Showing posts with label ರಕ್ಷಿಸೋ ಕರಿಗಿರಿ ನರಹರಿ ಭವ ಭಯಹಾರಿ gopalakrishna vittala ವೃತ್ತನಾಮ vruttanaama. Show all posts
Showing posts with label ರಕ್ಷಿಸೋ ಕರಿಗಿರಿ ನರಹರಿ ಭವ ಭಯಹಾರಿ gopalakrishna vittala ವೃತ್ತನಾಮ vruttanaama. Show all posts

Monday, 2 August 2021

ರಕ್ಷಿಸೋ ಕರಿಗಿರಿ ನರಹರಿ ಭವ ಭಯಹಾರಿ ankita gopalakrishna vittala ವೃತ್ತನಾಮ vruttanaama

ರಕ್ಷಿಸೊ ಕರಿಗಿರಿ ನರಹರಿ ಭವ ಭಯಹಾರಿ

ನಿನ್ನ ಪಾದವ ತೋರಿ ಪ.


ವೃತ್ತ :

ಸೃಷ್ಟ್ಯಾದ್ಯಷ್ಟಕರ್ತ ಹರಿಯೇ ದುಷ್ಟರ ಸಂಹಾರಕ

ಪುಟ್ಟ ಬಾಲಕ ನಿನ್ನ ಸ್ತುತಿಸೆ ಪುಟ್ಟಿದೆ ಕಂಬದೊಳು

ಸಿಟ್ಟಿನಿಂದಲಿ ದೈತ್ಯನನು ನೀ ಹೊಟ್ಟೆಯ ಬಗೆದ ಹರಿ

ದಿಟ್ಟ ಶ್ರೀ ನಾರಸಿಂಹ ಎನಗೆ ಕೊಟ್ಟು ಮತಿಯ ಸಲಹೊ

ಪದ :

ಬಂದರು ಹರಿಯ ದರುಶನಕೆಂದು ಮುನಿಗಳೂ ಅಂದು

ದ್ವಾರಪಾಲಕರಂದು

ಮಂದ ಮತಿಯಿಂದ ಬಿಡದಿರೆ ಅಲ್ಲೆ ತಡೆದರೆ

ರೋಷಜ್ವಾಲೆಯ ಕೆದರೆ

ಮಂದಭಾಗ್ಯರೆ ದೈತ್ಯರು ಆಗಿ ಭೂಮಿಗೆ ಪೋಗಿ

ಎಂದು ಶಪಿಸಲು ಕೊರಗಿ

ಮಂದಹಾಸನೆ ಹರಿ ಪೊರೆಯೆಂದು ಮೊರೆಯಿಡಲಂದು

ಅಭಯವಿತ್ಯೊ ಗುಣಸಿಂಧು 1

ವೃತ್ತ :

ಶ್ರೀಶನಾಜ್ಞೆಯಿಂದ ಬಂದು ಧರೆಗೆ ದ್ವೇಷಿಗಳೆಂದೆನಿಸಿ

ವಾಸುದೇವನ ಭೃತ್ಯವರ್ಗಗಳನು ಹಿಂಸೆಯಗೈಯ್ಯುತಲಿ

ದೋಷಕಂಜದೆ ಕನಕನಯನ ಖತಿಯೊಳ್

ಭೂಸುದತಿಯಂ ಒಯ್ಯಲು

ನಾಶಪಡಿಸಿ ಅವನ ಕಾಯ ಪೊರದೆ ಭೂಸತಿಯ ವರಹಾತ್ಮಕ

ಪದ :

ಕನಕಾಕ್ಷ ಮಡಿದುದು ತಾ ಕೇಳೀ ರೋಷವ ತಾಳಿ

ಕನಕ ಕಶ್ಯಪು ಕನಲಿ

ಮನದಲ್ಲಿ ಚಿಂತೆಯ ಮಾಡಿದ ಧೈರ್ಯ ತಾಳಿದ

ಹರಿಯ ಕೊಲ್ಲುವೆನೆಂದ

ವನಕೆ ಪೋಗುತ ತಪಚರಿಸಿದ ಬ್ರಹ್ಮ ಮೆಚ್ಚಿದ

ಬೇಡಿದುದೀವೆನೆಂದ

ದಿನದೊಳು ಮರಣವು ಬೇಡೆಂದ ನಾನಾ ಬಗೆಯಿಂದ

ಬೇಗ ಕೊಡು ಇದನೆಂದ 2

ವೃತ್ತ :

ಕೊಟ್ಟಾಗ ವರ ಬ್ರಹ್ಮ ಪುರಕೆ ಬರಲು ಪುಟ್ಟಿತು ಮದ ಗರ್ವವು

ಅಷ್ಟದಿಕ್ಪಾಲಕರೆಲ್ಲ ನಡುಗಿ ಕೊಟ್ಟರು ಕಪ್ಪವನು

ದುಷ್ಟ ತಾ ಜಗವ ಹುರಿದು ಮುಕ್ಕಿ ಸೃಷ್ಟೀಶ ತಾನೆಂದನು

ಅಷ್ಟು ಆಹುತಿ ಎನಗೆ ಕೊಡಿರಿ ಕಟ್ಟಳೆ ಮಾಡಿದನು

ಪದ

ಮೂರು ಲೋಕವು ತಲ್ಲಣಿಸುತ ತಾಪವಪಡುತ

ಹರಿಯೆ ರಕ್ಷಿಸು ಎನುತ

ಸಾರಿ ಬರುತಿರೆ ದೇವತೆಗಳು ಋಷಿ ಮುನಿಗಳೂ

ನೋಡಿದ ಕರುಣಾಳು

ಘೋರದೈತ್ಯನು ಸುತನ ಬಾಧಿಪ ಸತ್ಯಸಾಧಿಪ

ಆಗ ಬರುವೆನು ತಾಪ

ಹರಿದು ರಕ್ಷಿಪೆ ನಿಮ್ಮ ಪೋಗಿರಿ ಧೈರ್ಯ ತಾಳಿರಿ

ಮಡಿದ ರಕ್ಕಸನ ನೋಡುವಿರಿ 3

ವೃತ್ತ :

ಎಂದಾ ಹರಿಯ ವಚನವ ಕೇಳಿ ಸುರರು ಬಂದರು ತಂ ಸ್ಥಾನಕೆ

ಎಂದಿನಂದದಿ ದೈತ್ಯ ಸಭೆಯೊಳ್ ಕಂದನ ಕರೆಯುತ್ತಲಿ

ಮಂದಹಾಸ ಮುಖವ ನೋಡಿ ಕಲಿತುದೇನೆಂದು ಬಿನ್ನೈಸೀಗೆನೆ

ತಂದೆ ಜಗಕೆ ಹರಿಯು ಸತ್ಯ ಒಂದೇ ವಚನ ನಿಶ್ಚಯ

ಪದ :

ಕೇಳಿದ ಕರ್ಣ ಕಠೋರವ ಮಗನ ಭಾವವ

ಮನಕೆ ಆಯಿತು ನೋವ

ತಾಳುತ ರೋಷವ ಸುತನಲಿ ದೈತ್ಯ ಮನದಲಿ

ಭೃತ್ಯರ ಕರೆಯುತಲಿ

ಪೇಳಿದ ನಾನಾ ದುಃಖವ ಕೊಡಿರಿ ಹಿಂಸೆಪಡಿಸಿರಿ

ಎಂದು ನುಡಿದ ಸುರವೈರಿ

ಬಾಲನ ಪಿಡಿದೆಳೆತಂದರು ಬಾಧೆ ಕೊಟ್ಟರು ಜಲಗಿರಿ

ಅಗ್ನಿಲ್ಹಾಕಿದರು 4

ವೃತ್ತ :

ಗಜದ ಕಾಲಿಗೆ ಕಟ್ಟಿ ಎಳೆಸಿ ಭುಜಗನ ಮೇಲ್ ಬಿಡುತಿರೆ

ಗಜವ ಪಾಲಿಸಿದ ಹರಿಯೆ ಪೊರೆಯೊ ಭುಜಗನಶಯನ ಹರೆ

ನಿಜವು ತಿಳಿಯದೆ ನಿನಗೆ ಎಂದು ಭಜಿಸೆ ನಿಜಮನವರಿತು ಹರಿ

ದ್ವ್ವಿಜಧ್ವಜನ ಭಕ್ತ ಸ್ತುತಿಸೆ ಗಜ ವೈರಿ ರೂಪಾದನು

ಪದ :

ಮತ್ತಾಗ ಕರೆದನು ಮಗನನು ದೈತ್ಯನು ತಾನು

ನಿನ್ನ ರಕ್ಷಿಪೆ ನಾನು

ಶತ್ರು ನಮಗೆ ಹರಿ ಥರವಲ್ಲ ಬಿಡು ಈ ಸೊಲ್ಲ

ನೀ ನುಡಿ ಎನ್ನ ಸೊಲ್ಲ

ಸತ್ಯವೊ ಎನಗೆ ರಕ್ಷಕ ಹರಿ ಬಹುದುರಿತಾರಿ

ಎನ್ನ ಪೊರೆವನು ಶೌರಿ

ಮತ್ತೆ ತಾಳಿದ ರೋಷ ಮನದಲಿ ಪುರೋಹಿತದಲಿ

ವಿದ್ಯೆ ಕಲಿಸೆನುತಲಿ 5

ವೃತ್ತ :

ಕ್ಷಿಪ್ರದಿಂದಲಿ ಶಾಲೆಗಾಗ ಕಳಿಸೆ ಪುತ್ರರ ಕೂಡುತಲಿ

ಸಪ್ರಾಮಾಣ್ಯವ ಕೇಳಿರಿನ್ನು ಜಗಕೆ ಶ್ರೀಪತಿಯೆ ಸರ್ವೋತ್ತಮ

ಈ ಪೃಥೀಶರ ನಂಬಬೇಡ ಹರಿಯ ನೀವ್ ಪ್ರಾರ್ಥನೆ ಮಾಡಿರೋ

ಕ್ಷಿಪ್ರದೊಳ್ ಕಾಯ್ವ ಹರಿಯು ಎನುತ ತಾ ಪ್ರೇರಿಸಿದ ತರಳನು

ಪದ :

ಕೇಳಿ ಬಾಲರು ಎಲ್ಲ ಮನದಲಿ ಹರುಷವ ತಾಳಿ

ಹರಿಯ ಕೊಂಡಾಡುತಲಿ

ಹೇಳಿದರ್ಯಾರೊ ನಿನಗಿದನು ಎಮಗೆ ಪೇಳಿನ್ನು

ಎನಲು ಪ್ರಹ್ಲಾದನು

ಕೇಳಿರೊ ಗರ್ಭದಿ ಇರೆ ನಾನು ನಾರದನು

ದಯೆಗೆಯ್ದ ಎನಗಿನ್ನು

ಅಳಿಯದೊ ಎನಗೆ ಶ್ರೀ ಹರಿ ಚಿಂತೆ ಬಿಡಿರಿ ದುರ್ಭಾಂತೆ

ಮಾಡಿರಿ ಹರಿಚಿಂತೆ 6

ವೃತ್ತ :

ಬಂದು ನೋಡಿ ಉಪಾಧ್ಯ ಮಠದಿ ಸುತರಾನಂದದಾ ವೈಭವವನು

ಇಂದು ಎಲ್ಲರ ಕೆಡಿಸಿ ಎನ್ನ ತಲೆಗೆ ತಂದೆಯೊ ಮೃತ್ಯುವನು

ಕೊಂದಿಡುವೆನೊ ಬಾಲ ಈಗ ನಿನ್ನ ತಂದೆಯ ಬಳಿಗೊಯ್ದು ನಾ

ನೆಂದುತರಳನ ತಂದು ಖಳನಾ ಮುಂದೆ ನಿಲ್ಲಿಸಿ ಪೇಳಿದ

ಪದ :

ಸಾಧ್ಯವಿಲ್ಲವೊ ತಿದ್ದುವುದು ಇನ್ನು ನಮಗಿವನನು

ಕೆಡಸಿದ ಬಾಲರನ್ನು

ಸುದ್ದಿಯ ಕೇಳಿದ ರೋಷದಿ ಪದಘಾತದಿ

ಬೆದರಿಸಿ ನುಡಿದ ಭರದಿ

ಪೊದ್ದಿಹನೆಲ್ಲೊ ನಿನ್ನಾ ಹರಿ ಕರಿಯುವೆ ಕರಿ ಪೇಳೋ

ಬೇಗ ಕುಲವೈರಿ

ಪದ್ಮಸಂಭವಪಿತ ಜಗತ್ಕರ್ತಾ ಸರ್ವತ್ರದಿ ವ್ಯಾಪ್ತಾ

ಎನ್ನ ಪೊರೆಯುವನು ಗುಪ್ತ 7

ವೃತ್ತ :

ಎಲ್ಲಾ ಕಡೆಯಲಿ ವ್ಯಾಪ್ತ ನಿನ್ನ ಹರಿಯು ಕೊಲ್ಲುವೆ ನಿನ್ನ ಕರಿ

ಇಲ್ಲೀ ಸ್ಥಂಭದಿ ತೋರು ಎನಲು ಶ್ರೀ ನಲ್ಲ ಪೊರೆ ಎಂದನು

ಅಲ್ಲೇ ಸ್ಥಂಭವು ಛಟ ಛಟತ್ಕ್ಕಾರವಾಗೆ ಖುಲ್ಲನು ಬೆದರಿದನು

ಪ್ರಹ್ಲಾದವರದ ನರಮೃಗನು ಆಗಿ ಅಲ್ಲಿಂದ ಹೊರ ಹೊರಟನು

ಪದ :

ಪಾಪಿಯ ತೊಡೆಯ ಮೇಲಿಟ್ಟನೊ ಹೊಟ್ಟೆ ಬಗೆದನು

ಕರುಳ್ಮಾಲೆ ಹಾಕಿದನು

ರೂಪವು ಘೋರವವಾಗಿರುತಿರೆ ದೇವತೆಗಳ್ ಬೆದರೆ

ಲಕ್ಷ್ಮೀಯು ಪೋಗದಿರೆ

ಕೋಪವಡಗಿಸೊ ಪ್ರಹ್ಲಾದನೆ ವರಭಕ್ತನೆ ಸ್ತುತಿಸೆ ಶಾಂತನಾದೆ

ಗೋಪಾಲಕೃಷ್ಣವಿಠ್ಠಲ ಹರಿ ಲಕ್ಷ್ಮಿನರಹರಿ

ಕಾಯ್ವ ಜಗವೆಲ್ಲ ಶೌರಿ 8

****