ಶ್ರೀ ವಿಜಯದಾಸಾರ್ಯ ವಿರಚಿತ ಉಪಾಸನಾ ಸುಳಾದಿ
( ಧ್ಯಾನೋಪಾಸನೆ ಮುಖ್ಯ . ಧ್ಯಾನದಿಂದ ಜ್ಞಾನ ಪುಟ್ಟುವುದು. ಸ್ಥೂಲ ಸೂಕ್ಷ್ಮ ಧ್ಯಾನ ವಿವರ. )
ರಾಗ ಭೌಳಿ
ಧ್ರುವತಾಳ
ಏನಾದರೇನು ನಿನ್ನ ಧ್ಯಾನವ ಬಿಡುವೆನೆ
ಏನಾದರಾಗಲಿ ಎನಗಿಂದೀಗ
ಶ್ರೀನಿವಾಸನೆ ನಿನ್ನ ಧ್ಯಾನದಿಂದಲಿ ಕರೆದು
ಆನೀಗ ನಿರುತಾರ್ಚನೆ ಮಾಡುವೇ
ನಾನಾ ಕರ್ಮದ ಶ್ರೇಣಿಯಿಂದಲಿ ಸೋ -
ಪಾನವಾಗುವ ಗತಿಗೆ ಅನಂತ ಜನುಮದಲ್ಲಿ
ಕಾಣೆನೊ ಧ್ಯಾನ ಸಮಾನವಾದ ಭಕುತಿ
ಈ ನಿರಂತರದಲ್ಲಿ ಜ್ಞಾನ ಶೂನ್ಯ
ನಾನಾಗಿ ತಿಳಿಯದೆ ನೀನೆಂಬೋದು ಮರೆದು
ಧ್ಯಾನ ಹೀನನಾಗಿ ಮಾನಾವಳಿದೆ
ಕ್ಷೋಣಿಧರನೆ ನಮ್ಮ ವಿಜಯವಿಟ್ಠಲ ನಿನ್ನ
ಧ್ಯಾನವರಿದ ಮೇಲೆ ಮಾಣುವದೆಂತೋ ॥ 1 ॥
ಮಟ್ಟತಾಳ
ಧ್ಯಾನವೆ ಗತಿಗೆ ಪ್ರಧಾನವೆ ಎನುತಲಿ
ಜ್ಞಾನಿಗಳು ತಿಳಿದು ಆನಂದವಾಗುತ್ತ
ಗಾನವ ಮಾಡುವರು ಆನಂದ ಗತಿಯಲ್ಲಿ
ಗೇಣವನೀ ಇಲ್ಲಾ ಈ ನುಡಿಯನು ಕೇಳಿ
ನಾನು ನೆಚ್ಚಿದೆ ನಿನ್ನ
ಶ್ರೀನಿವಾಸಮೂರ್ತಿ ವಿಜಯವಿಟ್ಠಲ ಎನಗೆ
ಧ್ಯಾನವೆ ಗತಿ ನಿಧಾನದ ಪದವಿಗೆ ॥ 2 ॥
ತ್ರಿವಿಡಿತಾಳ
ಮನವೆ ನಿಲ್ಲದ ಧ್ಯಾನ ಗುಣವೆ ಇಲ್ಲದ ನಾರಿ
ಹಣವೆ ಇಲ್ಲದ ನೃಪತಿ ಕ್ಷಣವೆ ತಿಳಿಯದ ಜ್ಞಾನಿ
ಪ್ರಣವೆ ಇಲ್ಲದ ಮಂತ್ರ ಘನವೆ ಇಲ್ಲದ ದಾನಾ
ಪ್ರಣತಿ ಇಲ್ಲದ ದೇಹ ಅನುವೆ ಇಲ್ಲದ ನಡತಿ
ಜನವೆ ಇಲ್ಲದ ಸಭಾ ಲಕ್ಷಣವಿಲ್ಲದ ಗುರು
ನೆನವೆ ಇಲ್ಲದ ಸಾಧನವೆ ಇಲ್ಲದ ಸಂಗತಿ
ದಿನವಸ್ತಮಾನಾ ನೂರು ಮನುಕಲ್ಪವಿರಲು ರಂ -
ಜನವಾಗುವದೇನಾ ಜನಜನಕಾ
ತನು ಮನದಾಧೀಶ ವಿಜಯವಿಟ್ಠಲ ಕೃಪಾ -
ವನಧಿ ನಿನ್ನನು ಧ್ಯಾನವನು ಮಾಳ್ಪ ಮನವೀಯೋ ॥ 3 ॥
ಅಟ್ಟತಾಳ
ಪಾಪವೆಂಬೊ ರಾಶಿ ಆಪಾರವಾಗೆನ್ನ
ಕೋಪವ ಪುಟ್ಟಿಸಿ ತಾಪದ ಬಲದಿಂದ
ಲೇಪಿಸಿಕೊಂಡು ಪ್ರಳಾಪ ಬಡಿಸುತಿದೆ
ನಾ ಪೋಗುವದೆತ್ತ ಶ್ರೀಪತಿ ಲಾಲಿಸು
ಆಪಾರ ಕರ್ಮದಲೀ ಪೂಜೆಮಾಡಲು
ಶ್ರೀಪದವೀಗಳ ಪ್ರಾಪುತವಾಗೋವೆ
ಪ್ರಾಪುತ ಮಹನಾಮಾ ವಿಜಯವಿಟ್ಠಲ ನಿನ್ನ
ಆಪಾರ ಮೌಳಿಯನೂ ಪತಿಕರಿಸುವೆ ॥ 4 ॥
ಆದಿತಾಳ
ಧ್ಯಾನವನ್ನು ಕೈಕೊಳ್ಳಲು ಜ್ಞಾನವನ್ನೆ ಪುಟ್ಟುವದು
ಹೀನ ಕರ್ಮವೆಂಬ ದುರಿತ ಕಾನನ ರಾಶಿಗೆ ಕೃ -
ಶಾನನಾಗಿ ಪೋಗಗಳೆದು ಮಾನವಭಿಮಾನವೆನಿಸಿ
ಧ್ಯಾನ ಧ್ಯಾನ ಧ್ಯಾನವನ್ನು ದಿನ ದಿನಕ್ಕಧಿಕವಾಗೆ
ಆನಂದಕ್ಕಾನಂದ ಏನೆಂದು ಪೇಳುವೆನೊ
ಧ್ಯಾನವಿನಾ ಗತಿಗೆ ಸಾಧನವನ್ನು ಕಾಣೆನಯ್ಯಾ
ನೀನೇ ನೀನೇ ಎಂದು ಧ್ಯಾನದಲ್ಲಿ ನಂಬಿದೆನೋ
ಧ್ಯಾನದೊಳಗೆ ಪೊಳೆವ ವಿಜಯವಿಟ್ಠಲರೇಯ
ದಾನಿ ದಯದಿಂದ ಉತ್ತುಮನ ಮಾಡು ಮನ್ನಿಸುತ್ತಾ ॥ 5 ॥
ಜತೆ
ಸ್ಥೂಲ ಸೂಕ್ಷ್ಮ ಧ್ಯಾನವ ಭೇದವೆನಿಸೋದು
ನೀಲವರ್ಣ ವಿಜಯವಿಟ್ಠಲ ಪ್ರಾಕೃತರಹಿತಾ ॥
******