ಕಾಖಂಡಕಿ ಶ್ರೀ ಮಹಿಪತಿರಾಯರು
ತಾನಾರು ತನುವು ಆರು ತಿಳಿದು ನೋಡಿ ಪ
ತಾನಾರು ತನುವಾರು ತನ್ನೊಳೂ ತಾನೆ ತಿಳಿದು ನೋಡಿ ಘನ ಬ್ರಹ್ಮದೊಳು ಮನ ಬೆರೆದಾತ ಶರಣನು 1
ಕಾಯದೊಳಿಹ್ಯ ಕಳವಳಗಳೆದು ಮಾಯ ಮೋಹದ ಮಲಗಳ ತೊಳೆದು ದೇಹ ವಿದೇಹವಾದಾತ ಶರಣನು 2
ಭ್ರಾಂತಿಯ ಅಭಾವಗಡಿದು ನೀತಿ ಸುಪಥದ ಮಾರ್ಗವ ಹಿಡಿದು ಜ್ಯೋತಿ ಸ್ವರೂಪವ ಕಂಡಾತ ಶರಣನು 3
ಭಾವ ಭಕ್ತಿಯ ಕೀಲವ ತಿಳಿದು ಹ್ಯಾವ ಹೆಮ್ಮೆಯ ಮೂಲವನಳಿದು ಜೀವ ಶಿಶುವು ತಿಳಿದಾತ ಶರಣನು4
ಜಾತಿಯ ಕುಲಗಳ ಭೇದವ ತಿಳಿದು ಯಾತನೆ ದೇಹದ ಸಂಗವನಳಿದು ಮಾತಿನ ಮೂಲವ ತಿಳಿದಾತ ಶರಣನು 5
ಸೋಹ್ಯ ಸೊನ್ನೆಯ ಸೂತ್ರವಿಡಿದು ಲಯ ಲಕ್ಷಿಯ ಮುದ್ರೆಯ ಜಡಿದು ದ್ಯೇಯ ಧ್ಯಾತವ ತಿಳಿದಾತ ಶರಣನು 6
ನಾದದಿಂದ ಕಳೆಯ ಮುಟ್ಟಿ ಸಾಧಿಸಿ ಉನ್ಮನ ಮುದ್ರೆಯ ಮೆಟ್ಟಿ ಆದಿತತ್ವದ ಗತಿ ತಿಳಿದಾತ ಶರಣನು 7
ಆಧಾರ ದೃಢದಿಂದ ಅರಹುತನಾಗಿ ಮಧ್ಯ ಮುಪ್ಪರದಲಿ ಸ್ಥಿತಿವಾಗಿ ಊಧ್ರ್ವ ಮಂಡಲಗತಿ ಬೆರೆದಾತ ಶರಣನು 8
ಬಾಹ್ಯಾಂತ್ರ ಪರಿಪೂರ್ಣ ಘನಮಯಗಂಡು ಸಾಯೋಜ್ಯ ಸದ್ಗತಿ ಸವಿಸುಖನುಂಡು ಮಹಿಪತಿ ಗುರುಮನಗಂಡಾತ ಶರಣನು 9
****