Showing posts with label ಸ್ವಾಮಿ ಸರ್ವೋತ್ತಮಳೆ ಸಕಲ ಜನಕಾಧಾರೆ varaha timmappa. Show all posts
Showing posts with label ಸ್ವಾಮಿ ಸರ್ವೋತ್ತಮಳೆ ಸಕಲ ಜನಕಾಧಾರೆ varaha timmappa. Show all posts

Friday, 27 December 2019

ಸ್ವಾಮಿ ಸರ್ವೋತ್ತಮಳೆ ಸಕಲ ಜನಕಾಧಾರೆ ankita varaha timmappa

by ನೆಕ್ಕರ ಕೃಷ್ಣದಾಸರು
ರಾಗ ಭೈರವಿ ಝಂಪೆತಾಳ 

ಸ್ವಾಮಿ ಸರ್ವೋತ್ತಮಳೆ ಸಕಲ ಜನಕಾಧಾರೆ

ಕಾಮಿತಾರ್ಥವನೀವ ಕರುಣಿ ಭೂದೇವಿ||ಪ||

ಹರಿಯ ಪದದಲುದಿಸಿ ಹರಿಗೆ ವಧುವೆನಿಸಿ

ಹರಿಗೆ ಸುತೆಯನು ಇತ್ತು ಹಿರಿಯಳಾದೆ
ಹರಿನಾಮ ಕೀರ್ತನೆಯ ಹೊರೆವ ಧಾರುಣಿ ನಿನ್ನ
ಮೊರೆ ಹೊಕ್ಕೆ ಮರೆಯದಿರು ಕರುಣದೋರೆನಗೆ ||೧||

ಕ್ಷಮೆ ದಮೆಯ ಶಾಂತ ಸದ್ಗುಣವೊಪ್ಪುವಳೆ ನಿನಗೆ

ಭ್ರಮೆಬಟ್ಟು ಭೂಭುಜರು ಕಡಿದುಕೊಳುತಿಹರು
ಅಮಿತ ಮಹಿಳೆ ನಿನ್ನ ನಿಜವ ಬಲ್ಲವರಾರು
ತಮಗೆ ಋಣವಿದ್ದುದನು ಕೊಂಡೊಯ್ವರಲ್ಲದೆ ||೨||

ಚಿನ್ನ ಭಂಡಾರಗಳು ನಿನ್ನೊಡಲೊಳೊಪ್ಪಿದವು

ಉನ್ನತ ರತುನಗಳು ನಿನ್ನೊಳಡಗಿಹವು
ಅನ್ನಪಾನಂಗಳಿಗೆ ಬೀಜಮೂಲವೆ ನೀನು
ನಿನ್ನ ಮರೆತಿಹ ಜನಕೆ ಮುನ್ನ ಸುಖವುಂಟೆ ||೩||

ಒಬ್ಬ ರಾಯನ ಗೆಲುವೆ ಒಬ್ಬ ರಾಯನಿಗೊಲಿವೆ

ಒಬ್ಬನಿಗೆ ಮೈಯ ನೀನು ಕೊಡುವೆ
ಒಬ್ಬರಾದರು ನಿನ್ನ ನಿಜದಿ ಬಾಳ್ದಪರಿಲ್ಲ
ಗರ್ಭಜಾತನ ಹರಿಯ ಕೈಯ ಕೊಲಿಸಿದೆಲಾ ||೪||

ಅಂಬುಧಿಯೆ ವಸನಗಳು ಕುಂಭಕುಚಗಳೆ ಗಿರಿಯು

ಸಂಭ್ರಮದ ನದಿಕಾಲುವೆ ನಿನ್ನ ಬೆವರುಗಳು
ಎಂಭತ್ತನಾಲ್ಕು ಲಕ್ಷ ಜೀವರಾಶಿಗಳೆಲ್ಲ
ತುಂಬಿಕೊಂಡಿರುತಿಹುದು ಅಂಗೋಪಾಂಗದಲಿ ||೫||

ಮೂಢನಾದೆನು ನಿನ್ನ ಬೇಡಿಕೊಂಬರೆ ಮನದಿ

ನೋಡದಿರು ಅವಗುಣವ ರೂಢಿ ದೇವತೆಯೆ
ಮಾಡು ದಯವನು ನೀನು ಮನದಭೀಷ್ಟವನೆಲ್ಲ
ಪಾಡು ಪಂಥವು ಬೇಡ ಪಡೆದ ಮಗನೊಡನೆ ||೬||

ನಂಬಿದೆನು ನಾ ನಿನ್ನ ಕುಂಭಿನಿಯೆ ಕೈವಿಡಿದು

ಇಂಬಾದ ಪದವಿಯನು ಸಂಭ್ರಮದಿ ಕೊಡುತ
ಬೆಂಬಿಡದೆ ವರಾಹ ತಿಮ್ಮಪ್ಪ ಕರುಣದಲಿ
ಹಂಬಲಿಪ ತೆರದಿಂದ ಸಲಹುವುದು ಜಗದಿ ||೭||
******