ರಾಗ : ಮಧ್ಯಮಾವತಿ ತಾಳ : ಅಟ್ಟ
ಪೊಂಗೊಳಲಾನು ಕರದಲ್ಲಿ ಪಿಡಿದು ।
ಹ್ಯೆಂಗಳಾ ಮಧ್ಯದಲ್ಲಿ ನಿಂದಾನು ಕ್ರಿಷ್ಣ ।। ಪಲ್ಲವಿ ।।
ನೀಲ ಮೇಘ ರತುನದ ಕಾಂತಿಯು ಹರಿಯು ।
ಬಾಲ ಸೂರ್ಯನಂದದಿ ವಸನವನುಟ್ಟು ।
ಲೋಲಚಾರುಮಣಿ ಮಕರಕುಂಡಲನಿಟ್ಟು ।
ಬಾಲ ಲೀಲೆಯಿಂದ ಬನದೊಳಗಾಡುವ ।। ಚರಣ ।।
ಮತ್ತಭೃಂಗ ಕೂಜಿತ ವನಮಾಲೆ ।
ಭಾಸ್ತಿ ಶಂಖ ಚಕ್ರ ಗದೆ ಕೌಮೋದಕಿಯು ।
ಉತ್ತಮಾಂಗ ನಸಲೊಳು ತಿಲಕವಿಟ್ಟು ।
ಮತ್ತಾದ ವಜ್ರದ ಅಂಗಾನೆರೊಡನೆ ।। ಚರಣ ।।
ಮಂಗಳಮುನಿ ಹೃದಯ ಮಂದಿರ । ಮನ ।
ದಂಗಳದೊಳಗಾಡುವ ಹರಿ ನಮ್ಮಾ ।
ಕಂಗಳ ಪಥದಲ್ಲಿ ಸುಳಿದನುಭವ ।
ನಂಗಳಾದಿ ವ್ರಜರಂಗನೆರೊಡನೆ ।। ಚರಣ ।।
ಅಂದು ಗೋವು ಗೋಪರು ಗೋಪಿಯರೊಡನೆ ।
ಬಂದು ನಿಂದು ವೃಂದಾವನದ್ಯಡೆಯಲ್ಲಿ ।
ನಂದಾನಂದನರೊಳಗಾಡಿದ ಪರಿ ।
ಯಿಂದ್ಯನ್ನ ಮನದಾಂಗಣದೊಳಗೆ ।। ಚರಣ ।।
ಅಂಗ ರಂಗ ವಿಲಸಿತ । ಕರುಣಾಂಗಾ ।
ನಂಗಕೋಟಿ ಗಂಗಾ ಜನಕಾನು ಹರಿ ।
ಅಂಗನೆಯರ ಮನದಾಂಗಣದೊಳಗೆ ।
ಹಿಂಗಾದೆ ನಿಂದಾನು ರಂಗವಿಠ್ಠಲನೂ ।। ಚರಣ ।।
***