ರಾಗ ಚಾರುಕೇಶಿ
Audio by Vidwan Sumukh Moudgalya
ಅಳಿಗಿರಿವಾಸನ ದೇವರ ಚರಣ ಮಹಾತ್ಮೆ ಸುಳಾದಿ
ಹದಿನಾಲ್ಕು ಲೋಕದಲಿ ಪೂಜೆಗೊಂಬ ಚರಣ
ಸುಧಾಕರ ನಂದದಲಿ ಪೊಳೆವ ಸುಂದರ ಚರಣ
ಪದೊ ಪದಿಗೆ ನಾರದನ ವದನದಿ ನೆನೆವ ಚರಣ
ಮೃದುವಾದ ದಿವ್ಯ ಚರಣ
ಕದನದಲಿ ನರನ ರಥ ಮುಂಬಿನಲ್ಲಿದ್ದ ಚರಣ
ಅಧೋ ಭುವನಕಾಶ್ರಯವಾಗಿದ್ದ ಚರಣ
ನಿದುರಶನವಾಗಿ ನಿತ್ಯ ತೋರುವ ಚರಣ
ಸದಮಲವಾದ ಚರಣ
ಚದುರ ಅಳಗಿರಿ ತಿಮ್ಮಾ ವಿಜಯವಿಠಲ ಸಾರ -
ಹೃದಯರಿಗೆ ವೊಲಿದು ಸಂಪದವಿ ಕೊಡುವ ಚರಣ ॥ 1 ॥
ಮಟ್ಟತಾಳ
ಸನಕಸನಂದರ ಮನಕೆ ಪೊಳೆವ ಚರಣ
ದನುಜಕುಲ ಸಂಹರಣ ಮಾಡುವ ಚರಣ
ಕನಕಮಯವಾಗಿ ಪೋಲುವ ಸಿರಿ ಚರಣ
ಘನ ವೃಷಭಾದ್ರಿಯಲಿನಿಂದ ವಿಜಯವಿಠಲ
ಅನುಗಾಲ ಎನ್ನ ಸಾಕುವ ಶುಭಚರಣ ॥ 2 ॥
ತ್ರಿವಿಡಿತಾಳ
ಗಗನ ಪಾತಾಳ ಭೂ ವ್ಯಾಪಿಸಿದ ಚರಣ
ಅಗಣಿತ ಗುಣದಿಂದವೊಪ್ಪುವ ನಿಜಚರಣ
ಮೃಗಮದಾದಿ ಯಲ್ಲಿ ಪೂಜೆಗೊಂಬುವ ಚರಣ
ಅಘಪರ್ವತಕ್ಕೆ ಅಶನಿಯೆನಿಸುವ ಚರಣ
ಜಗದೇವ ಅಳಗಿರಿ ತಿಮ್ಮ ವೃಷಭಾದ್ರಿ
ನಗರಾವಾಸ ವಿಜಯವಿಠಲ ದೇವನ ಚರಣ ॥ 3 ॥
ಅಟ್ಟತಾಳ
ಎಂಥವರನ್ನ ಚಂಚಲಗೊಳಿಸುವ ಚರಣ
ಸಂತರಿಗೊಲಿದು ಮೇಲೆ ಬಿಡದ ಚರಣ
ಅಂತಕನಾಳಿಗೆ ಶೂಲವಾದ ಚರಣ
ಚಿಂತನೆ ಮಾಡಲು ನಿಲಕುವ ಚರಣ
ಸಂತತ ವೃಷಭಾದ್ರಿ ಅಳಗಿರಿ ತಿರ್ಮಲ
ಶಾಂತ ವಿಜಯವಿಠಲನ್ನ ಶ್ರೀ ಚರಣ ॥ 4 ॥
ಆದಿತಾಳ
ಮುನಿಪ ಮಂಡೂಕಗೆ ವರವಿತ್ತಾದೀ ಚರಣ
ಜನಪ ಪುಣ್ಯನಿಧಿಗೆ ವೊಲಿದ ಚರಣ
ಪ್ರಣುತಾರ್ತಿಹರನಾದ ಬಲು ಪಾವನ ಚರಣ
ಪ್ರಣವ ಪೂರ್ವಕದಿಂದ ಪರಿಪೂರ್ಣವಾದ ಚರಣ
ಹನುಮವಂದಿತವಾದ ವಜ್ರರೇಖಿಯ ಚರಣ
ಘನವರ್ನದಂತೆ ನಿತ್ಯರಂಜಿಸುವ ಚರಣ
ಮಣಿಭೂಷಣವಾದ ವೃಷಭಾದ್ರಿ ಶೈಲವಾಸ
ಎನಗೊಲಿದ ವಿಜಯವಿಠಲ ತಿಮ್ಮನ ಚರಣ ॥ 5 ॥
ಜತೆ
ಪಾಂಡ್ಯರಾಯಗೆ ವೊಲಿದ ಪರಮಪಾವನ ಚರಣ
ಚಂಡಕೋಟಿತೇಜ ವಿಜಯವಿಠಲನ ಚರಣ ॥
***