..ಶ್ರೀ ಪುರಂದರದಾಸಾರ್ಯ ವಿರಚಿತ
ಕುಮಾರವ್ಯಾಸರು ಮನೆಗೆ ಬಂದಾಗ್ಗೆ ಅವರಂತರ್ಗತ ಗದುಗಿನ ವೀರನಾರಾಯಣ ಸ್ತೋತ್ರ ಸುಳಾದಿ
ರಾಗ : ಮುಖಾರಿ
ಧೃವತಾಳ
ಹರಿಶರಣರೆನ್ನ ಮನೆಗೆ ಬಂದೆ ಮನೆ ಪಾವನವಾಯಿತು
ಹರಿಶರಣರೆನ್ನ ಕೂಡೆ ಮಾತಾಡಲು ತನು ಪಾವನವಾಯಿತು
ಹರಿಶರಣರೆನ್ನ ಮನೆಗೆ ಬಂದರೆ ಎನ್ನ ಇಪ್ಪತ್ತೊಂದು
ಕುಲ ಪಾವನವಾಯಿತು
ಹರಿಶರಣರೆನಗೆ ಗತಿ ಹರಿಶರಣರೆನಗೆ ದೆಶೆ
ಪುರಂದರವಿಠ್ಠಲ ಗದುಗಿನ ವೀರನಾರಾಯಣ ॥೧॥
ಮಟ್ಟತಾಳ
ಭಾರತ ಆಗಾಮಿಯ ಗೋಚರನೆಂದು ವಿ-
ಚಾರಿಸೆ ಮನುಜರಿಗೆ ಗೋಚರನಪ್ಪಂತೆ
ವೀರನಾರಾಯಣ ನೀ ಕವಿ ಎಂದೆನಿಸಿಕೊಂಡೆ
ಶಿಕಾರಪುರ ವ್ಯಾಸನೆನಿಸಿದೆ
ಸಕೃತೆನ್ನ ಸಿರಿ ಪುರಂದರವಿಠ್ಠಲ ಗದುಗಿನ
ವೀರನಾರಾಯಣ ನಿನಗೇನು ಪಿರಿಯವೋ॥೨॥
ರೂಪಕತಾಳ
ಬದಿರಿಕಾಶ್ರಮದೊಳಿದ್ದು
ಬಾದರಾಯಣನೆಂದೆನಿಸಿಕೊಂಬಂತೆ
ಗದುಗೆಂಬ ಪುರದೊಳಿದ್ದು ಗದುಗಿನ
ವೀರನಾರಾಯಣ ಸ್ವಾಮಿ
ತ್ರಿಭುವನೇಶ ಪುರಂದರವಿಠ್ಠಲ ॥೩॥
ಝಂಪೆತಾಳ
ಯದುಕುಲದಲುದಿಸಿ ಗೋಪಾಲರ ಕೂಡಾಡಿ
ಗದುಗನಾಡಿ ಆಡಿಯಾಡಿದಂದಿಂದಾ
ಸದುಭಕುತಪ್ರಿಯ ಪುರಂದರವಿಠ್ಠಲ
ಗದುಗಿನ ವೀರನಾರಾಯಣ ಸ್ವಾಮಿ ॥೪॥
ತ್ರಿಪುಟತಾಳ
ತ್ರಿಭುವನವ ಸಂಹರಿಸಿ ನಿನಗೆ ಹೊದ್ದಿಕ್ಕಿಲ್ಲದ ಕಾರಣ
ವಿಭೂತಿಯೊಳಗಣ ಗದುಗ ಗಾದೆ ಗದುಗಿನ
ವೀರನಾರಾಯಣಸ್ವಾಮಿ ಪುರಂದರವಿಠ್ಠಲ ॥೫॥
ಅಟ್ಟತಾಳ
ಭಾರತ ಮಲ್ಲ ಭೀಷ್ಮನೆಂದೆಂಬರು
ಭಾರತ ಮಲ್ಲ ಅರ್ಜುನನೆಂದೆಂಬರು
ಭಾರತ ಮಲ್ಲ ಕರ್ಣನೆಂದೆಂಬರು
ಭಾರತ ಮಲ್ಲರಿವರ್ಯಾರಲ್ಲ
ಭಾರತ ಮಲ್ಲ ಪುರಂದರವಿಠ್ಠಲ
ಗದುಗಿನ ವೀರ ನಾರಾಯಣಸ್ವಾಮಿ॥೬॥
ಏಕತಾಳ
ಭೂ ಭಾರವ ನಿಳುಹಿ ಅಜಭವ ಇಂದ್ರಾದಿಗಳಿಗೆ
ಶೋಭವನಿತ್ತೆ ಈ ಬುಧ ಜನರಿಗೆ
ಶ್ರೀ ಭೂಸುರರಿಗೆ ಶೋಭನವನಿತ್ತೆ
ಶ್ರೀ ಪುರಂದರವಿಠ್ಠಲ ಗದುಗಿನ ವೀರನಾರಾಯಣ
ನಿನಗೇನು ಪಿರಿಯವೋ ಶೋಭನವನಿತ್ತೆ॥೭॥
ಜತೆ
ಪದುಮನಾಭ ಸಿರಿ ಪುರಂದರವಿಠ್ಠಲ
ಗದುಗಿನ ವೀರನಾರಾಯಣಸ್ವಾಮಿ॥೮॥
***