Audio by Mrs. Nandini Sripad
ಶ್ರೀ ವಿಜಯದಾಸಾರ್ಯ ವಿರಚಿತ ಶ್ರೀಹರಿಯ ನಾಮ ಮಹಿಮೆ ಸುಳಾದಿ
( ಶ್ರೀಹರಿ ನಾಮದಿಂದ ಸಕಲ ಪಾಪ ಪರಿಹಾರ ; ಕಾರಣ ಅನುಗ್ರಹಿಸಿ ನಾಮದ ಶರಣನನ್ನು ಮಾಡಲು ಪ್ರಾರ್ಥನೆ. )
ರಾಗ ಕಲ್ಯಾಣಿ
ಧ್ರುವತಾಳ
ಶರಣನಾಗುವೆ ಶರಣರ ಪರಿಪಾಲ
ಶರಣು ನಿನಗೆ ಅನಂತ ಶರಣು
ಶರಣಾಗತ ವತ್ಸಲ ಶರಣರ ಅಭಿಮಾನಿ
ಶರಣರಿಗೆ ವಜ್ಜರ ಪಂಜರ
ಶರಣೆಂದವರ ಭಾರಾ ಪರಿಪೂರ್ಣ ವಹಿಸುವ
ಶರಣು ಪೊಕ್ಕವರಘ ದಹಿಸುವನು
ಶರಣು ನಿನ್ನ ಪಾದಕ್ಕೆ ಶರಣು ನಿನ್ನ ಪಾದಕ್ಕೆ
ಶರಣೆಂಬುದಕ್ಕೆ ಸುಮನವ ನೀಯೋ
ಚರಣ ಸ್ಮರಣೆಗೆಲ್ಲಿ ಸರಿಸಾಟಿಯಿಲ್ಲೆಂದು
ಪರಮಾ ಉತ್ತಮರು ವಿಸ್ತರಿಸುವರು
ಇರಳು ಹಗಲು ಒಂದರ ಘಳಿಗೆ ವಾಸರ
ಬರಿದಾಗದಂತೆ ಕರುಣವನು ಮಾಡಿ
ಶರಣರ ಒಡಗೂಡಿ ಹರಿ ನಿನ್ನ ನೆನೆವಂತೆ
ಅರುಹು ಮಾಡುವದು ಪಾಮರ ಶಾಲಿಗೆ
ಅರಿದರ ಮಹಸ್ವಗತಿ ವಿಜಯವಿಟ್ಠಲರೇಯ
ಶರಣರ ಭಕ್ತಿಗೆ ಕರಗುವಾ ದೈವ ॥ 1 ॥
ಮಟ್ಟತಾಳ
ಸ್ನಾನ ಸಂಧ್ಯಾ ಜಪವೇ ಮೌನ ಧ್ಯಾನಂಗಳು
ದಾನ ಧರ್ಮಾವಳಿ ಏನೇನು ಮಾಡಿದರು
ಶ್ರೀನಿವಾಸನೆ ನಿನ್ನ ಜ್ಞಾನದಿಂದಲೆ
ನೆನೆವನಿಗೆ ಸರಿಯುಂಟೆ
ಅನಂತ ಜನುಮದಲಿ ಹೀನ ಸಂಗತಿಯಿಂದ
ಏನೇನು ಬಂದಿರಲು ಜೇನು ಮುಗ್ಗಿದಂತೆ
ಕ್ಷೀಣವಾಗೋವಯ್ಯ ಏನೇನು ಕರ್ಮಗಳು
ಕ್ಷೋಣಿಯೊಳಗೆ ನೆಸಗೆ ಶ್ರೀನಾಥನ ನಾಮಾ
ಗಾನಕೆ ಸರಿಯುಂಟೆ ಗಾನಕೆ ಸರಿಯುಂಟೆ
ದೀನ ಪಾಲಕ ಸೂಕ್ಷ್ಮ ವಿಜಯವಿಟ್ಠಲ
ನೀನೆ ಪರದೈವ ನೀನೆ ಜಗದ್ಭರಿತಾ ॥ 2 ॥
ತ್ರಿವಿಡಿತಾಳ
ಒಂದೆ ನಾಮವೆ ನೆನಿಯೆ ಎಂದೆಂದು ಪೋಗದ
ಸಂದೋಹ ಪಾಪಗಳು ಬೆಂದು ಪೋಗುವವು
ಅಂದೆ ಇಂದೇವೆ ಇನ್ನೊಂದು ಸಿದ್ದಿಸುವದ್ಯಾ -
ಕೆಂದು ಯೋಚನೆ ಮಾಡಿ ನೋಡ ಸಲ್ಲ
ಒಂದು ದಿವಸ ಮನ ಬಂದಾಗಲು ಹರಿ ಗೋ -
ವಿಂದ ನೆಂದೆನಲಾಗಿ ಭಕುತಿಯಿಂದ
ಹಿಂದಾಗನುವೇಗದಿಂದ ಸಾಕುವನು ಆ -
ನಂದ ಮತಿಯನಿತ್ತಾನಂದ ದೈವ
ಎಂದು ಕೇಳಿ ನಾನು ಬಂದು ನಿನ್ನನು ಕಾಯ್ದೆ
ತಂದೆ ಶ್ರೀವಿಜಯವಿಟ್ಠಲನೆ ಮನ್ನಿಪುದು ॥ 3 ॥
ಅಟ್ಟತಾಳ
ಮನೆ ಮುಂದೆ ಪೀಯೂಷ ವನಧಿಯಿರಲು ಉದಾ -
ಸಿನ ಮಾಡಿ ನೂರು ಯೋಜನ ಪೋಗಿ ಕೊಳ -
ಚಿ ನೀರನು ನೋಡಿ ಕೊಂಡಾಡಿ ತನು ರೋಮಾಂಚನ ಉಬ್ಬಿ
ಮನಕೆ ಬಂದ ಹಾಗೆ ಕುಡಿದು ಸುಖಿಸುವಂತೆ
ಜನುಮ ಜನುಮಾಂತರ ಗಣಿಕ ದೇವರ ನೆನೆದು
ದಣಿದು ಬಾಯಾರಿದೆ ಗುಣಹೀನ ನಾನಾಗಿ
ಜನುಮಾದಿರಹಿತ ಶರ ವಿಜಯವಿಟ್ಠಲ
ಎನಗೊಂದು ಸಾಧನ ತೋರಿ ನಿನ್ನ ದಾಸನ್ನ ಮಾಡೋ ॥ 4 ॥
ಆದಿತಾಳ
ಹಾರಿ ಹಾರಿ ಪಾರಲಾರೆ ಚೀರಿ ಕೂಗಿ ಕರೆಯಲಾರೆ
ಮೋರೆ ಮೇಲೆ ಎತ್ತಿಕೊಂಡು ಸಾರಿ ಸಾರಿಗೆನಲಾರೆ
ಆರಾರು ಮಾಡಿದಂತೆ ಆರಾಧನೆ ಮಾಡಲಾರೆ
ಭಾರಕರ್ತ ಬ್ರಾಹ್ಮಣ ವಿಜಯವಿಟ್ಠಲ ಕೇಳು
ಸೂರ ಮನವೆ ನಿನಗಿಲ್ಲದೆ ಬ್ಯಾರೆ ಎನಗೆ ಕರ್ಮವಿಲ್ಲ ॥ 5 ॥
ಜತೆ
ನಾಮದ ಶರಣನ್ನ ಮಾಡು ಮನುಮಥ ಜನಕ
ಕ್ಷೇಮಕೃತೆ ವಿಜಯವಿಟ್ಠಲನೆ ದಯದಿಂದ ॥
**********