Audio by Mrs. Nandini Sripad
ಶ್ರೀ ತಂದೆವರದಗೋಪಾಲವಿಠಲ ದಾಸರ ರಚನೆ ಶ್ರೀ ಅಪ್ಪಾವರ ಸುಳಾದಿ
ರಾಗ ಯಮನ್ ಕಲ್ಯಾಣಿ
ಧ್ರುವತಾಳ
ಮನವೇ ಲಾಲಿಸಿ ಕೇಳೊ ಬಿನ್ನೈಸುವೆನು ನಿನಗೆ
ಚೆನ್ನಾಗಿ ಒಡೆಯಾನಾ ಪಾದದಲ್ಲಿ ಭಕುತಿ -
ಯನ್ನೆ ಮಾಡಿ ಮಮತೆ ವಿಷಯಾದಿ ಅಹಂಕಾರ ಬುದ್ಧಿ -
ಯನ್ನೇ ಬಿಸಾಟಿ ದೃಢವಾಗಿ ಧೈರ್ಯದಿಂದ
ಇದೇ ಸಾಧನವೆಂದು ಗುಪಿತಾದಲ್ಲಿ ಸಂಚರಿಸೆ
ಪಾಣಿಯ ಪಿಡಿದು ತಾ ವಾಣಿ ಅರಸ
ನಿರ್ಮಾಣವ ತೋರಿಸುವ ಪ್ರಾಣದೇವರು
ಪ್ರಾಣವಪ್ಪಿಸಿ ಸಾಕುವ ಬಿಡದೆ ಪಂಚ -
ಪ್ರಾಣಾತ್ಮಕನಾದ ತಂದೆವರದಗೋಪಾಲವಿಠಲ
ರೇಯಾನ ಭಜಿಸು ಬಿಡದೆ || 1 ||
ಮಟ್ಟತಾಳ
ಆವ ಜನುಮದ ಪುಣ್ಯ ಫಲಿಸೀತು ಇಂದು ನಿನಗೆ
ಕಾವುತನಾಗಿದ್ದೆ ಕೃಷ್ಣಾರ್ಯರ ಕಂಡೆ
ಈ ಮುನಿಯು ನಿಜವಾಗಿ ದೇವಾಂಶರಾರು ಎಂಬೊ
ಜ್ಞಾನ ಪುಟ್ಟಿದುದಕೆ ಸಾಧಿಸಿಕೋ ನಿನಗೆ ಇದೇ
ಘನ್ನವಾದ ಸಾಧನವೆಂದು ತಿಳಿದು ನಿನ್ನಿಂದ
ನೀನೇ ಹಿಗ್ಗಿ ಕುಗ್ಗಾದೀರು ಮಗ್ಗುಲೊಳಗಿದ್ದ
ಮಧ್ವದ್ವೇಷಿ ಬಂದು ಮದ್ದು ಹಾಕಿ ಮಣಿಸೂವ
ಮಧ್ವರಾಯರ ಪಾದಪದ್ಮದಲ್ಲಿ ಬುದ್ಧಿಯನಿಟ್ಟರೆ
ಬಾಧೆಯ ತಪ್ಪಿಸಿ ಉದ್ಧರಿಸುವ ಮುದ್ದು ಮುಖದ
ತಂದೆವರದಗೋಪಾಲವಿಠಲ ರೇಯಾನ ಒಲಿಸು ಬಿಡದೆ || 2 ||
ತ್ರಿಪುಟತಾಳ
ಅನಾದಿಕಾಲದಿಂದ ನಿಜ ಗುರುರಾಯನು
ನಿನ್ನೊಳಿದ್ದು ಜನಿಸಿ ಬಂದ ಸಾಧನ ಬಿಟ್ಟು
ಸುಖದುಃಖ ಜನುಮದ ಸಂಸಾರದೊಳಗೆ ಬಿದ್ದು
ಬಾಯ್ಬಿಡುವಿ ಕಂಡ್ಯಾ
ಆ ಗುರುರಾಯರ ಮೂರುತಿ ನಿನ್ನೊಳು
ನೋಡುತ್ತ ಪಾಡುತ್ತ ಸುಖಿಯಾಗಿ ಸಕಲ
ಕರ್ಮಗಳಾಚರಿಸಿ ತದ್ವಾರ ನವನಿಧಿ
ರಾಜನ ಚರಣಕ್ಕೆ ಆರೋಪಿಸೆ
ಕೈಗೊಂಡು ಸಲಹುವ ಸುಂದರ ಮೂರುತಿ
ತಂದೆವರದಗೋಪಾಲವಿಠ್ಠಲರೇಯಾನ ನಿಲ್ಲಿಸು ಬಿಡದೇ || 3 ||
ಅಟ್ಟತಾಳ
ಅವರ ಬಳಿಯಲ್ಲಿ ಪೋಗಿ ನೀನು ನಿನ್ನದು ಎನ್ನದಿರು ಕಂಡ್ಯಾ
ಮುನ್ನ ನಿನಗೆ ಘನ್ನವಾದ ವೈರಾಗ್ಯ ಪುಟ್ಟುವಾದು
ಇನ್ನು ನೀನು ಮನದಾಶೆ ಎಂಬ ಪಿಶಾಚೀಗೆ
ಒಳಗಾಗಿ ಏನಾಗಿಹುದೋ
ನಿನ್ನ ಘಾಸಿಯನರಿತು ಕ್ಲೇಶಪಾಶಗಳೀಡ್ಯಾಡಿ
ಪಶುಪತಿಪಿತನ ಪಡೆದ ತಂದೆವರದಗೋಪಾಲವಿಠಲ
ರೇಯಾನ ಒಲಿಸೋ ಬಿಡದೆ || 4 ||
ಆದಿತಾಳ
ಸದಾಕಾಲದಲ್ಲಿ ಇವರ ಸ್ಮರಣೆ ಮಾಡಿ ಧ್ಯಾನಕೆ
ತಂದು ಯೋಗಾದಿ ನೋಡುವಾದೆ ಮಹಾ ನಿಜ -
ವಾದ ಭಕುತಿ ಇವರ ಪಾದಸ್ಮರಣೆ
ಮಾಡದ ಮನುಜರಿಗೆ ಶ್ರೀಪದ್ಮರಮಣನು
ಸೃಷ್ಟಿಸುವ ಆ ಮನುಜಗೋಸುಗ ನರಕ
ನರಕಾದೊಳಗಿಟ್ಟು ಕುಟ್ಟುವ ಕ್ಷಣ ಬಿಡದೆ
ಎಷ್ಟು ಮಾಡಿದರೇನು ಉತ್ತುಮೋತ್ತಮರೆಲ್ಲ
ಸೋತ್ತುಮರಾಯರ ದ್ರೋಹಮಾಡಿ
ತುತ್ತುತುತ್ತೀಗೆ ಹಾಕಿಸಿಕೊಂಡು ಕುತ್ತೀಗೆ ಕಟ್ಟಿ
ನಿತ್ಯಾದಲ್ಲಿ ಸ್ಮರಣೆಯ ಮಾಡಿದರೆ
ನೃತ್ಯವಾಗೈಸುವ ಭಕ್ತವತ್ಸಲ
ತಂದೆವರದಗೋಪಾಲವಿಠಲರೇಯನ ನಿಲ್ಲಿಸೋ ಬಿಡದೆ || 5 ||
ಜತೆ
ನವವಿಧಭಕುತಿಯನ್ನೇ ಅರಿತು ಗುರುಪೂಜೆ ಮಾಡಲು
ತದ್ವಾರಾ ಒಲಿವ ತಂದೆವರದಗೋಪಾಲವಿಠ್ಠಲ ||
**********