Showing posts with label ಭವ ರೋಗ ಪರಿಹರಿಸೋ vijaya vittal ankita suladi ಪ್ರಾರ್ಥನಾ ಸುಳಾದಿ BHAVAROGA PARIHARISO PRARTHANA SULADI. Show all posts
Showing posts with label ಭವ ರೋಗ ಪರಿಹರಿಸೋ vijaya vittal ankita suladi ಪ್ರಾರ್ಥನಾ ಸುಳಾದಿ BHAVAROGA PARIHARISO PRARTHANA SULADI. Show all posts

Thursday 24 December 2020

ಭವ ರೋಗ ಪರಿಹರಿಸೋ vijaya vittal ankita suladi ಪ್ರಾರ್ಥನಾ ಸುಳಾದಿ BHAVAROGA PARIHARISO PRARTHANA SULADI

Audio by Vidwan Sumukh Moudgalya

ಶ್ರೀ ವಿಜಯದಾಸಾರ್ಯ ವಿರಚಿತ   ಪ್ರಾರ್ಥನಾ ಸುಳಾದಿ 

(ಭವರೋಗ ವೈದ್ಯನಾದ ಶ್ರೀ ಹರಿಯೇ ಭವರೋಗ ಪರಿಹರಿಸಿ ಎನ್ನ ಯೋಗ್ಯತೆಯರಿತ ನೀನು ಎನ್ನ ಭಕ್ತರಂತೆ ಪರಿಪಾಸುವದೆಂದು ದಾಸರು ಪ್ರಾರ್ಥಸಿದ್ದಾರೆ)


 ರಾಗ : ರಂಜನಿ 


 ಝಂಪಿತಾಳ 


ಭವರೋಗ ಪರಿಹರಿಸೋ ಭವ ರೋಗ ವೈದ್ಯ

ಭವಣೆ ಬಡಲಾರೆನೊ ಭವದೊಳಗೆ

ಭವದಿಂದ ಬಂದು ಸಂಭವನಾದೆ ನಾನಾಕ

ಭವನದೊಳಗೆ ಉದುಭವನಾಗುತ

ಭವಲಿಪ್ತರಾದ ಗುಂಭವನು ನೋಡಿದರೆ ಶು

ಭವನು ಕಾಣೆನೊ ವೈಭವದರಸೆ

ಭವತಾಪಕೆ ಭವನು ಪೋಗಲು ಸುಖಾನು

ನುಭವನು ಮಾಳ್ಪವರಾರು ಭವಸುರರೊಳು

ಭವ ವಿರಹಿತಕಾಯ ವಿಜಯವಿಠ್ಠಲ ದುರ್ಲ-

ಭವವನು ಮಾಡದಲೆ ಲಾಭವನೆನಿಸಿ ತೋರೋ ll1ll


 ಮಟ್ಟತಾಳ 


ಕಾಲಕರ್ಮ ಕಾಮ ಸ್ವಭಾವದಲ್ಲಿಂದ

ಮೇಲಾಗೇನೆಸಗಿದರು ಪೋಗದು ಭವರೋಗ

ಫಾಲದಲಿ ಬರೆದ ಬರೆದ ಲಿಖಿತಗಳು

ಶ್ರೀಲೋಲನೆ ನಿನ್ನ ಪಾದಾರ್ಚನೆ ಮಾಡೆ

ಮೂಲ ದುರ್ಲಿಪಿಗಳು ಜನುಮ ಜನುಮ ಭವ

ಮಾಲಿಕೆಗಳು ನಿವಾರಣವಾಗವೇನು

ಕಾಲಾದಿ ನಾಮಕನೆ ವಿಜಯವಿಠ್ಠಲ ನಿನ್ನ

ಆಳಾಗದಲೇವೆ ಆವ ಸಾಧನವಿಲ್ಲ ll2ll


 ತ್ರಿವಿಡಿತಾಳ 


ವರ ಪ್ರಲ್ಹಾದ ನಾರದ ಮುನಿಶುಕಪರಾ

ಶರನು ರುಕುಮಾಂಗದ ಗಂಗಾತನಯಾ

ನರ ಪುಂಡರೀಕ ಶೌನಕನಂಬರೀಷನು

ತರುಳ ಧ್ರುವನು ವಿದುರ ವಿಭೀಷಣಾ

ದ್ಯರು ನಿನ್ನ ಪಾದವ ನೆರೆನಂಬಿ ಭಜಿಸಿ ದು

ಸ್ತರವಾದ ಭವಾಂಬುಧಿ ಉತ್ತರಿಸಿದರು

ಕರಿರಾಜ ವರದ ಶ್ರೀ ವಿಜಯವಿಠ್ಠಲ ನಿನ್ನ

ಕರೆದಾರಲ್ಲದೆ ಭಾಗ್ಯ ಸುರಿದವರಾರಯ್ಯ ll3ll


 ಅಟ್ಟತಾಳ 


ಆವ ಭಕುತ ನಿನಗಾವ ವಸ್ತವನಿತ್ತ

ಆವ ಭಕುತ ನಿನಗಾವ ಪುರವನಿತ್ತ

ಆವ ಭಕುತ ನಿನಗಾವ ವಸನವಿತ್ತ

ಆವ ಭಕುತ ನಿನಗಾವಲ್ಲಿ ಉಣಿಸಿದ

ಆವ ಭಕುತ ನಿನಗಾವೆಡೆ ಸಲಹಿದ

ಆವಾವರಾದರು ಆವಾದಿತ್ತದು ಕಾಣೆ

ದೇವ ಎನಗೆ ಕರುಣಾವಲೋಕನದಿಂದ

ಸೇವೆಯ ಕೈಕೊಂಡು ಪಾವನ್ನ ಮಾಡುವುದು

ಮಾವ ಮರ್ದನರಂಗ ವಿಜಯ ವಿಠ್ಠಲರೇಯ

ಗೋವಿಂದನೆಂದೆಂಬೊ ಜೀವಾಳ ಭಕ್ತರಿಗೆ ll4ll


 ಆದಿತಾಳ 


ನಾರದ ಮನದಲ್ಲಿ ಅಕ್ರೂರನ್ನ ಮಾಡುವುದು

ಪಾರಾಶಾರಾಮಕ್ಕೆ ವಿದೂರನೆಂದೆನಿಸೋದು?

ಘೋರ ಕರ್ಮದ ತತಿಗೆ ತೋರು ವಿಭೀಷಣನಂತೆ

ವಾರವಾರದಲ್ಲಿ ಪಂಚ ಕ್ರೂರರಿಗೆ ಭೀಷ್ಮನೆನಿಸು

ಆ ರುಕುಮಾಂಗದ ವಿಟ್ಟಿಸಾರಿಗೆ ಎನ್ನ ಹೃದಯ

ವಾರುಣ ಪುಂಡರೀಕ ಸೇರಿ ಶುಕನಂತೆ ಪೊಳೆದು

ಮೂರುತಿಯ ಕಾಣಿಸುತ್ತ ಚಾರು ಪ್ರಲ್ಹಾದನಂತೆ ಮಾಡೊ

ಭಾರಿ ದೈವವಂಬರೀಷ ಕಾರುಣ್ಯದಲ್ಲಿ ನಿನ್ನ

ಆರಾಧಿಸುವ ನಿನಗೆ ಮಾರಿ ಮೃತ್ಯು ಭವದ ಭೀತಿ

ದೂರವಲ್ಲದೆ ಸಾರೆವುಂಟೆ

ವಾರಿಧಿ ಶಯನ ನಮ್ಮ ವಿಜಯವಿಠ್ಠಲ ನಿನಗೆ

ಆರಾದರೂ ನಿತ್ಯವಾರಡಿಯಿಲ್ಲದವರು ll5ll


 ಜತೆ 


ಅವರವರರಿತು ಕಾಯುವ ವಿಜಯವಿಠ್ಠಲ 

ಅವನೀಶಾ ಎನ್ನರಿತು ಪೊರೆದು ಪಾವನ ಮಾಡೊ ll6ll

********