Showing posts with label ಹರಿಯ ಭಕುತನಾಗು gopala vittala ankita suladi ಪ್ರಾರ್ಥನಾ ಸುಳಾದಿ HARIYA BHAKUTANAAGU PRAARTHANA SULADI. Show all posts
Showing posts with label ಹರಿಯ ಭಕುತನಾಗು gopala vittala ankita suladi ಪ್ರಾರ್ಥನಾ ಸುಳಾದಿ HARIYA BHAKUTANAAGU PRAARTHANA SULADI. Show all posts

Sunday 8 December 2019

ಹರಿಯ ಭಕುತನಾಗು gopala vittala ankita suladi ಪ್ರಾರ್ಥನಾ ಸುಳಾದಿ HARIYA BHAKUTANAAGU PRAARTHANA SULADI

Audio by Mrs. Nandini Sripad

ಶ್ರೀ ಗೋಪಾಲದಾಸಾರ್ಯ ವಿರಚಿತ  ಸುಳಾದಿ 

ರಾಗ ಕಾಂಬೋಧಿ  ಧ್ರುವತಾಳ 

ಹರಿಯ ಭಕುತನಾಗು ಹರುಷದಿಂದಲಿ ಇನ್ನು
ಹರಿಯನ್ನೆ ತಿಳಿಯೊ ಸರ್ವಾಂತರದಿ
ಧರಣಿ ಆಕಾಶ ಸಲಿಲ ಗಿರಿ ಅಗ್ನಿ ವಾಯು ಮಿಕ್ಕ
ತರಣಿಯಲಿನ್ನು ಬಿಡದೆ ಹರಿಯು ಇಪ್ಪ
ಸ್ಥಿರವಾಗಿ ಅವರವರ ಗುಣ ಕರ್ಮಾದಿಗಳೆಲ್ಲ
ಹರಿಯೆ ವ್ಯಕುತಿ ಮಾಡಿ ಕೊಡುತಲಿಪ್ಪ
ಹರಿ ನಡೆದಂತೆ ನಡೆವದು ಈ ಜಗವೆಂದು
ಅರಿಯೊ ಮುಖ್ಯವಾಗಿ ಮನದೀಶಗೆ
ಸಿರಿ ಅಜಭವಾದ್ಯರು ಹರಿಗೆ ಪರಿವಾರವೆಂದು
ತರತಮ್ಯ ಮುಖ್ಯ ಮೂರುತಿಗಳ ಗುಣಿಸು
ಎರಡು ದಾರಿಯ ಮಾರ್ಗವನ್ನು ಯೋಚಿಸುತ್ತ
ಸ್ಥಿರ ಅಸ್ಥಿರ ಆವದೆಂದು ನೋಡು
ಸುರಯಾನ ಪಿತುರಯಾನ ಪರಿಪರಿ ಮಾರ್ಗವುಂಟು
ಅರಿಯೊ ನಿನಗೆ ಮುಖ್ಯ ಸುರಮಾರ್ಗವು
ಬರಿದೆ ಕರ್ಮಠ ಜನರು ಎರಗೋರು ಪಿತರಯಾನ
ಸ್ಥಿರವಲ್ಲ ಅದರಿಂದ ದೊರೆತ ಫಲವು
ಪರಮ ಜ್ಞಾನಿಗಳು ಪಥವ ಯೈದುವಂಥ ವಿ -
ವರವ ಪೇಳಲೇನು ಹರಿಯ ಪ್ರೇರಣೆಯಂತೆ
ಪರಮದಯಾಳು ಶ್ರೀಗೋಪಾಲವಿಠ್ಠಲನ್ನ 
ಕರುಣ ಸಂಪಾದಿಸುವ ಭಕ್ತರಿಗೆ ॥ 1 ॥

 ಮಠ್ಯತಾಳ 

ಏಕಪತ್ನೀ ವ್ರತವು ಜೋಕೆಯಿಂದಲಿ ಮಾಡು
ಕಾಕು ಆಗದಿರು ಕಂಡವರಿಗೆಲ್ಲ
ವ್ಯಾಕುಲವನು ಬಿಡು ವ್ಯಾಜ್ಯ ರಹಿತನಾಗು
ಸ್ವೀಕರಿಸು ಇನ್ನು ಸಿದ್ಧವಾದುದನ್ನು
ಬೇಕು ಎಂದೆನಿಸಿಕೊ ಭಕ್ತ ಜನರಿಗೆ
ನೀಕರಿಸು ನೀಚ ವಿಷಯಗಳೆಲ್ಲ
ಪಾಕಶಾಸನವಿನುತ ಗೋಪಾಲವಿಠ್ಠಲ 
ಸಾಕುವನು ನಿನ್ನ ಸರ್ವಸ್ಥಳದಲ್ಲಿದ್ದು ॥ 2 ॥

 ರೂಪಕತಾಳ 

ಗುಪ್ತದರ್ಚನೆ ಮಾಡು ವ್ಯಾಪ್ತನಾದ ಹರಿಯ
ಆಪ್ತರೊಳು ಕೂಡಿ ಆಲೋಚಿಸಿ
ಶಪ್ತವ ಮಾಡು ಒಬ್ಬರ ಸಂಗವಲ್ಲೆಂದು
ತಪ್ತ ಶೀತಕ್ಕಿನ್ನು ಸಮನು ಆಗು
ಕ್ಲಿಪ್ತ ಬಿಡದು ಎಂದು ಸುಖದುಃಖಗಳನ್ನುಂಡು
ತೃಪ್ತಿಬಡಿಸು ನಿನ್ನ ಮನದಿ ಹರಿಯ
ಸಪ್ತತ್ರಯಕುಲ ನಿನ್ನದುದ್ಧಾರವಾಗೋದು
ಆಪ್ತವಾದ ತತ್ವ ಅರಿದುಕೊ ನೀ
ಸುಪ್ತಿ ಜಾಗ್ರತಿ ಸ್ವಪ್ನಾವಸ್ಥಿ ಕರ್ಮ ನಿ -
ರ್ಲಿಪ್ತ ಮಾರ್ಗ ಪಿಡಿದು ಹರಿಗರ್ಪಿಸು
ಸಪ್ತದ್ವಯ ಭುವನೇಶ ಗೋಪಾಲವಿಠ್ಠಲ 
ಕುಪ್ತರೊಳು ನಿನ್ನ ಕೂಡಿಸದಲೆ ಪೊರೆವ ॥ 3 ॥

 ಝಂಪೆತಾಳ 

ದರಿದ್ರನೆನಿಸಿಕೊ ಭಿನ್ನ ವಿಷಯ ಉಂಬಲ್ಲಿ
ಸಿರಿವಂತನೆನಿಸಿಕೊ ನಿನ್ನ ಸುಖ ನೀನುಂಡು
ಹೊರಗಿನ ವಿಷಯಗಳ ಕಂಡು ಮೋಸಹೋಗದೆ
ಎರಡು ನಿನಗೆ ಮುಖ್ಯವಿಷಯ ಶ್ರೀಹರಿಯೆಂದು
ದೊರೆವದಕೆಮಗೆ ಈ ಸಾಧನುಪಾಯ
ಗುರುದ್ವಾರ ಪ್ರಸಾದವನ್ನು ಘಳಿಸು
ಎರಡು ಗುಣ ನಿನಗಿಂದಧಿಕರ ಮೊದಲು ಮಾಡಿ
ಪರಮೇಷ್ಠಿ ಪರಿಯಂತ ತರತಮ್ಯನುಸಾರ
ಅರಿದು ಅವರವರ ಪ್ರಸಾದ ಘಳಿಸಿ
ದೊರೆವದು ನಿನಗೆ ಇದರಿಂದ ಸುಫಲವು
ಪರಮದಯಾಳು ಸಿರಿ  ಗೋಪಾಲವಿಠ್ಠಲನ್ನ 
ಚರಣ ಸಾಧಿಸುವರ್ಗೆ ಇದೆ ಇದೆ ಮಾರ್ಗ ॥ 4 ॥

 ತ್ರಿಪುಟತಾಳ 

ಇಂದ್ರಿಯಗಳೆಂಬವು ನಿನ್ನ ಸುಖವು ಬಡಿಸು
ಬಂದಿಲ್ಲ ನೋಡು ನೀ ಗೋಳಕ ಚಿಂತಿಸೆ
ಅಂದ ಬಡಲಿ ಬೇಡ ಅಭಿಮಾನ ಮದದಿಂದ
ಕುಂದು ಮಾಡೋದು ನಿನ್ನಾನಂದ ವ್ಯಕ್ತಿಗೆ ಇನ್ನು
ಬಂದ ಬಂದಂತೆ ವಿಷಯಗಳಿಗೆಳೆದೊಯಿದು
ತಂದಿಪ್ಪವು ಪುನಃ ಜನನ ಮರಣಗಳು
ದ್ವಂದ್ವ ಜೀವರುಗಳು ಅಭಿಮಾನಿಗಳು ಆಗಿ
ಒಂದೊಂದು ಇಂದ್ರಿಯಲಿಪ್ಪುವರು
ಚೆಂದದಿ ತ್ರಿವಿಧ ಜೀವರ ಗತಿ ಅರಿತು ಮು -
ಕುಂದ ಕರ್ಮಗಳ ಮಾಡಿಸಿ ಫಲವನ್ನು
ತಂದೀವ ತತ್ವಾಭಿಮಾನಿಗಳಲ್ಲಿದ್ದು
ಇಂದಿರಾಪತಿ ನಿರ್ದೋಷನಾಗಿ
ಸಂದೇಹವಿಲ್ಲದೆ ಸರ್ವೋತ್ತಮ ಹರಿ
ಯೆಂದು ನಿನ್ನ ಮನದಿ ನಿಂದಿರಿಸು 
ಇಂದ್ರಿಯ ನಿಯಾಮಕ ದೈವ ಗೋಪಾಲವಿಠ್ಠಲ 
ಬಂಧಕ ತರಿದು ಭಕುತನೆಂದೆನಿಸುವಾ ॥ 5 ॥

 ಅಟ್ಟತಾಳ 

ಯಾಚನೆಯನು ಮಾಡು ಉಚರಲ್ಲಿ ಪೋಗಿ
ಯೋಚಿಸಿ ಹರಿಯಲ್ಲಿ ಆಚಾರ ಮಾರ್ಗದಿ
ನೀಚಗತಿಗೆ ಕೈಯ್ಯ ಚಾಚಿ ಕುಗ್ಗದೆ ಕಾ -
ಲೋಚಿತವೆನ್ನದೆ ಸೂಚನೆಯಿಂದಲಿ
ನಾಚಿಕೆಯನು ಬಿಟ್ಟು ನಾಚದೆ ಅವರಲ್ಲಿ
ಆಚರಣೆಯು ಮಾಡು ವಾಚಾಮನ ಕಾಯಾ
ನೀಚ್ಯಾಸಂಗವೆಂಬ ಶೌಚಶುದ್ಧಿಯನ್ನು
ಉಚ್ಚಸಂಗ ಉದಕ ಆಚಮನವು ಮಾಡು
ಶ್ರೀಚಕ್ರಧರನ ನೀ ವಿಚಾರಿಸುವ ತತ್ವ
ಯೋಚನೆಯನ್ನು ಮಾಡು ಭೂಚಕ್ರದೊಳಗೆಲ್ಲ
ಕೀಚಕಾರಿಗೀಶ ಗೋಪಾಲವಿಠ್ಠಲ ನ್ನಾ -
ಲೋಚನೆ ಮಾಡನ್ಯಾಲೋಚನೆಯನು ಬಿಟ್ಟು ॥ 6 ॥

 ಆದಿತಾಳ 

ಧನದ ಒಳಗೆ ಧನ ಹುಡುಕು
ಗುಣಗಳೊಳಗೆ ಗುಣಿಯ ಹುಡುಕು
ವಿನಯದೊಳಗೆ ವಿನಯ ಹುಡುಕು
ಧಣಿಗಳೊಳಗೆ ಧಣಿಯ ಹುಡುಕು
ಎಣಿಸಿ ನಾನಾಗುಣ ಶಕುತಿಯು ಮನಸಿನಲಿ
ನೆನೆದು ನೆನೆದು ತನುವಿನಾಶೆ ತೊರೆದು ದುಷ್ಟ -
ಗುಣ ಅಂಕುರ ಒಣಗಿಸಿನ್ನು 
ವನಜನಾಭನೆಂಬ ಸುಖ ಗುಣಾಂಬುಧಿಯ ಸ್ಮರಿಸಿ
ಗುಣತ್ರಯದ ಕರ್ಮಬೀಜವು ದಹನವು ಮಾಡು ಜ್ಞಾನದಿಂದ
ಘನಮಹಿಮ ಚೆಲುವ ಗೋಪಾಲವಿಠ್ಠಲನು ತನ್ನ
ನೆನೆದ ಹಾಗೆ ಎಲ್ಲ ನಿನ್ನ ಅನುಭವಕ್ಕೆ ಕಾಣಿಸುವ ॥ 7 ॥

 ಜತೆ 

ಭಕುತ ಭಕುತನಾಗು ಶಕುತ ನಾನಲ್ಲವೆನ್ನು
ಮುಕುತಿದಾಯಕ ಗೋಪಾಲವಿಠ್ಠಲ ಒಲಿವಾ ॥
********