ರಾಗ - ತೋಡಿ
ತಾಳ - ಆದಿತಾಳ
ಬಡತನವು ಸಾಕೋ ನಮ್ಮಪ್ಪ ತಿಮ್ಮಪ್ಪ l ತಿರುಪತಿಯ ತಿಮ್ಮಪ್ಪ ll ಪ ll
ನಡುನೋಯುವ ಪರಿ ತಿರುಗುತ ಬಾಯ್ ಬಾಯ್ ಬಿಡುತ l
ಪರರ ಬಿರುನುಡಿ ಕೇಳುತ ದೈನ್ಯದಿ ಕೊರಗುವ ll ಅ ಪ ll
ತಂಬಿಗೆ ಪಿಡಿಯುತ ಕೈಯ್ಯಲಿ ಅದು l ತುಂಬಲೆನುತ ವದರುತಲೀ ll
ಅಂಬುಜನಾಭನ ಮಹಿಮೆಯ ಪೊಗಳುತ l
ನಂಬಿದ ಸತಿಸುತರುಗಳನೆ ಜರಿಯುತ l
ಸಂಭ್ರಮದಿರ್ಪರ ಗೃಹಪ್ರವೇಶಿಸುತ l ಸ್ತಂಭದ ಮರೆ ತಲೆಬಾಗಿಸಿ ದೈನ್ಯದಿ ಕಳವಳಿಸುವ ll 1 ll
ಪಂಡಿತ ನಾದೊಡದೇನು ಪ್ರ l
ಚಂಡ ಬುದ್ಧಿಯಿರಲೇನು l
ಪುಂಡರೀಕಾಕ್ಷನ ಕೃಪೆ ಇಲ್ಲದಲಿರೆ l ಕಂಡಕಂಡವರು ಬೈವುತದಬ್ಬುತ l
ಧಾಂಡಿಗ ನಿನಗೇಂಬಂದಿದೆ ಕೇಡೆಲೊ l
ಪುಂಡ ದೂರಸಾಗೆನುತಲಿ ಹಾಸ್ಯದ ನುಡಿ ನುಡಿವರು ll 2 ll
ದೇಶದೇಶಗಳ ತಿರುಗಿ ಮನ l
ದಾಶೆಯಿಂದ ಬಲು ಕೊರಗೀ ll
ಕಾಸುವೀಸದ ದಾಯವ ಕಾಣದೆ l ಬೇಸರಪಡಿಸಿ ಜನರ ಸಮುದಯ ಸಂ l
ತೋಷಸುಖವ ಸ್ವಪ್ನದೊಳರಿಯೆನು ಪರಿ ಪೋಷಿಸಯ್ಯ ಸಕಲೇಷ್ಟಪ್ರದವೋ ಸಿರಿಕಾಂತವಿಟ್ಠಲ ll 3 ll
***