ರಾಗ : ದೇಶ್
ಧೃವತಾಳ
ಅಚ್ಯುತ ಸುಳಿದ ಎನ್ನ ಕಣ್ಣ ಯವ್ವಾ
ಕಸ್ತೂರಿ ಮೃಗದಂತೆ ಘಮಘಮಿಸುತ್ತ
ಅನಂತ ಸುಳಿದಾ ಎನ್ನ ಕಣ್ಣ ಮುಂದೆ ಯವ್ವಾ
ಮೇರೆದಪ್ಪುತ ಏನಂಬೆ ಎನ್ನಪ್ಪುತ
ಗೋವಿಂದ ಸುಳಿದ ಎನ್ನ ಕಣ್ಣ ಮುಂದೆ ಯವ್ವಾ
ನಗುತ ನೋಡುತ ನುಡಿವುತ ಎನ್ನಪ್ಪುತ
ಮಾಧವ ಸುಳಿದ ಎನ್ನ ಕಣ್ಣ ಮುಂದೆ ಯವ್ವಾ
ಮನ್ಮಥ ಕೋಟಿ ಲಾವಣ್ಯನಂತೆ ಮೆರೆವ
ಗೋಪಾಲ ಸುಳಿದ ಎನ್ನ ಕಣ್ಣ ಮುಂದೆ ಯವ್ವಾ
ದಿನಕರ ಕೋಟಿ ತೇಜನಂತೆ ಹೊಳೆವುತ
ಎನ್ನ ಮನದುತ್ಸಹ ಸೂರೆಗೊಂಡನವ್ವಾ
ಉಮತೂರ ಅಜನಯ್ಯಾ ಪುರಂದರವಿಠ್ಠಲಾ ॥೧॥
ಮಟ್ಟತಾಳ
ಸುಳಿದರೆ ಸುಂಕವ ಕೊಂಬ ಪುಂಡಗಾರ
ಹರಿಯಲ್ಲದಾರು ಹೇಳದೆ ಎಲೆ ಕೆಳದಿ
ಉಮತೂರಜನಯ್ಯಾ ಪುರಂದರವಿಠ್ಠಲಾ ॥೨॥
ತ್ರಿವಿಡಿತಾಳ
ಮಧುರಪಟ್ಟಣ ರಾಯ ಬೀದಿಯಲ್ಲಿ ಇದ್ದ
ದಾಮ ಸುದಾಮರು ಕೈ ಹೊಯ್ದು ನಗಲು
ಚದುರಿಯ ಮಾಡಿ ಕುಬುಜಿಯ ಕೂಡಿದ ನಕ್ಕ
ಚದುರ ಸನ್ನೆ ನೋಟದಿ ನಗುತ ಆಕಿನ ಬ್ಯಾಟ
ಉಮತೂರಜನಯ್ಯಾ ಪುರಂದರವಿಠ್ಠಲಾ ॥೩॥
ಅಟ್ಟತಾಳ
ಆರ ಮಡಿಯನುಟ್ಟೆ ಆರ ಗಂಧವನಿಟ್ಟೆ
ಆರ ಪೂಗಳ ಮುಡಿದೆ ಆರ ರಾಜ್ಯವ
ನಾರಿಗಿತ್ತು ಮೆರೆದೆ ದೇವ ಆರ ಪೂಗಳ ಮುಡಿದೆ
ಬಲ್ಲಿದರಿಗೆ ಬಟ್ಟಿಸೆ ಸಾರವೆಂಬಂತೆ ಉಮ-
ತೂರ ಅಜನಯ್ಯಾ ಪುರಂದರವಿಠ್ಠಲಾ ॥೪॥
ಆದಿತಾಳ
ಕಂಬು ಕೊಳಲು ತುತ್ತೂರಿ ಮವುರಿಗಳು
ಭೊಂ ಭೊಂ ಭೊಂ ಭೊಂ ಭೋರೆನುತ
ಸ ರಿ ಗ ಮ ಪ ದ ನಿ ಸ ತುತ್ತುರೆ ಎನುತ
ಝಂ ಝಂ ಝಂ ಝಂ ಝಣಿಲೆನುತ
ಮಧುರಿಯೊಳಗೆ ಕೋಲಾಹಲ ಮಾಡಿ ಮುಸುಕಲು
ಭೊಂ ಭೊಂ ಭೊಂ ಭೊಂ ಭೋರೆನುತ
ಉಮತೂರು ಅಜನಯ್ಯಾನೆ ಪುರಂದರವಿಠ್ಠಲ
ಝಂ ಝಂ ಝಂ ಝಂ ಝಣರೆನುತ ॥೫॥
ಜತೆ
ಅಸುರರ ಸಂಹರಿಸಿ ಸುರರ ಪಾಲಿಪನಮ್ಮ
ಉಮತೂರ ಅಜನಯ್ಯಾ ಪುರಂದರವಿಠ್ಠಲಾ॥೬॥
*******
ಉಮತೂರು ಮೈಸೂರು ಜಿಲ್ಲೆಯ ಚಾಮರಾಜನಗರದಲ್ಲಿದ್ದ ಊರು. ಈಗ ಉಮ್ಮತ್ತೂರು ಎಂದೇ ಕರಿತಾರೆ. ಆಗಿನ ಕಾಲದ ವಿಜಯನಗರ ಸಾಮ್ರಾಜ್ಯದ ರಾಜಧಾನಿಯೂ ಆಗಿತ್ತು ..
ಶ್ರೀಮಚ್ಚಂದ್ರಿಕಾಚಾರ್ಯರ ಜೊತೆ ಶ್ರೀಮತ್ಪುರಂದರದಾಸಾರ್ಯರು, ಶ್ರೀ ಕನಕದಾಸಾರ್ಯರು ಎಲ್ಲ ಶಿಷ್ಯರು ಓಡಾಡಿದ ಜಾಗ..
ರಂಗನಾಥ ದೇವರು ಅತ್ಯಂತ ಸುಂದರ ಮೂರ್ತಿ.. 🙏🏽
https://raocollectionssongs.blogspot.com/2020/11/purandara-vittala-ankita-suladi-achyuta.html