by Yadugiriyamma
ಆತ್ಮನಿವೇದನಾ ಸ್ತುತಿಗಳು
ಅಗಲಿಸದಿರು ಎನ್ನನು ನಿನ್ನ ಬಿಟ್ಟಗಲಿಸದಿರು ಎನ್ನನು ಪ
ಅಗಲಿಸದಿರು ಎನ್ನ ಅಗಣಿತ ಮಹಿಮನೆ
ನಿಗಮಗೋಚರ ನಿನ್ನ ಪಾದವ ಬಿಟ್ಟು ಅ.ಪ
ಶೋಕಮೋಹಂಗಳಲಿ ಎನ್ನ ನೀ ಹಾಕದಿರೈ ಇನ್ನು
ವ್ಯಾಕುಲವನು ಬಿಡಿಸಿ ಅನೇಕ ಸೇವೆಗಳಿತ್ತು
ಲೋಕನಾಯಕ ಎನ್ನ ಸಾಕಿಸಲಹಿಕೊ 1
ನಿತ್ಯ ಸಂಸಾರವನು ರಂಗಯ್ಯ ನಾ ಸತ್ಯವೆಂದು ತಿಳಿದು
ಸತ್ಯಮೂರುತಿ ನಿಮ್ಮ ಪಾದಪದ್ಮದ ಭಕ್ತಿ
ಹತ್ತದೆ ಈ ಮನಸು ವ್ಯರ್ಥವಾಯಿತು ದೇವ 2
ತಂದೆತಾಯಿಯು ನೀನೆ ರಂಗಯ್ಯ ಬಂಧುಬಳಗವು ನೀನೆ ಆ
ನಂದದಿಂದಲೆ ರಕ್ಷಿಪ ಜಗತ್ಪತಿ ನೀನೇ
ಬಂಧನವನು ಬಿಡಿಸಿ ಮುಕ್ತಾನಂದವ ತೋರಿಸು 3
ವಾಸವ ಮಾಡಿಸಿಲ್ಲಿ ರಂಗಯ್ಯ ಘಾಸಿಯ ಪಡಿಸದೆ ಅನಾ
ಯಾಸದ ಮರಣವನಿತ್ತು ಎನಗೆ
ವಸುದೇವನೆ ನಿಮ್ಮ ಪಾದವಾಸವ ಮಾಡಿಸು 4
ಅಂದುಗೆ ಗೆಜ್ಜೆಗಳ ಇಟ್ಟು ನಿಮ್ಮ ಆನಂದ ಪಾದದಲಿ
ನಿಂದೆನ್ನ ಹೃದಯದೆ ವಾಸಮಾಡಿ ಆ
ನಂದದಿಂದಲೆ ರಕ್ಷಿಸು ವೆಂಕಟರಂಗ 5
****