ।
ಕಟಕಸರ್ವದ ಕಾವಾ । ಧೇನಿಪರ ಮನದಲಿ ।
ತಟಿತನಂದದಿ ಪೊಳೆವಾ । ಮಹಾನುಭಾವಾ ॥
ಹಾಟಕ ಕಶಿಪು ಸುತನ ಪಿಡಿದು ಧೂ -
ರ್ಜಟಿಯು ಪರನೆಂದೆನುತಲಿ ಒಂ -
ತ್ರುಟಿಯು ಬಿಡದಲೆ ಬಾಧಿಸಲು ಬಲು
ಹಟದಿ ನಿನ್ನನು ತುತಿಸಿಕೊಳುತಿರೆ ॥
ಚಿಟಚಿಟನೆ ಚೀರುತ್ತಜಾಂಡದ
ಕಟಕಟನೆ ಪಲ್ಗಡಿದು ಕಂಭದಿ
ಪಟಹ ಪಟ ಪಟ ಬಿಚ್ಚುವಂದದಿ
ಚಟ ಚಟಾ ಚಟ ಚಟನೆ ಪೊಟಿಯುತ ॥
ಕಠಿಣ ಖಳನ ಕೆಡಹಿ ಅವನ
ಜಠರವನೆ ನಖದಿಂದ ಛೇದಿಸಿ
ದಿಟದಿ ತರಳನ ಕಾಯಿದೆ ಎನ್ನಯ
ಕುಟಿಲ ಕಟುಮತಿ ಅಟದವಾನಲ ॥
ವಟದೆಲೆಯ ಸಂಪುಟದಲೊರಗಿ ಪೊಂ -
ಗುಟವ ನುಂಬುವ ಮೂಲಕಾರಣ
ಚಟುಲವಿಕ್ರಮ ಧೀರ ಭವ ಸಂ -
ಕಟಹರಣ ವೇಂಕಟರಮಣ ಹರೇ ॥ 2 ॥
ಪನ್ನಗಾಚಲ ನಿಲಯ । ಶ್ರೀ ಶ್ರೀನಿವಾಸ ।
ಪನ್ನಗಾಶನಪ್ರೀಯ । ದುರಿತಾದ್ರಿಕುಲಿಶ ಮೋ - ।
ಹನ್ನ ವರ್ಜಿತಮಾಯಾ । ಕಾಯಯ್ಯ ಜೀಯಾ ॥
ನಿನ್ನ ಹೊರತು ಅನ್ಯ ದೇವರ
ಮನ್ನಿಸೆನು ಮನ್ನೋವಾಚಕಾಯದಿ
ಇನ್ನು ಮುನ್ನಿದು ಸಿದ್ಧವಯ್ಯ ಸಂ -
ಪನ್ನಜನ ಕಾರುಣ್ಯಮೂರುತಿ ॥
ಜನ್ನುಮಾ ಜನುಮಾಂತರದಿ
ಎನ್ನ ಅಘಾವಳಿಗಳನೆ ಕಳೆದು
ಭಿನ್ನರಹಿತ ಜ್ಞಾನದಿಂದಲ -
ಚ್ಛಿನ್ನ ಭಕ್ತರ ಸಂಗ ಪಾಲಿಸೋ ॥
ನಿನ್ನ ಬೇಡುವೆ ಇದನೆ ಗುಣಗಣ
ಬನ್ನ ಬಡಿಸುವದ್ಯಾಕೆ ಶರಣರ
ಹೊನ್ನು ಹಣ ಕೊಡುಯೆಂದು ಬೇಡುವ -
ದಿನ್ನು ಯಾಚಿಸೂವದಿಲ್ಲವೋ ॥
ನಿನ್ನ ಬಿಂಬಕ್ರಿಯೆಗಳನ್ನೇ
ಚನ್ನವಾಗಿ ತಿಳಿಸೊ ಜೀವರ -
ಭಿನ್ನ ಗುರುಗೋಪಾಲವಿಟ್ಠಲ ಸಂ -
ಪನ್ನ ಭಾಗ್ಯ ದಯಾನಿಧೇ ಹರೇ ॥ 3 ॥
****