..ಜಯತೀರ್ಥರ ಸ್ಮರಣೆ
ಶ್ರೀಮತಿ ಸುಶೀಲ ಬಾಯಿ ಅಮ್ಮ (ಮಧ್ವೇಶ ಕೃಷ್ಣ ಅಂಕಿತ ) ಅವರ ಕೃತಿ
ಎಂಥ ವೈಭವ ನೋಡೆ ಮಳಖೇಡ ಕ್ಷೇತ್ರದಿ
ಇಂಥಾ ಯತಿಗಳ ದರುಶನವು ಸಂತಸವ ತರುವದೆಂಥಾ ವೈಭ
ವವು ನೋಡೆ||ಪಲ್ಲ||
ಹಾದೀಗ್ಹಂದರ ಹಾಕಿ
ಬೀದಿ ತೋರಣಕಟ್ಟಿ
ಸಾಧು ಜನರೆಲ್ಲ ಒಡಗೂಡಿ ಮಳಖೇಡದಲ್ಲಿ
ಮೋದದಿ ಭಜಿಸುವರೆಷ್ಟೊ
ವೇದ ಓದುವರೆಷ್ಟೊ
ಮಾಧವನ ಮನಸಾರ ನೆನೆಯುತ್ತ ಕುಣಿಯುವರೆಷ್ಟೊ||೧||
ಗುಂಪು ಗುಂಪಿಲಿ ಜನರು
ತಂಪಾಗಿ ಬರುವರು
ಇಂಪಾಗಿ ಗಾನ ಮಾಡುತಲಿ ಮಳಖೇಡದಲ್ಲಿ
ಸಂಪಾಗಿ ಕೇಳುವ
ಮಂತ್ರದ ಮಹಿಮೆಯ
ಶಾಂತ ಚಿತ್ತದಲಿ ಆಲಿಸುತ ಕುಳಿತವರೆಷ್ಟೊ||೨||
ಸಾಗಿ ಬರುತಾಲಿದ್ದು
ಬಾಗೀ ವಂದನೆ ಮಾಡಿ
ಕಾಗಿನಿ ತಟದ ಯತಿಗಳಿಗೆ ಬಹು ಭಕುತಿಯಿಂದ
ಯೋಗಿ ಟಿಕಾರ್ಯರ ದಾಸ
ನಾಗುವ ಭಾಗ್ಯ
ಬ್ಯಾಗ ಬರಲಿಂದು ನಮಗೆಂದು ಬೇಡುವರೆಷ್ಟೊ||೩||
ಬಂಗಾರ ಮಂಟಪದಿ
ಶೃಂಗಾರವಾದಂಥ
ರಂಗು ಮಾಣಿಕ್ಯ ಭರಣಿಟ್ಟ ಮೂಲ ರಾಮನಿಗೆ
ಮಂಗಳ ಮಹಿಮನ
ಕಂಗೊಳಿಸುವ ಸ್ವಚ್ಛ
ಬಂಗಾರ ಭರಣಕಾಂತಿಯು ಹೊಳೆಯುತಲಿಹುದು||೪||
ನಿತ್ಯ ತೃಪ್ತನಿಗೆ
ಸತ್ಯಾತ್ಮತೀರ್ಥರು
ಅತ್ಯಂತ ವಿನಯದಲಿ ಪೂಜಿಸುತ ಮಳಖೇಡದಲ್ಲಿ
ಸುತ್ತಿ ಬಂದಿರುವಂಥ
ಭಕ್ತ ಜನರಿಗೆ ಎಲ್ಲ
ಮಧ್ವೇಶಕೃಷ್ಣನ ದಯದಿಂದ ಮಂತ್ರಾಕ್ಷತೆಯ ನೀಡಿ||೫||
***