ಶ್ರೀವಿಜಯದಾಸಾರ್ಯ ವಿರಚಿತ ಶ್ರೀಕೃಷ್ಣಾವತಾರ ಸ್ತೋತ್ರ ಸುಳಾದಿ
ರಾಗ ಆನಂದಭೈರವಿ
ಧ್ರುವತಾಳ
ಆವ ಪರಿಯಿಂದ ನಿನ್ನರ್ಚಿಸುವೆ ನಿಗಮಮಣಿ
ದೇವ ಮಹೋತ್ತಮ ಮಹಾ ಮಹಿಮಾ
ಜೀವೋತ್ತಮರು ಪೂರ್ವದಲ್ಲಿ ಜಪತಪ ವ್ರತ
ಪಾವಕಾಹುತಿಯಿಂದಲಾರಾಧಿಸೇ
ಭಾವದಲಿ ಕಾಣರು ಬಹುಕಾಲ ತೊಳಲೆ ರಾ -
ಜೀವ ವದನನೆಂದು ಅನಂತಾನಂತ ವೇ -
ದಾವಳಿಗಳು ಕೂಗಿ ಪೇಳುತಿವಕೋ
ಹ್ಯಾವರಿಕೆ ಸಂಸಾರ ಡಾವಣಿಯ ನಡುವೆ ಕೊರ -
ಳಾವಲಿಗೆ ಸಿಗಬಿದ್ದು ಮಿಡುಕುತಿಪ್ಪ
ಜೀವಾಧಮನು ನಿನ್ನ ಮೆಚ್ಚಿಸಲಾಪೆನೆ ವಸು -
ದೇವನಂದನ ದ್ವಿಜಾಪತಿ ಶ್ಯಂದನಾ
ಪೂವಿಲ್ಲನಯ್ಯಾ ಅದೃಶ ವಿಜಯವಿಟ್ಠಲ
ಸೇವಿ ಆಗುವದೆಂತೊ ಮತಿ ವಿಭ್ರಮನಿಗೆ ॥ 1 ॥
ಮಟ್ಟತಾಳ
ಅರ್ಚಿಸುವೆನೆನೆ ನಿನ್ನ ಅರ್ಚಿಸಲಾರೆನೋ
ಮೆಚ್ಚಿಸುವೆನೆನೆ ನಿನ್ನ ಮೆಚ್ಚಿಸಲಾರೆನು
ನಿಚ್ಚ ಸಪುತವನಧಿ ಅಚ್ಚಲದೊಳಗುಳ್ಳ
ಅಚ್ಚ ಕುಸುಮ ಪತ್ರಾ ನಿಚ್ಚಯಾದಿಗಳೆಲ್ಲ
ಅರ್ಚನೆ ಮಾಡಿದರು ಮೆಚ್ಚಾಗುವದೇನೊ
ಹೆಚ್ಚಿನ ದೈವವೇ ಮುಚುಕುಂದ ವರದಾ
ಅಚಿಂತ್ಯನಾಮಕನೆ ವಿಜಯವಿಟ್ಠಲ ನೀನೆ
ಸಚ್ಚಿದಾನಂದೈಕನೆ ನೆಚ್ಚಿನ ಕರುಣಾಳೇ ॥ 2 ॥
ತ್ರಿವಿಡಿತಾಳ
ನಿತ್ಯತೃಪ್ತನು ನೀನು ನಿರ್ವಿಕಾರನು ನೀನು
ಸತ್ಯಸಂಕಲ್ಪ ಶುದ್ಧಾತ್ಮ ಅಂತರಾತ್ಮಕಾ
ಅತ್ಯಾಶ್ಚರ್ಯವ ತೋರುವ ಮಹಾಪುರುಷಾ -
ದಿತ್ಯ ಸನ್ನಿಭ ಕೋಟಿ ನಿರ್ಮಲಾಂಗಾ
ಸತ್ಯಲೋಕದ ವಾಸಿ ಸಂತರ್ಪಣೆ ಮಾಡಿದರು
ಕೃತ್ಯವೇ ನಿನಗದರಲ್ಲಿ ಇಲ್ಲಾ
ಮರ್ತ್ಯ ಲೋಕದ ನೊರಜು ಏಕಾಗ್ರ ಮನದಲ್ಲಿ
ಅತ್ಯಂತವಾಗಿ ಪೂಜಿಸಬಲ್ಲೆನೇ
ಸತ್ಯಧರ್ಮ ನಾಮ ವಿಜಯವಿಟ್ಠಲ ನಿನಗೆ
ಭೃತ್ಯರಂಗ ಸಂಗಾ ನಲಿವದೇ ತೃಪ್ತಿ ॥ 3 ॥
ಅಟ್ಟತಾಳ
ಸದನದೊಳಗೆ ಮಾಡುಳ್ಳ ಪದಾರ್ಥ
ಮುದದಿಂದಲಿ ನಿನ್ನ ಸಮ್ಮುಖದಲ್ಲಿ ಇಟ್ಟು
ಎದುರಲಿ ನಿಂದು ಮನಸ್ಸಿಗೆ ತೋರಿದ ಹಾಗೆ
ಪದುಮನಾಭ ನಿನ್ನ ಪದಕೆ ಸಮರ್ಪಿಸ -
ಲದರೊಳಗೊಂದು ಸ್ವಲ್ಪು ಕಡಿಮೆಯಾ -
ಗದು ನೋಡು ನಿನ್ನ ಮಹಿಮೆಗೆ ನಮೊ ನಮೋ
ಅದೆ ಮಹಾಪ್ರಸಾದ ಭಕುತರು ಭುಂಜಿಸಿ
ಪದವಿಯಲ್ಲಿ ಅಧಿಕವಾದ ಸುಖವ ಬಡುವರು
ಸುದರುಶನ ನಾಮ ವಿಜಯವಿಟ್ಠಲರೇಯಾ
ಇದರಿಂದ ನೀ ಕೃಪಾ ಉದಧಿ ಸದ್ಗುಣ ದೇವಾ ॥ 4 ॥
ಆದಿತಾಳ
ಮಿಗಿಲಾದ ದೈವಗಳು ಯುಗಳ ಕರಗಳನು
ಮುಗಿದು ದೂರದಲಿ ನೀನುಗುಳುವ ಬಾಯಿ ತೊಂಬ -
ಲಿಗೆ ಶಿರವಾಗಿ ತಮ್ಮ ಮೊಗವನು ನೋಡುತ್ತ ನ -
ಮಗೆ ಕೊಡುವನೋ ನಿಮಗೆನೀವೆನೆನುತಲಿ
ಜಗುಳಿ ಪೋಗದೇ ಮನದೆಗಿಯದೆ ಸೋತಗಾರು
ಯುಗ ಯುಗಾಂತರಕೆ ಮರುಗಿ ಮರುಳಾಗುವರು
ಯುಗವರ್ತನಾಮ ಚನ್ನ ವಿಜಯವಿಟ್ಠಲ ರನ್ನ
ಹಗಲಿರುಳು ಅರ್ಚಿಸೆ ನಿನ್ನುಗುರು ಕಾಣಲಳವೇ ॥ 5 ॥
ಜತೆ
ಯಾತರಿಂದಲಿ ನಿನ್ನ ಒಲಿಸಿಕೊಳಬಲ್ಲೆನೆ
ಧಾತಾರುತ್ತಮ ನಾಮಾ ವಿಜಯವಿಟ್ಠಲ ಪೂರ್ವಿ ॥
****