ಬಂದ ಬಂದಾ ಕದರೂರಿಂದ ನಿಂದಾ ಪ.
ಬಂದ ಕದರೂರಿಂದ ಕರಿಗಿರಿ
ಎಂದು ಕರೆಸುವ ಪುಣ್ಯಕ್ಷೇತ್ರಕೆ
ತಂದೆ ಮುದ್ದುಮೋಹನ್ನ ಗುರುಗಳು
ತಂದು ಸ್ಥಾಪಿಸೆ ತಂದೆ ಹನುಮನು ಅ.ಪ.
ವ್ಯಾಸತೀರ್ಥರು ಸ್ಥಾಪಿಸಿದ ಶ್ರೀ
ದಾಸಕೂಟದಿ ಉದಿಸಿದಂಥಾ
ವಾಸುದೇವನ ಭಕ್ತವಂಶದಿ
ಲೇಸುಮತಿಯಿಂ ಜನಿಸಿ ಭಕ್ತರ
ಆಸೆಗಳ ಪೂರೈಸುತಲಿ ಬಹು
ತೋಷದಂಕಿತಗಳಿತ್ತು
ನಾಶರಹಿತನ ಭಕ್ತರೆನಿಸಿದ
ದಾಸವರ್ಯರ ಮಂದಿರಕೆ ತಾ 1
ಶಾಲಿವಾಹನ ಶಕವು ಸಾವಿರ
ಮೇಲೆ ಶತ ಎಂಟರವತ್ತೊಂದು
ಕಾಲ ಫಾಲ್ಗುಣ ಕೃಷ್ಣ ಪಂಚಮಿ
ಓಲೈಸುವ ಪ್ರಮಾಥಿ ವತ್ಸರ
ಶೀಲ ಗುರುವಾಸರದಿ ಬುಧರ
ಮೇಳದಲಿ ವೇದೋಕ್ತದಿಂದಲಿ
ಶೀಲ ಶ್ರೀ ಕೃಷ್ಣದಾಸತೀರ್ಥರು
ಲೀಲೆಯಿಂದ ಪ್ರತಿಷ್ಟಿಸಲು ತಾ 2
ರಾಮದೂತ ಶ್ರೀ ಹನುಮ ಬಂದನು
ಭೀಮ ಬಲ ವಿಕ್ರಮನು ಬಂದನು
ಶ್ರೀ ಮದಾನಂದತೀರ್ಥ ಬಂದನು
ಪ್ರೇಮಭಕ್ತರ ಪೊರೆವ ಬಂದನು
ಸ್ವಾಮಿಗೋಪಾಲಕೃಷ್ಣ ವಿಠಲನ
ಪ್ರೇಮಭಕ್ತನು ದಾಸ ಭವನಕೆ 3
****