ಪರಮಪುರುಷ ಶ್ರೀ ರಾಮನ ಪದಯುಗ
ಹರುಷದಿ ಸ್ಮರಿಸುವ ಹನುಮಂತ
ಸಿರಿರಮಣ ನಿಜದಾಸನೆಂದೆನಿಸಿದ
ವರ ಕದರುಂಡಲಿ ಹನುಮಂತ ಪ.
ಒಂದೇ ಮನದಲಿ ತಂದೆ ನಿನ್ನಡಿಗಳ
ಪೊಂದಿದೆ ಸಲಹೈ ಹನುಮಂತ
ಕುಂದುಗಳೆಣಿಸದೆ ಕಂದನ ತೆರದಲಿ
ಎಂದೆಂದಿಗು ಪೊರೆ ಹನುಮಂತ 1
ವಾರಿಧಿ ದಾಟುತ ಸೇರುತ ಅರಿಪುರ
ಧಾರುಣಿಜೆಯ ಕಂಡೆ ಹನುಮಂತ
ನಾರಿಚೋರನಪುರ ಸೇರಿಸಿ ಅನಲಗೆ
ಸೇರಿದೆ ರಾಮನ ಹನುಮಂತ 2
ಕೃಷ್ಣನ ಸೇವಿಸಿ ದುಷ್ಟರ ಕೊಲ್ಲುತ
ಮೆಟ್ಟಿದೆ ಖಳರನು ಹನುಮಂತ
ದಿಟ್ಟತನದಿ ಸಾಮ್ರಾಜ್ಯವಾಳಿ ಜಗ-
ಜಟ್ಟಿ ಎಂದೆನಿಸಿದೆ ಹನುಮಂತ 3
ಮಿತಿಯಿಲ್ಲದ ಅತಿಖತಿ ಮತಗಳನು
ಹತಗೈಸುತ ನೀ ಹನುಮಂತ
ಪ್ರತಿ ಗ್ರಂಥಗಳನ್ನು ಸ್ಥಾಪಿಸಿ ಸುರರಿಗೆ
ಅತಿ ಹಿತ ತೋರಿದೆ ಹನುಮಂತ 4
ಇಷ್ಟ ಫಲಪ್ರದ ತುಷ್ಟಿಬಡಿಸೊ ನೀ
ಕೊಟ್ಟೀಗಭಯವ ಹನುಮಂತ
ದಿಟ್ಟ ನಿನ್ನಡಿಗಳ ಭಜಿಸುವೆ ಗೋಪಾಲ
ಕೃಷ್ಣವಿಠ್ಠಲ ಪ್ರಿಯ ಹನುಮಂತ5
****