Showing posts with label ಇದೇ ಭಾಗ್ಯ vijaya vittala ankita suladi ನಾಮ ಸಂಕೀರ್ತನ ಸುಳಾದಿ IDE BHAGYA NAAMA SANKEERTANA SULADI. Show all posts
Showing posts with label ಇದೇ ಭಾಗ್ಯ vijaya vittala ankita suladi ನಾಮ ಸಂಕೀರ್ತನ ಸುಳಾದಿ IDE BHAGYA NAAMA SANKEERTANA SULADI. Show all posts

Friday, 1 October 2021

ಇದೇ ಭಾಗ್ಯ vijaya vittala ankita suladi ನಾಮ ಸಂಕೀರ್ತನ ಸುಳಾದಿ IDE BHAGYA NAAMA SANKEERTANA SULADI

Audio by Mrs. Nandini Sripad


 ಶ್ರೀವಿಜಯದಾಸಾರ್ಯ ವಿರಚಿತ ನಾಮ ಸಂಕೀರ್ತನ ಪ್ರಶಂಸನಾ ಸುಳಾದಿ 


 ರಾಗ ರೀತಿಗೌಳ 


 ಧ್ರುವತಾಳ 


ಇದೆ ಭಾಗ್ಯ ಇದೆ ಭಾಗ್ಯ ಕಲಿಯುಗದಲಿ ನಿನ್ನ

ಪದಪದ್ಮ ಸಂಕೀರ್ತನೆ ಚನ್ನಾಗಿ ಮಾಡಿ ಸಂ -

ಪದಯುಗ್ಮ ಸಂಕೀರ್ತನೆ ಮನೋವಾಚಕಾಯದಲ್ಲಿ

ಇದಕ್ಕಿಂತಧಿಕವಾದ ಭಾಗ್ಯವಿಲ್ಲ

ಉದಯಕಾಲದಲೆದ್ದು ಸ್ನಾನ ನಾನಾ ಕರ್ಮ

ಇದರ ತರುವಾಯವಿಪ್ಪವಯ್ಯಾ

ನಿಧಿ ನಿಧಿ ಎನಗಿದೆ ಮತ್ತೊಂದು ಮಾರ್ಗ ಕಾಣೆ

ಸದಮಲಾನಂದ ಮೂರ್ತಿ ಭಕ್ತರೊಡಿಯಾ

ಬುಧರು ಪೇಳುವರು ಮಹದುರಿತಕ್ಕೆ ಇದೆ

ಇದೆ ಪ್ರಾಯಶ್ಚಿತ್ತವೆಂದು ಒಲಿದೊಲಿದು

ಹೃದಯದೊಳಗೆ ತಿಳಿದು ನೆರೆ ನಂಬಿದೆ ನಿನ್ನ

ಪದಗಳ ಕೊಂಡಾಡುವ ಕೀರ್ತನೆಯ

ವಿಧದಿಂದಾಗಲಿ ಒಬ್ಬರ ನೋಡಿ ಮಾಡಲಿ

ಸುಧಿಯನ್ನು ಕುಡಿದಂತೆಯಾಗುವದು

ಮದ ಗರ್ವ ನಾನಾದರು ನಿನ್ನ ನಾಮದ ಮಹಿಮೆ

ಪದೊಪದಿಗೆ ಎಣಿಸಿದರು ನೆಲೆಗಾಣೆನೋ

ತ್ರಿದಶರಿಗೆ ಮೀರಿದ ವಿಜಯವಿಟ್ಠಲ ವೆಂಕಟ

ಮುದದಿಂದ ನಿನ್ನ ನಾಮ ಎನ್ನ ಜಿಹ್ವೆಯಲ್ಲಿರಲಿ ॥ 1 ॥ 


 ಮಟ್ಟತಾಳ 


ನಾನಾ ವ್ಯಾಪಾರ ನಿನ್ನಾಧೀನವು

ನಾನಾ ಸಂಪತ್ತು ನಿನ್ನಾಧೀನವು

ನಾನಾ ಲೋಕಂಗಳು ನಿನ್ನಾಧೀನವು

ನಾನಾ ಜಡಗಳು ನಿನ್ನಾಧೀನವು

ನಾನಾ ಜೀವರು ನಿನ್ನಾಧೀನರು

ನಾನಾ ಕರ್ಮಗಳು ನಿನ್ನಾಧೀನವು

ನಾನಾ ಪ್ರೇರಣೆ ನಿನ್ನಾಧೀನವು

ನಾನಾ ವ್ಯಾಪಕ ನಿನ್ನಾಧೀನವು

ನಾನಾ ಬಗೆಯಿಂದ ವ್ಯಾಪ್ತ ನೀನಾಗಿದ್ದು

ನಾನಾ ಗುಣದಿಂದ ತಿರುಗಿಸುವ ದೇವ

ನೀನೇ ಇದನೆ ಮರೆದು ನಾನು ನನ್ನದು ಎಂದು

ನಾನಾ ಗರ್ವದಲಿ ನುಡಿದು ನುಡಿದು ಬಲು

ನಾನಾ ಯೋನಿಯಲ್ಲಿ ಚರಿಸಿದೆ ದುಃಖದಲ್ಲಿ

ನಾನು ನೀನೇ ಎಂಬ ಜನಕೆ ಬರುವ ಶೋಕ

ಏನೆಂಬೆನು ಎಣಿಸಿ ಕಡೆ ಮೊದಲೇ ಕಾಣೆ

ಜ್ಞಾನಪರ್ವತ ವಾಸ ವಿಜಯವಿಟ್ಠಲ ವೆಂಕಟ

ಜ್ಞಾನಿಗಳರಸೆ ನಿನ್ನ ಪೊಗಳುವೆನೋ ॥ 2 ॥ 


 ತ್ರಿವಿಡಿತಾಳ 


ನಾಹಂ ಕರ್ತಾ ಹರಿಃ ಕರ್ತಾ ನೆಂಬೊ ವಚನವೆ ಮರೆದು

ಅಹಂ ಮತಿಯಿಂದಲಿ ತಿರುಗಿ ತಿರುಗೀ

ದ್ರೋಹವ ಘಳಿಸಿದೆ ಮಾಯಾಪಾಶದ ಒಳಗೆ

ಮೋಹದಿಂದಲಿ ಬಿದ್ದು ಬಹು ಕರ್ಮವ

ಸಾಹಸದಲಿ ಮಾಡಿ ಬರಿದಾದೆ ಎಲ್ಲೆಲ್ಲಿ

ಹೋಹದಲ್ಲದೆ ಲೇಶ ಸುಖಗಳಿಲ್ಲ

ಶ್ರೀಹರಿ ಕೇಳಯ್ಯಾ ಎನ್ನ ಮೊರೆ ಲಾಲಿಸೊ

ಈ ಹದನ ಕಲ್ಲಿಸಿದವರು ಆರೋ

ಪಾಹಿ ಪರಮ ಪುರುಷ ಪ್ರಣತಾರ್ಥಿಹರ ಸಂ -

ದೇಹವಿಲ್ಲದೆ ಎನ್ನ ಮನದೈವವೇ

ಬಾಹಿರಂತರ ಪ್ರೇರಕ ಪರಿಪೂರ್ಣನಾದಣು -

ಮಹತ್ತು ರೂಪನೆ ಸ್ಥೂಲ ಸೂಕ್ಷ್ಮ -

ದೇಹದೊಳಗೆ ಇದ್ದು ದ್ವಿವಿಧ ಕರ್ಮಂಗಳು

ದೇಹಿಗಳಿಗೆ ಒಂದೊಂದು ಕಟ್ಟಿ ಸೋಹಂ ದಾ -

ಸೋಹಂಮೆಂದು ನುಡಿಸಿ ಪುಣ್ಯ ಪಾಪ

ನೀ ಹಿತದಿಂದಲಿ ಉಣಿಸುವನೆ

ದ್ರುಹಿಣಪಿತ ನಮ್ಮ ವಿಜಯವಿಟ್ಠಲ ವೆಂಕಟ

ಸ್ನೇಹದಿಂದಲಿ ಎನಗೆ ಇದನೇ ಕರುಣಿಸಬೇಕು ॥ 3 ॥ 


 ಅಟ್ಟತಾಳ 


ಎನ್ನ ಮನಸು ನಿನ್ನ ನಾಮಸ್ಮರಣೆಯಲ್ಲಿ

ಘನ್ನವಾಗಿ ಎರಗಿದೆ ಪ್ರಾಚುರ್ಯದಿ

ಇನ್ನೊಂದು ಕರ್ಮವ ಮಾಡಬೇಕಾದರು

ಉನ್ನತವಾಗಿ ಒಲ್ಲೆನಯ್ಯಾ ತಿರ್ಮಲಾ

ಚನ್ನಾಗಿ ನೀನಿದ್ದು ಇದೇ ಸಾಧನವನ್ನು

ಅನಂತಕಾಲಕ್ಕೂ ಮಾಡಿಸು ಬೇಡುವೆ

ಬನ್ನ ಬಡಿಸುವ ಪಾಪ ಕಳೆಯುತ್ತ

ನಿನ್ನ ಮೂರ್ತಿಯನ್ನು ಮನದೊಳು ತೋರುತ್ತ

ಎನ್ನ ಭಾಗ್ಯವಿದೆ ವಿಜಯವಿಟ್ಠಲ ವೆಂಕಟ

ರನ್ನ ರಾಗದೂರ ರಾಜೀವನೇತ್ರ ॥ 4 ॥ 


 ಆದಿತಾಳ 


ದನುಜ ಭಂಜನ ರಂಜನ

ಇನ ಪ್ರಕಾಶ ನಿರಂಜನ

ಜನ ಪರಿಪಾಲಕ ಅಂಜನ

ತನುಜ ವಿನುತ ಕಂಜನ

ಮನದಲಿ ಇಡು ಪ್ರಭಂಜನ

ಅನುಮತವಾದರೆ ಒಲಿವ

ಅಂಜನಾಭ ವಿಜಯವಿಟ್ಠಲ 

ಅಂಜನಗಿರಿವಾಸ ವೆಂಕಟ ॥ 5 ॥ 


 ಜತೆ 


ಭಕ್ತಿಲಿ ಕೀರ್ತನೆ ಮಾಡುವಂತೆ ಒಲಿಯೊ

ಮುಕ್ತಿದಾಯಕ ನಮ್ಮ ವಿಜಯವಿಟ್ಠಲ ವೆಂಕಟ ॥

****