Audio by Vidwan Sumukh Moudgalya
ಶ್ರೀ ವಿಜಯದಾಸಾರ್ಯ ವಿರಚಿತ ಶ್ರೀ ವೆಂಕಟೇಶದೇವರ ವದನ ಮಹಿಮಾ ಸುಳಾದಿ
ರಾಗ ಬೃಂದಾವನ ಸಾರಂಗ
ಧ್ರುವತಾಳ
ಶ್ರೀರಮಣಿ ಕೂಡ ಏಕಾಂತವಾಡುವ ವದನ
ಸಾರ ಸುಂದರವಾದ ವೇದವದನ
ಚಾರು ಶೋಭಿಪ ದಂತ ಪಙ್ತಿ ಎಸವ ವದನ
ಕಾರುಣ್ಯದಲಿ ಸೋನೆಗರೆವ ವದನ
ವಾರಿಜೋದ್ಭವಗೆ ಉಪದೇಶ ಪೇಳಿದ ವದನ
ಚೋರತನದಲ್ಲಿ ಬೆಣ್ಣೆ ಸವಿದ ವದನ
ಸಾರಿಸಾರಿಗೆ ನಗಲು ರತ್ನ ಉದರುವ ವದನ
ನಾರಿಯರಧರವ ಚುಂಬಿಸುವ ವದನ
ಕಾರುಣ್ಯನಿಧಿ ಕಾಮಿಕಾಂತ ವಿಜಯವಿಠಲ
ಶೌರಿಯ ಚಿತ್ರ ವಿಚಿತ್ರ ವದನ ॥ 1 ॥
ಮಟ್ಟತಾಳ
ಯಶೋದೆ ದೇವಿಯ ಅಮ್ಮೆ ಉಂಡ ವದನ
ಅಸುರ ಪೂತನಿಯ ವಿಷವ ಹೀರಿದ ವದನ
ಶಿಶುವ ಲೀಲೆಯಲಿ ಮಣ್ಣು ಮೆದ್ದ ವದನ
ಬಸುರೊಳಗೆ ವನಜಜಾಂಡ ತೋರಿದ ವದನ
ಪಶುಗಳು ತೊರದಾ ಮೊಲಿ ಚಪ್ಪರಿಸಿದ ವದನ
ಹಸುಮಕ್ಕಳ ಮೇಲೆ ಉಗುಳುಗಳಿದ ವದನ
ವೃಷಪರ್ವನಾಮ ವಿಜಯವಿಠ್ಠಲನ್ನ
ಶಶಿಬಿಂಬದ ವದನ ಆನಂದದ ವದನ ॥ 2 ॥
ತ್ರಿವಿಡಿತಾಳ
ಕರಾಳ ವದನ ಕರ್ಪುರವನ್ನೆ ತುಂಬಿದ
ಕರಡಿಗೆ ಯಂದದಿ ಪೋಲುವ ವದನ
ಪರಮಭಕ್ತಿಗೆ ವೊಲಿದು ಪಣ್ಣುಸವಿದ ವದನ
ವರವೇಣು ಚನ್ನಾಗಿ ಊದಿದ ವದನ
ತರುಣೆರಿಂದ ಅನ್ನ ತರಿಸಿ ಉಂಡ ವದನ
ಧರೆ ಚತುರ್ದಶವನ್ನು ನುಂಗಿದ ವದನ
ಸುರಧ್ಯಕ್ಷನಾಮ ನಮ್ಮ ವಿಜಯವಿಠಲದೇವ
ಪರಮದಾಸರ ಕೂಡಲಾಡುವ ವದನ ॥ 3 ॥
ಅಟ್ಟತಾಳ
ಜನನಿಗೆ ತತ್ವವ ಪೇಳಿದ ವದನ
ದನುಜ ನುರಿಯಾಗೆ ನುಂಗಿದ ವದನ
ವನಧಿಗಳೆಲ್ಲ ಘೋಷಣೆಗೊಂಬ ವದನ
ಘನಸೂಕರ ತುರಂಗವದನ ವದನ
ಕನಕಾಚಲವನ್ನು ಕಚ್ಚಿದ ವದನ
ತನಿ ಮಧುರಾಮೃತ ಸೋರುವ ವದನ
ಅನಿವೃರ್ತಿ ವಿಜಯವಿಠಲ ರಂಗರಾಯಾ
ತನಯನಾಗಿ ಜೊಲ್ಲು ಸುರಿಸುವ ವದನ ॥ 4 ॥
ಆದಿತಾಳ
ತಾಂಬೂಲರಸದಿಂದ ಥಳಥಳಿಸುವ ವದನ
ಅಂಬುಜಜಾಂಡವನೇಕ ಕ್ಷಣಕುಗುಳುವ ವದನ
ಕಾಂಬೆನೆಂದು ಬಂದ ಮೈತ್ರನ್ನವಲಕ್ಕಿ ತಿಂದ ವದನ
ಅಂಬೆ ಅಂಬೆ ಎಂದು ಗೋಸಂಕುಲವ ಕರವ ವದನ
ಬೆಂಬಿಡದೆ ಸರ್ವವಸ್ತು ಮೆಲ್ಲುವನ ಪೆತ್ತ ವದನ
ಅಂಬರೀಷ ಪಾಲ ಮಹ ಹೃದಯ ವಿಜಯವಿಠಲ
ಅಂಬುಜ ಭವಾದಿಗಳ ಪಾಲಿಸುವ ದಿವ್ಯ ವದನ ॥ 5 ॥
ಜತೆ
ವಿಶ್ವತೋವದನ ವಂದಾನಂತವದನ
ವಿಶ್ವಬಾಹು ವಿಜಯವಿಠಲರೇಯನ ವದನ ॥
*********