Audio by Mrs. Nandini Sripad
ಶ್ರೀ ವಿಜಯದಾಸಾರ್ಯ ವಿರಚಿತ ಪೈತೃಕ ಸುಳಾದಿ
( ಪಿತೃಗಳ ಶ್ರಾದ್ಧ ವಿಚಾರಾಂಶ- ಪಿತೃಋಣಮೋಚನ ಕರ್ಮದಿಂದ ಬಿಡುಗಡೆ. ಜೀವ ಜೀವ ಬೇಧ ಜ್ಞಾನ ದ್ವಾರಾ - ಮುಕ್ತಿ )
ರಾಗ ಶಂಕರಾಭರಣ
ಧ್ರುವತಾಳ
ಪೈತೃಕ ವಾರದಲ್ಲಿ ದೇವಾಂಶಿ ಅಂಶಿಗಳ
ಸ್ತೋತ್ರವ ನಾಲ್ಕು ಯುಗದವರ ಸೇವಾ
ಸೂತ್ರನಾಮಕ ಪ್ರಾಣ ಮೊದಲಾದ ದೇವತಿಗಳ
ಚಿತ್ರ ವಿಚಿತ್ರ ಮಹಿಮೆ ತಿಳಿದು ತಿಳಿದು
ಪುತ್ರ ಪೌತ್ರ ಪ್ರಪೌತ್ರ ವಂಶಾಭಿವೃದ್ಧಿಯಿಂದ
ಗಾತ್ರ ನಿರ್ಮಳರಾಗಿ ಬಾಳುವರೋ
ಗೋತ್ರ ನೂರೊಂದು ನಾನಾ ಜನುಮ ಧರಿಸಿದ ವೀತಿ -
ಹೋತ್ರಾದಿ ಲೋಕದಲ್ಲಿ ಇದ್ದ ಜನರು
ಪಾತ್ರ ಸತ್ಪಾತ್ರರಾಗಿ ತೃಪ್ತಿಯಾಗುವರು ಕಾ -
ಲತ್ರಯ ಬಿಡದಲೆ ಊರ್ಧ್ವಗತಿಗೆ
ನೇತ್ರುತ್ಸಾಹದಿಂದ ಸಾಗಿ ಸಾರುವರು ಸ -
ಗೋತ್ರರೊಡನೆ ಹರಿಯ ಕೊಂಡಾಡುತ
ಶ್ರೋತ್ರದಿಂದಲಿ ಇದು ಕೇಳಿದವನ ವಂಶ
ಕ್ಷೇತ್ರಾದಿಯಲ್ಲಿ ಇರಲು ಗತಿಗಭಿಮುಖ
ಧಾತ್ರಿಯೊಳಗೆ ಓರ್ವ ಜ್ಞಾನಿ ಪುಟ್ಟಲು ಮೇರು
ಗೋತ್ರ ಸಮತುಲ್ಯ ಪುಣ್ಯ ತಂದು ಕೊಡುವ
ಮಾತ್ರ ಕಾಲವಾದರು ನೆನೆಸಿ ನೆನೆಸಿ ಸುಹೃ -
ನ್ಮಿತ್ರನಾಗೆಲೋ ನಿನ್ನ ಬಾಂಧವರಿಗೆ
ಛತ್ರಚಾಮರ ನಾನಾ ಭೋಗದಿಂದಲಿ ಸ -
ರ್ವತ್ರ ಬಾಳುತಲಿಪ್ಪ ಜ್ಞಾನಿಯಾಗಿ
ರಾತ್ರಿಚಾರರು ಇವನ ಮುಟ್ಟಲಂಜುವರು ಇದ್ದ
ಪಾತ್ರಿ ಪಾತ್ರ ಪದಾರ್ಥ ಮೊದಲಾದವು
ಸೂತ್ರ ಮೀಟಿದಂತೆ ಸತ್ಪಥವಾಗುವದು
ಪಾತ್ರಾ ಭವಾಂಬುಧಿಗೆ ದಿವಿಜ ವ್ರಾತಾ
ನೇತ್ರತ್ರಯನ್ನ ಅವತಾರ ಆರಂಭಿಸಿ
ಮಾತ್ರಾ ಭೂತ ಕರ್ಮ ಜ್ಞಾನ ಲಿಂಗ
ಗಾತ್ರ ಷೋಡಶಕಳಾ ಕಾಲ ವೇದ ಶಾಸ್ತ್ರ ಪ -
ವಿತ್ರ ವಸ್ತು ಸಮಸ್ತ ಲೋಕಾವರಣಾ
ಈ ತ್ರಿಧಾಮಾ ಸಹಾಯದಲ್ಲಿದ್ದ ದೇವಾದಿಗಳ
ನೀ ತ್ರಾಣನಾಗಿ ಎಣಿಸಿ ಕೂಡಿಸು
ಯಾತ್ರ ಮಿಕ್ಕಾದ ಚೇಷ್ಟೆ ಹರಿಗೆ ಸಮರ್ಪಿಸಿ
ತ್ರಾತಾತ್ಮಾ ಎಂದು ಹಸ್ತ ಮುಗಿದು ಬಾಗಿ
ನೇತ್ರನಾಗಿ ಲೋಕಕ್ಕೆ ಇಪ್ಪನೋರ್ವನು ಸತಿ ಕ -
ಳತ್ರ ನಾಮಕನೋರ್ವ ವಸು ಓರ್ವನೋ
ಈ ತ್ರಿ ಬಗೆಯವರ ಅಂತರದಲ್ಲಿ ರೂ -
ಪತ್ರಯ ಎಣಿಸು ಪ್ರದ್ಯುಮ್ನಾದಿ ಮೂರ್ತಿ
ಅತ್ರಿ ನೇತ್ರೋದ್ಭವ ಕುಲ ವಿಜಯವಿಟ್ಠಲ
ಕ್ಷೇತ್ರಜ್ಞ ಸ್ತುತಿಗೆ ಮೆಚ್ಚಿ ಕುಲ ಉದ್ಧಾರ ಮಾಡುವ ॥1॥
ಮಟ್ಟತಾಳ
ಶುಚಿ ಮಾರ್ದವ ಸ್ವಾದ ರುಚಿ ಅಮೃತಸಾರಾ
ರಚನೆ ಮನೋಹರಾ
ಅಚಲ ಅವಿರೋಧ ಪಚನ ಶುಭ್ರವರ್ನ
ನಿಚಯ ಮಿಳಿತ ರಹಿತ ಪ್ರಚುರ ಪ್ರಚುರ ಸಮ -
ಸುಚರಿತ ಸರ್ವದಲಿ ಅಚಿರ ಕಾಲ ಪ್ರಾಪ್ತಿ
ಸಚರಾಚರ ಪಾಲಾ ವಿಜಯವಿಟ್ಠಲ ನಾನಾ
ಉಚಿತ ಧರ್ಮಗಳೆಲ್ಲಾ ವುಂಟವಗೆ ಮಾಳ್ಪಾ ॥ 2 ॥
ತ್ರಿವಿಡಿತಾಳ
ಹನುಮನ್ನ ಭೀಮ ಮಧ್ವ ಶುಕ ದುರ್ವಾಸ ಗುರು -
ತನುಜ ಅಶ್ವತ್ಥಾಮ ಲಕ್ಷ್ಮಣ ಬಲರಾಮ
ವನಚರ ವಾಲಿ ಅರ್ಜುನ; ಭರತ ಪ್ರದ್ಯುಮ್ನ
ಷಣ್ಮುಖ ಸಾಂಬ; ಶರ್ವೋತ್ತುಂಗ ; ಶತೃಘ್ನ
ಅನಿರುದ್ಧ; ತಾರಾ ಉದ್ಧವ ದ್ರೋಣಾಂಗದ ಸುಗ್ರೀ -
ವನು ಕರ್ನ , ಜಾಂಬುವಾನ್ನ ಧರ್ಮ ವಿದುರ ; ಶಂ -
ತನು ಸುಷೇಣ ಮಹಾಭಿಷಕ್, ನಾರದ ಭೃಗು
ಗುಣವಂತ ಲವ; ನೀಲ ದೃಷ್ಟದ್ಯುಮ್ನ ಭೀಷ್ಮ -
ಕನು ದುರ್ಮುಖ ಘಟೋತ್ಕಚ ಗಣಪ ಚಾರುದೇಷ್ಣ ,
ಎಣಿಸು ಕತ್ಥನ ಭಗದತ್ತ ವಿವಿಧ ಮೈಂದ -
ವನು , ನಕುಲ ಸಹದೇವ ; ಬಬ್ರುವಾಹನ
ಮನು ಶುಚಿ ಕೌಶಿಕ ಪ್ರಲ್ಹಾದ ಬಾಲ್ಹೀಕ
ಜನಪ , ಶರಭ , ವಸುದೇವ ದೇವಕಿ , ಗೋವ -
ರ್ಧನ ಪರ್ವತ , ನಂದಗೋಪ , ಗೋಕುಲ ವೃಂದಾ -
ವನ , ಗೋಪಿ ಗೋಪಾಲ, ಕಾಳಿಂದಿ ಮಧುರಾಪ -
ಟ್ಟಣ , ಶಕುನಿಜನಕ ಉಗ್ರಶೇನ ಅಕ್ರೂರ
ಘನ ಪರಾಕ್ರಮ ಭೀಷ್ಮ , ಸತ್ಯ , ಶ್ಯಮಂತಕ -
ಮಣಿ , ಕುಬ್ಜಿ , ಕೃತವರ್ಮ , ಸತ್ರಾಜಿತು, ಪಾಂಡು, ರು -
ಗ್ಮಿಣಿ , ಬಲಿ , ಭರತ , ಯಯಾತಿ , ಯದು ಸಾತ್ಯಕಿ
ಧನುರ್ಧಾರಿ ಅಭಿಮನ್ಯು , ಯುಯುತ್ಸು , ಸಂಜಯ
ಮುನಿವ್ಯಾಸ ಯೋಜನಗಂಧಿ , ಮಾದ್ರಿ ಕುಂತಿ
ಸನಕಾದಿ ಗಾಂಧಾರಿ ಕೃಪಾ ಕೃಪಿ ಪಾಂಚಾಲಿ
ತನುಜರೈವರು , ದ್ರುಪದ , ವಿರಾಟ , ಮಾದ್ರೇಶ
ಅನಿಮಿಷ ನದಿ , ಸರ್ವಪ್ರವಾಹ , ರೇವತಿ
ವನಧಿಸಪುತ , ನಾನಾದ್ವೀಪ , ಖಂಡ , ಕ್ಷೇತ್ರ
ವನ ಪರ್ವತ ಯಾಗ , ವರ್ಣಾಶ್ರಮ ಜಾತಿ
ಇನ ಚಂದ್ರಮ ವಂಶ ಪಾರಂಪರೆ ಗ್ರಹಿಸು
ವನ ಗೋಚರ ವಾನರ ಯದುವಂಶದಲಿ ಬಂದು
ಜನಿಸಿದ ಸ್ತ್ರೀಪುರುಷ ಇವರ ಈರ್ವಗೆ ತಿಳಿದು
ತೃಣವೆ ಮೊದಲು ಮಾಡಿ ಮುಕ್ತಿ ಯೋಗ್ಯರನಾ
ಇನಿತು ಬಿಡದೆ ಪಿತೃ ಪುಣ್ಯಕಾಲದಲ್ಲಿ ಯೋ -
ಚನೆ ಮಾಡಿ ಮತಿಯಿಂದ ಕೊಂಡಾಡಿದಾ ಭಕ್ತಿ
ಮನುಜನ್ನ ಸುಕೃತಕ್ಕೆ ಕಡೆಗಾಣೆ ಕಡೆಗಾಣೆ
ಗಣನೆ ಇಲ್ಲದ ಮಹಾಕುಲ ಉದ್ಧಾರ
ಧನಧಾನ್ಯ ವಿದ್ಯಾದ ವಿಜಯವಿಟ್ಠಲರೇಯ
ಕುಣಿ ಕುಣಿದಾಡುವ ಪಿತೃರೂಪಗಳಿಂದ ॥ 3 ॥
ಅಟ್ಟತಾಳ
ಮಲಿನ ವಸನ , ಮಾತು ಪುಶಿ ಪೇಳುವ , ನೀಚ
ಕಲಹ ಕಠಿಣೋಕ್ತ ಕಾಮುಕ ಚೋರ ಚಂ -
ಚಲ , ಚ್ಯಾಡಾ , ಜಲ್ಪ , ಧರ್ಮಧ್ವಜ , ದ್ವಿಜನಿಂದೆ
ಜಲವಾಹ , ಪಾಚಕ , ಕಾರ್ಷಿಕಾ , ಗಣತಜ್ಞ
ಕುಲಭ್ರಷ್ಟ , ಅನಾಚಾರಿ ಛುದ್ರ ಜೀವಹಿಂಸ
ಕೊಲೆಗಡಿಗ , ನಾನಾ ಧನಧಾನ್ಯ ರಸ ದು -
ರ್ಮಲ ಕ್ರಿಯಾ ವಿಕ್ರಯ , ಸಾರ್ಥಿಕ ಚಾರ್ವಾಕ
ಕೇವಲ ಹೀನಾಂಗ , ಚೆನ್ನಿಗಧರ , ಚುಲ್ಲಕಾ
ಹಳಿವಾದಿ , ವೃತದೂರ , ನಿತ್ಯಕರ್ಮ ಶೂನ್ಯ
ಮಲಗಿಪ್ಪ , ವಿಚಂಡ , ಊರು ಊರು ಸಂಚಾರಿ
ಬಲತ್ಕಾರ ಪ್ರತಿಗ್ರಹಾ , ಸ್ತ್ರೈಣ , ಪ್ರತಿಷ್ಠಹ , ಶ್ರಾದ್ಧಭೋಕ್ತ
ಗೋಳಕ , ದೇಶಾಂತರ , ಪರಿಚಿತ ರಹಿತ , ತ್ವಂ -
ಬಲು ಸರ್ವದಧಾರಿ , ಅಸ್ನಾಯಿ , ರೋಗಿಷ್ಟ
ಅಳಲುವ , ಇಂದ್ರಿಲೋಲುಪ್ತ , ಮಾರ್ಗವಿಶ್ರಾಂತ
ಹೊಲೆ ಕೋಪ ಸಂತಪ್ತ ಮದಮತ್ಸರಲೋಭಿ
ತಳಮಳ ನೆಲೆಗಳ್ಳ ಪರದಾರ ಸಾಲಿಗಾ ದಾಕ್ಷಣ್ಯ
ಹಲಬುವ ಹಂತಕ ಹಸಿವೆಗೆ ತೀವರ
ಸುಳಿದಾಡುವ , ಬಹುಜಠರ , ಜರಠ , ಬಾಲಾ
ಬಲಿ , ವೃಷಳಿ , ವಂಧ್ಯಾ , ಋತುವ್ಯಭಿಚಾರಿ , ಪೂ -
ಶ್ಚಲಿ ಗರ್ಭಿಣಿ , ದ್ವಯ ಭಾರ್ಯಳ ಭರ್ತಾ , ವ್ಯಾ -
ಕುಲ ಪ್ರತಿಕೂಲ , ಪತ್ನಿದೂರ , ದುಃಸಂಗ
ಮೆಲುವ ಅಯೋಗ್ಯಪದಾರ್ಥ , ನಪುಂಸಕ
ಘಳಿಗೆ ಪ್ರಾಹಾರಿಕ , ಪ್ರಾಪಂಚಾಸಕ್ತ , ಸಂ -
ಬಳಕಾರಿ , ಶಾಲಕ , ಮಿಕ್ಕ ಸಗೋತ್ರಜ
ಕಲಿಮನದವ , ಪಿತೃಮಾತೃದಿ ಗುರುದ್ರೋಹಿ
ಕಲಕಲಾ ಪಗಡಿ ಜೂಜಾಟ ಖಟ್ವಶಯ್ಯಾ
ಗೆಳೆಯರೊಂಚಕ , ಅಲ್ಪಭೋಕ್ತಾ ದುರ್ಮದಾಂಧ
ಪೊಳೆವ ಶೃತಿ ತಂತ್ರನಾಮಬಾಹಿರ , ವಿಪ್ರ
ನಲಿವ , ಪ್ರತ್ಯುಪಕಾರಿ , ಆತತಾಯಿ ನಾತನ್ನ
ಕುಲದೈವ ಪರಿತ್ಯಾಗಿ ಕುಹಕ ಅಸೂಯಕಾ
ಇಳಿಯೊಳಗೀಪರಿ ಉಂಟು ಅನಗ್ನಿಕಾ
ಮಿಳಿತ ಮಾಡಲಾಗಿ ಬಹುವಿಧ ಜನರನ್ನು
ಕುಳ್ಳಿರ ಪೇಳತಕ್ಕದಲ್ಲ ಪೈತೃಕಾಲದಲ್ಲಿ
ತಿಳಿವದು ಇದರ ವಿರುದ್ಧ ವಾದವನ್ನ
ಸಲೆ ತಾರತಮ್ಯ ಗುರುಹರಿಭಕ್ತಿ ಸ -
ತ್ಕುಲ ಪ್ರಸೂತ ಪಂಚಭೇದಮತಿ ನಿತ್ಯ
ಗೆಲವಾಗಿ ಇರಬೇಕು ಹಗಲು ಇರಳು ಅಲ್ಲಿ
ತುಲಸಿಧಾಮಭೂಷಾ ವಿಜಯವಿಟ್ಠಲನಲ್ಲಿ
ನಿಲಿಸು ಮನಸು ನೀನು , ಫಲರಹಿತನಾಗೋ ॥ 4 ॥
ಆದಿತಾಳ
ಸ್ಪರಶ ಶಬ್ದ ಕ್ರಿಯಾ ಕಾಲ ಭವ ದೃಷ್ಟಾ
ನಿರುತ ಈ ಪರಿ ತಿಳಿದು ತೊರೆದು ಶುದ್ಧಾತ್ಮನಾಗಿ
ಹಿರಿದಾಗಿ ಹಿಂದೆ ಉಚ್ಚರಿಸಿದ ದೇವಾಂಶರ
ಸ್ಮರಿಸಿದರಾಕ್ಷಣ ಮಾಡಿ ನೈವೇದ್ಯ
ವರ ಸುಧೋಪಮವಾಗಿ ಭೋಕ್ತರಿಗೆ ಮಹಾರುಚಿ -
ಕರವಾಗಿ ಇಪ್ಪದು , ತದ್ದೋಷ ಪರಿಹಾರ
ಧರಿ ಮೇಲೆಯಿದ್ದ ದಿವ್ಯ ಶುಭರಸಗಳು ಬಂದು
ಭರಿತವಾಗಿವೆ ಇಂದಿನ ದಿನದಲ್ಲಿ ಬಿಡದೆ
ಧರ ಭುವರ್ಲೋಕ ನಾಕ ಭವನದಲ್ಲಿ ಇದ್ದ
ಸರ್ವ ಪಿತೃಗಣದವರು ತೃಪ್ತಿಯಾಗುವರು
ಮರುತಾದಿತ್ಯ ಸಾಧ್ಯ ವಸು ರುದ್ರಾಶ್ವಿನಿ ಋಷಿ
ಎರಡೈದು ಗಣದವರು ಪಿತೃರೆನಿಸುವರು
ತರತಮ್ಯ ಇದರೊಳು ಸಿದ್ಧವಾಗಿದೆ ಇಂತು
ಪರಮಾನಂದದಲ್ಲಿ ಈ ಬಗೆ ಒಪ್ಪುತಿದೆ
ನರನೊಮ್ಮೆ ತುತಿಸಿ ಕೊಂಡಾಡಿ ಪಾಡಿ ಕೇಳಿ
ಶಿರದೂಗಿ ಅನುವಾದ ಮಾಡಿದರಾದಡೆ
ವರಶೇತು ಜನಾರ್ದನ ಗೋಕರ್ಣ ದ್ವಾರಾವತಿ
ಕುರುಕ್ಷೇತ್ರ ಮಾಯಾ ಕಾಶಿ ಬದರಿ ಪ್ರಯಾಗ ಅಯೋಧ್ಯ
ಪುರುಷೋತ್ತಮ ಕಾಂಚಿ ಮಧುರಾವಂತಿಕಾ ಪುರಿ
ತರಣೇಂದು ಉಪರಾಗ ಗಯಾ ಸಪ್ತನದಿಯಲ್ಲಿ
ಸುರಭೂಸುರರಿಗೆ ಭೋಜನ ಮಾಡಿಸಿದ ಪುಣ್ಯ
ಬರುವದು ಒಂದಾನಂತವಾಗಿ ನಾನಾ ಫಲ
ಗುರು ಸದ್ವಾರಾ ಪ್ರಸನ್ನ ವಿಜಯವಿಟ್ಠಲರೇಯ
ಎರಡೈವತ್ತೊಂದು ಗೋತ್ರದವರ ಉದ್ಧರಿಸುವಾ ॥ 5 ॥
ಜತೆ
ನರಕೋದ್ಧಾರ ಸತ್ಯ ಇದರಿಂದ ಪಿತೃಗಳಿಗೆ
ನರಕಾರಾತಿ ನಮ್ಮ ವಿಜಯವಿಟ್ಠಲ ಸುಳಿವಾ ॥
************