Showing posts with label ಶ್ರೀಯದುವರಕುಲತೋಯದಿ ಹಿಮಕರಾಶ್ರಿತಜನ gopala vittala. Show all posts
Showing posts with label ಶ್ರೀಯದುವರಕುಲತೋಯದಿ ಹಿಮಕರಾಶ್ರಿತಜನ gopala vittala. Show all posts

Saturday, 13 March 2021

ಶ್ರೀಯದುವರಕುಲತೋಯದಿ ಹಿಮಕರಾಶ್ರಿತಜನ ankita gopala vittala

 ರಾಗ - : ತಾಳ -


ಶ್ರೀ ಯದುವರಕುಲತೋಯದಿ ಹಿಮಕರಾಶ್ರಿತಜನ ಮಂದಾರ

ಮಾಯಾಪೂತನೀ ಹಾರ ವೇದೋದ್ಧಾರ ಮಂದರಶೈಲಧರ ll ಪ ll


ಗಂಗೋದ್ಭವ ಬಲಿ ವ್ಯಾಸ ಪರಾಶರ ಪುಂಗವನುತ ಚರಣ

ಮಂಗಳಾಂಗ ಕುಂತಿಸುತ ಪಾಲನ ಮೌನಿ ಹೃದಯ ಸದನ

ತುಂಗ ಚತುರ್ಭುಜ ಶಂಖಚಕ್ರಧರ ದನುಜವಂಶದಹನ

ಅಂಗಜಜನಕ ಕಾಳಿಂಗಗರ್ವಹರ ಅಂಬರೀಶ ಕರುಣ ll 1 ll


ಭೂಸುರಪತ್ನಿ ವಿಭೂಷಣಧರ ಕಂಸಾಸುರ ಮುರಮಥನ

ವಾಸವಾದಿ ಕಮಲಾಸನಪೂಜಿತ ವೈನತೇಯಗಮನ

ಶ್ರೀ ಶುಕ ಶೌನಕ ಸನಕ ಸನಂದನಸೇವಿತ ಹಯವದನ

ದಾಸಕಲುಷ ವಿನಾಶ ತ್ರಿಭುವನಾಧೀಶ ಶೇಷಶಯನ ll 2 ll


ಶರಣಾಗತಪೋಷಣ ಮೃದುಭಾಷಣ ಶಕಟಾಸುರಹರಣ

ಕರಿವರರಿಪುಹರ ಕನಕಾಂಬರಧರ ಶರನಿಧಿ ಮದಹರಣ

ನರಹರಿ ವೇಲಾಪುರಿ ಕೇಶವ ಶ್ರೀಧರ ಕೌಸ್ತುಭಾಭರಣ

ಕರುಣಾಸಾಗರ ಶ್ರೀ ಗೋಪಾಲವಿಟ್ಠಲ ಕಮಲಾಚಲ ರಮಣ ll 3 ll

***

ಅರ್ಥವಿವರಣೆ :-


ಶ್ರೀಯದುಕುಲ .... ಮಂದಾರ=ಮಂಗಳಕರವಾದ ಯದುಕುಲವೆಂಬ ಸಮುದ್ರಕ್ಕೆ (ತೋಯದಿ) ಚಂದ್ರಸದೃಶನಾಗಿರುವ (ಹಿಮಕರ) ಮತ್ತು ಮೊರೆಹೊಕ್ಕ ಜನರಿಗೆ ಕಲ್ಪವೃಕ್ಷ ಸದೃಶನಾಗಿರುವ (ಮಂದಾರ).  ಮಾಯಾಪೂತನೀಹಾರ=ಮಾಯಾವಿಯಾದ (ಸುಂದರ ಸ್ತ್ರೀವೇಷದಿಂದ ಗೋಕುಲಕ್ಕೆ ಬಂದ) ಪೂತನಿಯ ಅಸುವನ್ನು ಹೀರಿದ ಶ್ರೀಕೃಷ್ಣ.


ವೇದೋದ್ಧಾರ=ಮತ್ಸ್ಯರೂಪದಿಂದ ವೇದಗಳನ್ನು ರಕ್ಷಿಸಿದ, ಮಂದರ ಶೈಲಧರ=ಮಂದರ ಗಿರಿಯನ್ನೆತ್ತಿದ ಕೂರ್ಮರೂಪಿ ಶ್ರೀಹರಿ.


ಗಂಗೋದ್ಭವ=ಗಂಗಾಜನಕನಾದ ತ್ರಿವಿಕ್ರಮ.  ಪರಾಶರ=ವ್ಯಾಸರ ತಂದೆ.  ಅಂಗಜಜನಕ=ಮನ್ಮಥನ ತಂದೆ.  (ಪ್ರದ್ಯುಮ್ನನ ಜನಕ ಶ್ರೀಕೃಷ್ಣ) ಅಂಬರೀಶ ಕರುಣ=ಅಂಬರೀಶನ ಮೇಲೆ ಕಾರುಣ್ಯ ತೋರಿಸಿದ ಶ್ರೀಹರಿ. (ಅಂಬರೀಶ ವರದ)


ಭೂಸುರಪತ್ನಿ ವಿಭೂಷಣ ಧರ=ತನ್ನ ಗುರುಗಳಾದ ಸಾಂದೀಪನ (ಭೂಸುರ) ಪತ್ನಿ ಅಂದರೆ, ಗುರು ಪತ್ನಿಯ ಪುತ್ರನನ್ನು (ವಿಭೂಷಣ-ಕುಲ ಭೂಷಣನಾದ ಮಗ) ನ ಬದುಕಿಸಿ ತಂಡ ಶ್ರೀಕೃಷ್ಣ.  ವಾಸವಾದಿ ಕಮಲಾಸನ ಪೂಜಿತ=ಇಂದ್ರನೇ ಮೊದಲಾಗಿ ಸಮಸ್ತ ದೇವತಾ ವರ್ಗ ಮತ್ತು ಬ್ರಹ್ಮನಿಂದ ಪೂಜಿತನಾದ ದಾಸರ ಕಲುಷ ವಿನಾಶ=ದಾಸಜನರ ದೋಷಗಳನ್ನು ಕಳೆಯುವವನು.  ಕರಿವರರಿಪುಹರ=ಗಜರಾಜನನ್ನು ಮಡುವಿನಲ್ಲಿ ಹಿಡಿದು ಮೊಸಳೆಯನ್ನು ತನ್ನ ಚಕ್ರದಿಂದ ಸೀಳಿದ.

***