ಬಾಲಗೆ ಪಟ್ಟಗಟ್ಟಿಸು ಪರಿವಾರವ ಬಾಳಿಸು ಮುನ್ನಿನಂದದಲಿ
ದೇವ ಬ್ರಾಹ್ಮರ ಮನ್ನಿಸುತಲೆ ರಾಜ್ಯವ ಆಳು ನೀ
ಸುತನ ಮುಂದಿಟ್ಟು 151
ಇಕ್ಷ್ವಾಕುಕುಲತಿಲಕನೆ ನಿನ್ನ ರಾಜ್ಯವ ಒಪ್ಪಿಸಿಕೊಳಲೆನಗಳವೆ
ಪುತ್ರಗೆ ಪಟ್ಟವ ಕಟ್ಟುವುದೇನು ಕಾರಣ ವಿಸ್ತಾರವಾಗಿ ಹೇಳೆಂದ 152
ಕೇಳಿದೆ ಕರ್ಣದಿ ಹೀನದ ವಾಕ್ಯವ ಜಾರತ್ವ ಬಂದಿತಾತ್ಮಜೆಗೆ
ನಾನು ಅಂಜಿ ಮಾನವರಪವಾದಕ್ಕೆ ದೇಹತ್ಯಾಗವನೆ
ಮಾಡುವೆನು 153
ರಣದೊಳು ಬಿದ್ದರೆ ಜಗದೊಳು ಕೀರ್ತಿಯು
ಅಮರಲೋಕಕ್ಕೆ ವಶವಹರು
ಬರಿದು ಸಾಯುವರೆ ನಿನ್ನಂಥ ಪರಾಕ್ರಮಿ ಯಮನ
ಭಾಧೆಗೆ ಗುರಿಯಾಗಿ 154
ಪೃಥುವೀಶರೊಳು ತಲೆ ತಗ್ಗಿಸಿದಂತಾಯಿತು
ವ್ಯರ್ಥವಾಯಿತು ಎನ್ನ ಬದುಕು
ಹೊತ್ತಿರಲಾರೆ ದೇಹವ ನೀಕ್ಷಣದಲಿ ಹತ್ಯೆ
ಮಾಡಿಕೊಂಬೆನೆಂದ 155
ನಿಂದ್ಯಕೆ ಅಂಜಿ ನೀಗುವರೆ ಶರೀರವ ಹಿಂದಣ
ಕಥೆಯ ಕೇಳರಿಯಾ
ಇಂದ್ರಾದಿ ಮುನಿಗಳಿಗೆ ಬಂದಿತು ಅಪವಾದ
ಕುಂದನೊದ್ದವರಾರು ಜಗದಿ 156
ತಾನೆ ಪುಟ್ಟಿಸಿದ ವಾಗ್ದೇವಿಯ ಕಮಲಜ
ಲಾವಣ್ಯ ಕಂಡು ಸೈರಿಸದೆ
ಮೂಜಗವರಿತು ಪಾಣಿಗ್ರಹಣ ಮಾಡಿದ
ಮೀರಿದರಾರೊ ಕಲ್ಪನೆಯ 157
ಮುನಿಸತಿಯೆನದೆ ದೇವೇಂದ್ರ ತಾನಳುಕಿದ
ಸರ್ವಾಂಗದಿಂದ ಸುಂದರಿಯು
ಶಿಲೆಯಾಗಿ ಬಿದ್ದಳಾತನ ಸತಿ ಧರೆ ಮೇಲೆ ಮೃಗದ
ಲಾಂಛನೆಯ ತಾಳಿದನು 158
ಗುರುಸತಿಯೆನದೆ ಅಂಬುಜಮಿತ್ರ ಅಳುಪಿದ
ಸೆರೆತಂದ ತಾರಾದೇವಿಯನು
ಮುನಿಗಳು ಅಮರರೊಡನೆ ಕಾದಿಗೆಲಿದರು ನರರ
ಪಾಡೇನು ಭೂಪಾಲ 159
ಯಮನ ದಾಡೇಲಿಪ್ಪ ತೆರನಂತೆ ಕಾವಲು ನಿನ್ನ
ಕುಮಾರತಿಯ ಮಂದಿರಕೆ
ಮರುಳಗೊಂಡ್ಯೊ ಮಾನವೆಂದು ಈ ಸುದ್ದಿಯ
ಅರುಹಿದರಾರು ನಿನ್ನೊಡನೆ 160
ಪರಿಪರಿ ದುಃಖದಿ ಹೊರಳುವ ರಾಯನ ಮನವ
ನಿಲ್ಲಿಸಿದ ಪ್ರಧಾನಿ
ತಿಳಿದು ಬಹೆನು ಕುಮಾರಿಯನೆಂದೆನುತಲೆ
ನಡೆತಂದ ಸೆಜ್ಜೆವಾಹರಿಗೆ 161
ಉರಿ ಸೋಂಕಿದ ಕೆಂದಳಿರಂತೆ ಮುಖಬಾಡಿ
ಮಲಿನವನುಟ್ಟ ಮಾನಿನಿಯ
ಕಳೆಗುಂದಿ ನೆಲದಲ್ಲಿ ಬಿದ್ದ ಕುಮಾರಿಯ
ಸೆಳೆವಿಡಿದೆತ್ತಿದ ರಾಯ 162
ಏಳವ್ವ ತಾಯಿ ಚಿಂತಿಸಲೇಕೆ ವರನ್ಯಾರು
ಮಾಜುವದೇಕೆ ಎನ್ನೊಡನೆ
ಧಾರೆಯನೆರೆದು ಕೊಡುವೆ ಕನ್ಯಾಚೋರಗೆ ದೇವ
ಬ್ರಾಹ್ಮರು ಮೆಚ್ಚುವಂತೆ 163
ಮರೆತು ಮಲಗಿದ್ದಾಗ ಸುರರಡ್ಡಸುಳಿದರೊ
ಸುರರೊ ನರರೊ ಕಿನ್ನರರೊ
ಧರಣೀಶಗ್ಹೇಳಿ ಮಾಡುವೆ ನಿನ್ನ ಮದುವೆಯ
ಗಿರಿಜೇಶನಾಣೆ ಹೇಳೆಂದ 164
ಎತ್ತಣ ಮದುವೆ ಮಾಡುವಿರೆನ್ನ ದೇಹವ
ಇತ್ತೆ ನಾ ಹವ್ಯವಾಹನಗೆ
ಮತ್ತೊಬ್ಬ ಪುರಷನ ಕೂಡಿ ಬಾಳುವಳಲ್ಲ
ವಿಶ್ವಲೋಚನನಂಘ್ರಿಯಾಣೆ 165
ಹಗರಣವಾಯಿತು ಜಗಮೂರರೊಳಗೆಲ್ಲ ನಗುವರು
ಸರಿಯ ನಾರಿಯರು
ಸೊಗಸವು ನಿಮ್ಮ ವಾಕ್ಯವು ಎನ್ನ ಕರ್ಣಕ್ಕೆ ಹೊಗುವೆನು
ಉರಿವ ಪಾವಕನ 166
ಶ್ವಾನ ಮುಟ್ಟಿದ ಭಾಂಡ ಬಾಹದೆ ನಿಳಯಕ್ಕೆ ದೇವ
ಬ್ರಾಹ್ಮರಿಗ್ಯೊಗ್ಯವಹುದೆ
ಮಾನಿನಿಯೆಂದು ಸ್ನೇಹದಲೆನ್ನನುಳುಹಲು ಹಾನಿ
ಬರುವುದು ನಿಮ್ಮ ಕುಲಕೆ 167
ಪುತ್ರಿಯೆಂದು ಸ್ನೇಹದಲೆನ್ನ ಉಳುಹದೆ ಕೆಟ್ಟ
ಪಾತಕಿಯೆಂದು ತಿಳಿದು
ಎತ್ತಿ ಕೊಂಡ್ಹೋಗಿ ತುಂಬಿದ ನದಿಯೊಳಗೆ ಬಿಟ್ಟು
ಬರುವುದೆ ಉಚಿತವು 168
ಮದುವೆಯ ಮಾಡಲಿಲ್ಲವೆಂದು ಎನ್ನೊಳು
ಮುನಿದು ಅರಣ್ಯಕ್ಹೋಗುವರೆ
ವರಿಸು ನಿನಗೆ ಉತ್ತುಮವುಳ್ಳ ಪುರಷಗೆ ಧಾರೆಯನೆರೆವೆನು 169
ಪಕ್ವವಾಯಿತು ಎನ್ನ ಪಾತಕ ಇಂದಿಗೆ ಹೊತ್ತೆನು
ಬರಿದೆ ನಿಂದ್ಯವನು (ಅ)
ಸತ್ಯವಾಗದು ಎನ್ನ ಆಡಿದ ವಾಕ್ಯವು ಮೃತ್ಯು
ಬಂದೊದಗಿದ ಮೇಲೆ 170
ದೃಷ್ಟಿಸಿ ನೋಡಲು ದೃಷ್ಟಿತಾಕೀತೆಂದು ಎತ್ತಿ
ತೂಪಿರಿದು ಮಂತರಿಸಿ
ಇಷ್ಟು ಪರಿಯಿಂದಲೆಸಲಹಿದ ಮಗಳನು ಇತ್ತೆ ನಾ
ಘೋರ ಕಾನನಕೆ 171
ಕಾರುಣ್ಯದಿಂದಲೆ ಸಲಹಿದ ಮಗಳನು ಅರಣ್ಯಕೆ
ಗುರಿಮಾಡಿ ನಾರಿ
ನಿನ್ನನಗಲಿ ನಾನೆಂತು ಜೀವಿಪೆನೆಂದÀು ತಾಯಿ
ಕಂಬನಿದುಂಬಿದಳು 172
ಮಿಸುನಿಯ ಅಲಗೆಂದು ಬಸಿರೊಳಗಿಡುವರೆ
ವಶವಲ್ಲದಂಥ ಮೂಗುತಿಯ
ಹಸನಾಯಿತೆಂದು ಇಟ್ಟರೆ ನಾಸಿಕ್ಹರಿವೋದು
ಬಿಸುಸುಯ್ವದೇತಕೆ ತಾಯೆ 173
ಏಳುತ್ತಲೊಮ್ಮೆ ಬಿಮ್ಮನೆ ತಾ ಮರುಗಿದಳು
ಕುಮಾರಿಯ ಮೇಲೆ ಸ್ನೇಹದಲಿ
ಆಲೋಚನೆ ಮಾಡುವ ಹಿರಿಯರ ಕಾಣೆನು ಹಾ
ವಿಧಿಯೆಂದ್ಹೊರಳಿದಳು 174
ಉಲುಹ ಕೇಳಿದರೆ ಎಚ್ಚರ ‘ವಹರು’ ಜನರೆಲ್ಲ
ಅಳುವುದೇತಕೆ ತಾಯೆ ನೀನು
ಅರುಣನ ಉದಯವಾಗದ ಮುನ್ನ ಕಳುಹಿಸು
ಕಲ್ಮಾಡು ನಿನ್ನ ದೇಹವನು 175
ರಾಯನು ಕರೆಸಿದ ತನ್ನ ಊಳಿಗದವರನು
ಹೇಳಿದನೇಕಾಂತದಲಿ
ಬಾಲೆಯನೊಯ್ದು ಅರಣ್ಯದಿ ಶಿರವರಿದುನಾಳೆ
ಉದಯಕೆ ಬನ್ನಿರೆಂದ 176
ಕರೆಸಿದನಾಗ ಕಿಂಕರರ ಪ್ರಧಾನಿಯು ತರಿಸಿದನೊಜ್ರದಂದಣವ
ಅರಸನ ಮಗಳನು ಅರಣ್ಯದೊಳಗಿಟ್ಟು ಮರೆಸಿ
ಬನ್ನಿರಿ ಶೀಘ್ರದಿಂದ 177
ರಾಯನ ಮಗಳನು ಅರಣ್ಯದೊಳಗಿಟ್ಟು
ಮಾಡಿರಿಮನಕೆ ಬಂದುದನು
ಬಾಲೆಯ ಮುದ್ರೆಯುಂಗುರ ತನ್ನಿ ಗುರುತಿಗೆ
ನಾನಿಡುವೆ ರಾಯನ ಮುಂದೆ 178
ಏರಿದಳೊಜ್ರದಂದಣವ ಕುಮಾರಿಯು
ಮೇಲೆ ಪನ್ನಂಗ ಕವಿದವು
ವ್ಯಾಘ್ರ ಬಂದು ಹರಿಣನ ಕಚ್ಚಿ ಒಯಿದಂತೆ
ಶೀಘ್ರದಿ ಪೊತ್ತು ನಡೆದರು 179
ಶಶಿಮುಖಿ ಮನದಲಿ ನಸುಬೆದುರಿಡುತಲೆ
ಬಸವಳಿದಳು ಶ್ರೀ ಹರಿಯ
ಅರಸುಮರ್ದನ ಗೋವಿಂದನೆ ಸಲಹೆಂದು
ಸ್ತುತಿಸುತಿರ್ದಳೆ ತನ್ನ ಮನದಿ 180
ನೋಡದೆ ಎನ್ನವಗುಣವ ಪಾತಕಿಯೆಂದು
ಕಾಲನ ವಶಕೆÉ ಒಪ್ಪಿಸದೆ
ಕ್ಷೀರಾಬ್ಧಿಶಯನ ನಾರಾಯಣ ಹರಿ ನಿಮ್ಮ
ಪಾದಾರವಿಂದೊಳಿರಿಸು 181
ಭಾರವನ್ಹೊತ್ತು ಬಳಲಿ ಬಾಯಾರುತ್ತ ಏರುತ್ತ ಘಟ್ಟ ಬೆಟ್ಟಗಳ
ಹಾದಿ ತಪ್ಪಿ ಹಳ್ಳಕೊಳ್ಳ ಕಾನನದೊಳು
ಬಾಲೆಯ ತಂದಿಳುಹಿದರು 182
ಅಂದಣ ಇಳುಹಿ ಕೆಂದಳಿರ್ಹಾಸಿದರಾಗ ತಂಗಿ
ಬಾ ಬಳಲಿದೆಯೆನುತ
ಕುಂದಣಗಿಂಡೀಲಿ ತುಂಬಿಟ್ಟರುದಕವ
ರಂಭೆಯನುಪಚರಿಸಿದರು 183
ಪುಷ್ಪ ಸೋಕಿದರೆ ಬಾಡುವ ಕೋಮಲಾಂಗವ
ತೊಪ್ಪಲ ಮೇಲ್ಹರಹಿದರು
ಅಚ್ಯುತಾನಂತ ಶ್ರೀ ಕೃಷ್ಣನೆ ಗತಿಯೆಂದು
ಕತ್ತಿಗೆ ಮಯ್ಯನಿಕ್ಕಿದಳು 184
ಕಂಬುಚಕ್ರಧಾರಿ ವೈಕುಂಠವಾಸಗೆ ವಂದಿಸಿದಳು ತನ್ನ ಮನದಿ
ಅಂಬುಜಮಿತ್ರ ಗೋವಿಂದನೆ ಗತಿಯೆಂದು ರಂಭೆ ತಾ
ಸ್ತುತಿಯ ಮಾಡಿದಳು 185
ಅರಣ್ಯದಲ್ಲಿ ತನ್ನ ನೆನೆವ ಕುಮಾರಿಗೆ ಕಾರುಣ್ಯದಿಂದೊದಗಿದನು
ಪ್ರಹಲ್ಲಾದವರದ ಪಾಲಿಸಿದನು ಹಸುಳೆಗೆ ಮಾಯದ
ನಿದ್ರೆ ಕವಿದವು 186
ಕಾಮಧೇನು ಕಲ್ಪವೃಕ್ಷ ಚಿಂತಾಮಣಿ ಭಕ್ತರಿಗೊಜ್ರಪಂಜರನೆ
ನಿತ್ಯ ನಿರ್ಮಳ ಅಚ್ಯುತಾನಂತ ನರಹರಿ ಪೊಕ್ಕನೆ
ದೂತರ ಮನವ 187
ಎತ್ತಿದರು ಕೊಲೆಘಟಿಕರಾಯುಧವನ್ನು ಮತ್ತೆ
ಯೋಚಿಸಿ ತಮ್ಮ ಮನದಿ
ಪುತ್ರಿಯ ಕೊಂದ ಪಾತಕ ತಮಗೆನುತಲೆ
ಎತ್ತಿದಾಯುಧವನಿಳುಹಿದರು 188
ಗರ್ಭಾಂಗಿಯ ಕೊಂದರೆ ಪಾಪ ತಮಗೆಂದು
ಒಬ್ಬರೊಬ್ಬರು ಮಾತನಾಡಿ
ಕೊಬ್ಬಿದ ಮೃಗವ ಕಡಿದು ಶೋಣಿತವನ್ನು
ಉರ್ವೀಶಗೊಯ್ದು ಒಪ್ಪಿಸುವ 189
ವ್ಯಾಘ್ರ ಕಾಡು ಕೋಣ ಮೃಗವಿದ್ದಯಡೆಯಲ್ಲಿ
ವಾರಿಜಗಂಧಿಯ ಬಿಟ್ಟು
ಜೀವಗಳಳಿದು ಅಯೋಧ್ಯಕ್ಕೆ ಬಂದರು
ರಾಯಗೆ ಗುರುತ ತೋರಿದರು 190
ಕಪ್ಪೋಡಲಿನ ಪುಳಿಂದರು ಬಂದರು
ತಪ್ಪದೆ ರಾಯನೋಲಗಕೆ
ಹತ್ಯಮಾಡಿ ಬಂದೆವು ನಿನ್ನ ಕುಮಾರಿಯ
ಚಿತ್ತೈಸು ಜೀಯವಧಾನ 191
ಕೊಂದು ಬಂದೆವು ನಿನ್ನ ಆತ್ಮಸಂಭವೆಯನ್ನು
ತಂದೆವು ಮುದ್ರೆಯುಂಗುರವ
ಕೊಂಡಿಳುಹಿದರು ನೆತ್ತರು ಪೂಸಿದಲಗನು ಕಂಡು
ಮನದಲಿ ಮರುಗಿದನು 192
ಕುಂ(ಜವ)ಗಿಣಿಯನು ಪಂಜರದೊಳಗಿಟ್ಟು
ಅಂಜೂರ ಕೊಯ್ದು ಕೊಟ್ಟಂತೆ
ಕುಂಜರಗಮನೆಯ ಕೈಯಿಂದ ಕೊಲಿಸಿದೆ
ಬೆಂದೊಡಲನೆಂತು ಪೊರೆಯಲಿ 193
ತುಂಬೂರಗೊಳ್ಳಿಯ ಒಲೆಯೊಳಗಿಟ್ಟಂತೆ
ಕೆಂಡದೊಳಾಜ್ಯ ಬಿದ್ದಂತೆ
ತಂದೆ ತಾಯಿ ಪ್ರಧಾನಿಪರಿವಾರವು
ಬೆಂದರು ಶೋಕಾಗ್ನಿಯಿಂದ 194
ಇತ್ತಲಾರಾಯ ಹಂಬಲಿಸಿ ತಾನಳುತಿರೆ ಪುತ್ರಿಯ
ಮೇಲೆ ಸ್ನೇಹದಲಿ
ಹಕ್ಕಿ ಪಕ್ಷಿಯು ನಲಿದವು ಮೂಡüರಾತ್ರೇಲಿ
ತಲೆಯೆತ್ತಿದವಬ್ಜ ಬಂಧುಗಳು 195
ಎಚ್ಚೆತ್ತು ನೋಡಿದಳಾಗ ಚಂದ್ರಾವತಿ ಸುತ್ತಲ
ಮೃಗದ ಸಂಚರವ
ಬಿಟ್ಟುಹೋದರು ಪಾತಕರೆನ್ನ ಅಡವೀಲಿ ತುತ್ತಾದೆ
ಹಸಿದ ಹೆಬ್ಬುಲಿಗೆ 196
ಘುಡುಘುಡಿಸುವ ಸಿಂಹನಾದಕ್ಕೆ ಅಂಜುವಳು
ಬೆದರುವಳು ವ್ಯಾಘ್ರದಟ್ಟುಳಿಗೆ
ಮೊರೆವ ಸರ್ಪವ ಕಂಡು ನಯನವ ಮುಚ್ಚುವಳು
ಮರಳಿ ಧೈರ್ಯವನೆ ಮಾಡುವಳು 197
ನಾನ್ಯಾರೊ ತಾಯಿ ತಂದ್ಯಾರೊ ಭಾವಿಸಿದರೆ
ಮಾಯಪಾಶಕೆ ಗುರಿಮಾಡಿ
ಮಾರಜನಕ ದಾನವಾರಿಯ ನೆನೆದರೆ ಅಹುದು
ಮುಕ್ತಿ ಸಾಧನವು 198
ಜಲವ ಪೊಕ್ಕು ದೈತ್ಯನ ಸಂಹರಿಸಿದೆ ಅಜಗೆ
(one or two lines incomplete?)
****