Showing posts with label ಸಾಧು ಜನರ ಸಂಗ ಮಾಡು vijaya vittala suladi ಸಾಧನ ಸುಳಾದಿ SAADHU JANARA SANGA MAADU SADHANA SULADI. Show all posts
Showing posts with label ಸಾಧು ಜನರ ಸಂಗ ಮಾಡು vijaya vittala suladi ಸಾಧನ ಸುಳಾದಿ SAADHU JANARA SANGA MAADU SADHANA SULADI. Show all posts

Friday, 1 October 2021

ಸಾಧು ಜನರ ಸಂಗ ಮಾಡು vijaya vittala ankita suladi ಸಾಧನ ಸುಳಾದಿ SAADHU JANARA SANGA MAADU SADHANA SULADI

Audio by Mrs. Nandini Sripad

ಶ್ರೀವಿಜಯದಾಸಾರ್ಯ ವಿರಚಿತ  ಸಾಧನ ಸುಳಾದಿ 


(ಸಾಧು ಸಜ್ಜನ ಸಂಗ , ತತ್ಸಂಗದಿ ಶ್ರವಣ ಮನನಾದಿಗಳೇ ಮುಖ್ಯ ಸಾಧನ.) 


 ರಾಗ ಭೈರವಿ 


 ಧ್ರುವತಾಳ 


ಸಾಧುಜನರ ಸಂಗ ಮಾಡು ಮನವೆ ಸಕಲ

ವೇದದಲ್ಲಿ ಸಾರಿ ಸಾರುತಿದಕೋ

ಆದಿಯಿಂದಲಿ ವಿಡಿದು ಇದ್ದ ದೇಹದ ಮೂಲ

ಛೇದಿಪುದಕ್ಕೆ ಇದೆ ಬೀಜ ಕಾಣೋ

ಪಾದಾರ್ಧ ಕಾಲವಾಗೆ ಬಿಡತಕ್ಕದ್ದಲ್ಲ ಸಂ -

ಪಾದಿಸು ಸಾಧಿಸು ಹೃದಯದಲ್ಲಿ

ಭೋದಭರಿತನಾಗಿ ನಲಿದಾಡು ಕುಣಿದಾಡು

ಮೋದಾಂಬುನಿಧಿ ಮಧ್ಯ ತೂಗ್ಯಾಡೆಲೋ

ಸಾಧನ ಒಂದು ಕಾಣೆ ಇದರ ವಿರಹಿತವಾಗಿ

ವೈದೀಕ ಮಾರ್ಗಕ್ಕಿಂತ ಸುಖವೇ ಇಲ್ಲ

ಆದಿತ್ಯಗಣದವರು ಭವ ವಲ್ಲೆವೆಂದು ಬಲು

ರೋದನದಿಂದ ಹರಿಯ ತುತಿಪಾರಿದಕೊ

ಸಾಧಿಸಿ ತಿಳಿದು ನೋಡು ನಿನ್ನ ಪಾಡೇನು ಮೃತ್ಯು

ಹಾದಿ ನೋಡುತಲಿದೆ ದಿವಸ ಎಣಿಸಿ

ಈ ದೇಹ ದೃಢವಾಗಿ ಉಳ್ಳ ಪರಿಯಂತ ನಿನಗೆ

ಈ ದೇಹಿಗಳೆಲ್ಲ ಅನುಬಂಧಿಯೋ

ಮೇಧಾದಿ ಕರ್ಮಗಳು ಮಾಡಿದರೇನು ಬ್ರಹ್ಮ

ವಾದಿಗಳ ಸಂಗವಿಲ್ಲದನಕಾ

ಓದಿದ ಮಾನವನು ಮಾತಂಗಿ ಸಂಗ ಮಾಡಿ

ಮೇದಿನಿಯೊಳಗೆ ಇದ್ದಂತೆ ಕಾಣೋ

ತೇದ ಕರ್ಪುರ ಗಂಧ ಹಂದಿಗೆ ಪೂಸಿ ವಿ -

ನೋದ ಮಾಡಿದಂತೆ ತಿಳಿಯದ ಕರ್ಮ

ಗೋಧಿಯ ಬೀಸಿ ತಂದು ಅದಕೆ ಮದ್ಯವ ಹಾಕಿ

ನಾದಿದಂತೆ ಕಾಣೊ ನಾನಾ ಕುಶಲ

ಐದಿದ ಕಾಲಕ್ಕೆ ಶ್ರೀಹರಿ ವಾಯು ವಿರಹಿತ -

ವಾದ ಕರ್ಮಗಳೆಲ್ಲ ವ್ಯರ್ಥ ಕಾಣೊ

ಆದಿಮೂರುತಿ ನಮ್ಮ ವಿಜಯವಿಟ್ಠಲರೇಯನ 

ಪಾದ ಪೊಂದುವದಕ್ಕೆ ಸುಲಭ ಸಾಧನ ಕೇಳಿ ॥ 1 ॥ 


 ಮಟ್ಟತಾಳ 


ಶ್ರವಣವೆ ಮಹಾ ಮುಖ್ಯಕರ್ಮ ಜ್ಞಾನಿಗಳಿಗೆ

ಶ್ರವಣವಿಲ್ಲದ ತನಕಾ ಆವದು ದೊರಕದು

ಶ್ರವಣದಿಂದಲಿ ಸತತ ಜ್ಞಾನ ಭಕುತಿ ವಿರಕುತಿ

ಶ್ರವಣವೆ ಸಕಲಕ್ಕು ಕಾರಣ ಕಾರಣವೋ

ಶ್ರವಣವೆ ಶ್ರೀಹರಿಯ ತಾತ್ವೀಕ ಪ್ರಸಾ -

ದವನು ಮಾಡಿಕೊಟ್ಟು ಮುಕ್ತಿಗೆ ಐದಿಪದೊ

ಶ್ರವಣವೆ ಮಂಗಳವೋ ಮೂರು ಲೋಕಕ್ಕೆ ನಿತ್ಯ

ಶ್ರವಣ ಮಾಡಿದ ಮನುಜ ಸರ್ವದ ಪವಿತ್ರ

ಶ್ರವಣಾಸಕ್ತನಿಗೆ ಭಯ ಶೋಕಗಳಿಲ್ಲ

ಶ್ರವಣಾನಂದಕ್ಕಗಾಧ ಕರ್ಮಂಗಳು

ಇವು ಸರಿಯಾಗವು ಮರಳೆ ಮರಳಿ ಮರಳಿ ಎಣಿಸೆ

ಶ್ರವಣಕ್ಕೆ ಒಲಿವ ವಿಜಯವಿಟ್ಠಲನಂಘ್ರಿ 

ನವನವ ನಾಮಗಳ ಶ್ರವಣ ಮಾಡೋ ಮನುಜಾ ॥ 2 ॥ 


 ತ್ರಿವಿಡಿತಾಳ 


ಅನಿಷಿದ್ಧ ಕರ್ಮಗಳು ಕೈಕೊಂಡು ಚನ್ನಾಗಿ

ಅನುಭವದಿಂದಲಿ ಇರಳು ಹಗಲೂ

ಮನದಲ್ಲಿ ಶ್ರೀಹರಿಯ ಧ್ಯಾನವ ಮಾಡಿ ಯೋ -

ಚನೆ ಮಾಡುವುದು ಸರ್ವವ್ಯಾಪ್ತ ತಿಳಿದು

ಘನವಾಗಿ ನಾನಾ ಕರ್ಮಕೆ ಮುಖ್ಯ ಸಾಧನ

ಗುಣಿಸು ಈ ಯುಗದಲ್ಲಿ ಶ್ರೀಕೃಷ್ಣ ಸ್ಮರಣೀ

ಕ್ಷಣ ಒಂದು ಮಾಡಿದರೆ ಅನಂತಾನಂತ ಬಹು

ಜನುಮದಲಿ ಮಾಡಿದ ಸತ್ಕರ್ಮವೋ

ಎಣಿಕೆ ಮಾಡಿದರಾಗೆ ಇದಕೆ ಸರಿ ಬಪ್ಪದೇ

ಮನುಜ ಕೇಳೆಲೊ ಮಾತು ಅತಿ ರಹಸ್ಯ

ಪ್ರಣವ ವಿಡಿದು ವಾಯು ಜಠರವನೆ ತುಂಬಿ

ಗಣನೆ ಇಲ್ಲದ ತಪಸು ಮಾಡಲ್ಯಾಕೆ

ಕೊನಿಗೆ ಪೂರೈಸದು ಕರ್ಮಠನಾದರೆ

ದಣಿದು ಕರ್ದಮ ವಾರಿ ಕುಡಿದಂತೆವೋ

ದಿನ ಪ್ರತಿದಿನದಲ್ಲಿ ಕರ್ಮ ಸಂಕೋಚದಲ್ಲಿ

ವನಧಿಶಯನನ ನಾಮ ಮಂಗಳ ಶ್ರವಣ

ಅನಿಲನ್ನ ಪಾದವ ಸ್ಮರಿಸುತ ಮಾಡಿದ

ಮನುಜಂಗೆ ವಿಷಯ ಜನನವಾಗದೂ

ಮಿನಗುವ ಇಂದ್ರಿಯಂಗಳು ಮನ ಪ್ರಾಣಾತ್ಮ

ಘನ ಧೈರ್ಯ ಸ್ಥೈರ್ಯ ಹ್ರೀ ಶ್ರೀ ಸತ್ಯವೊ

ವಿನಯ ವಿದ್ಯದ ಧರ್ಮ ಜ್ಞಾನ ಆಚಾರಾದಿ

ಇನಿತು ಸಿದ್ಧಿಸಿ ಅವಗೆ ಕೆಡದಿಪ್ಪವೋ

ಜನನ ಹಾನಿ ನಾಶ ವಿಜಯವಿಟ್ಠಲರೇಯನ 

ಗುಣ ಕರ್ಮಾವಳಿ ಮಹಿಮೆ ಶ್ರವಣ ಮಾಳ್ಪನೇ ಧನ್ಯ ॥ 3 ॥ 


 ಅಟ್ಟತಾಳ 


ತನಗೆ ಮಂಗಳ ತನ್ನ ಕುಲಕ್ಕೆ ಮಂಗಳ ಸುತ್ತೆ

ಜನಕೆ ಮಂಗಳ ನಿತ್ಯ ಸರ್ವ ಜಗಕೆ ಮಂಗಳ

ಮನಸ್ಸಿನಲ್ಲಿ ನೆನೆನೆನೆದು ಪುಳಕೋತ್ಸಾಹ

ವನಧಿಯೊಳಗಿದ್ದು ಹರಿಕಥಾಮೃತದಲ್ಲಿ

ನೆನೆನೆನೆದು ತೋದು ತೋದು ತೋದಾ

ಮನುಜನೋರ್ವನು ಸ್ವಾಭಾವಿಕವಾಗಿ ಪೋಗುತ್ತ -

ವನಿ ಮಧ್ಯ ಮಾನವ ಚಾಂಡಾಲ ಕುಲದಲ್ಲಿ

ಜನನವಾಗಿದ್ದು ನಿಶ್ಶೇಷ ಪಾಪಗಳೆಲ್ಲ

ಮನಃಪೂರ್ವಕವಾಗಿ ಮಾಡಿದವನ ನೋಡೆ

ಅನಿತರೊಳಗೆ ಶುದ್ಧಾತ್ಮನಾಗುವ ಕೇಳಿ

ಕನಸು ಎನ್ನ ಸಲ್ಲ ಯಮಪುರವೆ ಸಾಕ್ಷಿ

ತೃಣ ಮಾಡಿ ನರಕವ ಒದ್ದು ಪೋದರು ನೋಡು

ಮುನಿಪುಂಗವನುತ ವಿಜಯವಿಟ್ಠಲ ರೇ -

ಯನ ಹೃತ್ಕಮಲದಲ್ಲಿ ಕಾಂಬ ಶ್ರವಣದಿಂದ ॥ 4 ॥ 


 ಆದಿತಾಳ 


ಭವತಾರಕ ಹರಿಕಥಾಮೃತ ಶ್ರವಣ

ಶ್ರವಣಕ್ಕೆ ಬೀಳಲು ಮಾಡುವ ಮುಕುತಿಗೆ

ಹವಣ ಭವತಾರಕ ಜಿತು ಉದ್ಧರಣ

ಶ್ರವಣ ಭಾವನಾ ಭುವನದೊಳಗಿರೆ ಧವಳಾಂತಃಕರಣ

ನವನವ ಪ್ರಮೇಯ ಭಾಗ ಸ್ಮರಣವು

ಕವನ ಪೇಳುವರಿಗಾಭರಣಾ

ಭವ ತಾನೇ ಬಲ್ಲ ಇದರೋಚ್ಚಾರಣ ಆಚರಣ

ಶ್ರವಣ ಬಲು ಮಾಡಿದ ನರಗೆ ಜವನ ಭೀತಿ ಹರಣ

ಭವತಾರಕ ಹರಿಕಥಾಮೃತ ಶ್ರವಣ

ಭವಮೂರುತಿ ನಮ್ಮ ವಿಜಯವಿಟ್ಠಲ ತನ್ನ

ಭವನವೆ ಕೊಡುವನು ಶ್ರವಣವೆ ಗತಿ ಎನ್ನೆ ॥ 5 ॥ 


 ಜತೆ 


ಶ್ರವಣ ಕೇಳದವನು ಜೀವಚ್ಛವವೆನ್ನಿ

ಪವನ ಸ್ವಾಮಿ ನಮ್ಮ ವಿಜಯವಿಟ್ಠಲ ಮೆಚ್ಚು ॥

****