..
kruti by Srida Vittala Dasaru Karjagi Dasappa
ಯಾತಕಿನ್ನಾಥನೆಂಬುವದೂ ಕರುಣಾಳು ಜಗ -
ನ್ನಾಥದಾಸರ ಸೇರಿಕೊಂಬುವದೂ ಪ
ಭೀತಕರ ಬಹು ಜನ್ಮಕೃತ ಮಹಾ
ಪಾತಕಾದ್ರಿಗಳನು ಭೇದಿಸಿ
ಮಾತುಳಾಂತಕನಂಘ್ರಿ ಕುಮುದ
ನೀತ ಭಕ್ತಿಯ ನೀಡಿ ಸಲಹುವ ಅ.ಪ.
ಘೋರಸಂಸಾರ ಪಾರಾವಾರ ದಾಟಿಸುವಾ ಲಕ್ಷ್ಮೀ
ನಾರಸಿಂಹನ ನಿತ್ಯ ಪೂಜಾ ಭಾರ ವಹಿಸಿರುವಾ
ಮೂರು ಲೋಕೋದ್ಧಾರ ದುರಿತೌಘಾರಿ ಕೃಷ್ಣ ಕಥಾಮೃತಾಬ್ಧಿಯ
ಸಾರ ತೆಗೆದು ಬೀರಿ ಕರುಣವ ಬೀರಿ ಸುಜನೋದ್ಧಾರ ಮಾಡಿದ 1
ವೇದಶಾಸ್ತ್ರ ಪುರಾಣವೆಲ್ಲವ ತೋರಲಿಟ್ಟಿಹರು ಬಹು ವಿಧ-
ವಾದ ದುರ್ಮತವಾದಿಗಳ ಮಾರ್ಗದಿ ಕಟ್ಟಿಹರೊ
ಮೋದತೀರ್ಥ ಮತಾನುಗತ ಸದ್ವಾದಪೂರ್ಣ ಪರಮಾತ್ಮದರ್ಶನ
ಶ್ರೀದನೊಲಿದು ಕೃಪಾಕಟಾಕ್ಷ ಪ್ರಸಾದ ಒಲಿವ ವಿನೋದಗೊಳಿಸುತ2
ಶ್ರೀರಮಾಪತಿ ಸರ್ವಸುಗುಣಾಧಾರ ದಯದಿಂದಾ
ಮುರಲಾ ಸೇರಿ ಬರುವದು ಸರ್ವಸಂಪತ್ಪಾರವಾನಂದ
ಕಾರುಣಿಕತನದಿಂದಲಿಂತುಪಕಾರವ ಮಾಡಿ ದೀನ ಜನರಿಗೆ
ಧೀರ ಶ್ರೀದವಿಠಲನ ತೋರಿದರು ನಿಜಭಕ್ತಜನರಿಗೆ 3
***