ಶ್ರೀಮದ್ವಾದಿರಾಜತೀರ್ಥ (1480-1600 CE) ಪೂಜ್ಯಚರಣ ವಿರಚಿತ
ನರಕವಾಳುವ ಯಮಧರ್ಮರಾಯ
ತನ್ನ ನರಜನ್ಮದೊಳಗೆ ಪೊರಳಿಸಿ
ಮರಳೀ ತನ್ನರಕದಲಿ ಪೊರಳಿಸಿ ಕೊಲುವನು
ಕುರು ನಿನ್ನ ಕುಹಕ ಕೊಳದಲ್ಲ ||೫೭||
ಬೊಮ್ಮನ ನೂರು ವರ್ಷ ಪರಿಯಂತ ಪ್ರಳಯದಲಿ
ಸುಮ್ಮನೆಯಾಗಿ ಮಲಗಿಪ್ಪ
ನಮ್ಮ ನಾರಾಯಣಗೆ ಹಸಿ-ತೃಷೆ -ಜರ-ಮರಣ-ದು-
ಷ್ಕರ್ಮ-ದುಃಖಂಗಳು ತೊಡಸುವರೆ ||೫೮||
ರಕ್ಕಸರಸ್ತ್ರಗಳಿಂದ ಗಾಯವಡೆಯದ
ಅಕ್ಷಯಕಾಯದ ಶ್ರೀಕೃಷ್ಣ
ತುಚ್ಛ ಯಮಭಟರ ಶಸ್ತ್ರಕಳಕುವನಲ್ಲ
ಹುಚ್ಚ ನೀ ಹರಿಯ ಗುಣವರಿಯ ||೫೯||
ಕಿಚ್ಚ ನುಂಗಿದನು ನಮ್ಮ ಶ್ರೀಕೃಷ್ಣನು
ತುಚ್ಛ ನರಕದೊಳು ಅನಲನಿಗೆ
ಬೆಚ್ಚುವನಲ್ಲ ಅದರಿಂದವಗೆ ನರಕ
ಮೆಚ್ಚುವರಲ್ಲ ಬುಧರೆಲ್ಲ ||೬೦||
ಮನೆಯಲ್ಲಿ ಕ್ಷಮೆಯ ತಾಳ್ದ ವೀರಭಟ
ರಣರಂಗದಲಿ ಕ್ಷಮಿಸುವನೆ
ಅಣುವಾಗಿ ನಮ್ಮ ಹಿತಕೆ ಮನದೊಳಗಿನ ಕೃಷ್ಣ
ಮುನಿವ ಕಾಲಕ್ಕೆ ಮಹತ್ತಾಹ ||೬೧||
ತಾಯ ಪೊಟ್ಟೆಯಿಂದ ಮೂಲರೂಪವ ತೋರಿ
ಆಯುಧ ಸಹಿತ ಪೊರವಂಟ
ನ್ಯಾಯಕೋವಿದರು ಪುಟ್ಟಿದನೆಂಬರೆ
ಬಾಯಿಗೆ ಬಂದಂತೆ ಬೊಗಳದಿರು ||೬೨||
ಉಟ್ಟ ಪೀತಾಂಬರ ತೊಟ್ಟ ಭೂಷಣಂಗಳು
ಇಟ್ಟ ನವರತ್ನದ ಕಿರೀಟವು
ಮೆಟ್ಟಿದ ಕುರುಹು ಎದೆಯಲ್ಲಿ ತೊರಿದ ಶ್ರೀ-
ವಿಠ್ಠಲ ಪುಟ್ಟಿದನೆನಬಹುದೆ ||೬೩||
ವೃಷಭಹಂಸಮೂಷಕವಾಹನವೇರಿ ಮಾ-
ನಿಸರಂತೆ ಸುಳಿವ ಸುರರೆಲ್ಲ
ಎಸೆವ ದೇವೇಶಾನರ ಸಾಹಸಕ್ಕೆ ಮಡಿದರು
ಕುಸುಮನಾಭನಿಗೆ ಸರಿಯುಂಟೆ ||೬೪||
ಒಂದೊಂದು ಗುಣಗಳು ಇದ್ದಾವು ಇವರಲ್ಲಿ
ಸಂದೆಣಿಸಿವೆ ಬಹು ದೋಷ
ಕುಂದೆಳ್ಳಷ್ಟಿಲ್ಲದ ಮುಕುಂದನೆ ತನಗೆಂದು
ಇಂದಿರೆ ಪತಿಯ ನೆನೆದಳು ||೬೫||
ಇಂತು ಚಿಂತಿಸಿ ರಮೆ ಸಂತ ರಾಮನ ಪದವ
ಸಂತೋಷ ಮನದಿ ನೆನೆವುತ್ತ
ಸಂತೋಷ ಮನದಿ ನೆನೆವುತ್ತ ತನ್ನ ಶ್ರೀ
ಕಾಂತನಿದ್ದೆಡೆಗೆ ನಡೆದಳು ||೬೬||
ಕಂದರ್ಪ ಕೋಟಿಗಳ ಗೆಲುವ ಸೌಂದರ್ಯದ
ಚೆಂದವಾಗಿದ್ದ ಚೆಲುವನ
ಇಂದಿರೆ ಕಂಡು ಇವನೆ ತನಗೆ ಪತಿ-
ಯೆಂದವನ ಬಳಿಗೆ ನಡೆದಳು ||೬೭||
ಈ ತೆರದ ಸುರರ ಸುತ್ತ ನೋಡುತ ಲಕ್ಷ್ಮೀ
ಚಿತ್ತವ ಕೊಡದೆ ನಸುನಗುತ
ಚಿತ್ತವಕೊಡದೆ ನಸುನಗುತ ಬಂದು ಪುರು-
ಷೋತ್ತಮನ ಕಂಡು ನಮಿಸಿದಳು ||೬೮||
ನಾನಾಕುಸುಮಗಳಿಂದ ಮಾಡಿದ ಮಾಲೆಯ
ಶ್ರೀ ನಾರಿ ತನ್ನ ಕರದಲ್ಲಿ
ಪೀನಕಂಧರದ ತ್ರಿವಿಕ್ರಮರಾಯನ
ಕೊರಳಿನ ಮೇಲಿಟ್ಟು ನಮಿಸಿದಳು ||೬೯||
ಉಟ್ಟಪೊಂಬಟ್ಟೆಯ ತೊಟ್ಟಾಂಭರಣಂಗಳು
ಇಟ್ಟ ನವರತ್ನದ ಮುಕುಟವು
ದುಷ್ಟಮರ್ದನನೆಂಬ ಕಡೆಯ ಪಂಡೆಗಳು
ವಟ್ಟಿದ್ದ ಹರಿಗೆ ವಧುವಾದಳು ||೭೦||
ಕೊಂಬು ಚೆಂಗಹಳೆಗಳು ತಾಳಮದ್ದಳೆಗಳು
ತಂಬಟೆ ಭೇರಿ ಪಟಹಗಳು
ಭೊಂ ಭೊಂ ಎಂಬ ಶಂಖ ಡೊಳ್ಳು ಮೌರಿಗಳು
ಅಂಬುಧಿಯ ಮನೆಯಲ್ಲೆಸೆದವು ||೭೧||
ಅರ್ಘ್ಯಪಾದ್ಯಾಚಮನ ಮೊದಲಾದ ಷೋಡಶಾ-
ನರ್ಘ್ಯ ಪೂಜೆಯಿತ್ತನಳಿಯಗೆ
ಒಗ್ಗಿದ ಮನದಿಂದ ಧಾರೆಯೆರೆದನೆ ಸಿಂಧು
ಸದ್ಗತಿಯಿತ್ತು ಸಲಹೆಂದ ||೭೨||
ವೇದೋಕ್ತ ಮಂತ್ರ ಪೇಳಿ ವಸಿಷ್ಠ ನಾರದ ಮೊದ-
ಲಾದ ಮುನೀಂದ್ರರು ಮುದದಿಂದ
ವಧೂವರರ ಮೆಲೆ ಶೋಭನದಕ್ಷತೆಯನು
ಮೊದವೀವುತ್ತ ತಳೆದರು ||೭೩||
ಸಂಭ್ರಮದಿಂದಂಬರದಿ ದುಂದುಭಿ ಮೊಳಗಲು
ತುಂಬುರು ನಾರದರು ತುತಿಸುತ್ತ
ತುಂಬುರು ನಾರದರು ತುತಿಸುತ್ತ ಪಾಡಿದರು ಪೀ-
ತಾಂಬರಧರನ ಮಹಿಮೆಯ ||೭೪||
ದೇವನಾರಿಯರೆಲ್ಲ ಬಂದೊದಗಿ ಪಾಠಕರು
ಓವಿ ಪಾಡುತ್ತ ಕುಣಿದರು
ದೇವತರುವಿನ ಹೂವಿನ ಮಳೆಗಳ
ಶ್ರೀವರನ ಮೆಲೆ ಕರೆದರು ||೭೫||
ಮುತ್ತು-ರತ್ನಗಳಿಂದ ಕೆತ್ತಿಸಿದ ಹಸೆಯ ನವ-
ರತ್ನ ಮಂಟಪದಿ ಪಸರಿಸಿ
ರತ್ನಮಂಟಪದಿ ಪಸರಿಸಿ ಕೃಷ್ಣನ
ಮುತ್ತೈದೆಯರೆಲ್ಲ ಕರೆದರು ||೭೬||
ಶೇಷಶಯನನೆ ಬಾ ದೋಷದೂರನೆ ಬಾ
ಭಾಸುರಕಾಯ ಹರಿಯೆ ಬಾ
ಭಾಸುರಕಾಯ ಹರಿಯೆ ಬಾ ಶ್ರೀಕೃಷ್ಣ ವಿ-
ಲಾಸದಿಂದೆಮ್ಮ ಹಸೆಗೆ ಬಾ ||೭೭||
ಕಂಜಲೋಚನನೆ ಬಾ ಮಂಜುಳಮೂರ್ತಿ ಬಾ
ಕುಂಜರವರದಾಯಕನೆ ಬಾ
ಕುಂಜರವರದಾಯಕನೆ ಬಾ ಶ್ರೀಕೃಷ್ಣ ನಿ-
ರಂಜನ ನಮ್ಮ ಹಸೆಗೆ ಬಾ ||೭೮||
ಆದಿಕಾಲದಲಿ ಆಲದೆಲೆಯ ಮೇಲೆ
ಶ್ರೀದೇವಿಯರೊಡನೆ ಪವಡಿಸಿದ
ಶ್ರೀದೇವಿಯರೊಡನೆ ಪವಡಿಸಿದ ಶ್ರೀಕೃಷ್ಣ
ಮೋದದಿಂದೆಮ್ಮ ಹಸೆಗೆ ಬಾ ||೭೯||
ಆದಿಕಾರಣನಾಗಿ ಆಗ ಮಲಗಿದ್ದು
ಮೋದ ಜೀವರ ತನ್ನ ಉದರದಲಿ
ಮೋದ ಜೀವರ ತನ್ನುದರದಲಿ ಇಂಬಿತ್ತ ಅ-
ನಾದಿ ಮೂರುತಿಯೆ ಹಸೆಗೆ ಬಾ ||೮೦||
ಚಿನ್ಮಯವೆನಿಪ ನಿಮ್ಮ ಮನೆಗಳಲ್ಲಿ ಜ್ಯೋ
ತಿರ್ಮಯವಾದ ಪದ್ಮದಲ್ಲಿ
ರಮ್ಮೆಯರೊಡಗೂಡಿ ರಮಿಸುವ ಶ್ರೀಕೃಷ್ಣ
ನಮ್ಮ ಮನೆಯ ಹಸೆಗೆ ಬಾ ||೮೧||
ನಾನಾವತಾರದಲಿ ನಂಬಿದ ಸುರರಿಗೆ
ಆನಂದವೀವ ಕರುಣಿ ಬಾ
ಆನಂದವೀವ ಕರುಣಿ ಬಾ ಶ್ರೀಕೃಷ್ಣ
ಶ್ರೀನಾರಿಯೊಡನೆ ಹಸೆಗೆಳು ||೮೨||
ಬೊಮ್ಮನ ಮನೆಯಲ್ಲಿ ರನ್ನದಪೀಠದಿ ಕುಳಿತು
ಒಮ್ಮನದಿ ನೇಹವ ಮಾಡುವ
ನಿರ್ಮಲ ಪೂಜೆಯ ಕೈಗೊಂಬ ಶ್ರೀಕೃಷ್ಣ ಪ-
ರಮ್ಮ ಮೂರುತಿಯೆ ಹಸೆಗೆ ಬಾ ||೮೩||
ಮುಖ್ಯಪ್ರಾಣನ ಮನೆಯಲ್ಲಿ ಭಾರತಿಯಾಗಲಿ-
ಕ್ಕೆ ಬಡಿಸಿದ ರಸಾಯನವ
ಸಕ್ಕರೆಗೂಡಿದ ಪಾಯಸ ಸವಿಯುವ
ರಕ್ಕಸವೈರಿಯೆ ಹಸೆಗೆ ಬಾ ||೮೪||
ರುದ್ರನ ಮನೆಯಲ್ಲಿ ರುದ್ರಾಣಿದೇವಿಯರು
ಭದ್ರಮಂಟಪದಿ ಕುಳ್ಳಿರಿಸಿ
ಸ್ವಾದ್ವನ್ನಗಳನು ಬಡಿಸಲು ಕೈಗೊಂಡ
ಮುದ್ದು ನರಸಿಂಹ ಹಸೆಗೆ ಬಾ ||೮೫||
ಗರುಡನ ಮೇಲೇರಿ ಗಗನಮಾರ್ಗದಲ್ಲಿ
ತರತರದಿ ಸ್ತುತಿಪ ಸುರಸ್ತ್ರೀಯರ
ಮೆರೆವ ಗಂಧರ್ವರ ಗಾನವ ಸವಿಯುವ
ನರಹರಿ ನಮ್ಮ ಹಸೆಗೆ ಬಾ ||೮೬||
ನಿಮ್ಮಣ್ಣನ ಮನೆಯ ಸುಧರ್ಮ ಸಭೆಯಲ್ಲಿ
ಉಮ್ಮೆಯರಸ ನಮಿಸಿದ
ಧರ್ಮರಕ್ಷಕನೆನಿಪ ಕೃಷ್ಣ ಕೃಪೆಯಿಂದ ಪ-
ರಮ್ಮ ಮೂರುತಿಯೆ ಹಸೆಗೆ ಬಾ ||೮೭||
ಇಂದ್ರನ ಮನೆಘೋಗಿ ಅದಿತಿಗೆ ಕುಂಡಲವಿತ್ತು
ಅಂದದ ಪೂಜೆಯ ಕೈಗೊಂಡು
ಅಂದದ ಪೂಜೆಯ ಕೈಗೊಂಡು ಸುರತರುವ
ಇಂದಿರೆಗಿತ್ತ ಹರಿಯೆ ಬಾ ||೮೮||
ನಿಮ್ಮ ನೆನೆವ ಮುನಿಹೃದಯದಲಿ ನೆಲೆಸಿದ
ಧರ್ಮರಕ್ಷಕನೆನಿಸುವ
ಸಮ್ಮತವಾಗಿದ್ದ ಪೂಜೆಯ ಕೈಗೊಂಡ ನಿ-
ಸ್ಸೀಮ ಮಹಿಮ ಹಸೆಗೆ ಬಾ ||೮೯||
ಮುತ್ತಿನ ಸತ್ತಿಗೆಯ ನವರತ್ನದ ಚಾಮರ
ಸುತ್ತನಲಿವ ಸುರಸ್ತ್ರೀಯರ
ನೃತ್ಯವ ನೋಡುತ ಚಿತ್ರ ವಾದ್ಯಂಗಳ ಸಂ
ಪತ್ತಿನ ಹರಿಯೆ ಹಸೆಗೆ ಬಾ ||೯೦||
ಎನಲು ನಗುತ ಬಂದು ಹಸೆಯ ಮೇಲೆ
ವನಿತೆ ಲಕ್ಷ್ಮಿಯೊಡಗೂಡಿ
ಅನಂತ ವೈಭವದಿ ಕುಳಿತ ಕೃಷ್ಣನ ನಾಲ್ಕು
ದಿನದುತ್ಸವವ ನಡೆಸಿದರು ||೯೧||
ಅತ್ತೆರೆನಿಪ ಗಂಗೆ ಯಮುನೆ ಸರಸ್ವತಿ ಭಾ-
ರತಿ ಮೊದಲಾದ ಸುರಸ್ತ್ರೀಯರು
ಮುತ್ತಿನಾಕ್ಷತೆಯನು ಶೋಭಾನವೆನುತಲಿ ತಮ್ಮ
ಅರ್ತಿಯಳಿಯಗೆ ತಳಿದರು ||೯೨||
ರತ್ನದಾರತಿಗೆ ಸುತ್ತ ಮುತ್ತನೆ ತುಂಬಿ
ಮುತ್ತೈದೆಯರೆಲ್ಲ ಧವಳದ
ಮುತ್ತೆದೆರೆಲ್ಲ ಧವಳದ ಪದವ ಪಾ-
ಡುತ್ತಲೆತ್ತಿದರೆ ಸಿರಿವರಗೆ ||೯೩||
ಬೊಮ್ಮ ತನ್ನರಸಿ ಕೂಡೆ ಬಂದರೆಗಿದ
ಉಮ್ಮೆಯರಸ ನಮಿಸಿದ
ಅಮ್ಮರರೆಲ್ಲರು ಬಗೆಬಗೆ ಉಡುಗೊರೆಗಳ
ರಮ್ಮೆಯರಸಗೆ ಸಲಿಸಿದರು ||೯೪||
ಸತ್ಯಲೋಕದ ಬೊಮ್ಮ ಕೌಸ್ತುಭರತ್ನವನಿತ್ತ
ಮುಕ್ತಾಸುರರು ಮುದದಿಂದ
ಮುತ್ತಿನ ಕಂಠೀಸರವ ಮುಖ್ಯಪ್ರಾಣನಿತ್ತ
ಮಸ್ತಕದ ಮಣಿಯ ಶಿವನಿತ್ತ ||೯೫||
ತನ್ನರಸಿ ಕೂಡೆ ಸವಿನುಡಿ ನುಡಿವಾಗ
ವದನದಲ್ಲಿದ್ದಗ್ನಿ ಕೆಡದಂತೆ
ವಹ್ನಿ ಪ್ರತಿಷ್ಠೆಯ ಮಾಡಿ ಅವನೊಳಗಿದ್ದ
ತನ್ನಾಹುತಿ ದಿಬ್ಬಣ ಸುರರಿಗೆ ||೯೬||
ಕೊಬ್ಬಿದ ಖಳರೋಡಿಸಿ ಅಮೃತಾನ್ನ ಊಟಕ್ಕೆ
ಉಬ್ಬಿದ ಹರುಷದಿ ಉಣಿಸಲು
ಉಬ್ಬಿದ ಹುರುಷದಿ ಉಣಿಸಬೇಕೆಂದು ಸಿಂಧು
ಸರ್ವರಿಗಡಿಗೆಯ ಮಾಡಿಸಿದ ||೯೭||
ಮಾವನ ಮನೆಯಲ್ಲಿ ದೇವರಿಗೌತಣವ
ದಾನವರು ಕೆಡಿಸದೆ ಬಿಡರೆಂದು
ದಾನವರು ಕೆಡಿಸದೆ ಬಿಡರೆಂದು ಶ್ರೀಕೃಷ್ಣ
ದೇವಸ್ತ್ರೀವೇಷವ ಧರಿಸಿದ ||೯೮||
ತನ್ನ ಸೌಂದರ್ಯದಿಂದುನ್ನತಮಯವಾದ
ಲಾವಣ್ಯದಿಂದ ಮೆರೆವ ನಿಜಪತಿಯ
ಹೆಣ್ಣು ರೂಪವ ಕಂಡು ಕನ್ಯೆ ಮಹಲಕ್ಷುಮಿ ಇವ-
ಗನ್ಯರೇಕೆಂದು ಬೆರಗಾದಳು ||೯೯||
ಲಾವಣ್ಯಮಯವಾದ ಹರಿಯ ಸ್ತ್ರೀವೇಷಕ್ಕೆ
ಭಾವಕಿಯರೆಲ್ಲ ಮರುಳಾಗೆ
ಮಾವರ ಸುಧೆಯ ಕ್ರಮದಿಂದ ಬಡಿಸಿ ತನ್ನ
ಸೇವಕ ಸುರರಿಗುಣಿಸಿದ ||೧೦೦||
ನಾಗನ ಮೆಲೆ ತಾ ಮಲಗಿದ್ದಾಗ
ಆಗಲೆ ಜಗವ ಜತನದಿ
ಆಗಲೆ ಜಗವ ಜತನದಿ ಧರಿಸೆಂದು
ನಾಗಬಲಿಯ ನಡೆಸಿದ ||೧೦೧||
ಕ್ಷುಧೆಯ ಕಳೆವ ನವರತ್ನದ ಮಾಲೆಯ
ಮುದದಿಂದ ವಾರಿಧಿ ವಿಧಿಗಿತ್ತ
ಚದುರ ಹಾರವ ವಾಯುದೇವರಿಗಿತ್ತ
ವಿಧುವಿನ ಕಲೆಯ ಶಿವಗಿತ್ತ ||೧೦೨||
ಶಕ್ರ ಮೊದಲಾದ ದಿಕ್ಪಾಲಕರಿಗೆ
ಸೊಕ್ಕಿದ ಚೌದಂತ ಗಜಂಗಳ
ಉಕ್ಕಿದ ಮನದಿಂದ ಕೊಟ್ಟ ವರುಣ ಮದು-
ಮಕ್ಕಳಾಯುಷ್ಯವ ಬೆಳೆಸೆಂದ ||೧೦೩||
ಮತ್ತೆ ದೇವೆಂದ್ರಗೆ ಪಾರಿಜಾತವನಿತ್ತ
ಚಿತ್ತವ ಸೆಳೆವಪ್ಸರಸ್ತ್ರೀಯರ
ಹತ್ತುಸಾವಿರ ಕೊಟ್ಟ ವರುಣದೇವ ಹರಿ-
ಭಕ್ತಿಯ ಮನದಲ್ಲಿ ಬೆಳೆಸೆಂದ ||೧೦೪||
ಪೊಳೆವ ನವರತ್ನದ ರಾಶಿಯ ತೆಗೆತೆಗೆದು
ಉಳಿದ ಅಮರರಿಗೆ ಸಲ್ಲಿಸಿದ
ಉಳಿದ ಅಮರರಿಗೆ ಸಲ್ಲಿಸಿದ ಸಮುದ್ರ
ಕಳುಹಿದನವರ ಮನೆಗಳಿಗೆ ||೧೦೫||
ಉನ್ನತ ನವರತ್ನಮಯವಾದ ಅರಮನೆಯ
ಚೆನ್ನೆ ಮಗಳಿಗೆ ವಿರಚಿಸಿ
ತನ್ನ ಅಳಿಯನಿಗೆ ಸ್ಥಿರಮಾಡಿ ಕೊಟ್ಟ
ಇನ್ನೊಂದು ಕಡೆಯಡಿ ಇಡದಂತೆ ||೧೦೬||
ಹಯವದನ ತನ್ನ ಪ್ರಿಯಳಾದ ಲಕ್ಷುಮಿಗೆ
ಜಯವಿತ್ತ ಕ್ಷೀರಾಂಬುಧಿಯಲ್ಲಿ
ಜಯವಿತ್ತ ಕ್ಷೀರಾಂಬುಧಿಯಲ್ಲಿ ಶ್ರೀಕೃಷ್ಣ
ದಯದಿ ನಮ್ಮೆಲ್ಲರ ಸಲಹಲಿ ||೧೦೭||
ಈ ಪದವ ಮಾಡಿದ ವಾದಿರಾಜ ಮುನಿಗೆ
ಶ್ರೀಪತಿಯಾದ ಹಯವದನ
ತಾಪವ ಕಳೆದು ತನ್ನ ಶ್ರೀಚರಣವ ಸ
ಮೀಪದಲ್ಲಿಟ್ಟು ಸಲಹಲಿ ||೧೦೮||
ಇಂತು ಸ್ವಪ್ನದಲ್ಲಿ ಕೊಂಡಾಡಿಸಿಕೊಂಡ ಲಕ್ಷ್ಮೀ
ಕಾಂತನ ಕಂದನೆನಿಸುವ
ಸಂತರ ಮೆಚ್ಚಿನ ವಾದಿರಾಜೇಂದ್ರಮುನಿ
ಪಂಥದಿ ಪೇಳಿದ ಪದವಿದು ||೧೦೯||
ಶ್ರೀಯರಸ ಹಯವದನಪ್ರಿಯ ವಾದಿರಾಜ-
ರಾಯ ರಚಿಸಿದ ಪದವಿದು
ಆಯುಷ್ಯ ಭವಿಷ್ಯ ದಿನದಿನಕೆ ಹೆಚ್ಚಾಗುವದು ನಿ-
ರಾಯಾಸದಿಂದ ಸುಖಿಪರು ||೧೧೦||
ಬೊಮ್ಮನ ದಿನದಲ್ಲಿ ಒಮ್ಮೊಮ್ಮೆ ಈ ಮದುವೆ
ಕ್ರಮ್ಮದಿ ಮಾಡಿ ವಿನೊದಿಸುವ
ನಮ್ಮ ನಾರಾಯಣಗೂ ಈ ರಮ್ಮೆಗಡಿಗಡಿಗು
ಅಸುರ ಮೋಹನವೆ ನರನಟನೆ ||೧೧೧||
ಮದುವೆಯ ಮನೆಯಲ್ಲಿ ಈ ಪದವ ಪಾಡಿದರೆ
ಮದುಮಕ್ಕಳಿಗೆ ಮುದವಹುದು
ವಧುಗಳಿಗೆ ಓಲೆ ಭಾಗ್ಯ ದಿನದಿನಕೆ ಹೆಚ್ಚುವದು
ಮದನನಯ್ಯನ ಕೃಪೆಯಿಂದ ||೧೧೨||
ಶೋಭಾನವೆನ್ನಿರೆ ಸುರರೊಳು ಶುಭಗನಿಗೆ
ಶೋಭಾನವೆನ್ನಿ ಸುಗುಣನಿಗೆ
ಶೋಭಾನವೆನ್ನಿರೆ ತ್ರಿವಿಕ್ರಮರಾಯಗೆ
ಶೋಭಾನವೆನ್ನಿ ಸುರಪ್ರಿಯಗೆ ||ಶೋಭಾನೆ||
***
ಆರತಿ ಹಾಡು - ಲಕ್ಷ್ಮೀ ಶೋಭನ ಹೇಳಿದನಂತರ ಹೇಳುವುದು.
ಹಡಗಿನೊಳಗಿಂದ ಬಂದ ಕಡುಮುದ್ದು
ಹಡಗಿನೋಳಗಿಂದ ಬಂದ ಕಡುಮುದ್ದು
ಶ್ರೀಕೃಷ್ಣ ಕಡಗೋಲಾಣೆ ನಾ ಪಿಡಿದಾಣೆ
ಕಡಗೋಲಾಣೆ ನಾ ಪಿಡಿಯುತ್ತ ದೇವಕಿಗೆ
ಒಡಯಗಾರತಿಯ ಬೆಳಗೀರೇ ಶೋಭಾನೆ
ಮಧ್ವಸರೋವರದಲ್ಲಿ ಶುದ್ಧ ಪೂಜೆಯಗೊಂಬೆ
ಮುದ್ದು ರುಕ್ಮಿಣಿಯ ಅರಸನೇ
ಮುದ್ದು ರುಕ್ಮಿಣಿಯ ಅರಸ ಶ್ರೀಕೃಷ್ಣಗೆ
ಮುತ್ತಿನಾರುತಿಯ ಬೆಳಗಿರೆ ೧
ಆಚಾರ್ಯರ ಕೈಯಿಂದ ಅಧಿಕ ಪೂಜೆಯಗೊಂಬ
ಕಾ೦ತೆರುಕ್ಮಿಣಿಯಾ ಅರಸನೇ ಕಾ೦ತೆ ರುಕ್ಮಿಣಿಯ
ಅರಸ ಶ್ರೀಕೃಷ್ಣಗೆ ಕಾ೦ಚನದಾರುತಿಯ ಬೆಳಗಿರೇ ೨
ಎಳೆ ತುಳಸಿಯ ಮಾಲೆ ಕೊರಳೊಳು ಧರಿಸಿಹ
ವರಮದ್ವಮುನಿಗೆ ಒಲುಮೆಯ
ವರಮದ್ವಮುನಿಗೆ ಒಲುಮೆಯ ಶ್ರೀಕೃಷ್ಣ
ಮಂಗಳಾರುತಿಯ ಬೆಳಗಿರೇ ೩
ಹೊತ್ತಾರಿನ ಪೂಜೆಗೆ ಸಜ್ಜಿಗೆ ಬಾಳೆಹಣ್ಣು
ಮುತ್ತಿನಬಟ್ಟು ಹೋಳೆಯುತ್ತಾ ಮುತ್ತಿನ ಬಟ್ಟೂ
ಹೋಳೆಯುತ್ತ ಶ್ರೀ ಕೃಷ್ಣ ಮೂರ್ತಿಗಾರುತಿಯ
ಬೆಳಗಿರೇ ೪
ಸೋದರ ಮಾವನ್ನು ಮಧುರೇಲಿ ಮಡುಹಿದ
ಸತ್ಯಭಾಮೆಯರ ಅರಸನೇ ಸತ್ಯಭಾಮೆಯರ
ಅರಸ ಶ್ರೀಕೃಷ್ಣಗೆ ಚಿನ್ನದಾರುತಿಯ ಬೆಳಗಿರೇ ೫
ಕಲ್ಲು ಕಡಿದವ ಬ೦ದ ಬಿಲ್ಲು ಮುರಿದವ
ಬ೦ದ ನಿಲ್ಲದೆದು ಪೂಜೆಗೆ ಪತೀಬ೦ದ
ಪತಿಬ೦ದ ಶ್ರೀಕೃಷ್ಣ ಹೂವಿನಾರತಿಯ ಬೆಳಗೀರೆ ೬
ಪಾಂಡವ ಪ್ರಿಯಗೆ ಚಾರಣರ
ಮಧ೯ನಗೆ ತಾಯಿಯ ಸೆರೆಯ ಬಿಡಿಸಿದಗೆ
ತಾಯಿಯ ಸೆರೆಯ ಬಿಡಿಸಿದ ಹಯವದನ
ದೇವಗಾರುತಿಯ ಬೆಳಗಿರೇ ೭
***
The Lakshmi Shobane, composed by Shri Vadiraja Tirtha, is a sacred song traditionally sung during weddings and auspicious occasions. It describes the divine marriage of Lakshmi and Narayana, highlighting their glory and the benefits of reciting these verses.
śōbhānavennire suraroļu subhaganige śōbhanavenni sugunanige |
śōbhanavennire trivikramarāyage śōbhanavenni surapriyage |
śōbhānē | pa |
lakṣmīnārāyaṇara caraņakke śaraņembe pakşivāhannageraguve |
pakşivāhannageraguve anudina rakṣisali namma vadhuvarara | 1 |
pālasāgaravannu līleyalli kadeyalu bāle mahalaksumi udisidaļu |
bāla mahalaksumi udisidaļā dēvī pālisali namma vadhuvarara | 2 |
bommana pralayadali tannarasiyodagūdi summaneyāgi malagippa |
namma nārāyaņagū ī rammegadigadigū janmaveṁbudu avatāra | 3 |
kambukamthada sutta kattida mamgaļasūtra ambujaveradu karayugadi |
ambujaveradu karayugadi dharisi pītāmbaravuttu meredaļu | 4 |
omdu karadimda abhayavanīvale mattomdu kaiyimda varagala |
kumdilladānaṁda saṁdōha uņisuva imdire namma salahali | 5 |
poļeva kāṁciya dāma uliva kimkinigaļu naliva kāalamduge ghalukenalu |
nalanalisuva muddumogada celuve lakṣmī salahali namma vadhuvarara|6 |
rannada molegattu cinnadābharaṇagaļa cenne mahalakşumi dharisidale |
cenne mahalaksumi dharisidaļā dēvi tanna maneya vadhuvarara salahali | 7 |
kumbha kucada mēle imbitta hāragaļu tuṁbiguruļa mukhakamala |
tumbiguruļa mukhakamalada mahalaksmi jagadambe vadhuvarara salahali | 8 |
muttina õleyannittale mahalaksmi kastūri tilaka dharisidale |
kastūri tilaka dharisidaļā dēvi sarvatra vadhuvarara salahali | 9 |
ambuja nayanagaļa bimbādharada śaśi bimbademteseva mūgutimaniya |
bembademteseva mūgutimaniya mahalakṣmī uṁbudakīyali vadhuvararge | 10 |
muttinakşateyittu navaratnada mukuțava nettiya mēle dharisidale |
nettiya mēle dharisidaļā dēvi tanna bhaktiya janara salahali | 11 |
kumdamaṁdāra jāji kusumagaļa vrṁdada cemdada turubige turubidale |
kumda varņada kõmale mahalaksmi krpeyimda vadhuvarara salahali | 12 |
emdemdu bādada aravimdada māleya imdire poleva koraļali |
imdire poleva koraļalli dharisidale avaliṁdu vadhuvarara salahali | 13 |
dēvāmga patteya mēlu hoddikeya bhāve mahalaksumi dharisidale |
bhāve mahalaksumi dharisidaļā dēvi tanna sēvaka janara salahali | 14 |
ī lakṣmīdēviya kāluṁgura ghalukenalu lōlākşi mellane nade tamdaļu |
sālāgi kullirda surara sabheya kamdu ālōcisidaļu manadalli | 15 |
tanna makkaļa kumda tānē pēļuvudakke mannadi nāci mahalakṣmī |
tannāmadimdali kareyade obbobbara unnamta dōsagalanenisidaļu | 16 |
kelavaru taleyūri tapagaidu punyava gaļisiddarēnū phalavilla |
jvalisuva kõpadi śāpava koduvaru lalaneyanivaru olisuvare | 17 |
|ella śāstragalōdi durlabha jñānava kalisi koduva gurugaļu |
ballida dhanakke marulāgi ibbaru sallada purõhitakkolagādaru | 18 |
kāmanirjitanobba kāminige sõtobba bhāminiya himde hāridavanobba |
kāmāṁdhanāgi muniya kāminigaidavanobba kāmadi gurutalpagāmiyobba | 19 |
naśvaraiśvaryava bayasuvanobba pararāśrayisi bāļuva īśvaranobba |
hāsyava mādi halludurisikomdavanobba adṛśyāṁghriyobba okkannanobba | 20 |
māvana komdobba maruļāgihanu gada härvana koṁdobba baļalida |
jīvara komdobba kulagēdemdenisida śivanimdobba bayalāda | 21 |
dharma umtobbanali hemmeya hesarige ammamma takka gunavilla |
kşameya bittobba narakadali jīvara marmava metti kolisuva | 22 |
khalanaṁte obba tanage sallada bhāgyava ballidagamji barigaida |
durlabhamuktige dūravemdenisuva pātāļa talakke ilida gāda | 23 |
ellarāyuṣyava śiṁśumāradēva sallīleyimda tolagisuva |
olle nānivara nityamuttaideyamdu ballavarenna bhajisuvaru | 24 |
prakrtiya gunadimda kattu odedu nānā vikrtigoḷagāgi bhavadalli |
sukhadu:khavumba bommādi jīvaru du:khakke dūraļenipa enageneye | 25 |
obbanāvana maga mattobbanāvana mommaga obbanāvanige śayanāha |
obbanāvana poruva mattibbarāvanigamji abbaradalāvāga sulivaru | 26 |
obbanāvana nāmakamji beccuva gada sarvarigāva amrtava |
sarvarigāva amrtavanuņisuva avanobbane niranista niravadya | 27 |
niranista niravadya emba srtyarthava oredu nōdalu naraharige |
narakayātane salla duritātidūranige maruļa manabamdamte nudiyadiru | 28 |
omdomdu gunagaļu iddāvu ivaralli samdanisive bahu dōṣa |
kumdellastillada mukumdane tanagemdu imdire patiya nenedaļu | 29 |
dēvarşi viprara komdu tannudaradolittu tīvirda harige duritava |
bhāvajñarembare agāladele mēle śivana limgava nilisuvare | 30 |
hasi trșe jare maraņa rõga rujinagalemba asura piśācigaļa bhayaveṁba |
vyasana barabāradu emba nārāyanage pasu modalāda neneyadu | 31 |
tā du:khiyādare surarārtiya kaledu mõdavīvudake dharegāgi |
mādhava bāhane kesaroļu muligidava parara bādhipa kesara bidisuvane | 32 |
bommanālayadalli iddavage laya umțe janma layavilladavanige |
ammiyanunisidda yaśōdeyāgiddaļe amma ivage hasi trşeyumte | 33 |
āga bhakṣya bhōjyavittu pūjisuva yōgigaļumțe dhanadhānya |
āga dorakombude pāka māduva vahni mattāgalellihudu vicārisirō | 34 |
rõgavanīva vātapittaślēşma āga koduvudē rameyodane |
bhōgisuvavage duritava nenevare gunanidhige eneyumte | 35 |
ramme dēviyaranappikomdippudu rammeyarasage rati kāņiro |
ammōgha vīryavu calisidare pralayadali kummāraru yake janisaru| 36 |
ēkatra nirnīta śāstrārtha paratrāpi bēkemba nyāyava tiļidukō |
śrīkṛṣṇanobbane sarvadōsakke silukkaneṁbōdu salahalike | 37 |
ella jagava nuṁgi dakkisikomdavage salladu rõga rujinavu |
balla vaidyara kēļi ajīrti mūlavalladilla samasta rujinavu | 38 |
imtha mūrutiya olakomba naraka bahu bhrāmta nēnellimda tõruvelo |
samteya maruļa hōgelō ninna māta samtaru kēļi sogasaru | 39 |
śrī nārāyanara janani janakara nānemba vādi nudiyelő |
jāņaradarimdariya mūlarūpava tōri śrī nārasimhana avatara | 40 |
ambudhiya udakadali odedu mūdida kūrma emba śrīhariya pitanāru |
emba śrīhariya pitanāru adarimda svayumbhugalella avatāra | 41 |
dēvakiya garbhadali dēvanavatarisida bhāvavanu balla vivēkigaļu |
vasudheyolage krsnage janmava āva pariyali nudiveyō | 42 |
ākaļisuvāga yaśōdādēvioge dēva tannolage hudugidda |
bhuvanavellava tõriddudillave visņu garbhadoladaguvane | 43 |
āneya mānadali ādagisidavarumțe anēka kõţi ajāmdava |
anurōma kõpadali āļda śrīhariya janani jatharavu olakombude | 44 |
adarimda krsnanige janmaveṁbudu salla madananivana kumāranu |
kadanadi kanegaļa ivanedegesevane sudatērigivanimtu silukuvane | 45 |
adarimda krsnage paranāri samgava kõvidarāda budharu nudivare |
sadarave mātu sarva vēdamgaļu mudadimda tāvu stutisuvavu | 46 |
emda bhāgavatada cemdada mātanu mamda mānava manasige |
tamdu kojagake kaivalyavīva mukumdage kumdu korate salladu | 47 |
hattu varuşada kelage makkaļātikeyalli cittastrīyarige eraguvude |
artiyimdarcisida gōkulada kanneyara satyasamkalpa beretidda | 48 |
hattu mattāru sāsira strīyaralli hattu hattenipa kramadimda |
putraranu vīryadali srstisidavarumțe artiya srști harigidu | 49 |
rōma rōma kūpa kōți vrkamgaļa nirmisi gopālara teralisida |
namma śrīkṛṣṇanu makkaļa srjisuva mahime ballavarige salahalike | 50 |
mannanēke medde emba yaśōdege saņņa bāyolage jagamgaļa |
kaņņāre tõrida namma śrīkṛṣṇana ghannate ballavarige salahalike | 51 |
nārada sanakādi modalāda yōgigaļu nāriyarige maruļādare |
ōramte śrīkrsnanadigadigeraguvare ārādhisutta bhajisuvare | 52 |
ambuja sambhava triyambaka modalāda nambidavarige varavitta |
sambhramada suraru eļļastu kõpakke imbiddarivana bhajisuvare | 53 |
avanumgustava toleda gaṁgādēvi pāvanaļenisi mereyale |
jīvana sēruva pāpava kaļevaļu ī vāsudēvage eneyumte | 54 |
kilbiṣaviddare agrapūjeyanu sarbarāyara sabheyoļu |
ubbida manadimda dharmaja māduvane kobbadirelo paravādi | 55 |
sāvillada harige naraka yātane salla jīvamtarige narakadali |
nōvanīvanu nimma yamadēvanu nova nī hariya gunavariye | 56 |
narakavāļuva yamadharmarāja tanna narajanmadoļage poralisi |
marali tannarakadali poralisi koluvanu kuru ninna kuhaka koladalli | 57 |
bommana nūru varuşa pariyamta pralayadali summaneyāgi malagirda |
namma nārāyaṇage hasi trșe jare maraņa duskarma du:khagaļa todagisuvare | 58 |
rakkasarastragalimda gāyavadeyada akşayakāyada sirikṛṣṇa |
tucca yamabhațara śastra kaļakuvanalla hucca nī hariya gunavariya | 59 |
kicca numgidanu namma śrīkṛṣṇanu tucca narakadoļu analanige |
beccuvanalla adarimdivage naraka meccuvaralla budharella | 60 |
maneyalli kşameya tāļda vīrabhața ranaramgadi kşamisuvane |
aņuvāgi namma hitakke manadoļagina krşņa muniva kālakke mahattāpa | 61 |
tāya potteyimda mūlarūpava tōri āyudha sahita poravamța |
nyāya kōvidaru puttidanembare bāyige bamdamte bogaļadiru | 62 |
utta pītāmbara totta bhūsanamgaļu itta navaratnada mukutavu |
mettida kuruha edeyalli tõrida śrī vithala puttidanenabahude | 63 |
rşabahamsa mēşa mahişa mūşakavāhanavēri mānisaramte suļiva surarella |
eseva dēvēśānara sāhasakke manidaru kusumanābhanige sariyumte | 64 |
omdomdu gunagaļu iddāvu ivaralli samdaniseve bahu dōṣa |
kumdellastillada mukumdane tanagemdu imdire patiya nenedaļu | 65 |
imtu cimtisi rame samta rāmana padava samtōsa manadi nenevutta |
samtōṣa manadi nenevutta tanna śrīkāṁtaniddedege nadedaļu | 66 |
kamdarpa kōtigala geluva saumdaryada cemdavāgidda celuvana |
imdire kamdu ivane tanage pati eṁdavana balige nadedaļu | 67 |
teradi surara sutta nõdutta cittava kodade nasunaguta |
cittava kodade nasunaguta bamdu purusõttamana kamdu namisidaļu | 68 |
nānā kusumagalimda mādida māleya śrīnāri tanna karadalli |
pīna kamdharana trivikramarāyana koralina mēlittu namisidaļu | 69 |
utta pombatteyu tottābharanagaļu itta navaratnada mukuțavu |
duşta mardananemba kadeya pemdegaļa vatțidda harige vadhuvādaļu | 70 |
kombu ceṁbaka kahale tāļa maddaļegaļu tambațe bhēri patahagaļu |
bhōṁ bhōm emba śaṁkha dollumaurigaļu ambudhiya maneyallesedavu | 71 |
arghyapādyācamana modalāda şōdaśanarghya pūjeyannittanaliyage |
oggida manadimda dhāreyeredane simdhu sadgatiyittu salahemda | 72 |
vēdōkta mamtra pēļi vasistha nārada modalāda munīṁdraru mudadimda |
vadhuvarara mēle śōbhanadaksateyanu mōdavīyutta talidaru | 73 |
sambhramadimdambaradi dumdhubhi molagalu tumburu nāradaru tutisutta |
tumburu nāradaru tutisutta pādidaru pītāmbaradharana mahimeya | 74 |
dēva nāriyarella bamdodagi pāthakaru ōvi pādutta kunidaru |
dēva taruvina hūvina malegaļa śrīvarana mēle karedaru | 75 |
muttu ratnagaḷimda kettisida haseya navaratna mamțapadi pasarisi |
navaratna mamțapadi pasarisi krsnana muttaideyarella karedaru | 76 |
śēṣaśayanane bā dōṣa dūrane bā bhāsurakāya hariye bā |
bhāsurakāya hariye bā śrīkṛṣṇa vilāsamdidemma hasege bā | 77 |
kamjalōcanane bā mamjuļa mūrti bā kumjaravaradāyakane bā |
kumjaravaradāyakane bā śrī krsna niramjana namma hasege bā | 78 |
ādi kāladalli āladeleya mēle śrīdēviyarodane pavadisida |
śrīdēviyarodane pavadisida śrīkṛṣṇa mōdadimdemma hasege bā | 79 |
adikāraṇanāgi āga malagiddu mõda jīvara tannudaradali |
mōda jīvara tannudaradali imbitta anādi mūrutiye hasege bā | 80 |
cinmayavenipa nimma manegaḷalli jyotirmayavāda padmadali |
rammeyarodagūdi ramisuva śrīkṛṣṇa namma maneya hasege bā | 81 |
nānāvatāradali nambida surarige ānaṁdavīva karuni bā |
ānaṁdavīva karuņi bā śrīkṛṣṇa śrīnāriyarodane hasege bā | 82 |
bommana maneyalli rannada pīthadi kulidu ommanadi nēhava māduva |
nirmala pūjeya kaigomba śrīkṛṣṇa parabomma mūrutiye hasege bā | 83 |
mukhyaprānana maneyalli bhāratiyāgalikke badisida rasāyanava |
sakkaregūdida pāyasa saviyuva rakkasavairiya hasege bā | 84 |
rudrana maneyalli rudrāņi dēviyaru bhadramamtapadi kullirisi |
svādvannagalanu badisalu kaigomba muddu narasimha hasege bā | 85 |
garudana mēlēri gagana mārgadalli tarataradi stutipa surastrīyara |
mereva gamdharvara gānava saviyuva narahari namma hasege bā | 86 |
nimmaņņana maneyalli sudharma sabheyalli ummeyarasa namisida |
dharmarakşakanenipa krsņa krpeyimda paramma mūrutiye hasege bā | 87 |
imdrana manege hōgi aditige kumdalavittu amdada pūjeya kaigomdu |
amdada pūjeya kaigomdu surataruva imdiregitta hariye bā | 88 |
nimma neneva muni hrdayadali nelesida dharma rakşakanenisuva |
sammatavāgidda pūjeya kaigomba nissīma mahima hasege bā | 89 |
muttina sattige navaratnada camara sutta naliva surastrīyara |
nrtyava nõdutta citravādyamgaļa sampattina hariye hasege bā | 90 |
enalu naguta baṁdu haseya mēle vanite lakṣmīyodagūdi |
anamtavaibhavadi kulita krsnana nālku dinadutsava nadesidaru | 91 |
attērenipa gamge yamune sarasvati bhārati modalāda surastrīyaru |
muttinakşateyanu śōbhanavenuta tammartiyaliyage talidaru | 92 |
ratnadāratige suttamuttane tumbi muttaideyarella dhavalada |
muttaiderella dhavalada padava pāduttalettidaru sirivarage | 93 |
bomma tannarasi kūde baṁderagida ummeyarasa namisida |
ammararellaru bage bage udugoregala rammeyarasage salisidaru | 94 |
satyalōkada bomma kaustubharatnavanitta mukta suraru mudadimda |
muttina kamṭhīsara mukhyaprāņanitta mastaka maņiya śivanitta | 95 |
tannarasi kūde savinudi nudivāga vadanadalliddagni kedadamte |
vahni pratisteya mādi avanolagidda tannāhutiyitta surarige | 96 |
kobbida khaļarōdisi amrtānna ūțakke ubbida haruşadali unisalu |
ubbida haruşadali unisabēkemdu simdhu sarbargedeya mādisida | 97 |
māvana maneyalli dēvarigautaņava dānavaru kedisade bidaremdu |
dānavaru kedisade bidaremdu śrīkṛṣņa dēva strīvēșava dharisida | 98 |
tanna sauṁdaryadimdannamta madiyāda lāvanyadi mereva nija patiya |
hennurūpava kamdu kanne mahalaksmi ivaganyarēkeṁdu beragādaļu | 99 |
lāvaṇyamayavāda hariya strīvēsakke bhāvukarella maruļāge |
māvara sudheya kramadimda badisi tanna sēvaka surarigunisida | 100 |
nāgana mēle tā malagiddāga āgale jagava jatanadi |
āgale jagava jatanadi dharisemdu nāgabaliya nadesidaru | 101 |
ksudheya kaleva navaratnada māleya mudadimda väridhi vidhigitta |
cadura hārava vāyudēvarigitta vidhuvina kaleya śivagitta | 102 |
śakra modalāda dikpālakarige sokkida caudamta gajamgaļa |
ukkida manadimda kotta varuņa madumakkaḷāyuṣyava beļesemda | 103 |
matte dēvēṁdrage pārijātavanitta cittavaselevapsara strīyara |
hattu sāvira kotta varuņa dēva hari bhaktiya manadi belesemda | 104 |
poleva navaratnada rāśiya tegetegedu ulida amararige salisida |
ulida amararige salisida samudra kaluhidanavara manegalige | 105 |
unnamta navaratnamayavāda aramaneya cennēmagalimda viracisi |
tanna aliyage sthirava mādikotta innomdu kadeyadi idadamte | 106 |
hayavadana tanna priyaļāda laksumige jayavitta kṣīrāmbudhiyalli |
jayavitta kṣīrāmbudhiyalli śr-īkrşņa dayadi nammellara salahali | 107 |
padava māḍida vādirājēndra munige śrīpatiyāda hayavadana |
tāpava kaḷedu tanna śrīcaraṇa samīpadallittu salahali | 108 |
ntu svapnadalli koṇḍāḍisikoṇḍa lakṣmīkāntana kandanenisuva |
santara meccina vādirājēndra munipanthadi hēḷida padavidu | 109 |
śrīyarasa hayavadana priya vādirājarāya racisida padavidu |
āyuṣya bhaviṣya dinadinake heccuvudu nirāyāsadinda sukhiparu | 110 |
bommana dinadalli ommomme ī maduve kramadi māḍi vinōdisuva |
namma nārāyaṇagū ī rammegadigadigū asura mōhanavē naranatane | 111 |
maduveya maneyalli ī padava pāḍidare madumakkaḷige mudavahudu |
vadhugaḷige vālebhāgya dinadinakke heccuvadu madananayyana kṛpeyinda | 112 |
***
********
*****
ಲಕ್ಷ್ಮೀಶೋಭಾನೆ ಮತ್ತು ಮಾತೆಯರು|. Day#4
ಕಂಬುಕಂಠದ ಸುತ್ತ ಕಟ್ಟಿದ ಮಂಗಳಸೂತ್ರ
ಅಂಬುಜವೆರಡು ಕರಯುಗದಿ |
ಅಂಬುಜವೆರಡು ಕರಯುಗದಿ ಧರಿಸಿ ಪೀ-
ತಾಂಬರವುಟ್ಟು ಮೆರೆದಳೆ|| ||೪||
ತಾಯಿ ಲಕ್ಷ್ಮೀದೇವಿಯ ಕೊರಳು ಶಂಖದಂತೆ ಶುಭ್ರ ಮತ್ತು ಸುಂದರ. ಅಂಥಹ ಕೊರಳಿಗಾತುಕೊಂಡ ಮಂಗಳಸೂತ್ರವೂ ಬಲು ಚೆಲುವುಳ್ಳದ್ದು. ಎರಡೂ ಕರಗಳಲ್ಲಿ ಕಮಲಗಳನ್ನು ಹಿಡಿದುಕೊಂಡವಳು. ಮೈಯಿಡೀ ಬಂಗಾರದ ಬಟ್ಟೆ ತೊಟ್ಟವಳು. ಅದರಿಂದ ಹೊಳೆವವಳು ಕೂಡ.
ಜನ್ಮವೆಂಬುವುದು ಲಕ್ಷ್ಮೀನಾರಾಯಣರಿಗಿಲ್ಲ ಎನ್ನುವುದನ್ನೇ ನಿರೂಪಿಸುತ್ತಾರೆ. ಈಗ ತಾನೆ ಉದಿಸಿದ ಮಹಾಲಕ್ಷ್ಮಿಯ ಕೊರಳಲ್ಲಾಗಲೇ ಮಂಗಳಸೂತ್ರ ಕಾಣುತ್ತಿದೆ.! ಹುಟ್ಟಿದುದಾದರೆ ಬರಿ ಮೈ ಇರಬೇಕಿತ್ತು. ಆಭರಣಸಹಿತ ಮೂಡಿಬಂದುದು ಅವತಾರ ಎನ್ನುವ ಸಂಗತಿಯನ್ನೆ ದೃಢೀಕರಿಸುತ್ತದೆ.
ನಾರಾಯಣದೇವರನ್ನು ಬಿಟ್ಟಿರದ ತಾಯಿ ಲಕ್ಷ್ಮೀಯ ಕಂಠವನ್ನು ನಿತ್ಯ ಮುತ್ತೈದೆತನದ ಮಂಗಳಸೂತ್ರವೂ ಬಿಟ್ಟಿರುವುದಿಲ್ಲ.
ಈ ಪದವು ಸುಮಂಗಲಿಯರ ಮುತ್ತೈದೆಭಾಗ್ಯವನ್ನು ಕಾಪಾಡುತ್ತದೆ. ಮುತ್ತೈದೆತನದ ಸಕಲಾಭರಣವನ್ನು ಮಂಗಳಸೂತ್ರವನ್ನೂ ಸಂರಕ್ಷಿಸಿಕೊಡುತ್ತದೆ ಈ ಪದ.
ಹರಿದ್ರಾ ಕುಂಕುಮಂ ಚೈವ
ಸಿಂಧೂರಂ ಕಜ್ಜಲಂ ತಥಾ |*
ಕೂರ್ಪಾಸಕಂ ಚ ತಾಂಬೂಲಂ
ಮಾಂಗಲ್ಯಾಭರಣಂ ಶುಭಮ್ ||
ಕೇಶಸಂಸ್ಕಾರಕಂ ಚೈವ
ಕರ-ಕರ್ಣಾದಿ ಭೂಷಣಮ್ |
ಭರ್ತುರಾಯುಷ್ಯಮಿಚ್ಛಂತೀ
ದೂರಯೇನ್ನ ಪತಿವ್ರತಾ ||(ಸ್ಕಾಂದಪುರಾಣ)
ಪಾದಾಂಗುಲೀಯಕಂ ಚೈವ
ನಾರೀಮುದ್ರಾಃ ಪ್ರಕೀರ್ತಿತಾಃ ||
ಹೀಗೆ ಸುಮಂಗಲಿಯರ ಈ ಎಲ್ಲ ಮುತ್ತೈದೆ ಲಕ್ಷಣಗಳ ಅಧಿದೇವತೆ ಲಕ್ಷ್ಮೀದೇವಿ. ಬಹುಕಾಲ ಮುತ್ತೈದೆಯಾಗಿರಲು ಈ ಪದದ ಪುರಶ್ಚರಣೆ ಸಹಾಯಕವಾಗುತ್ತದೆ.
ಅಷ್ಟೇ ಅಲ್ಲದೆ ಪದ್ಮ ನಿಧಿಯ ಸಂಕೇತ. ಎರಡೂ ಕೈಗಳಲ್ಲಿ ಧರಿಸಿದ ಕಮಲಗಳಿಂದ ನಿತ್ಯ ಮುತ್ತೈದೆತನದ ಜತೆಗೆ ಸಂಪತ್ತನ್ನೂ ತಾಯಿ ಹರಸುತ್ತಾಳೆ. ಈ ಶೋಭಾನೆ ಪಠಣ ಮಾಡುವ ಸುಮಂಗಲಿಯರು ಮುತ್ತೈದೆತನವನ್ನು ಕಾಪಾಡಿಕೊಳ್ಳುವ ಅಭೀಷ್ಟವನ್ನು ಪಡೆಯುತ್ತಾರೆ ಹಾಗೆಯೇ ಸಂಪತ್ತುಗಳಿಗೆ ಭಾಗೀದಾರರೂ ಆಗುತ್ತಾರೆ.
ಮನೆಗೆ ಬಂದ ಸುಮಂಗಲಿಯರಲ್ಲಿ ಮಹಾಲಕ್ಷ್ಮೀ ಸನ್ನಿಧಾನವನ್ನು ಕಂಡುಕೊಳ್ಳುತ್ತಾ ಅವರಿಗೆ ಅರಿಶಿನ-ಕುಂಕುಮ ಹಚ್ಚಿ ಹೂ-ಹಣ್ಣು ನೀಡಿ ಸತ್ಕರಿಸುವುದರಿಂದ ಮನೆ ಮತ್ತು ಮಹಿಳೆಯರ ಏಳಿಗೆ ಖಂಡಿತ ಸಾಧ್ಯವಿದೆ. ಗೌರವಾನ್ವಿತ ಘನಪರಂಪರೆಯ ಮನೆತನದಲ್ಲಿ ಈ ಸಂಪ್ರದಾಯ ತಲೆತಲಾಂತರದಿಂದ ನಡೆದು ಬರುತ್ತಿದೆ. ಇಂಥಹ ಆಚಾರಗಳನ್ನು ಉಳಿಸಿ ಬೆಳೆಸಿಕೊಂಡು ಬಂದು ಮನೆ ಮನಗಳನ್ನು ಬೆಳಗಿದ ಸುಮಂಗಲೀ ಮಹಿಳೆಯರನ್ನು ಮಹಾಲಕ್ಷ್ಮೀಯು ಪೊರೆಯಲಿ.
✍️ ಅನಂತಮೂರ್ತಿ ಬೆಳ್ಳರ್ಪಾಡಿ.
***
|ಲಕ್ಷ್ಮೀಶೋಭಾನೆ ಮತ್ತು ಮಾತೆಯರು.||day#5
ಒಂದು ಕರದಿಂದ ಅಭಯವನೀವಳೆ ಮ-
ತ್ತೊಂದು ಕೈಯಿಂದ ವರಗಳ |
ಕುಂದಿಲ್ಲದಾನಂದ ಸಂದೋಹವುಣಿಸುವ
ಇಂದಿರೆ ನಮ್ಮ ಸಲಹಲಿ ||೫||
ಅಭಯ ವರ ಈ ಎರಡೂ ಮುದ್ರೆಗಳನ್ನು ಮೂಡಿಬರುವ ವೇಳೆಗಾಗಲೇ ತೋರುತ್ತಿದ್ದಳು ಲಕ್ಷ್ಮೀ. ಮಕ್ಕಳಿಗೆ ಧೈರ್ಯ ತುಂಬುವ ತಾಯಿಯಂತೆ. ಮಕ್ಕಳನ್ನು ವಹಿಸಿಕೊಳ್ಳುವ ಮಮತಾಮಯಿಯಂತೆ. ಹಾಗಿದ್ದ ಮೇಲೆ ಉಳಿದೆಲ್ಲ ದೇವರ್ಕಳೂ ಮಕ್ಕಳಂತಾಗಲಿಲ್ಲವೇ.. ಹಾಗಾಗಿ ಲಕ್ಷ್ಮೀ ಸ್ವಯಂವರ ಮಾಲೆ ಹಾಕುವುದು ನಾರಾಯಣನಿಗೇ ಅಂತ ಮೊದಲೇ ಸಾರಿದಂತಾಗಲಿಲ್ಲವೇ... ಹೀಗಿದೆ ಜಗಜನನಿಯ ಗಟ್ಟಿ ನಿರ್ಧಾರ.
ಹಣದ ಹಿಂದೆ ಬಿದ್ದು ಹಲುಬುವ ಮಂದಿ ಹೇಳಿದರು ಲಕ್ಷ್ಮಿ ಚಂಚಲೆ. ಆದರೆ ಅವಳು ನಿಂತಲ್ಲಿ ನಿಲ್ಲುವುದು ನಾರಾಯಣನಿದ್ದಲ್ಲಿ ಮಾತ್ರ ಎಂದು ಸೂಚಿಸಿದಳು. ಅದುವೇ ದೈವೀಸಂಪತ್ತುಳ್ಳ ಸ್ಥಳ. ಭಗವಂತ ಗೀತೆಯಲ್ಲಿ ನುಡಿದ..
ಅಭಯಂ ಸತ್ವಸಂಶುದ್ಧಿಃ
ಜ್ಞಾನಯೋಗವ್ಯವಸ್ಥಿತಿಃ |
ದಾನಂ ದಮಶ್ಚ ಯಜ್ಞಶ್ಚ
ಸ್ವಾಧ್ಯಾಯಸ್ತಪ ಆರ್ಜವಮ್ ||
ಅಹಿಂಸಾ ಸತ್ಯಮಕ್ರೋಧಃ
ತ್ಯಾಗಃ ಶಾಂತಿರಪೈಶುನಮ್ |
ದಯಾ ಭೂತೇಷ್ವಲೋಲುಪ್ತ್ವಂ
ಮಾರ್ದವಂ ಹ್ರೀರಚಾಪಲಮ್ ||
ತೇಜಃ ಕ್ಷಮಾ ಧೃತಿಃ ಶೌಚಂ
ಅದ್ರೋಹೋ ನಾತಿಮಾನಿತಾ |
ಭವಂತಿ ಸಂಪದಂ ದೈವೀಂ
ಅಭಿಜಾತಸ್ಯ ಭಾರತ ||(೧೬-೧,೨,೩)
ಅಭಯವನೀವ ಮಹಾಲಕ್ಷ್ಮಿ ಜೊತೆಜೊತೆಗೆ ದೈವೀಸಂಪತ್ತನ್ನೂ ನೀಡುತ್ತಾಳೆ. ದೈವೀ ಸಂಪತ್ತಿರುವ ಮಂದಿಗೆಲ್ಲಿದೆ ಭಯ..?!!
'ವರ'ದ ಕತೆಯೂ ಹಾಗೆಯೇ.. ವರನೀಡುವಳೆಂದರೆ ನಮ್ಮನ್ನು ತನ್ನ ಮಗುವಿನಂತೆ ಪೊರೆಯುವಳೆಂದರ್ಥ.. ವರಿಸುವುದೆಂದರೆ ವಹಿಸಿಕೊಳ್ಳುವುದು ತನ್ನವರನ್ನಾಗಿಸಿಕೊಳ್ಳುವುದು. ವರ ಕೊಟ್ಟಳೆಂದರೆ ನಮ್ಮನ್ನು ಅವಳ ಬಳಗವನ್ನಾಗಿಸಿಕೊಂಡು ನಮ್ಮ ಹೊಣೆ ಹೊತ್ತಳೆಂದೇ ಅರ್ಥ.. ಇದಕ್ಕಿಂತ ಮಿಗಿಲಾದ ಅನುಗ್ರಹ ಬೇಕೇ..?!! ಉಪನಿಷತ್ತೂ ಹೀಗೇ ಹೇಳಿದೆಯಲ್ಲವೇ...
ನಾಯಮಾತ್ಮಾ ಪ್ರವಚನೇನ ಲಭ್ಯಃ
ನ ಮೇಧಯಾ ನ ಬಹುನಾ ಶ್ರುತೇನ |
ಯಮೇವೈಷ ವೃಣುತೇ ತೇನ ಲಭ್ಯಃ
ತಸ್ಯೈಷ ಆತ್ಮಾ ವಿವೃಣುತೇ ತನೂಂ ಸ್ವಾಮ್ ||
ಹೀಗೆ ಶಾಸ್ತ್ರದ ತಿರುಳುಗಳುಳ್ಳ ಲಕ್ಷ್ಮೀಶೋಭಾನೆ ಪಠಣದಿಂದ ಸುಮಂಗಲಿಯರಿಗೆ ಭಯ ಪರಿಹಾರವಾಗುವುದು. ಧೈರ್ಯ ತುಂಬುವುದು. ಇವೆಲ್ಲ ಈ ಪದದ ಅನುಷ್ಠಾನದ ಫಲಶ್ರುತಿಗಳು..
ಸುಖಪ್ರಾಪ್ತಿಯೂ ಇದರ ಶುಭಫಲ. ಸಾತ್ವಿಕ ರಾಜಸ ತಾಮಸ ಸುಖಗಳನ್ನೆಲ್ಲ ಮೀರಿದ ಶಾಶ್ವತ ಸುಖವನ್ನೀಯುವ ಲಕ್ಷ್ಮೀದೇವಿಯು ಸುಮಂಗಲಿಯರ ಸೌಭಾಗ್ಯ ಸುಖವನ್ನು ಅನುಗ್ರಹಿಸಲಿ.
ಈ ಪದವನ್ನು ಯಥಾ ಸಂಖ್ಯೆ ಜಪಿಸಿ ಮುಸ್ಸಂಜೆಯ ವೇಳೆ ಎಳ್ಳೆಣ್ಣೆಯ ದೀಪ ಮತ್ತು ತುಪ್ಪದ ದೀಪ ಜೊತೆಯಾಗಿ ಹಚ್ಚಿ ದೇವರನ್ನು ಪ್ರಾರ್ಥಿಸಬೇಕು. ಹೀಗೆ ಸುಮಂಗಲಿಯರು ೧೮ ದಿನ ನಿರಂತರ ಮಾಡಿದರೆ ಅದೆಷ್ಟೋ ಕಾಲದಿಂದ ಬಗೆಹರಿಯದ ಸಮಸ್ಯೆಗಳು ಸುಲಭವಾಗಿ ಮುಕ್ತಾಯಗೊಂಡು ಸಂತೋಷ ಲಭಿಸಲಿದೆ. ಇಲ್ಲಿ...
ಕುಂದಿಲ್ಲದಾನಂದ ಸಂದೋಹವುಣಿಸುವ
ಇಂದಿರೆ ನಮ್ಮ ಸಲಹಲಿ
ಎನ್ನುವ ಪದಗಳ ಅನುಸಂಧಾನ ಫಲ ಕೊಡುತ್ತದೆ...
ಸಂಸಾರದಲ್ಲಿ ಎಂದೂ ಬತ್ತದ ನಿರಂತರ ಆನಂದವನ್ನು ಕಾಯ್ದುಕೊಂಡು ಬರುವ ಕರುಣಾಸಂಪನ್ನ ಮಾತೆಯರನ್ನು ಇಂದಿರಾ ನಾಮಕ ಲಕ್ಷ್ಮಿಯು ಸಲಹಲಿ..
✍️ ಅನಂತಮೂರ್ತಿ ಬೆಳ್ಳರ್ಪಾಡಿ.
***
||ಲಕ್ಷ್ಮೀಶೋಭಾನೆ ಮತ್ತು ಮಾತೆಯರು.|day#6
ಪೊಳೆವ ಕಾಂಚಿಯ ದಾಮ ಉಲಿವ ಕಿಂಕಿಣಿಗಳು
ನಲಿವ ಕಾಲಂದುಗೆ ಘಲುಕೆನಲು|
ನಳನಳಿಸುವ ಮುದ್ದುಮೊಗದ ಚೆಲುವೆ ಲಕ್ಷ್ಮಿ
ಸಲಹಲಿ ನಮ್ಮ ವಧುವರರ ||೬||
ಲಕ್ಷ್ಮೀದೇವಿಯ ಡಾಬು ಹೊಳೆಯುತ್ತಿದೆ. ಅದರಲ್ಲಿ ಸದ್ದು ಮಾಡುವ ಕಿರುಮಣಿಗಳಿವೆ. ಹೆಜ್ಜೆಯ ಸಪ್ಪಳಕ್ಕೆ ಕುಲುಕುವ ಕಾಲ್ಗೆಜ್ಜೆಗಳಿವೆ. ಸದಾ ಚೆಂದುಳ್ಳಿ ಚೆಲುಮೊಗದ ಮಹಲಕ್ಷ್ಮಿ ನವ ವಧುವರರ ಕಾಪಾಡಲಿ.
ದ್ರವ್ಯಲಾಭ. ಇದರ ಫಲಶ್ರುತಿ.
ಒಡವೆಗಳೆಲ್ಲ ಚೆಲುವನ್ನು ಇಮ್ಮಡಿಗೊಳಿಸುತ್ತವೆ. ಹುಟ್ಟಿದ ಮಗುವಿಗೆ ಕಿರಿಕಿರಿಯಾಗುವುದೆಂದು ನಾವು ಸುಮ್ಮಗಿರುವುದಿಲ್ಲ. ಕಿವಿ ಚುಚ್ಚಿ ಓಲೆ ಜೋತುಬಿಡುತ್ತೇವೆ. ಆ ಪುಟ್ಟ ಬೆರಳುಗಳಿಗೆ ಉಂಗುರ ತುರುಕಿಸುತ್ತೇವೆ. ಕತ್ತಿಗೊಂದು ಸರ, ಸೊಂಟಕ್ಕೊಂದು ಚಿನ್ನದ ದಾರ, ಕಾಲುಗಳಿಗೆ ಕಿಂಕಿಣಿದನಿಯ ಕಿರುಗೆಜ್ಜೆ. ಹೀಗೆ ಎಲ್ಲ ಬಗೆಯ ಆಭರಣ ಸಿಕ್ಕಿಸಿ ಮಗುವಿನ ಮೇಲಿನ ಪ್ರೀತಿಯಲ್ಲಿ ಸಿಲುಕಿ ಖುಷಿ ಪಡುತ್ತೇವೆ. ಅಷ್ಟೇ ಏಕೆ.. ಮಣಗಟ್ಟಲೆ ಬಂಗಾರ ಪೇರಿಸಿ ಮಗಳನ್ನು ಸಾಲ ಮಾಡಿಯಾದರೂ ಸಾಲಂಕೃತ ಕನ್ಯಾದಾನ ಅಂತ ಮಾಡುತ್ತೇವೆ.
ಸಾಕುಪ್ರಾಣಿಗಳಿಗೂ ಆಭರಣ ಮಾಡಿಸಿ ಖುಷಿ ಪಡುವುದೂ ಇದೆ. ಗೋದಾನ ನೀಡುವಾಗಲೂ ಕಾಲಿಗಿಷ್ಟು ಕೊಂಬಿಗಿಷ್ಟು ಬೆನ್ನಿಗಿಷ್ಟು ಅಂತ ಇಟ್ಟು ದಾನ ಮಾಡುವುದಿದೆ.
ನಾವು ಪೂಜಿಸುವ ದೇವರಿಗೂ ಯಥಾಶಕ್ತಿ ಆಭರಣದಿಂದ ಅಲಂಕಾರ ಮಾಡುವುದಿದೆ. ಹೊಸ ಮದುಮಕ್ಕಳು ಕೂತು ಸತ್ಯನಾರಾಯಣ ಪೂಜೆ ಮಾಡುವಾಗ ಮದುಮಗಳು ತನ್ನೆಲ್ಲಾ ಆಭರಣಗಳನ್ನು ದೇವರ ಅಲಂಕಾರಕ್ಕೆ ಕೊಟ್ಟು ಬಳಿಕ ಪ್ರಸಾದ ಅಂತ ಸ್ವೀಕರಿಸುವುದಿದೆ.
ಇಲ್ಲಿ ಆಭರಣಗಳ ಗೊಡವೆ ಮಗುವಿಗೂ ಇಲ್ಲ ಗೋವಿಗೂ ಇಲ್ಲ. ದೇವರಿಗಂತೂ ಖಂಡಿತ ಬೇಕಿಲ್ಲ. ಹಾಗಿದ್ದರೂ ನಾವು ಅಲಂಕರಿಸುತ್ತೇವೆ ಏಕೆ.?! ಉತ್ತರ ಇಷ್ಟೇ.. ದೇವರ ಕೃಪೆಯನ್ನು ಕೃತಜ್ಞತೆಯಿಂದ ನೆನೆದುಕೊಳ್ಳುವ ಬಗೆಯಿದು. ಗೋವನ್ನು ದಾನ ಮಾಡುವಾಗ ಸಾಲಂಕೃತ ಕನ್ಯಾದಾನ ಮಾಡಿದಂತೆ, ಮಗಳು ಗಂಡನ ಮನೆಯಲ್ಲಿ ಸುಖದಿಂದಿರುವಂತೆ ದಾನ ಪಡೆದವನಲ್ಲಿ ಹಸುವೂ ಚೆನ್ನಾಗಿರಲಿ ಅಂತ ಬಯಕೆ.
ಆಭರಣಗಳು ರಾಷ್ಟ್ರೀಯ ಸಂಪತ್ತು. ಭಾರತದ ಬಹುಮಂದಿ ಆಭರಣಪ್ರಿಯರೇ.. ಜಗತ್ತಿನ ಯಾವುದೇ ರಾಷ್ಟ್ರ ಆರ್ಥಿಕಕುಸಿತ ಕಂಡರೂ ಭಾರತದಷ್ಟು ಬೇಗ ಚೇತರಿಸಿಕೊಳ್ಳುವುದಿಲ್ಲ. ಯಾಕೆ ಗೊತ್ತಾ..?!! ಭಾರತೀಯ ಎದೆಗುಂದುವುದಿಲ್ಲ. ಕಡು ಬಡತನದಲ್ಲೂ ಮಡದಿಗೋ ಮಗಳಿಗೋ ಒಂದಿಷ್ಟು ಬಂಗಾರ ಅಂತ ಮಾಡಿ ಹಾಕ್ತೇವೆ. ಎಷ್ಟೇ ಕಷ್ಟಾದರೂ ಬಂಗಾರವನ್ನು ಗಿರವಿ ಕೊಡದೆ ಉಳಿಸಿಕೊಳ್ತೇವೆ. ಏಕೆಂದರೆ ಅದುವೇ ಸಂಪತ್ತು. ಸಂಪತ್ತು ಅಂದರೆ ಲಕ್ಷ್ಮೀ. ಮನೆಯಲ್ಲಿ ಚೂರುಪಾರು ಬಂಗಾರಿದ್ದರೇನೇ ಲಕ್ಷ್ಮೀಪೂಜೆ ಮಾಡುವ ಮನಸ್ಸು ಬರುತ್ತದೆ. ಪೂಜೆಯ ನೆಪದಲ್ಲಾದರೂ ಮನೆಯೊಳಗೊಂದಿಷ್ಟು ಚಿನ್ನವೋ ಬೆಳ್ಳಿಯೋ ಇರಲಿ ಅಂತ ಬಯಸ್ತೇವೆ. ಅಂಥಲ್ಲಿ ಲಕ್ಷ್ಮೀ ನೆಲೆ ನಿಲ್ತಾಳೆ ಅಂತ ನಂಬಿಕೆ ನಮ್ಮದು. ಲಕ್ಷ್ಮೀ ಪೂಜೆಗೊಳ್ಳುವಲ್ಲಿ ನಾರಾಯಣ ದೇವರು ನೆಲೆಸ್ತಾರೆ.
ಅವರಿಬ್ಬರೂ ವಧುವರರನ್ನು ಸಲಹಲಿ.
ಸುಮಂಗಲಿಯರು ಲಕ್ಷ್ಮೀ ಸನ್ನಿಧಾನವುಳ್ಳ ಬಗೆಬಗೆಯ ಆಭರಣಗಳನ್ನು ಖರೀದಿಸಿ ಪೂಜೆಯಲ್ಲಿ ಬಳಸುವ ರೂಢಿಯಿದೆ. ಅಂಥಹವರು ಈ ಪದವನ್ನು ೧೮, ೪೮, ೧೦೮ ಸಂಖ್ಯಾ ನಿಯಮದಂತೆ ಅನುಷ್ಠಾನ ಮಾಡುತ್ತಾ ಬರಬೇಕು. ಆವಾಗ ತಮ್ಮ ನೆಚ್ಚಿನ ಆಭರಣಗಳನ್ನು ಮಾಡಿಸಿಕೊಳ್ಳುವ ಆರ್ಥಿಕ ಸಬಲತೆಯನ್ನು ಲಕ್ಷ್ಮೀನಾರಾಯಣರು ದಯಪಾಲಿಸುತ್ತಾರೆ.
✍️ ಅನಂತಮೂರ್ತಿ ಬೆಳ್ಳರ್ಪಾಡಿ.
***
7
|ಲಕ್ಷ್ಮೀಶೋಭಾನೆ ಮತ್ತು ಮಾತೆಯರು.||day#7
ರನ್ನದ ಮೊಲೆಗಟ್ಟು ಚಿನ್ನದಾಭರಣಗಳ
ಚೆನ್ನೆ ಮಹಲಕ್ಷುಮಿ ಧರಿಸಿದಳೆ |
ಚೆನ್ನೆ ಮಹಲಕ್ಷುಮಿ ಧರಿಸಿದಳಾ ದೇವಿ ತನ್ನ
ಮನ್ನೆಯ ವಧುವರರ ಸಲಹಲಿ ||೭||
ಮುತ್ತುರತ್ನಾದಿಗಳಿಂದ ಮುದ್ದಾದ ಎದೆಗವಚ, ಬಂಗಾರದ ಒನಪಿನ ಒಡವೆಗಳನ್ನು ಒಟ್ಟೈಸಿಕೊಂಡು ಓಜಸ್ಸಿನಿಂದ ಹೊಳೆವವಳು ಲಕ್ಷ್ಮೀದೇವಿ. ಚಿನ್ಮಯನ ಚೆನ್ನಿ ಆಕೆ. ನಮ್ಮ ಮದುಮಕ್ಕಳ ಪೊರೆಯಲಿ.
ಈ ಪದದ ಪಠಣೆಯ ಫಲಶ್ರುತಿ ಸೌಂದರ್ಯವರ್ಧನೆ.
ಚೆಂದ ಚೆಲುವು ಬಯಸದ ಮಂದಿ ವಿರಳ. ಹದಿನಾರು ವತ್ಸರದ ಹೆಣ್ಣಾದಳವಳು.. ಮಾಯಾ ಶೂರ್ಪನಖಿಯನ್ನು ಕವಿಗಳು ಬಿಂಬಿಸಿದ ರೀತಿಯಿದು. ಕೆಡುಕನ್ನೇ ಬದುಕಾಗಿಸಿಕೊಂಡ ಮಂದಿಗೂ ಜನರನ್ನು ನಂಬಿಸಿ ಮೋಸ ಮಾಡಲು ಇದುವೆ ಅಸ್ತ್ರ. ಪ್ರಾಪ್ತೇಷು ಷೋಡಶೇ ವರ್ಷೇ ಗಾರ್ದಭೀ ಚಾಪ್ಸರಾಯತೇ ಅಂತ ಸುಭಾಷಿತ ಹೇಳುವುದೂ ಇದನ್ನೇ..
ಆದರೆ
ಸಜ್ಜನರು ಬಯಸುವುದು ದೈವೀ ಸೌಂದರ್ಯವನ್ನು. ಪ್ರತಿಮೋಕ್ತ ಲಕ್ಷಣಗಳಿಂದ ಕಂಗೊಳಿಸುವ ಸಾಧು ಸಂತರನ್ನು ನೆನಪಿಸಿಕೊಳ್ಳಿ. ಅಂಥಹ ಮಂದಿಯ ಮುಖಲಕ್ಷಣ ಚೆಲುವಿನಲ್ಲಿ ದೈವೀಗುಣಗಳ ಮಹಿಮೆ ಕಾಣುತ್ತದೆ.
ಧರ್ಮಮಾರ್ಗದಲ್ಲಿ ಸಾಧನೆ ಮಾಡುವ ಸಜ್ಜನರ ಕಣ್ಣಿನ ಬೆಳಕು ಕೋರೈಸುವುದನ್ನು ಗಮನಿಸಿ. ಯಾವ ಸೌಂದರ್ಯ ರಾಸಾಯನಿಕಗಳ ಬಳಕೆ ಅಲ್ಲಿರುತ್ತದೆ.?! ಯಾವ ಕೃತಕ ಶಸ್ತ್ರಚಿಕಿತ್ಸೆಯ ಪರಿಣಾಮವಿದೆಯಲ್ಲಿ.?! ಕೂದಲು ಕಪ್ಪಾಗಿಸುವ ಬಣ್ಣ ಬಳಿಯದೆ ವಯಸ್ಸಾದರೂ ಬಿಳಿಕೂದಲು ಕಾಣದ ಮಂದಿ ಯಾವ ಲೇಪನವನ್ನು ಬಳಸುತ್ತಾರೆ..?!
ಆದರೆ
ನಾವೆಲ್ಲ ಹದಿಹರೆಯದಲ್ಲೇ ಮುಪ್ಪಿನ ಬಳಿಯಿದ್ದೇವೆ. ಮಕ್ಕಳ ಜತೆ ಹೊರ ಹೋದಾಗ ತಂದೆಯೋ ಅಜ್ಜನೋ ಅಂತ ಊರವರಿಗೆ ಅನುಮಾನ.! ಆಧುನಿಕತೆಯ ನೆಪದಲ್ಲಿ, ನಾಗರೀಕತೆಯ ಸೋಗಿನಲ್ಲಿ ಸಾವಯವ ಕೃಷಿಯನ್ನು ಕಡೆಗಣಿಸಿದ ಪರಿಣಾಮವೇ ಅಲ್ಲವೇ ಇದೆಲ್ಲಾ..! ನಮ್ಮ ಹಿರಿಯರ ಪೈಕಿ ಯಾರಿಗೆ ಮೂವತ್ತನೇ ವಯಸ್ಸಿಗೆ ತಲೆ ನೆರೆದಿದೆ ಹೇಳಿ..?! ಯಾರು ಯೌವನದಲ್ಲೇ ಕೂರಲೂ ನಿಲ್ಲಲೂ ಆಗದೆ ಪರದಾಡುತ್ತಿದ್ದರು.?! ಯಾರಿಗಿಲ್ಲ ಇವತ್ತು ಬೆನ್ನುನೋವು..?! ಬರಿದೆ ಹಣವೇ ಮುಖ್ಯವೆಂದು ತಿಳಿದು ಬದುಕಿದ ಪರಿಣಾಮವಲ್ಲವೆ ಇದು.?! ಹಣವಿದ್ದರೆ ಏನನ್ನೂ ಕೊಂಡು ತಿನ್ನಬಹುದು ಎಂಬ ಧೋರಣೆಯಿಂದಲೇ ನಾವೀ ದಿನ ದುಡ್ಡುಕೊಟ್ಟು ವಿಷ ಖರೀದಿಸಿ ಚಪ್ಪರಿಸುತ್ತೇವಲ್ಲವೇ..?! ನಮಗೆಲ್ಲಿಯ ತಾರುಣ್ಯ.? ನಮಗೆಲ್ಲಿದೆ ಆಯುಸ್ಸು.? ನಮಗೆಲ್ಲಿದೆ ಅಂದ ಚೆಂದ.? ನಾವೇತರ ಚೆಲುವಾಂತ ಚೆನ್ನಿಗರು.?!
ಶುದ್ಧ ಆಹಾರ ಸೇವನೆ ನಮ್ಮನ್ನು ಗಟ್ಟಿಮುಟ್ಟಾಗಿರಿಸುತ್ತದೆ. ಶಾಸ್ತ್ರದ ವಿಧಿನಿಷೇಧಗಳನ್ನರಿತು ಉಂಡರೆ ತಿಂದರೆ ಕೃತಕ ಸೌಂದರ್ಯಸಾಧಕಗಳ ಮೊರೆ ಹೋಗಬೇಕಾಗಿ ಬರುವುದಿಲ್ಲ. ಆ ನಿಟ್ಟಿನಲ್ಲಿ ಮನೆಯ ಸುಮಂಗಲಿಯರು ಪ್ರವೃತ್ತರಾಗುವಂತೆ ಮಹಲಕ್ಷ್ಮಿ ಅನುಗ್ರಹಿಸಲಿ.
ಹಾಗೆ ನಡೆವ ಗೃಹಿಣಿಯರು ಅವರೂ ಸುಂದರಿಯರಾಗಿ ಮನೆಮಂದಿಯನ್ನೆಲ್ಲ ಆರೋಗ್ಯವಂತರನ್ನಾಗಿ ಜತನದಿಂದ ಕಾಯುವಂತಾಗಲಿ.. ಅವರು ಬಳಸುವ ಲೇಪನ, ಚೂರ್ಣ ಲೇಹ್ಯ ಕಾಡಿಗೆ ಕಜ್ಜಲ ಅಗರು ಗಂಧ ಚಂದನ ಅರಿಶಿಣ ಕುಂಕುಮ ಮುಂತಾದ ಪರಿಮಳ ದ್ರವ್ಯಗಳೆಲ್ಲ ಭಾರತೀಯ ಸನಾತನ ಪರಂಪರೆಗೆ ತಕ್ಕುದಾಗಿರಲಿ. ಆ ಸೌಂದರ್ಯವರ್ಧಕದ್ರವ್ಯಗಳಲ್ಲೆಲ್ಲ ಮಹಲಕ್ಷ್ಮಿಯು ಸನ್ನಿಹಿತಳಾಗಿ ಭಾರತನಾರಿಯರ ದೈವೀಲಕ್ಷಣಗಳನ್ನು ಇಮ್ಮಡಿಗೊಳಿಸುವ ಕೃಪೆದೋರಲಿ.
✍️ ಅನಂತಮೂರ್ತಿ ಬೆಳ್ಳರ್ಪಾಡಿ.
***
8
||ಲಕ್ಷ್ಮೀಶೋಭಾನೆ ಮತ್ತು ಮಾತೆಯರು.||
day#8
ಕುಂಭಕುಚದ ಮೇಲೆ ಇಂಬಿಟ್ಟ ಹಾರಗಳು
ತುಂಬಿಗುರುಳ ಮುಖಕಮಲ |
ತುಂಬಿಗುರುಳ ಮುಖಕಮಲದ ಮಹಲಕ್ಷ್ಮಿ ಜಗ-
ದಂಬೆ ವಧುವರರ ಸಲಹಲಿ ||೮||
ತುಂಬಿದೆದೆಯ ಮೇಲೆ ಇಳಿಬಿಟ್ಟ ಚಿನ್ನದ ಸರಗಳು. ದುಂಬಿಗಳಂತೆ ಹಾರಾಡುವ ಮುಂಗುರುಳು. ದುಂಬಿಗಳಿಂದ ಸುತ್ತುವರಿದಿರುವಂಥ ತಾವರೆಯಂಥ ಮುದ್ದು ಮೊಗ. ಜಗಜನನಿಯಾದ ಲಕ್ಷಣಸಂಪನ್ನೆ ಲಕ್ಷ್ಮೀದೇವಿ ಮದುಮಕ್ಕಳನ್ನು ಕಾಪಾಡಲಿ.
ಈ ಪದದ ಪಠಣದಿಂದ ನವಯೌವನಲಾಭ ಫಲಶ್ರುತಿ.
ವಯಸ್ಸಾದರೂ ವಯಸ್ಸಾಯ್ತೆಂದು ಹೇಳಿದರೆ ನಮಗೇನೋ ಇರಿಸು ಮುರಿಸು. ಅಕ್ಕ, ಅಣ್ಣ ಅಂತ ಕರೆಸಿಕೊಳ್ಳಬೇಕೆಂಬುದೇ ನಿರಂತರದ ಆಸೆ. ಯಾರಾದರೂ ಅತ್ತೆ ಮಾವ ಅಂತ ಕರೆದರೆ ಸ್ವಲ್ಪ ಸಿಡಿಮಿಡಿ ಸುರುವಾಗ್ತದೆ. ಅಜ್ಜಿ ಅಜ್ಜ ಅಂತ ಕರೆಸಿಕೊಳ್ಳಲು ಮಾತ್ರ ಸುತರಾಂ ಇಷ್ಟವಿಲ್ಲ.
ನೃ_ಣಾಮಾಯುಃ ಸಹಸ್ರಂ ಕೃತಯುಗಸಮಯೇ ತದ್ದಲಂ ತಸ್ಯ ಚಾರ್ಧಂ
ತ್ರೇತಾಯಾಂ ದ್ವಾಪರೇ ವಾ ಕಲಿಯುಗ ಉದಿತಃ ಸ್ಯಾತ್ಸಹಸ್ರಾಷ್ಟಭಾಗಃ ||
ಕೃತಯುಗದಲ್ಲಿ ಒಂದುಸಾವಿರ ವರ್ಷ ಮನುಷ್ಯನ ಆಯುಸ್ಸು. ಅದರರ್ಧ ತ್ರೇತಾಯುಗದಲ್ಲಿ ಅಂದರೆ ಐನೂರುವರ್ಷ ಮನುಷ್ಯನ ಪರಮಾಯುಸ್ಸು. ದ್ವಾಪರದಲ್ಲಿ ಅದರರ್ಧ ಇನ್ನೂರೈವತ್ತು ವರ್ಷಗಳು. ಕಲಿಯುಗದಲ್ಲಿ ಸಾವಿರದ ಎಂಟನೇ ಒಂದು ಭಾಗ ಅಂದರೆ ದ್ವಾಪರದ ಆಯುಸ್ಸಿನ ಅರ್ಧಭಾಗ. ನೂರಿಪ್ಪತ್ತೈದು ವರ್ಷಗಳು.
ಹಲವು ಮಂದಿ ಕಾಣಸಿಗುತ್ತಾರೆ. ವಯಸ್ಸು ಕೇಳಿದರೆ ಅಚ್ಚರಿಯಾಗುತ್ತದೆ. ಸುಕ್ಕುಗಟ್ಟದ ಅರಳಿದ ಮುಖ. ಜೋತು ಬೀಳದ ಮಾಂಸಖಂಡಗಳು. ನೆರೆಯದ ಕೂದಲು, ಕೃತಕವಲ್ಲದ ಗಟ್ಟಿಮುಟ್ಟಾದ ದಂತಪಂಕ್ತಿ. ವರುಷ ಅರುವತ್ತಾದರೂ ಮೂವತ್ತರ ಹರೆಯದಂತೆ ಕಾಣುವವರು. ಮುಪ್ಪಿನ ಮಾತೇ ಸುಳಿಯದ ನಿತ್ಯಯೌವನದ ಮಂದಿ.
ಹಿಂದೆಲ್ಲ ಬದುಕಿನ ರೀತಿ-ನೀತಿಗಳು ಸುದೃಢವಾಗಿದ್ದ ಕಾಲವದು. ಅಕಾಲಮರಣವೆಂದರೆ ಆಶ್ಚರ್ಯ ಎನ್ನುವಂಥಹ ಕಾಲ. ಆಗೆಲ್ಲ ಎಂಭತ್ತರ ಇಳಿವಯಸ್ಸಲ್ಲೂ ತಮ್ಮ ಕೆಲಸವನ್ನು ಯಾರ ಸಹಾಯವೂ ಇಲ್ಲದೆ ಪೂರೈಸಿಕೊಳ್ಳುತ್ತಿದ್ದರು. ಅವರೆಲ್ಲ ಬೌದ್ಧಿಕವಾಗಿ ವೃದ್ಧರೇ.. ಆದರೆ ಕಾಯ ಮಾತ್ರ ತಾರುಣ್ಯದ್ದು.
ಒಂದು ಮಾತಿದೆ..
ನ ತೇನ ವೃದ್ಧೋ ಭವತಿ
ಯೇನಾಸ್ಯ ಪಲಿತಂ ಶಿರಃ |
ಯೋ ವೈ ಯುವಾಪ್ಯಧೀಯಾನಃ
ತಂ ದೇವಾಃ ಸ್ಥವಿರಂ ವಿದುಃ ||(ಮನುಸ್ಮೃತಿ)
ಜ್ಞಾನ ತಿಳುವಳಿಕೆಯಲ್ಲಿ ಬೆಳೆದವರು. ಅಂತರಂಗದಲ್ಲಿ ಬಲಿತ ಮಂದಿ. ಅವರು ವೃದ್ಧರು. ಮನಸ್ಸಿನಲ್ಲಿ ಮಾಗಿದವರು. ಮೈ ಮಾತ್ರ ಯಾವತ್ತೂ ಎಳಸು.
ಇದುವೆ ನವಯೌವನ. ಇಂಥಹ ಆಯುಸ್ಸೇ ದೇವತಾನುಗ್ರಹ. ಇಂಥಹ ಸುದೃಢ ತಾರುಣ್ಯವನ್ನು ಲಕ್ಷ್ಮೀದೇವಿಯು ಅನುಗ್ರಹಿಸುತ್ತಾಳೆ.
ಈಗಿನ ದಿನಗಳಲ್ಲಿ ಸಂಸಾರ ನಿರ್ವಹಣೆಯ ಜೊತೆಗೆ ಹೊರಗೆ ದುಡಿಯುವ ಅನಿವಾರ್ಯತೆ ಇರುವ ಸುಮಂಗಲೀಯರಿಗೆ ಲಕ್ಷ್ಮೀಶೋಭಾನೆ ಪಠಣವೊಂದು ದಿವ್ಯೌಷಧವಾಗಲಿದೆ. ಮೈ ಮನಸ್ಸುಗಳೆರಡೂ ಈ ರೀತಿಯ ದುಡಿಮೆಯಿಂದ ಜರ್ಝರಿತವಾಗುವ ಸಾಧ್ಯತೆಗಳು ಹೆಚ್ಚು. ಅಂಥಹ ಮಾತೃಸ್ವರೂಪಿಣಿಯರಿಗೆ ದೇಹಬಲ ಮತ್ತು ಮನೋಬಲಗಳು ಈ ಲಕ್ಷ್ಮೀಶೋಭಾನೆ ಪಠಣದಿಂದ ದೊರೆಯಲಿ. ಮೈ ಮನಸ್ಸು ಕುಗ್ಗದಿರುವುದೇ ತಾರುಣ್ಯ. ಅದುವೆ ನವಯೌವನಲಾಭ.
✍️ ಅನಃತಮೂರ್ತಿ ಬೆಳ್ಳರ್ಪಾಡಿ.
***
||ಲಕ್ಷ್ಮೀಶೋಭಾನೆ ಮತ್ತು ಮಾತೆಯರು|| day#9.
ಮುತ್ತಿನ ಓಲೆಯನಿಟ್ಟಳೆ ಮಹಲಕ್ಷ್ಮಿ
ಕಸ್ತೂರಿತಿಲಕ ಧರಿಸಿದಳೆ |
ಕಸ್ತೂರಿತಿಲಕ ಧರಿಸಿದಳಾ ದೇವಿ|
ಸ-ರ್ವತ್ರ ವಧುವರರ ಸಲಹಲಿ ||೯||
ಮುದ್ದಾದ ಮುತ್ತಿನೋಲೆ ಧರಿಸಿರುವವಳು ಮಹಲಕ್ಷ್ಮಿ. ಪರಿಮಳದ ಕಸ್ತೂರಿಯ ಬಿಂದಿಗೆಯನ್ನು ಹಣೆಯಲ್ಲಿಟ್ಟುಕೊಂಡಿರುವಳು. ಅಂಥಹ ಮಹಲಕ್ಷ್ಮಿ ಮದುಮಕ್ಕಳ ಸಲಹಲಿ.
ಈ ಪದದ ಪಠಣ ಪುರಶ್ಚರಣದಿಂದ ಮುತ್ತೈದೆಭಾಗ್ಯ ಪ್ರಾಪ್ತಿ. ಇದು ಫಲಶ್ರುತಿ.
ಎಲ್ಲ ಸುಮಂಗಲಿಯರು ದೇವರ ಪ್ರಸಾದವನ್ನು ಹಣೆಗೆ ಹಚ್ಚಿ ಸ್ವಲ್ಪ ತಮ್ಮ ಕಂಠದ ಮಂಗಳಸೂತ್ರಕ್ಕೆ ಮೆತ್ತಿಕೊಳ್ಳುವ ಸಂಪ್ರದಾಯವಿದೆ. ದೇವರಲ್ಲಿ ಬೇಡುವಾಗಲೂ ಬಹುಕಾಲ ಓಲೆಭಾಗ್ಯ ಉಳಿಯುವಂತೆ ಕೇಳಿಕೊಳ್ಳುತ್ತಾರೆ.
ಆಹಾ...
ಇವತ್ತಿನ ದಿನಗಳಲ್ಲಿ ಹಣೆಯ ತಿಲಕದ ಹಣೆಬರಹವೇ... ವಿಷದ ಅಂಟಿನ ಬೇಗಡೆ ತುಂಡುಗಳದ್ದೇ ಕಾರುಬಾರು. ಮಾರುಕಟ್ಟೆಗೆ ಬರುವ ಕುಂಕುಮಗಳೇ ರಾಸಾಯನಿಕ ಕಲಬೆರಕೆಗಳು. ಅದಕ್ಕಿಂತ ಒಂದು ಹಂತದಲ್ಲಿ ಬಣ್ಣಬಣ್ಣದ ಬೇಗಡೆಗಳೇ ಆದೀತು ಅಂತನ್ನಿಸ್ತದೆ.
ಚಂದ್ರಕಸ್ತೂರಿಯಂಥಹ ತಿಲಕಗಳು ಮದುವೆ ಮನೆಗೇ ಸೀಮಿತವಾಗಿವೆ. ಆಧುನಿಕಕಾಲದ ಬಿಂದಿಗೆಗಳನ್ನು ಹಚ್ಚಿಕೊಳ್ಳಿ ಅಡ್ಡಿಯಿಲ್ಲ. ಅದಾದರೂ ಕಾಣುವಷ್ಟಾದರೂ ದೊಡ್ಡದಿರಲಿ. ಉದ್ದನೆಯ ಅಥವಾ ಉರುಟಾದವುಗಳಿಗೆ ಪ್ರಾಶಸ್ತ್ಯವಿರಲಿ.
ಮುತ್ತೈದೆತನವನ್ನು ಉಳಿಸಿಕೊಳ್ಳಲು ಎಂಥಹ ಪಂಥಾಹ್ವಾನವನ್ನೂ ಎದುರಿಸಿದ ಎದೆಗಾರಿಕೆ ಸುಮಂಗಲಿಯರದ್ದು. ಉದಾಹರಣೆಗೆ
ಬೇರಾರೂ ಬೇಕಿಲ್ಲ. ಸತ್ಯವಾನನ ಬದುಕಿಸಿಕೊಂಡ ಸಾವಿತ್ರಿಯೊಬ್ಬಳೇ ಸಾಕು.! ಇಷ್ಟೇ ಅಲ್ಲದೆ ಗಂಡನ ಪ್ರಾಣ ಕಾಪಾಡಿದ ಮಾತ್ರವಲ್ಲ ದೇಶದ ಮಾನವನ್ನೇ ಕಾಪಾಡಿದ ಧೀರ ವನಿತೆಯರ ನಾಡು ನಮ್ಮದು. ಹೆಮ್ಮೆಯ ಭಾರತೀಯ ನಾರಿಯರ ಸಾಹಸದ ಯಶೋಗಾಥೆ ಇಂದಿಗೂ ಜನಜನಿತ.
ಮಾನಿನಿಯರ ಮುಖಲಕ್ಷಣಗಳಿರುವುದೇ ಮುತ್ತೈದೆ ಸೂಚಕವಾದ ಆಭರಣಗಳಿಂದ.
ಬೆಂಡೋಲೆ, ಮೂಗುತಿ, ಮಂಗಳಸೂತ್ರ, ಕೈಬಳೆ, ಕಾಲುಂಗುರ. ಈ ಐದು ಮುತ್ತುಗಳನ್ನು ಕಾಪಾಡಿಕೊಂಡು ಬರುವ ಸುಮಂಗಲೆಯರೇ ಮುತ್ತೈದೆಯರು.
ಅದೆಷ್ಟೋ ಮಂದಿ ವಯಸ್ಸಾದರೂ ಮುತ್ತೈದೆಯರಾಗದ ಮಹಿಳೆಯರಿದ್ದಾರೆ. ಅಂಥಹ ಮಂದಿ ಮುತ್ತೈದೆತನದ ಪ್ರಾಪ್ತಿಗಾಗಿ ಈ ಪದವನ್ನು ಪಠಿಸುವುದು ಉತ್ತಮ. ಪ್ರತೀ ಶುಕ್ರವಾರ ಲಕ್ಷ್ಮೀನಾರಾಯಣರಿಗೆ ತುಪ್ಪದೀಪವಿಟ್ಟು ಬಿಳಿಯ(ತುಂಬೆ) ಹೂಗಳಿಂದ ೧೦೮ ಸಂಖ್ಯೆಗಿಂತ ಕಡಿಮೆಯಿಲ್ಲದೆ ಅರ್ಚನೆ ಮಾಡಿದರೆ ಕನ್ಯಾಮಣಿಗಳಿಗೆ ಮುತ್ತೈದೆತನ ಒಲಿದು ಬರಲಿದೆ ನಿಶ್ಚಯ...
✍️ ಅನಂತಮೂರ್ತಿ ಬೆಳ್ಳರ್ಪಾಡಿ.
***
||ಲಕ್ಷ್ಮೀಶೋಭಾನೆ ಮತ್ತು ಮಾತೆಯರು.|| day#10
ಅಂಬುಜನಯನಗಳ ಬಿಂಬಾಧರದ ಶಶಿ|
ಬಿಂಬದಂತೆಸೆವ ಮೂಗುತಿಮಣಿಯ ಶಶಿ
ಬಿಂಬದಂತೆಸೆವ ಮೂಗುತಿ ಮಣಿ|
ಮಹಾಲಕ್ಷ್ಮಿ
ಉಂಬುದಕೀಯಲಿ ವಧುವರರ್ಗೆ ||೧೦||
ತಾವರೆಯೆಸಳಿನಂಥ ಕಣ್ಗಳ,ಪೊಳೆವ ಕೆಂದುಟಿಯ, ಚಂದಿರನಂದದ ಮೂಗುತಿಮಣಿಯ ಮಹಾಲಕ್ಷ್ಮಿ ಮದುಮಕ್ಕಳಿಗೆ ಬದುಕಿಡೀ ಉಣಲು ಕೊರತೆಯಿಲ್ಲದಂತೆ ಹರಸಲಿ.
ಈ ಪದದ ಪಠಣ ಪುರಶ್ಚರಣದಿಂದ ಆಹಾರಧಾನ್ಯಲಾಭ. ಹೀಗೆ ಫಲಶ್ರುತಿ.
ಅಂಗೈರ್ಯುತೋ$ನ್ಯೈರಪಿ ಪೂರ್ಣಮೂರ್ತಿಃ
ಚಕ್ಷುರ್ವಿನಾ ಕಃ ಪುರುಷತ್ವಮೇತಿ..?!
ಎಲ್ಲ ಅಂಗಾವಯವಗಳಿದ್ದೂ ಕಣ್ಣಿಲ್ಲದ ಪುರುಷಾರ್ಥವೇತಕ್ಕೆ..?! ಹಾಗಾಗಿ ಕಮಲಕಂಗಳ ಚೆಲುವೆಯ ಎಸಳುದಾವರೆ ಕಣ್ಗಳ ನೆನವರಿಕೆ ನಮ್ಮ ದಿವ್ಯದೃಷ್ಟಿಲಾಭಕ್ಕೆ ಕಾರಣವಾದೀತು. ಕಣ್ಣಿಗೆ ಕಾಡಿಗೆ ಹಚ್ಚುವ ವೇಳೆ ತಾವರೆದಳದ ತಾಯಿ ಲಕ್ಷ್ಮಿಯನ್ನು ನೆನೆದರೆ ಸುಮಂಗಲಿಯರ ಸುಲೋಚನಗಳ ಸೊಗಸು ಹೆಚ್ಚೀತು.
ಚೆಲುವ ಕೆಂದುಟಿಯ ಕನ್ಯೆ ಮಹಲಕ್ಷ್ಮಿ ಮಹಿಳೆಯರ ಸೌಂದರ್ಯವರ್ಧನೆಯ ಕಣ್ಗಾಪು ಕೊಟ್ಟು ಕಾಯುವಳು. ಹೀಗೆ ನೆನೆಯುವುದರಿಂದ ಸಹಜವಾಗಿ ತುಟಿಯ ಹೊಳಪು ಬೆಳಗೀತು. ಇಂಚುಗಟ್ಟಲೆ ದಪ್ಪದಲ್ಲಿ ಬಣ್ಣ ಬಳಿದು ಮೂತಿಗೆ ಕೆಂಪು ಉಜ್ಜಿ ಇತ್ತ ಕುಡಿಯಲೂ ಆಗದೆ ಅತ್ತ ಉಣಲೂ ಆಗದೆ ಪರದಾಡುವ ಪರಿಸ್ಥಿತಿ ಪರಮ ನಾಗರೀಕತೆಯ ಅತ್ಯಾಧುನಿಕ ಬೆಳವಣಿಗೆ.! ಒಂದಕ್ಕೊಂದು ತಾಗಿಸಿದ ತುಟಿಯಿಂದ ಅಮ್ಮ ಅಂತಲೂ ಕರೆಯಲಾಗದ ಮಕ್ಕಳೇ ಇಂದಿನ ಹೆತ್ತವರ ಮುದ್ದು ಹೆಗ್ಗಣಗಳು. ಸಹಜ ಸೌಂದರ್ಯದ ಇದಿರು ಇವೆಲ್ಲ ಕ್ಷಣಿಕ. ಅಂಥಹ ಸಹಜ ಸೌಂದರ್ಯಕ್ಕೆ ಪರಮಸುಂದರಿ ಮಹಲಕ್ಷ್ಮಿಯ ಉಪಾಸನೆ ಮಾಡಿ ನಮ್ಮ ಮಾನಿನಿಯರು ಭಗವತ್ಕೃಪೆಗೆ ಭಾಗಿಗಳಾಗಲಿ.
ಮೂಗು ಮಾನ ಮರ್ಯಾದೆಯ ಸಂಕೇತ. ಮೂಗುತಿ ಸೌಭಾಗ್ಯದ ಚಿಹ್ನೆ. ಸುಮಂಗಲಿಯರ ಮಾನ-ಮರ್ಯಾದೆಗಳನ್ನು ಹೊಳೆವ ಮೂಗುತಿಮಣಿಯ ಮಹಲಕ್ಷ್ಮಿಯು ಜೋಪಾನದಿಂದ ಕಾಯ್ದುಕೊಳ್ಳುವ ದಯೆ ತೋರಲಿ.
ಮದುವಣಗಿತ್ತಿ ಮನೆತುಂಬಿಸಿಕೊಳ್ಳುವ ಹೊತ್ತಿಗೆ ಸೇರಕ್ಕಿಯನ್ನು ಬಲಗಾಲಿನಿಂದ ಮೆಲ್ಲಗೆ ಚೆಲ್ಲಿ ಒಳಹೊಕ್ಕುವ ಪರಿಪಾಠ ರೂಢಿಯಲ್ಲಿದೆ. ಲಕ್ಷ್ಮೀನಾರಾಯಣರ ರೂಪದ ಮದುಮಕ್ಕಳ ಪೈಕಿ ಮದುವಣಗಿತ್ತಿಯೇ ಲಕ್ಷ್ಮೀ. ಬರಿಯ ಧನಲಕ್ಷ್ಮಿಯಲ್ಲ. ಧಾನ್ಯಲಕ್ಷ್ಮಿಯೂ ಹೌದು. ಅದಕ್ಕಾಗಿಯೇ ಆ ಮನೆಲಕ್ಷ್ಮಿ ಕಾಲಿಟ್ಟ ಘಳಿಗೆ ಮನೆಯಲ್ಲಿ ಆಹಾರ ದವಸ ಧಾನ್ಯಗಳ ಕೊರತೆಯಾಗದಿರಲಿ ಅಂತ ಈ ಸಂಪ್ರದಾಯವನ್ನು ಆಚರಿಸುತ್ತಾರೆ.
ಮನೆಯಲ್ಲಿ ಊಟದ ವ್ಯವಸ್ಥೆ ಮಹಿಳೆಯರದ್ದೇ. ಹಾಗಾಗಿ ಯಾರಿಗೂ ಹೊಟ್ಟೆಗೆ ಕಡಿಮೆಯಾಗದಂತೆ ಮನೆ ನಿಭಾಯಿಸುವ ಅಜ್ಜಿ ಅಮ್ಮ ಚಿಕ್ಕಮ್ಮ ದೊಡ್ಡಮ್ಮ ಅತ್ತೆ ಸೊಸೆ ಅತ್ತಿಗೆ ಅಕ್ಕ ತಂಗಿ ಮಡದಿ ನಾದಿನಿ ಮಗಳು ಮೊಮ್ಮಗಳು ಇವರೆಲ್ಲ ನಿಜಾರ್ಥದಲ್ಲಿ ಅನ್ನಪೂರ್ಣೆಯರೇ.. ತಾವು ಹಸಿದು ಮನೆಮಂದಿಯನ್ನು ಉಣಬಡಿಸುವ ಮನೆದೇವರುಗಳು. ಮಹಲಕ್ಷ್ಮೀ ದೇವಿಯು ಎಲ್ಲರ ಮನೆಯ ಮಮತಾಮಯಿ ಮಾತೆಯರ ಹೊಟ್ಟೆ ತಣ್ಣಗಿಟ್ಟಿರಲಿ...
.✍️ ಅನಂತಮೂರ್ತಿ ಬೆಳ್ಳರ್ಪಾಡಿ.
***
||ಲಕ್ಷ್ಮೀಶೋಭಾನೆ ಮತ್ತು ಮಾತೆಯರು||.
Day#11
ಮುತ್ತಿನಕ್ಷತೆಯಿಟ್ಟು ನವರತ್ನದ ಮುಕುಟವ
ನೆತ್ತಿಯ ಮೇಲೆ ಧರಿಸಿದಳೆ |
ನೆತ್ತಿಯ ಮೇಲೆ ಧರಿಸಿದಳಾ ದೇವಿ ತನ್ನ
ಭಕ್ತಿಯ ಜನರ ಸಲಹಲಿ ||೧೧||
ಮಹಾಲಕ್ಷ್ಮೀ ದೇವಿಯು ಮುತ್ತಿನ ಅಕ್ಷತೆಯನ್ನಿಟ್ಟಿರುತ್ತಾಳೆ. ನವರತ್ನಖಚಿತ ತುರಾಯಿ ತಲೆಯ ಮೇಲೆ ತೊಟ್ಟಿರುತ್ತಾಳೆ. ಅಂಥಹ ತಾಯಿ ಅವಳನ್ನೇ ಭಕ್ತಿಯಿಂದ ಭಜಿಸುವ ಮಂದಿಯನ್ನು ಪೊರೆಯಲಿ.
ಈ ಪದ ಪಠಣ ಪುರಶ್ಚರಣದ ಫಲಶ್ರುತಿ ನೆರೆಹೊರೆಯವರ ಪ್ರೀತಿ ಸಂಪಾದನೆ.
ಬೋಳು ಹಣೆ ಅಮಂಗಳ. ಹೆಣ್ಣಾಗಲೀ ಗಂಡಾಗಲಿ ಮುಖದಲ್ಲೊಂದು ಮುತ್ತಿನಂಥ ತಿಲಕವಿದ್ದರೆ ಆ ಮುಖ ನೋಡಿದ ಮಂದಿಗೆ ಶುಭಶಕುನದ ಸೂಚನೆಗಳೊದಗುತ್ತವೆ.
ಯೇ ವಾ ಲಲಾಟತಿಲಕೇ ಲಸದೂರ್ಧ್ವಪುಂಡ್ರಾ
ತೇ ವೈಷ್ಣವಾ ಭುವನಮಾಶು ಪವಿತ್ರಯಂತಿ ||
ಊರ್ಧ್ವಪುಂಡ್ರವಿಹೀನ ಮುಖಾವಲೋಕನ ಅಮಂಗಳದ ಸೂಚನೆಗೆ ದಾರಿ..
ಭಾರತೀಯ ಸಾಂಪ್ರದಾಯಿಕ ನಾರಿಯರು ಪ್ರಪಂಚದ ಅತ್ಯುನ್ನದ ಗೌರವದ ಸ್ಥಾನ ಪಡೆದವರು. ಅದಾವ ಶೃಂಗ ಸಭೆಗಳೇ ಇರಲಿ, ಅದೆಷ್ಟೇ ರಾಷ್ಟ್ರಗಳ ಪ್ರತಿನಿಧಿಗಳಿದ್ದರೂ ಸಾಂಪ್ರದಾಯಿಕ ತೊಡುಗೆಯ ವಿದೇಶಾಂಗ ಸಚಿವೆಯರು ತಮ್ಮ ವಸ್ತ್ರಸಂಹಿತೆಯಿಂದಲೇ ಗುರುತಿಸಲ್ಪಟ್ಟ ಉದಾಹರಣೆಗಳಿವೆ. ಅಂಥಹ ಭಾರತೀಯ ಮರ್ಯಾದಾ ಮಾನಿನಿಯರನ್ನು ಮಹಾಲಕ್ಷ್ಮೀ ದೇವಿಯು ಕಾಪಾಡಲಿ.
ತಲೆಗೊಂದು ಕಿರೀಟ ದೇವತೆಗಳ ಲಕ್ಷಣ. ಯಾಕೆಂದರೆ ಕಿರೀಟವೆಂದರೆ ಔನ್ನತ್ಯದ ಸಂಕೇತ. ದೇವರ ತಿಳಿವಿನ ಎತ್ತರೆತ್ತರದ ಮಜಲುಗಳ ಸಿದ್ಧಿಗಾಗಿ ಇಂಥಹ ಕಿರೀಟ ಧಾರಣೆಯ ಆವಶ್ಯಕತೆಯಿರುತ್ತದೆ. ಗರ್ಭಗುಡಿಯ ಶಿಖರತುದಿಯಲ್ಲಿ ಶಿರೋಕಳಸಗಳಿದ್ದಂತೆ. ಅದರಿಂದ ಭಗವಂತನ ಶಕ್ತಿ ಸಂಚಯವಾದಂತೆ ದೇವತೆಗಳೊಳಗೆ ಭಗವತ್ಸನ್ನಿಧಾನಾತಿಶಯದ ಸೂಚನೆ ಈ ಕಿರೀಟ.
ಮನೆಯ ಸಕಲ ಹೊಣೆ ಹೊತ್ತ ಮಹಿಳೆಯರ ಶಿರದ ಮೂಲಕ ಭಗವಂತನ ಅನುಗ್ರಹ ಹಾದು ಬರಲಿ. ಆ ಮೂಲಕ ಸತ್ಸಂತಾನ ಬೆಳೆಯಲು ಅನುಕೂಲವಾಗುವ ಚೈತನ್ಯಗಳು ಸ್ತ್ರೀಯರ ಶಿರೋಮಧ್ಯದಿಂದ ಒಡಲಿಗಿಳಿದು ಸಂಸಾರ ದೇಗುಲದೊಳಗೆ ದೇವರ ಪುಟ್ಟಪುಟ್ಟ ಪ್ರತಿಮೆಗಳಂತೆ ಮಗು ಮಕ್ಕಳು ಜನಿಸಲಿ.
ನವರತ್ನದ ಪದ ಪ್ರಯೋಗದಿಂದ ರತ್ನಾದಿ ಆಭರಣಗಳ ಅಭೀಷ್ಟವಿರುವ ಮಂದಿ ಈ ಪದದ ಪುರಶ್ಚರಣೆ ಮಾಡಬಹುದು.
ನ ಮೇ ಭಕ್ತಃ ಪ್ರಣಶ್ಯತಿ ಎಂದವನ ಮಡದೀ ಮಣಿಯಾದ ಮಹಾಲಕ್ಷ್ಮೀ ಮಾಧವನ ಮನೋನುಸಾರಿಣಿ. ಲಕ್ಷ್ಮೀನಾರಾಯಣರನ್ನು ಆರಾಧಿಸಿದ ಮಂದಿಯ ಭಕ್ತಿಗೆ ಒಲಿದು ಅನುಗ್ರಹಿಸುವಳು.
ಈ ರೀತಿಯ ಅನುಷ್ಠಾನವನ್ನು ಮಾಡುವ ಸುಮಂಗಲಿಯರು ನೆರೆಹೊರೆಯವರಿಗೆ ಶುಭವನ್ನು ಬಯಸುತ್ತಾ ದೇವರ ದಯೆಯಿಂದ ಜನಾನುರಾಗಿಗಳಾಗಿ ಬಾಳಿ ಬದುಕುತ್ತಾರೆ..
✍️ ಅನಂತಮೂರ್ತಿ ಬೆಳ್ಳರ್ಪಾಡಿ.
***
||ಲಕ್ಷ್ಮೀಶೋಭಾನೆ ಮತ್ತು ಮಾತೆಯರು||. day#12
ಕುಂದಮಂದಾರ ಜಾಜಿ ಕುಸುಮಗಳ ವೃಂದವ
ಚೆಂದದ ತುರುಬಿಲಿ ತುರುಬಿದಳೆ |
ಕುಂದಣವರ್ಣದ ಕೋಮಲೆ ಮಹಲಕ್ಷ್ಮಿ ಕೃಪೆ-
ಯಿಂದ ವಧುವರರ ಸಲಹಲಿ ||(೧೨)||
ಸೂಜಿಮಲ್ಲಿಗೆ ಮಂದಾರಹೂ,ಜಾಜೀ ಮೊದಲಾದ ಹೂಗೊಂಚಲುಗಳನ್ನು ತನ್ನ ಚೆಲುಮುಡಿಯಲ್ಲಿ ಒಟ್ಟೈಸಿಕೊಂಡವಳು ತಾಯಿ ಲಕ್ಷ್ಮೀದೇವಿ. ಹೊಳೆವ ಹೊನ್ನ ಹೊಂಬಣ್ಣದ ತನುಕಾಂತಿಯ ಮಹಾಲಕ್ಷ್ಮೀದೇವಿ ಮದುಮಕ್ಕಳನ್ನು ಕರುಣೆಯಿಂದ ಕಾಯಲಿ.
ಈ ಪದದ ಪಠಣ ಪುರಶ್ಚರಣಗಳಿಂದ ಸುಮಂಗಲಿಯರಿಗೆ ಮುತ್ತೈದೆಭಾಗ್ಯಗಳ ರಕ್ಷಣೆ ಎಂಬುದು ಫಲಶ್ರುತಿ.
ಮನಸ್ಸು ಮತ್ತು ದೇವತೆಗಳಿಗೆ ಒಂದೇ ಪದ. ಸುಮನಸರು ಅಂದರೆ ದೇವರುಗಳೂ ಹೌದು, ಒಳ್ಳೆಯ ಮನಸೂ ಹೌದು. ಅದೇ ಪದ ಹೂವುಗಳಿಗೂ ಅನ್ವಯವಾಗುತ್ತದೆ. ಹೂ ಮುಡಿವ ಸುಮಂಗಲಿಯರ ಮನಸುಗಳಿಗೂ ಕೂಡ.!
ದೇವರ ಪ್ರಸಾದರೂಪದ ಹೂವುಗಳನ್ನು ಮುಡಿದ ಸುಮಂಗಲಿಯರು ಇದಿರಾದರೆ ಶುಭಶಕುನ. ಒಂದೆಡೆ ಹೊರಟಾಗ ತಲೆತುಂಬ ಹೂ ಮುಡಿದ ಮುತ್ತೈದೆ ಇದಿರಾದರೆ ಅಭೀಷ್ಟಪ್ರಾಪ್ತಿಯ ಜತೆಗೆ ಕಾರ್ಯಸಿದ್ಧಿಯಾಗಲಿದೆ. ಇದು ಶುಭ ನಿಮಿತ್ತವೆಂದು ಪ್ರಶ್ನಶಾಸ್ತ್ರಗಳ ಉಲ್ಲೇಖವಿದೆ.
ಇಂದು ಅರಳಿದ ಹೂವು ನಾಳೆ ಬಾಡುವುದೆಂದು ತಿಳಿದೂ ಅದೇ ನೆಪಕ್ಕೆ ಹಾವು-ಮುಂಗುಸಿಗಳಂತಾಡುವ ಮಂದಿಗೇನೂ ಕಮ್ಮಿಯಿಲ್ಲ. ಮನಸು ಒಳ್ಳೆಯದಿದ್ದರೆ ಒಂದು ಗಾದೆಯಿದೆ. ಹಣ್ಣು ಹಂಚಿ ತಿನ್ನಬೇಕು ಹೂವು ಸಿಗಿದು ಮುಡಿಯಬೇಕು. ಗಮನಿಸಿ ಮುತ್ತೈದೆಯರು ತಮಗೊದಗಿದ ಹೂವನ್ನು ಒಂದು ತುಂಡಾದರೂ ಇತರರಿಗೆ ಕೊಟ್ಟು ಮುಡಿಯುವ ಪದ್ಧತಿಯಿದೆ. ಹೂವೆಂದರೆ ಅಷ್ಟು ಅಭಿಮಾನ. ದೇವರಿಗಿಟ್ಟ ಹೂವೆಂದರೆ ಮುಗಿಬೀಳುವ ಮಂದಿಯ ಭಕ್ತಿ ಆದರಣೀಯ.
ಹೂವುಗಳ ವಿಷಯ ಬಂದಾಗ ಮನೆಯ ಹಿರಿಯರು ಮುತ್ತೈದೆಯರನ್ನು ಎಚ್ಚರಿಸುವುದನ್ನು ಕೇಳಿದ್ದೇನೆ. ದೇವರಿಗಿಡದ ಹೂವನ್ನು ತಲೆಗಿಡ ಕೂಡದು. ಹಾಗೆ ಇಟ್ಟವರು ದುರ್ನಿಮಿತ್ತಗಳನ್ನೆದುರಿಸಿದುದನ್ನು ನೆನೆಸಿಕೊಂಡು ಬುದ್ಧಿವಾದ ಹೇಳುತ್ತಿದ್ದರು. ಹೂವಷ್ಟೇ ಅಲ್ಲ ಹೊಸವಸ್ತ್ರಗಳನ್ನು ಧರಿಸುವ ಮುಂಚೆ ಮನೆದೇವರ ಮುಂಭಾಗ ಮಣೆಯಲ್ಲಿಟ್ಟು ಅರಿಶಿನ ಕುಂಕುಮ ಹಚ್ಚಿ ನಮಸ್ಕರಿಸುವ ಕ್ರಮವಿದೆ. ಹೀಗೆ ಮಾಡಿದ ಬಳಿಕವೇ ಮನೆಯ ಮಂದಿ ಹೊಸವಸ್ತ್ರ ಧರಿಸಿ ಹಿರಿಯರಿಗೆರಗುವುದು ಸಜ್ಜನಿಕೆಯ ನಡತೆ.
ಮನೆಗೆ ಬಂದ ಮುತ್ತೈದೆಯರನ್ನು ಹೂ ಹಣ್ಣು ಕೊಟ್ಟು ಅರಿಶಿನ ಕುಂಕುಮ ಹಚ್ಚಿ ಸತ್ಕರಿಸುವ ಸಂಪ್ರದಾಯ ಮಹಿಳೆಯರ ಸಂಭ್ರಮದಲ್ಲೊಂದು. ಇತ್ತೀಚೆಗೆ ಬಹುತೇಕ ಮನೆಯ ಸಮಾರಂಭಗಳಲ್ಲಿ ಒಬ್ಬರೋ ಇಬ್ಬರೋ ಸೇರಿ ಬಂದ ಸುಮಂಗಲಿಯರಿಗೆಲ್ಲ ಬಳೆ ಬಟ್ಟೆ ಹೂ ಹಣ್ಣು ಸಹಿತ ಗೌರವ ಸಲ್ಲಿಸುವ ಪದ್ಧತಿ ವ್ಯಾಪಕವಾಗಿ ಬಳಕೆಯಲ್ಲಿದೆ. ಹೀಗೆ ಮಾಡುವುದರಿಂದ ಮುತ್ತೈದೆತನ ಬಹುಕಾಲ ವರವಾಗಿ ಫಲಿಸುವುದೆಂದು ದೃಢವಾದ ನಂಬಿಕೆ.
ಇಂಥಹ ಕ್ರಮ ರೀತಿ ರಿವಾಜು ಸಂಪ್ರದಾಯಗಳನ್ನು ತಲೆಮಾರಿನಿಂದ ಲಾಗಾಯ್ತು ಉಳಿಸಿಕೊಂಡು ಮುಂದಿನ ತಲೆಮಾರುಗಳಿಗೆ ತಲುಪಿಸಿ ನೈತಿಕ ಶಿಕ್ಷಣ ಕೊಟ್ಟು ಕಾಯುವ ಸುಮಂಗಲಿಯರನ್ನು ಮಹಾಲಕ್ಷ್ಮೀದೇವಿಯು ಕಾಪಾಡಲಿ.
✍️ ಅನಂತಮೂರ್ತಿ ಬೆಳ್ಳರ್ಪಾಡಿ.
***
||ಲಕ್ಷ್ಮೀಶೋಭಾನೆ ಮತ್ತು ಮಾತೆಯರು|| Day#13
ಎಂದೆಂದೂ ಬಾಡದ ಅರವಿಂದ ಮಾಲೆಯ
*ಇಂದಿರೆ ಪೊಳೆವ ಕೊರಳಲಿ |
ಇಂದಿರೆ ಪೊಳೆವ ಕೊರಳಲಿ ಧರಿಸಿದಳೆ ಅವ-
ಳಿಂದು ವಧುವರರ ಸಲಹಲಿ ||೧೩||
ಯಾವತ್ತೂ ಕಮರಿ ಹೋಗದ ಕಮಲಗಳ ಮಾಲೆಯನ್ನು ತೊಟ್ಟುಕೊಂಡವಳು ಲಕ್ಷ್ಮೀದೇವಿ. ಇಂದಿರಾ ದೇವಿಯು ಮುತ್ತಿನಂಥಾ ಕುತ್ತಿಗೆಯಲ್ಲಿ ಹೊಚ್ಚಹೊಸ ಕಮಲಮಾಲೆಯನ್ನು ಧರಿಸಿರುವಳು. ಹೊಳೆವ ಹೊಳಪಿನ ಲಕ್ಷ್ಮೀದೇವಿ ಸದಾ ಮದುಮಕ್ಕಳನ್ನು ಪೊರೆಯಲಿ.
ಫಲಶ್ರುತಿ--
ಮುತ್ತೈದೆತನದ ರಕ್ಷಣೆ.
ಮೂಡುವುದು ಮುಳುಗುವುದು ಎಲ್ಲಕ್ಕೂ ಇದ್ದದ್ದೇ.. ಹಾಗೆಯೇ ಅರಳುವುದು ಮರಳುವುದೂ ಕೂಡ.!
ಮನುಷ್ಯ ಹುಟ್ಟಿ ಮಗುವಾಗುತ್ತಾನೆ. ಮುಗ್ಧತೆ ಇರುತ್ತದೆ. ಬೆಳೆದು ದೊಡ್ಡವನಾಗುತ್ತಾನೆ. ಎಳಸು ಕಳೆದು ಎಲ್ಲದರಲ್ಲೂ ಬಲಿತು ಬಲವಂತನಾಗುತ್ತಾನೆ. ಬೆಳೆಯುತ್ತಾ ಬೆಳೆಯುತ್ತಾ ಬಲಹೀನನಾಗುತ್ತಾನೆ. ಮತ್ತೆ ಮಾಗಿದ ಮುಪ್ಪಿನಲ್ಲೂ ಮಗುವಿನಂತಾಗುತ್ತಾನೆ.
*ಮನುಷ್ಯನಂತಲ್ಲ ಎಲ್ಲ ಜೀವಜಾತಗಳಲ್ಲೂ ಇದು ಸಾಧಾರಣಧರ್ಮ. ಮೂಡುವ ಮುಳುಗುವ ರವಿಯನ್ನು ಅನುಸರಿಸಿ ತಾವರೆಗಳೂ ಅರಳುತ್ತವೆ ಮರಳುತ್ತವೆ. ತೊಟ್ಟು ಕಳಚಿಕೊಳ್ಳುತ್ತವೆ. ಮರ ಬಿಟ್ಟು ಬಿಳಿಚಿಕೊಳ್ಳುತ್ತವೆ.
ಯಾವತ್ತೂ ಹುಟ್ಟು ಅಳಿವುಗಳಿರದ ಮಂದಿ ಇಬ್ಬರು ಮಾತ್ರ. ಲಕ್ಷ್ಮೀ ಮತ್ತು ನಾರಾಯಣರು. ಲಕ್ಷ್ಮೀದೇವಿಯೋ ಭಗವಂತನ ದಯೆಯಿಂದಲೇ ಹುಟ್ಟಳಿವುಗಳಿರದ ಭಾಗ್ಯಲಕ್ಷ್ಮೀ.
ಲಕ್ಷ್ಮೀರ್ಭಾಗ್ಯಸ್ಯ ದೇವತಾ...
ಅದಕ್ಕಾಗಿಯೋ ಎಂಬಂತೆ ಆಕೆಯ ಕಳೆಕಟ್ಟಿದ ಕಂಠದಲ್ಲಿ ಎಂದೆಂದೂ ಬಾಡದ ಅರವಿಂದ ಮಾಲೆ. ದೇವರ ಕುತ್ತಿಗೆಯಲ್ಲೂ ವನಮಾಲೆ.
ವನಮಾಲೀ ಗದೀ ಶಾರ್ಙ್ಗೀ...
ಹೀಗೆ ಸದಾ ಹೊಚ್ಚಹೊಸತನದ ಮಾಲೆಗಳನ್ನು ಮೈಮೇಲೆ ಆನಿಸಿಕೊಂಡ ಮಹಾಲಕ್ಷ್ಮೀ ನಾರಾಯಣರು ಮದುಮಕ್ಕಳನ್ನು ಕಾಪಾಡಲಿ.
ಯಾವತ್ತೂ ಒಂದೇ ತೆರ ಬದುಕುವುದು ಕಡುಕಷ್ಟದ ಸಂಗತಿ. ಕಾಲಕ್ಕೆ ತಕ್ಕಂತೆ ಕುಣಿಯಬೇಕೇನೋ ನಿಜ... ಆದರೆ ದಿನಕ್ಕೊಂದು ಧೋರಣೆ ಬದಲಿಸುವಂತಾಗ ಕೂಡದು. ಆರಾರು ತಿಂಗಳಿಗೆ ಒಂದೊಂದೂರು ಕಾಣುವಂತಾದರೆ ಅದು ಬಲು ಬವಣೆಯ ಬಾಳು. ಅಂಥಹ ಸಂದರ್ಭದಲ್ಲಿ ಮಾನಸಿಕವಾಗಿ ಕುಗ್ಗುವವರು ಮನೆಯ ಮಹಲಕ್ಷ್ಮಿಯರೇ..
ಒಂದು ದಿನ ಮಾಡಿ ಮರುದಿನ ಮಾಡದಿರುವಂತಿಲ್ಲ. ಮತ್ತೆ ಮೊದಲಿನಿಂದ ಆರಂಭ. ಗಟ್ಟಿ ಮನಸ್ಸಿನಿಂದ ಮೊದಲಿನಂತೆ ಒಂದು ಹಂತಕ್ಕೆ ಬಂದಾಗ ಅಲ್ಲಿ ನಿಲ್ಲಲಾಗುವುದಿಲ್ಲ.
ಆವಾಗ ದೇವರ ನೆನಪು ಕಾಡತೊಡಗುತ್ತದೆ. ಕುಂತಲ್ಲಿ ನಿಂತಲ್ಲಿ ದೇವರ ಹೆಸರನ್ನು ಪಠಿಸುತ್ತೇವೆ. ಹೀಗೆ ಮತ್ತೆಮತ್ತೆ ಪಠಿಸುವುದೇ ಪುರಶ್ಚರಣೆ. ಅದುವೆ ಜಪ. ಅದುವೆ ತಪಸ್ಸು.
ಈ ರೀತಿ ಕಠಿಣ ಸಂದರ್ಭದಲ್ಲಿ ಈ ಪದದ ಪುರಶ್ಚರಣೆ ಅನುಗ್ರಹದಾಯಕವಾಗುತ್ತದೆಎಂದೆಂದೂ ಬಾಡದ ಅರವಿಂದ ಮಾಲೆಯ ಮಹಾಲಕ್ಷ್ಮೀಯನ್ನು ನೆನೆದರೆ ಒಂದೆಡೆ ಸ್ಥಿರತೆಯನ್ನು ಅನುಗ್ರಹಿಸುತ್ತಾಳೆ.*
ಅದೇ ರೀತಿ ಸುಮಂಗಲಿಯರ ಮುತ್ತೈದೆತನದ ದೀರ್ಘಾವಧಿಯನ್ನೂ ನೀಡಿ ಕಾಪಾಡುತ್ತಾಳೆ...
✍️ ಅನಂತಮೂರ್ತಿ ಬೆಳ್ಳರ್ಪಾಡಿ.
***
|ಲಕ್ಷ್ಮೀಶೋಭಾನೆ ಮತ್ತು ಮಾತೆಯರು||. Day#14
ದೇವಾಂಗಪಟ್ಟೆಯ ಮೇಲು ಹೊದ್ದಿಕೆಯ|
ಭಾವೆ ಮಹಲಕ್ಷುಮಿ ಧರಿಸಿದಳೆ |
ಭಾವೆ ಮಹಲಕ್ಷುಮಿ ಧರಿಸಿದಳಾ ದೇವಿ ತನ್ನ
ಸೇವಕ ಜನರ ಸಲಹಲಿ ||೧೪||
ಮಹಾಲಕ್ಷ್ಮೀದೇವಿ. ದೇವಲೋಕದಲ್ಲಿಯೇ ಅತಿಸುಂದರವಾದ ಪಟ್ಟೆಸೀರೆಯನ್ನು ಉಟ್ಟಿದ್ದಾಳೆ. ಮೈತುಂಬ ಮೇಲುದ ಹೊದ್ದ ಸೆರಗು ಹೊಳೆಯುತ್ತದೆ. ಭಾವನೆಗಳ ಮೊತ್ತದಂತಿರುವ ತಾಯಿ ಲಕ್ಷ್ಮೀದೇವಿ ಅವಳ ಸೇವೆಯನ್ನು ಕೈಗೊಳುವ ಮಂದಿಯನ್ನು ಕಾಪಾಡಲಿ.
ಮುತ್ತೈದೆಭಾಗ್ಯ(ಮಾನ) ರಕ್ಷಣೆ. ಈ ಪದ ಪಠಣದ ಫಲಶ್ರುತಿ.
ಹೊಟ್ಟೆ ಬಟ್ಟೆ ಇವೆರಡು ಮನುಷ್ಯರಾದ ಎಲ್ಲರಿಗೂ ಅನಿವಾರ್ಯ. ಮಗಳನ್ನು ಧಾರೆಯೆರೆದು ಕೊಡುವ ತಂದೆತಾಯಿಗಳು ಹೇಳುವ ಮಾತು ಇದೇ. ಮಗಳ ಹೊಟ್ಟೆ ಬಟ್ಟೆಗೆ ತೊಂದರೆಯಾಗದಂತೆ ನೋಡಿಕೊಳ್ಳಿ ಅಂತ.
ಮಹಾಲಕ್ಷ್ಮೀ ದೇವಾಧಿದೇವನ ಮಡದಿಯಾದ್ದರಿಂದ ದೇವಲೋಕದ ಅಂದಚೆಂದಕ್ಕೂ ಮಿಗಿಲಾದ ಪಟ್ಟೆಸೀರೆಯನ್ನು ಉಟ್ಟುಕೊಂಡಿದ್ದಾಳೆ. ಮೈ ಮುಚ್ಚಿಕೊಳ್ಳುವ ಮೇಲುದ ಹೊದ್ದುಕೊಂಡಿದ್ದಾಳೆ. ಆ ಸೆರಗೂ ಕೂಡ ದಿವ್ಯವಾದದ್ದೇ... ಭಾವನಾಸಂಪನ್ನೆಯಾದ ತಾಯಿ ಲಕ್ಷ್ಮೀದೇವಿ ಎಲ್ಲರೂ ಗೌರವದಿಂದ ಕಾಣುವಂತೆ ಬಟ್ಟೆ ಉಟ್ಟಿದ್ದಾಳೆ. ಅಂಥಹ ಮರ್ಯಾದಾಗಣಿಯಂತಿರುವ ಮಹಾಲಕ್ಷ್ಮೀದೇವಿ ದೇವರ ಚಾಕರಿಯ ಮಂದಿಯನ್ನು ಕಾಪಾಡಲಿ.
ಮುಡಿಗೆ ಹೂವು ಮೈಗೊಪ್ಪುವ ಸೀರೆ ಇವೆರಡನ್ನು ತಮ್ಮಲ್ಲೆಷ್ಟೇ ಇದ್ದರೂ ಯಾವ ತಾಯಂದಿರೂ ಬೇಡವೆನ್ನುವುದಿಲ್ಲ. ಏಕೆಂದರೆ ಅವರ ಸಂಪತ್ತು ಅವೆರಡೇ.
ನಿತ್ಯಬಳಕೆಯಿಂದಾರಂಭಿಸಿ ಯಾವ್ಯಾವ ಸಮಾರಂಭಕ್ಕೆ ಎಂಥೆಂಥಾ ಸೀರೆ ಬೇಕು ಅಂತ ಸೂಕ್ಷ್ಮದ ತಿಳಿವು ಅವರ ಜಾಣ್ಮೆಯ ಸಂಕೇತಗಳು. ತಮ್ತಮ್ಮ ಪಾತ್ರಾಪಾತ್ರತೆಗನುಗುಣವಾಗಿ, ಬರುವ ಮಂದಿಯ ಮನಸ್ಥಿತಿಗೊಪ್ಪುವಂತೆ, ಕರೆದವರ ಘನತೆ ಕೆಡದಂತೆ, ಮನೆತನದ ಮಾನಕ್ಕೆ ಕುಂದಾಗದಂತೆ ಪಾಲಿಸುವ ವಸ್ತ್ರಸಂಹಿತೆ. ಅದೊಂದು ಮಹಿಳಾಲೋಕದ ಗುಪ್ತಸಂವಿಧಾನ.
ಕೊಂಡು ತಂದ ಸೀರೆಗೆ ಉಡಲು ಅನುವಾಗುವಂತೆ ಕತ್ತರಿಸುವುದೇನು... ಕೆಲವೆಡೆ ಬಟ್ಟೆಯ ತುಂಡುಗಳನ್ನು ಜೋಡಿಸಿ ಹೊಲಿದುಕೊಳ್ಳುತ್ತಾರೆ. ಇಲ್ಲವಾದರೆ ಅವರಿಗೆ ನೆರಿಗೆ ಹಿಡಿಯಲು ಸೀರೆ ಸರಿ ಬರುವುದಿಲ್ಲ. ಸೆರಗಿನ ತುದಿಯಲ್ಲಿ ಜೋಲಾಡುವ ಬಿಡಿಬಿಡಿಯಾದ ನೂಲಿನ ಸಮೂಹವನ್ನು ಗಂಟುಗಂಟಾಗಿಸಿ ಗೊಂಡೆಗಳ ಆಕೃತಿಯಲ್ಲಿ ಅಲಂಕರಿಸುತ್ತಾರೆ. ಅಂಥಹ ಕುಸುರಿ ಕೆಲಸಗಳ ಕಲೆಗಾರಿಕೆಗೆ ಸಹನೆ ಎಷ್ಟಿರಬೇಡ..?!! ಯೋಚಿಸಿ..
ಹೇಳಿಕೇಳಿ ಕ್ಷಮಯಾ ಧರಿತ್ರಿಯರಲ್ಲವೇ..?!!
ಈ ಪದ ಪುರಶ್ಚರಣೆಯಿಂದ ಮಹಾಲಕ್ಷ್ಮೀಕೃಪೆ ಮತ್ತು ಬೇಕುಬೇಕಾದ ಬಟ್ಟೆಬರೆಗಳ ಅನುಕೂಲವಾದೀತು. ಬಟ್ಟೆ ಮಾನದ ಕುರುಹು. ಹಾಗಾಗಿ ಈ ಪದ ಪುರಶ್ಚರಣೆಯಿಂದ ಮಹಿಳೆಯರ ಮಾನ ಉಳಿದೀತು.
ದೇವರ ಚಾಕರಿ ಮಾಡುವ ಮಹಿಳೆಯರನ್ನು ಮತ್ತು ದೇವರ ಪೂಜಾದಿಗಳಿಗೆ ಅನುಕೂಲೆಯರಾದ ಗೃಹಿಣಿಯರನ್ನು ತಾಯಿ ಲಕ್ಷ್ಮೀದೇವಿ ಕಾಪಾಡಲಿ.
✍️ ಅನಂತಮೂರ್ತಿ ಬೆಳ್ಳರ್ಪಾಡಿ.
***
not got information from Shloka 15
***
||ಲಕ್ಷ್ಮೀಶೋಭಾನೆ ಮತ್ತು ಮಾತೆಯರು||.
ಚಿನ್ಮಯವೆನಿಪ ನಿಮ್ಮ ಮನೆಗಳಲ್ಲಿ ಜ್ಯೋ-
ತಿರ್ಮಯವಾದ ಪದ್ಮದಲ್ಲಿ |
ರಮ್ಮೆಯರೊಡಗೂಡಿ ರಮಿಸುವ ಶ್ರೀಕೃಷ್ಣ
ನಮ್ಮ ಮನೆಯ ಹಸೆಗೆ ಬಾ ||೮೧||
ಶ್ರೀಕೃಷ್ಣ ದೇವರೇ.... ನಿಮ್ಮ ಮನೆಗಳೆಲ್ಲ ಆನಂದಮಯ. ನೀವು ಕೂಡುವ ಪೀಠಗಳೆಲ್ಲ ಬೆಳಗೋ ಪದ್ಮಮಯ. ಅಲ್ಲಿ ಲಕ್ಷ್ಮೀಸಹಿತರಾಗಿ ವಿಲಾಸಿಸುವ ನೀವು ನಮ್ಮ ಮನೆಗೆ ಬಂದು ಹಸೆಮಣೆಯಲ್ಲಿ ಕೂಡಿರಿ.. ಇದು ದೇವನಾರಿಯರ ಪ್ರಾರ್ಥನೆ.
ಈ ಪದದ ಪಠಣ-ಪುರಶ್ಚರಣದಿಂದ ಸ್ವಂತಮನೆ ಮತ್ತು ಶಾಂತಿ ನೆಮ್ಮದಿ ಲಾಭ.
ಶ್ರೀಕೃಷ್ಣದೇವರು ದ್ವಾರಕೆಯಲ್ಲಿ ತನ್ನೆಲ್ಲ ರಾಣಿಯರಿಗೂ ಪ್ರತ್ಯೇಕಪ್ರತ್ಯೇಕ ಮನೆಗಳನ್ನು ಮಾಡಿಕೊಟ್ಟು ಎಲ್ಲರೊಂದಿಗೆ ಸುಖೀ ಸಂಸಾರ ನಡೆಸಿದವರು. ಅದು ಹೇಗೆ ಸಾಧ್ಯವಾಯ್ತೆಂದರೆ...
ಅವೆಲ್ಲ ಆನಂದಮಯ ಮನೆಗಳು. ದುಃಖದುರಿತಗಳನೆಲ್ಲ ದೂರದಲ್ಲಿಡುವ ನಮ್ಮಚ್ಯುತನ ಮನೆಗಳವು. ನಮ್ಮ ಮನೆಯಲ್ಲೂ ದುಃಖದುರಿತಗಳು ಬರಬಾರದೆಂದಾದರೆ ಮನೆ ನನ್ನದಲ್ಲ ದೇವರದೆಂದು ಭಾವಿಸಿರಿ.. ದೇವರ ಮನೆಯಲ್ಲಿ ದೋಷದುರಿತಗಳಿರುವುದಿಲ್ಲ. ದುಷ್ಟಾರಿಷ್ಟಗಳಿರುವುದಿಲ್ಲ. ಸದಾ ಆನಂದಮಯವಾಗಿರುತ್ತದೆ.
ಶ್ವೇತದ್ವೀಪ ಅನಂತಾಸನ ವೈಕುಂಠಗಳೆಂಬುದು ಭಗವಂತನ ಪ್ರಸಿದ್ಧ ಮನೆಗಳು. ಅಲ್ಲಿ ಆತ ಕೂರುವ ಆಸನಗಳೇ ಈ ಪದ್ಮಗಳು. ಸತ್ತ್ವಾಭಿಮಾನಿನೀ ಶ್ರೀದೇವಿ ರಜೋಭಿಮಾನಿನೀ ಭೂದೇವಿ ತಮೋಭಿಮಾನಿನೀ ದುರ್ಗಾದೇವಿ. ಹೀಗೆ ಈ ಮೂವರು ಪೀಠಾಭಿಮಾನಿನಿಗಳು. ಭಗವತ್ಸನ್ನಿಧಾನವಿರುವಲ್ಲಿ ಇವಿಷ್ಟು ತಾನಾಗಿಯೇ ಇರುತ್ತವೆ. ಭಗವಂತ ಈ ಸ್ಥಳಗಳಲ್ಲಿ ಲಕ್ಷ್ಮೀಸಹಿತನಾಗಿ ಅನುಗ್ರಹಿಸುತ್ತಾನೆ. ಅಂಥಹ ಭಗವಂತ ನಮ್ಮ ಮನೆಯ ಹಸೆಮಣೆಯಲ್ಲಿ ಬಂದು ಕೂಡಲಿ..
ಚಿನ್ಮಯವೆಂದರೆ ಜ್ಞಾನಮಯ ಎಂದರ್ಥ. ತಿಳುವಳಿಕೆ ಇಲ್ಲದೆ ಏನೇನೂ ನಡೆಯದು. ಎಲ್ಲಕ್ಕೂ ತಿಳಿವು ಮುಖ್ಯ. ತಿಳಿವೇ ಇಲ್ಲದ ಮಂದಿ ಅಳಿದಂತೆ. ಉಳಿಯುವುದಂತೂ ದೂರದ ಮಾತು.
ರಾಜನಿಂದಾರಂಭಿಸಿ ಸಮಾಜದ ಕಟ್ಟಕಡೆಯ ಮಂದಿಯೂ ಒಂದಲ್ಲಒಂದು ರೀತಿಯ ತಿಳುವಳಿಕೆಯುಳ್ಳವರೇ ಆಗಿರುತ್ತಾರೆ. ಎಲ್ಲ ಕ್ಷೇತ್ರಗಳಲ್ಲೂ ಆಯಾಯ ವೃತ್ತಿಗನುಗುಣವಾಗಿ ಅಳತೆ-ಪ್ರಮಾಣ ಹದ-ಹದ್ದು ಸಾಧ್ಯಾಸಾಧ್ಯತೆಗಳು ಒಳಹೊರಗು ಎತ್ತರಬಿತ್ತರ ಆಯವ್ಯಯ ಲಾಭನಷ್ಟ ಹೀಗೆ ಈ ಎಲ್ಲ ತಿಳುವಳಿಕೆ ಪಡೆದಿರುತ್ತಾರೆ. ಇದೆಲ್ಲ ಜ್ಞಾನಾನಂದಮಯನಾದ ಭಗವಂತನ ಕೃಪೆ. ಈ ರೀತಿಯ ಅನುಸಂಧಾನದಿಂದ ನಮ್ಮ ಮನೆಗಳು ವಿದ್ಯೆ ತಿಳಿವು ಓದು-ಬರಹಗಳ ಆಗರವಾಗಲಿದೆ..
ಮನೆ ಮುಂದೆ ಮತ್ತು ಹೊಸ್ತಿಲು ಪೂಜೆ ಮಾಡುವಾಗ ರಂಗೋಲಿಯಿಂದ ಪದ್ಮಾಕಾರವನ್ನು ಬರೆಯುವುದರಿಂದ ಆ ಮನೆ ಲಕ್ಷ್ಮೀನಾರಾಯಣರ ಸನ್ನಿಧಾನ ಭೂಯಿಷ್ಠವಾಗುತ್ತದೆ.
ಶ್ರೀಕೃಷ್ಣದೇವರನ್ನೇ ನಮ್ಮ ಮನೆಯ ಹಸೆಮಣೆಗೆ ಕರೆದೆವಾದರೆ ನಮ್ಮ ಮನೆಯಲ್ಲಿ ನಿತ್ಯನಿರಂತರ ಕಲ್ಯಾಣೋತ್ಸವಗಳಿಗೆ ಕೊರತೆಯಿರದು.
ಜ್ಯೋತಿರ್ಮಯವಾದ ಪದ್ಮದಲ್ಲಿ...... ಈ ಪದ ವಿಶಿಷ್ಟವಾದದ್ದು. ರಂಗೋಲಿಯಿಂದ ಪದ್ಮ ಬರೆದು ಅಲ್ಲಿ ತುಪ್ಪದೀಪ ಪ್ರಜ್ವಾಲನೆ ಮಾಡಿ ಈ ಲಕ್ಷ್ಮೀಶೋಭಾನೆಯನ್ನು ಪಠಿಸುತ್ತಾ ಸುಮಂಗಳೆಯರು ಸುಗಂಧಪುಷ್ಪಗಳಿಂದ ಅರ್ಚಿಸಿದರೆ ಸ್ವಂತಮನೆ ಆಗುವುದು. ಮತ್ತು ಭಗವಂತನ ದಯೆಯಿಂದ ಅಲ್ಲಿ ಸುಖಶಾಂತಿ ಸಮಾಧಾನಗಳು ನೆಲೆಸುವವು.
ಹೀಗೆ ವಿಶಿಷ್ಟಗುಣಗಳುಳ್ಳ ಈ ಲಕ್ಷ್ಮೀಶೋಭಾನೆ ಪದವನ್ನು ಪಾರಾಯಣ ಮಾಡುವ ಮಂಗಲೆಯರಾದ ಮಾತೆಯರಿಗೆ ಲಕ್ಷ್ಮೀನಾರಾಯಣರ ದಯೆ ಸದಾ ಇರಲಿ.
****
