ಕಮಲಕಮಲಾಧರನೆ ಕಮಲಭವ ವಂದಿತನೆ
ಕಮಲ (?) ನುತನೇ ಕಮಲಶತ ಹಿತಕರನೆ ಪ
ಕಮಲಬಾಣನ ಪಿತನೇ ಕಮಲದಳ ಲೋಚನನೇ
ಕಮನೀಯನುಪ್ಪವಡಿಸಾ ಹರಿಯೇ ಅ.ಪ
ಸಲಹಲೀ ಲೋಕಗಳ ಬಹುವೆನಿಪ ದಾನವರ
ಗೆಲಿದು ಪಾಲ್ಗಡಲ ನಡುವಲದ ನೆಲೆವನೆಯ
ತಲೆವಣಿಯ ಕಾಂತಿಗಳ ಮಿಗೆ ಜ್ವಲಿಪ ಬೆಳಗುಗಳಿಂದ
ನಲಿದು ಫಣಿಮಂಚದೊಳಗೆ
ಮಲಗುವಾಸುಗಳ ಮೇಲೊಲಿದು ಕಾಂತೆಯರೊಡನೆ
ಲಲಿತ ಸಂಕುಳದಿಂ ಕಲಿತ ಮೋಹವ ಮೆರೆಯೆ
ಫಲಿತ ಪುಳಕಗಳು ಮಿಗೆ ಬಲಿದ ನಿದ್ರೆಗಳ ಶ್ರೀಲಲನೇಶನುಪ್ಪವಡಿಸ1
ಪರಿಯುತಿದೆ ತಂಬೆಲರು ಹರವುತಿದೆ ತಮರಾಸಿ
ಸರಿಯುತಿದೆ ಉರುಗಣಂ ಬಿರಿಯುತಿದೆ ಅರೆಮುಗುಳು
ಪೊರೆಯುತಿದೆ ಲತೆಯ ಸಿರಿ ಮುರಿಯುತಿದೆ ಶರಧಿಯೇಳ್ಗೇ ಉದಯಕೆ
ಕರೆಯುತಿದೆ ಗಿಳಿವಿಂಡು ಕೊರುಗುತಿವೆ ಕೋಕಗ
ಳ್ಮೊರೆಯುತಿದೆ ದಿವಿಜಹರೆ ಸುರಿಯುತಿದೆ ಅರಳ ಮಳೆ
ಗರೆಯುತಿದೆ ಕೋರಕಂ ವೋಲಗಕೆ ಕರುಣಾಳು ಉಪ್ಪವಡಿಸಾ 2
ತೋರುತಿದೆ ಇನಬಿಂಬ ದೂರುತಿದೆ ಕುಮುದ ಸೊಂ
ಪೇರುತಿದೆ ವನರುಹಂ ಬೀರುತಿದೆ ಕಡು ಚೆಲ್ವ
ಸೋರುತಿದೆ ಮಕರಂದ ತೋರುತಿದೆ ತನಿಗಂಪ ಪಾರುತಿವೆÉ ಭ್ರಮರಂಗಳೂ
ಸಾರುತಿದೆ ತಾಮ್ರಶಿಖಿ ಜಾರುತಿದೆ ಶಶಿನಭದಿ
ಕಾರುತಿವೆ ಹಿಮಶಿಲೆಗಳಾರುತಿದೆಯೈಕಿಲುರು
ಚೀರುತಿವೆ ಪಕ್ಷಿಗಳು ಮೀರುತಿವೆ ಜನರವಂ ಪೂರ್ಣಧನು ಉಪ್ಪವಡಿಸಾ3
ಆಡುವರೆ ನರ್ತನವ ಪಾಡುವರೆ ಗಾನಗಳ
ನೀಡುವರೆ ಪನ್ನೀರ ತೀಡುವರೆ ಸುರಭಿಗಳ
ಮಾಡುವರೆ ಸಿಂಗರವ ಪೂಡುವರೆ ಹಾರಗಳನೂ
ಕೋಡುವರೆ ಕಾಣಿಕೆಯ ಬೇಡುವರೆ ಸಂಪದವ
ಸೂಡುವರೆ ಕುಸುಮಗಳ ನೋಡುವರೆ ಸಮಯಗಳ
ಓಡುವರೆ ಊಳಿಗಕೆ ಕೂಡಿಹರು ಬಾಗಿಲೊಳು
ಗಾಡಿಮಿಗಲುಪ್ಪವಡಿಸಾ 4
ದೇವ ಸಂಸ್ತುತಲೀಲ ದೇವ ಮುನಿನುತ ಶೀಲ
ದೇವತತಿಗನುಕೂಲ ದೇವರಿಪುವನಜಾಲ
ದೇವ ಪತಿಸುತಪಾಲ ದೇವಕೀವರ ಬಾಲ ದೇವಕುಸುಮಗಳ ಮೂಲ
ದೇವನದಿಜಾಪಾಲ ದೇವ ನಿಗಮದ ಮೂಲ
ದೇವ ತನುರುಚಿಲೀಲ ದೇವ ರವಿಸಮ ಚೇಲ
ದೇವ ಗುಣಗಣಜಾಲ ದೇವಪುರಿ ಶ್ರೀಲೋಲ ದೇವ ನಲಿದುಪ್ಪವಡಿಸಾ 5
****