Showing posts with label ಗೊಲ್ಲನಾದಕ್ಕಿದೇ ಗುಣಗಳ vijaya vittala ankita suladi ಕೃಷ್ಣ ಮಹಿಮಾ ಸುಳಾದಿ GOLLANADAKKIDE GUNAGALA KRISHNA MAHIMA SULADI. Show all posts
Showing posts with label ಗೊಲ್ಲನಾದಕ್ಕಿದೇ ಗುಣಗಳ vijaya vittala ankita suladi ಕೃಷ್ಣ ಮಹಿಮಾ ಸುಳಾದಿ GOLLANADAKKIDE GUNAGALA KRISHNA MAHIMA SULADI. Show all posts

Sunday, 22 August 2021

ಗೊಲ್ಲನಾದಕ್ಕಿದೇ ಗುಣಗಳ vijaya vittala ankita suladi ಕೃಷ್ಣ ಮಹಿಮಾ ಸುಳಾದಿ GOLLANADAKKIDE GUNAGALA KRISHNA MAHIMA SULADI

 ..

Audio by Mrs. Nandini Sripad

ಶ್ರೀವಿಜಯದಾಸಾರ್ಯ ವಿರಚಿತ 

 ಶ್ರೀಕೃಷ್ಣ ಮಹಿಮಾ ಸುಳಾದಿ 


(ಸುಜೀವಿಗಳಿಗಿರುವ ಶ್ರೀಕೃಷ್ಣನಲ್ಲಿಯ ಭಕ್ತಿಪಾರಮ್ಯವನ್ನು ಈ ಸುಳಾದಿಯಲ್ಲಿ ಕಾಣುತ್ತೇವೆ. ಪರಮಾತ್ಮನನ್ನು ನಿಂದಿಸುತ್ತಲೇ ಆತನನ್ನು ಸ್ತುತಿಸಿರುವ ಸವಿ ಇದರಲ್ಲಿದೆ.) 


 ರಾಗ ವರಾಳಿ 


 ಧ್ರುವತಾಳ 


ಗೊಲ್ಲನಾದಕ್ಕಿದೇ ಗುಣಗಳ ತೋರಿದಿಯೋ

ಸಲ್ಲುವದು ನಿನ್ನ ಕಪಟತನವೋ

ಬೆಲ್ಲಗಿಂತಧಿಕ ಮಾತುಗಳು ಕಾಣಿಸುತವೆ

ಪಳ್ಳಿಗಾಧಟಿ ಉಳಿಕಾರ ಕರುಣಾಸಿಂಧು

ಎಲ್ಲೆಲೊ ಎಲೋ ದೇವ ಒಂದಾದರು ಮಾತು

ಸಲ್ಲಿಸಿದ್ದು ಕಾಣೇ ಮನಸಿನಂತೇ

ಮೆಲ್ಲನೆ ಸ್ತುತಿಸಿ ಕೊಂಡಾಡಿದರೆ ನಿನ್ನ -

ದಲ್ಲವೋ ಕೊಡುವ ಕೈ ಕಮಲನಾಭಾ

ಗುಲ್ಲು ಎಬ್ಬಿಸಿ ನಾನಾ ವಿಕಾರತನದಲ್ಲಿ

ನಿಲ್ಲದೆ ನೀನು ಕದ್ದು ಮೆದ್ದದ್ದೆಲ್ಲಾ

ಅಲ್ಲಿಗಲ್ಲಿಗೆ ದೂರಿ ರಚ್ಚೆಗಿಕ್ಕಾದಿರೆ

ಸಲ್ಲಾದೆ ಪೋಗುವೆನು ಗತಿ ಮಾರ್ಗಕ್ಕೆ

ಬಲ್ಲವರು ಪೇಳೋರು ಬಾಯಿ ಇಲ್ಲದವಂಗೆ

ಎಲ್ಲಿ ಪೋಗಲು ಬದುಕಿಲ್ಲವೆಂದು

ಸೊಲ್ಲು ಮರಿಯದೆ ಏನೊ ಗತಿಗಾಣದಿರೆ ಭೂಮಿ -

ವಲ್ಲಭ ನೀನಲ್ಲೆ ನಿನಗಂಜೆನೋ

ಕಲ್ಲಿನ ಮುಂದೆ ತಂದು ಸುರುವಿದ ಬೋನವ

ಅಲ್ಲಿ ವ್ಯಾಪುತನಾಗಿ ಬಳಿದುಂಡಿಯೇ

ಹೊಲ್ಲೆ ಲೇಸುಗಳಿಲ್ಲ ಹೊರಗೊಳಗುಳ್ಳರೆ

ಎಲ್ಲಿದೆಲ್ಲೆದು ಕಾಣೆ ನಿನ್ನ ಲೀಲೆ

ಕಳ್ಳನಾಗಿ ಪೊಟ್ಟೆ ಪೊರೆದ ವಿಜಯವಿಟ್ಠಲ ಭಕ್ತವ -

ತ್ಸಲ ನಂಬಿದೆ ಎನಗೇನೋ ॥ 1 ॥ 


 ಮಟ್ಟತಾಳ 


ಅರಸು ನೀನಾದಡೆ ದೇವಕಿಯಲ್ಲಿ ಅವ -

ತರಿಸಿ ಬಂದಾಗಲು ಆವ ರಾಜ್ಯವನಾಳಿ

ಅರಸನೆನಿಸಿದ್ದು ಒಬ್ಬರ ವಾಕ್ಯದಲ್ಲಿ

ಸ್ಮರಿಸಿದ್ದು ಕಾಣೆ ಆವಲ್ಲಿ ಚರಿಸಿದರೂ

ತರುಳತನದಲ್ಲಿ ಗೋಮಕ್ಕಳ ಕೂಡಿ

ನೆರೆದಾಡಿ ಲಜ್ಜೆ ಹೊರಿಸಿದರು ನಿನಗೇ

ಅರಿದುಕೋ ಮನದೊಳಗೆ ತರುವಾಯದಲಿ ಗೊ -

ಲ್ಲರ ಪಾಲು ಮೊಸರು ಕದ್ದದ್ದಕ್ಕೆ ಸಾವಿರ ಬೈದರು ಕಾಣೊ

ಇರಳು ಹಗಲು ಚಿದಗು ವ್ಯಾಪಾರದಲ್ಲಿ

ಸರಿ ಇಲ್ಲವೊ ನಿನಗೆ ಪೇಳಿದರೇನಹದು

ನರನ ಬಂಡಿಯ ಹೊಡಿದೆ ಭೀಷ್ಮನ ವಂಚಿಸಿದೆ

ಗುರು ಕರ್ನ ಶಲ್ಯ ಮೊದಲಾದವರ

ಮರಣವ ಗೈಸಿದೆ ಮಹಾ ಕಪಟಾಟದಲ್ಲಿ

ದೊರೆತನವುಳ್ಳರೆ ಧರ್ಮರಾಯನಲ್ಲಿ

ಪರಿಚಾರನಾಗಿ ಇದ್ದದ್ದು ಆವ ಬಗೆ

ಶರಣ ನೀನಾಗಿ ಶ್ರೀ ರುಕ್ಮಿಣೀ ಸಹಿತ ಭೂ -

ಸುರನ ರಥವನ್ನು ಎಳೆದದ್ದು ಏನಯ್ಯಾ

ಪರಿಪೂರ್ಣ ಮಹಿಮನೆನಿಸಿಕೊಂಡದ್ದೆಲ್ಲ

ಬರಿದೆ ಯೆಂಬೋದಾಗಿ ತೋರಿದೆ ಎನಗೆ

ತುರುಕರುಗಳ ಕಾಯ್ದ ವಿಜಯವಿಟ್ಠಲ ಕೃಷ್ಣ

ಮರಣವ ಮಾಡಿದೆ ಮೊಲೆಗೊಡ ಬಂದವಳ ॥ 2 ॥ 


 ತ್ರಿವಿಡಿತಾಳ 


ಸಾಧು ಎತ್ತಿಗೆ ಎರಡು ಗೋಣಿ ಹೇರುವರೆಂಬೋ

ಗಾದಿಯಾಗಿದೆ ದೇವಾ ಎನ್ನ ಮಾತುರಕೆ

ಕ್ರೋಧದಲ್ಲಿ ಮುಳುಗಿ ಕಡೆಮಾಡೆಂದು ನಿನ್ನ

ಪಾದವ ನೆರೆನಂಬಿ ಇದ್ದವಗೇ

ನೀ ದಯಮಾಡದೆ ಮರಳೆ ಮರಳೆ ವೆಗ್ಗಳ

ಕ್ರೋಧವ ಪೆಚ್ಚಿಸಿ ಕೊಡುವದೇನೋ ಸ್ವಾಮೀ

ಕ್ಯಾದಿಗೆಯಲಿ ಸರ್ವ ಅವಗುಣಂಗಳು

ಇದ್ದರಾದರು ಅದರಲ್ಲಿ ಒಂದುತ್ತಮಾ -

ವಾದ ವಾಸನೆ ಗುಣ ಇರತಕ್ಕದ್ದಾಗಿ ಸ -

ರ್ವದಾ ಎಲ್ಲರಿಗೆ ಬೇಕಾದದ್ದಲ್ಲೆ

ಮಾಧವಾ ನಾನೊಬ್ಬ ಬಲು ಪಾಪಿಯಾದರು

ಆದಿ ವಿಡಿದು ದತ್ತ ಸ್ವಾತಂತ್ರದಿ

ಮೇದಿನಿಯೊಳು ಪುಟ್ಟಿ ನಿನ್ನಿಂದ ಭಕುತಿ ಸಂ -

ಪಾದಿಸಿಕೊಂಡು ಸ್ತುತಿಸುತಿಪ್ಪೆನೋ

ಆದದ್ದೆಲ್ಲಾಗಲಿ ಭಕುತಿವುಳ್ಳಾದಕೆ ಅಪ -

ರಾಧಗಳ ನೋಡದಲೇ ಕಾಯಬೇಕೊ

ಪ್ರಧಾನ ಭಕುತಿಯಿಲ್ಲದಲೇ ಮತ್ತೊಂದು ಬೇಕಾ -

ದದ್ದು ಏನಯ್ಯಾ ಪರಿಪೂರ್ಣನೆ

ಸಾಧಾರಣದವನೆಂದು ಕಂಡಲ್ಲಿ

ವೇದಸ್ಮೃತಿಗಳಲ್ಲಿ ಸಾರುತಿವೆ 

ಬೀದಿ ಬೀದಿಯೊಳು ಗೋಪಳ್ಳಿಯೊಳು ನಿನ್ನ

ಯಾದವ ಕುಲಕೆ ಕೀರ್ತಿಯನು ತಂದೆ

ಸಾಧುಜನ ಪ್ರಿಯ ವಿಜಯವಿಟ್ಠಲ ಕೃಷ್ಣ

ಆದಿ ಮೂರುತಿ ಎಂಬೊದಲ್ಲೆ ನೀನ್ನಾರು ॥ 3 ॥ 


 ಮಟ್ಟತಾಳ 


ನೀನು ಮಾಡುವದೇನೋ ನಾನು ನೋತದಲ್ಲದೆ

ಅನಂತ ದಿವಸಕ್ಕೆ ಮಾಣಿಸಲಾಪೆಯೋ

ಯೋನಿಗಳಲ್ಲಿ ಮುಂದಾನು ಜನಿಸುವ

ಹೀನಯವನು ನೀನು ಕಾಣದೇ ಇರಲಾಪ್ಯಾ

ನಾ ನಿನಗಂಜುವದೇನೊ ಸಂಕಲ್ಪಕ್ಕೆ

ಕಾಣಿಯನಿತ್ತು ಕಡಿಮೆ ಎನಿಸಲಾಪ್ಯಾ

ಏನಿದ್ದ ಪರಿಮಿತ ತಾನೆ ಕ್ಲಪ್ತಿಯದೆ

ಹೇ ನಾಥ ನೀನೆಂದು ನಾನು ಕರೆವದೇನೊ

ಹಾನಿವೃದ್ಧಿ ನಿನ್ನಧೀನವಾಗಿದೆ ಸತ್ಯಾ

ಮಾನವನೀಪರಿಯನು ಮಾಡುವರೆ

ನೀನರಸಾದಡೆ ಕಾಣಾ ಬಪ್ಪದು ಬಂಟ -

ರಾನ ಸಾಕುವ ಭಾರ ಏನಂದರೇನಹುದು

ಶ್ರೀನಿಧಿ ಕೃಷ್ಣಾ ವಿಜಯವಿಟ್ಠಲ ಮೂರ್ತಿ

ನೀನಾಡಿದ ಕಡೆಯಿಂದ ಏನಾಡಿದರೇನು ॥ 4 ॥ 


 ಆದಿತಾಳ 


ರವಿಗೆ ಅಂಗಯ್ಯ ಒಡ್ಡಿ ಅವನಿಯೆಲ್ಲ ಕವಳ

ಕವಿವದೇನೊ ಮೂರು ಭುವನೇಶ ಭೂತಿವಂತ

ಯವೆ ಇಡೊ ಸ್ವಾತಂತ್ರದವನು ನಾನಲ್ಲವೋ

ಅವಗುಣನೆನೆಸಿ ಕೋಪವನು ಉಣಿಸುವದೇನೊ

ಸವಿಗಾರ ವೊಂದರೆ ದಿವಸವಾದರು ಲೇಶ 

ಭವಲೇಪವಾದರೆ ಭವಣೆ ತಿಳಿಯಬಪ್ಪುದು 

ನವನವ ಬಗೆ ಮಹಿಮೆ ಅವನಾಗಿ ಎಲ್ಲರಿಗೆ 

ಪವಿತುರನಾಗಿ ಅಂದವ ಮಾಡಿಕೊಳುತಲಿ

ಯುವತಿ ಸಮೇತದಲ್ಲಿದ್ದು ಅವರವರ ಕರ್ಮ 

ನಿಮಿತ್ಯವ ಮಾಡಿ ನೀನು ಚಕ್ಕಂದವನಾಡಿ 

ನಗುವ ಕೇಶವ ಮಾಯಾ ಮೊದಲೇ

ಸವೆಯದ ಗತಿ ದಾತಾ ವಿಜಯವಿಟ್ಠಲ ನಮ್ಮ

ಭವವಿಮೋಚನ ಭೇದವ ನಡಿಸುವ ದೇವಾ ॥ 5 ॥ 


 ಜತೆ 


ನಾಡದೈವದ ಗಂಡ ವಿಜಯವಿಟ್ಠಲ ನಿನ -

ಗಾಡದವರೇ ಯಿಲ್ಲಾ ಎನ್ನ ಮನ್ನಿಸಿ ಕಾಯೋ ॥

***