Showing posts with label ಗಿರಿಯ ಶಿಖರವ ನೋಡಿ vijaya vittala ankita suladi ವೆಂಕಟಾದ್ರಿ ಮಹಿಮೆ ಸುಳಾದಿ GIRIYA SHIKHARAVA NODI VENKATADRI MAHIME SULADI. Show all posts
Showing posts with label ಗಿರಿಯ ಶಿಖರವ ನೋಡಿ vijaya vittala ankita suladi ವೆಂಕಟಾದ್ರಿ ಮಹಿಮೆ ಸುಳಾದಿ GIRIYA SHIKHARAVA NODI VENKATADRI MAHIME SULADI. Show all posts

Sunday, 8 December 2019

ಗಿರಿಯ ಶಿಖರವ vijaya vittala ankita suladi ವೆಂಕಟಾದ್ರಿ ಮಹಿಮೆ ಸುಳಾದಿ GIRIYA SHIKHARAVA VENKATADRI MAHIME SULADI

Audio by Mrs. Nandini Sripad

ಶ್ರೀ ವಿಜಯದಾಸಾರ್ಯ ವಿರಚಿತ 
 ವೆಂಕಟಾದ್ರಿ ಮಹಿಮೆ ಸುಳಾದಿ 

 ರಾಗ ವಸಂತ 

 ಧ್ರುವತಾಳ 

ಗಿರಿಯ ಶಿಖರವ ನೋಡಿ ಶಿರವಾಗಿ ಕರವ ಮುಗಿದು 
ಮರಳೆ ಸಾಷ್ಟಾಂಗ ನಮಸ್ಕಾರ ಮಾಡಿ 
ಪರಮ ಭಕುತಿಯಿಂದ ಕೊಂಡಾಡಿ ನಲಿದಾಡಿ 
ಪರಿ ಪರಿ ವಿಧದಿಂದ ನೆನಿಸಿ ನೆನಿಸೀ 
ಧರೆಯೊಳಗಿದೆ ಮೇರು ಪರುವತದ ಮಗನೆನಿಸಿ 
ಕರಿಸಿ ಕೊಳುತಿದೆ ವೆಂಕಟಾಖ್ಯ ನಾಮಾ 
ಸ್ಮರಿಸಿ ಮನ ಬುದ್ಧಿಯಲ್ಲಿ ಪ್ರವೇಶ ಮಾಡಿ ನಿಂ -
ದಿರದೆ ವಿಚಿತ್ರಮಯವಾದ ಗಿರಿಯಾ 
ಮಿರಿ ಮಿರಿ ಮಿಂಚುತಿದೆ ದಶದಿಕ್ಕಿನೊಳಿದಕೆ 
ಸರಿ ಸರಿ ಸರಿಗಾಣೆ ನಿಸ್ಸಂದೇಹಾ 
ಸುರ ತರುವಿನಂತೆ ಬೇಡಿದ ಇಷ್ಟಾರ್ಥಗಳೆಲ್ಲಾ 
ಕರೆವುತಿದೆ ಶಬ್ದಾರ್ಥ ತಿಳಿದ ನರಗೇ 
ಸುರರು ಸನಕಾದಿ ಮುನಿ ಸಮಸ್ತ ಮುಕ್ತರು 
ತರು ಗುಲ್ಮಲತೆ ವಾರಿಚರ ಖಗ ಮೃಗ 
ನರರು ಮೊದಲಾದ ರೂಪವ ಧರಿಸಿ ಸಾಧನ ವಿ -
ಸ್ತರವಾಗಿ ಮಾಡುವರೂ ವಿನಯಾದಿಂದಾ 
ಅರವತ್ತಾರು ಕೋಟಿ ತೀರ್ಥಂಗಳು ಉಂಟು ಸುಂ -
ದರವಾಗಿ ಒಪ್ಪುತಿವೆ ಇದರೊಳಗೆ 
ಪರಮ ಮುಖ್ಯ ತೀರ್ಥಾ ಚತುರವಿಂಶತಿ ಇಪ್ಪಾವು 
ನಿರಯಾ ಕಳವುತ್ತ ವಂದಿಸಿದ ಜನಕೆ 
ಪರಮೇಷ್ಠಿ ಗರುಡೇಂದ್ರ ತರಣಿ ನಾಲ್ವರು ಚ -
ತುರ ದಿಕ್ಕಿನಲ್ಲಿ ಅನಿರುದ್ಧಾದಿಯಾ 
ಕರುಣ ಶರಣರ ಮೇಲೆ ಮಾಡುತಾ ಪ್ರತಿದಿವಸ 
ಸಿರಿವಂತರಾಗಿ ಪೂಜಿಸುತಿಪ್ಪರೂ 
ಅರಿ ಶಂಖ ಗದಾ ಪದುಮಾಧರರಾಗಿ ವಿಲಿಂಗರು 
ಚರಿಸುವರು ಪುಣ್ಯಕಾಮರಾಗಿ ಸಂತೋಷದಿ 
ವರವೇದ ಶಾಸ್ತ್ರ ಸ್ಮೃತಿಗಳಲ್ಲಿ ನಿರುತರ 
ವರದೊರದು ಪೇಳುತಿವೆ ಒಲಿದೊಲಿದೂ 
ಅರಸಿ ನೆಂಜಲೂ ಮರ್ಕಟ ಮೆದ್ದರಾದಡೆ ಬಾ -
ಹಿರದಲ್ಲಿಪ್ಪಾ ಮದಕರಿ ಸರಿಯೆ 
ಉರಗಾ ಪರಿಯಂಕ ಹರಿಗಾಗಿಹ್ಯ ನೆನದೀರಿ 
ಮರುತಾ ದೇವಗೆ ಸರಿಯೆನ್ನ ಬಹುದೆ 
ತಿರುವೆಂಗಳೇಶಾ ಸಿರಿ  ವಿಜಯವಿಠ್ಠಲರೇಯಾ 
ಸ್ಥಿರವಾಗಿ ನಿಲಿಸಿಪ್ಪ ಇರಳು ಹಗಲು ಬಿಡದೆ ॥ 1 ॥

 ಮಟ್ಟತಾಳ 

ಒಂದೊಂದು ಯುಗಕೆ ಒಂದೊಂದು ಪೆಸರು 
ಚಂದವಾಗಿಪ್ಪವು ಪೊಗಳಿದವರಗೀಗಾ -
ನಂದವೆ ಕೊಡುತಲಿ ಅತಿಶಯವೆನಿಸಿ ವ -
ಸುಂಧರದೊಳಗೆ ಸುಲಭವಾಗಿದೆ ಕೇಳಿ 
ಒಂದೆರಡು ಎರಡೂ ಯೋಜನ ವಿಸ್ತಾರ 
ಒಂದಿನಾದರೂ ಐದು ಸಾರೆ ಪ್ರದಕ್ಷಿಣೆ 
ವಂದಿಸಿ ತಿರುಗಿದರೆ ತತ್ಕಾಲಕೆ ಪದವಿ 
ನಂದನ ಕಂದ ಸಿರಿ  ವಿಜಯವಿಠ್ಠಲ ವೆಂಕಟ 
ನಿಂದು ಭಕುತ ಜನಕೆ ವರಗಳ ಕೊಡುತಿಪ್ಪಾ ॥ 2 ॥

 ತ್ರಿವಿಡಿತಾಳ 

ಅನಂತ ಜನುಮಕೆ ಸಾಧನ ಕೂಡಾದಲ್ಲದೆ 
ಈ ನಗ ದಾರಿಗೂ ದರುಶನವಾಗದು 
ಏನೆಂಬೇನಯ್ಯಾ ಇದರ ಮಹಾತ್ಮೆಯನ್ನು 
ಸ್ಥಾಣು ಸನಕಾದ್ಯರಿಗೆ ಪೇಳಿ ಮೈಮರೆದಾ 
ಮಾನುಷ್ಯನ್ನಾ ಜನಕೆ ಎಣಿಸಿ ಪೇಳುವದರಿದೊ 
ಆನೆಂತು ವರ್ನಿಪೆನೊ ಕೊನೆ ಮೊದಲು 
ಗೇಣುಸದನಾ ಇಲ್ಲಿ ರಚಿಸಿ ತತ್ವಾ ಬಲ್ಲ 
ಜ್ಞಾನಿಗೆ ಮನಸು ಪೂರ್ವಕದಿಂದಲಿ 
ದಾನಾ ವಿತ್ತವನ ವಂಶಾ ಆವಾವ ಲೋಕದಲಿ 
ಆನಂದಾನಂದದಲೀ ಕ್ರೀಡಿಸುವರೂ 
ಶ್ವಾನ ಸೂಕರ ದೇಹಾ ಬಂದಾರವಕೆ ಕೇಳಿ 
ಹೀನಾವೆಂಬೋದೇ ಇಲ್ಲ ಪ್ರಬಲ ಸಂಸ್ಕಾರವೊ 
ಶ್ರೀನಿವಾಸ ನಮ್ಮ ವಿಜಯವಿಠ್ಠಲರೇಯಾ 
ಕಾಣಿಸಿ ಕೊಂಬನು ಈ ಗಿರಿಯಾ ಸ್ಮರಿಸಿದರಿಗೆ ॥ 3 ॥

 ಅಟ್ಟತಾಳ 

ಬಲಬಲಿ ಬಲವೈರಿ ಕವಿ ಕವಿಗಾಳು 
ಒಲಿದು ಒಲುಮೆಯಿಂದ ಈ ಶೈಲ ಕಾಣಲು 
ಬಲು ಪಂಚಾಮಹಾಪಾತಕದಿಂದ ಕಡೆ ಬಿದ್ದು 
ಮಲರಹಿತರಾಗಿ ವೆಂಕಟನಾಥನ್ನ 
ಒಲಿಸಿ ವೇಗದಿಂದ ಸಿದ್ಧರಾದರು ತಮ್ಮ 
ಬಳಗದೊಡನೆ ಕೂಡಿ ತಾರತಮ್ಯಾದಿಂದಲಿ 
ತಿಳಿವದು ಈ ಪರಿ ರಜೋತಮ ಜನರಿಗೆ 
ಕಲ ಕಾಲಾ ಬಿಡದಲೆ ನೂರೆಂಟು ಸಾರಿಗೆಲಿ 
ಬಳಲಿ ಯಾತ್ರಿಯಾ ಮಾಡಿದರೇನೂ ಎಂದಿಗೆ 
ಫಲ ಕೊಡುವದು ಕಾಣೆ ವೃತ್ತಿ ಸೌಖ್ಯವೆವುಂಟು 
ಜಲಜನಯನ ನಮ್ಮಾ ವಿಜಯವಿಠ್ಠಲ ವೆಂಕಟ 
ತಿಳಿದವಗಲ್ಲದೆ ಮುಕುತಿಯಾ ಕೊಡನೊ ॥ 4 ॥

 ಆದಿತಾಳ 

ಮೂಜ್ಜಗದೊಳಗಿದೆ ಸರ್ವ ಯಾತ್ರಿಗೆ ಮಿಗಿಲೂ 
ಸಜ್ಜನಾ ನಾದಾವ ಈ ಗಿರಿಯಲ್ಲಿ ಒಂದು 
ಹೆಜ್ಜೆ ಇಡಲು ಅವನ ಕುಲಕೋಟಿ ಉದ್ಧಾರ 
ಆರ್ಜವ ಮಾರ್ಗದಲ್ಲಿ ಸಂಚರಿಸುವರು 
ಮಜ್ಜನಾದಿ ಕರ್ಮ ಅಲ್ಪಮಾಡಿದರು ನಿ -
ರ್ವ್ಯಾಜ್ಜವಾದ ಪುಣ್ಯ ಮೇರುತುಲ್ಯವಾಗುವದು 
ದುರ್ಜನರ ಉಪಹತಿ ಲೇಶ ಮಾತುರವಿಲ್ಲ 
ನಿರ್ಜರರು ಮೆಚ್ಚುವರು ಅವಲೋಕಾ ಮಾಡುತಾ 
ಅರ್ಜುನ ಸಾರಥಿ  ವಿಜಯವಿಠ್ಠಲ ವೆಂಕಟ 
ಬೆಜ್ಜರಿಕೆ ಬಿಡಿಸುವಾ ಬಿನ್ನಪ ಕೈಕೊಂಡು ॥ 5 ॥

 ಜತೆ 

ಈ ಗಿರಿ ಯಾತ್ರಿಯಾ ಮಾಡಿದಾ ಜನರಿಗೆ 
ನಾಗಶಯನ ವಿಜಯವಿಠ್ಠಲ ವೆಂಕಟವೊಲಿವಾ ॥
**********