Showing posts with label ಎಲ್ಲಿದ್ದರು ಕಾಯ್ವ ಯದುಕುಲತಿಲಕ venkatakrishna. Show all posts
Showing posts with label ಎಲ್ಲಿದ್ದರು ಕಾಯ್ವ ಯದುಕುಲತಿಲಕ venkatakrishna. Show all posts

Tuesday, 1 June 2021

ಎಲ್ಲಿದ್ದರು ಕಾಯ್ವ ಯದುಕುಲತಿಲಕ ankita venkatakrishna

by yadugiriyamma 

ಎಲ್ಲಿದ್ದರು ಕಾಯ್ವ ಯದುಕುಲತಿಲಕ| ಭಕ್ತ

ರೆಲ್ಲಿದ್ದರು ಕಾಯ್ವ ಯದುಕುಲತಿಲಕ ಪ


ಅಡವಿಯೊಳಿರಲು ಅರಣ್ಯದೊಳಿರಲು

ಮಡುವಿನೊಳಿರಲು ಮರದ ಮೇಲಿರಲು

ಪೊಡವಿಗೀಶ್ವರ ತಾನು ದೃಢಭಕ್ತನಂ

ಬಿಡದೆ ರಕ್ಷಿಸುವ ಯೆಂತೆಂಬೊ ಬಿರುದು 1

ತಂದೆಯ ಬಾಧೆಗೆ ಕಂದ ನಿಮ್ಮನು ಕರೆಯೆ

ಬಂದು ಕಂಭದಲಿ ನೀ ಕಾಯ್ದೆ ಗೋವಿಂದಾ

ಅಂದು ದ್ರೌಪದಿ ಹಾಯೆಂದು ಬದರಲು ಕೇಳಿ ಆ

ನಂದದಿಂದಕ್ಷಯವನಿತ್ತ ರಂಗನು ನೀನು 2

ಭರದೆ ಭಗದತ್ತನು ಅಸ್ತ್ರ ಬಿಡಲು

ಕೊರಳ ಚಾಚಿದನಾಗ ಕರುಣಾವಾರಿಧಿಯು

ವರುಣಗದೆಯನಾಗ ಮರುಳತನದಿ ಬಿಡೆ

ಮರಳಿ ಅವನ ಉರುಳಿಸಿತು ಶೃತಾಯುವು 3

ಸಿಂಧುರಾಜನ ಶಿರವ ಅವನ ತಂದೆ ಕೈಯಲಿ ಹಾಕಿ

ಬಂದ ಭಾರವನೆಲ್ಲಾ ಕಾಯ್ದೆ ಗೋವಿಂದ

ಸರ್ಪಬಾಣವ ಕರ್ಣ ದರ್ಪದಿಂದಲೆ ಬಿಡೆ

ಅಪ್ರಮೇಯನು ಭೂಮಿ ಕ್ಷಿಪ್ರದಿಂ ಒತ್ತಿದಾ 4

ಅಂದು ಅರ್ಜುನ ತನ್ನ ಕಂದನೊಡನೆ ಕಾದೆ

ಹಿಂದಿನ ವೈರದಿಂ ಶಿರವನ್ನು ಹರಿಯೆ

ಬಂದು ಮುಕುಂದ ಸಂಧಿಸಿ ಶಿರವನ್ನು ಆ

ನಂದದಿಂದಲೆ ಕಾಯ್ದ ಇಂದಿರೆ ರಮಣ5

ಉತ್ತರೆ ಗರ್ಭವು ಬತ್ತಿ ಬೀಳಲು ಆಗ

ಉತ್ತಮ ಋಷಿಗಳೆಲ್ಲರ ನೋಡಿ

ನಿತ್ಯಬ್ರಹ್ಮಚಾರಿಗಳು ಪಾದದೀ

ಮೆಟ್ಟಿದರೆ ಬದುಕುವುದೆಂದನು ಕೃಷ್ಣ 6

ಸನತ್ಕುಮಾರರು ಶೌನಕರು ಮೊದಲಾಗಿ ಪರುಶುರಾಮ

ಹನುಮಾದಿಗಳು ಬ್ರಹ್ಮಚರ್ಯವು

ನಮಗಿಲ್ಲವೆನುತ ಬ್ರಹ್ಮಚರ್ಯಕ್ಕೆ ಆಧಾರ ನೀನೆನ್ನಲು

ವಾಮಪಾದದಿ ತುಳಿದೆಬ್ಬಿಸಿದನು ಶಿಶುವ 7

ಸರಸಿರುಹನಯನಾ ಫಣಿರಾಜಶಯನ

ಶರಣಾಗತದುರಿತಾಪಹರಣ

ದೈತೇಯಸಂಹರಣ ಗೋವರ್ಧನೋದ್ಧರಣ

ಪೀತಾಂಬರಾಭರಣ ಕೌಸ್ತುಭಾಭರಣ 8

ಅಶ್ವತಾಮನ ಅಸ್ತ್ರ ವಿಶ್ವವನು ಸುಡುತಿರೆ

ವಿಶ್ವನಾಯಕ ಶಮನ ಮಾಡಿ ಕಾಯ್ದು

ಅಸಮಸಾಹಸದಿ ಚಕ್ರವ ಪಿಡಿದು ಗರ್ಭದ

ಶಿಶುವನ್ನು ಕಾಯ್ದ ಕುಶಲಿ ವೆಂಕಟಕೃಷ್ಣ 9

****