Audio by Mrs. Nandini Sripad
ಶ್ರೀವಿಜಯದಾಸಾರ್ಯ ವಿರಚಿತ ಸಾಧನ ಸುಳಾದಿ
(ಚಿತ್ತ ಚಲಿಸದೆ, ಕೋಪಾದಿ ಮಾರ್ಗ ತೊರೆದು, ಭಾಗವತಾದಿ ಧರ್ಮ ವೊಹಿಸಿ, ಸಾಧನ ಮಾಡುವದು.)
ರಾಗ ಪೂರ್ವಿಕಲ್ಯಾಣಿ
ಧ್ರುವತಾಳ
ಚಿತ್ತವೆ ಚಲಿಸದಿರು ಪ್ರಚಂಡ ಪಂಚಮಾರ್ಗದ
ಮೊತ್ತದಲ್ಲಿಗೆ ನೀನು ಸಾಗಿ ಪೋಗಿ
ವಿತ್ತಾದಿಗಳ ಬಯಕೆ ಫಲವಿಲ್ಲ ಫಲವಿಲ್ಲ
ಅತ್ತಲಿತ್ತಲು ನೋಡು ತಿಳಿದರಾಗೆ
ತೆತ್ತು ಅನಂತ ಜನುಮಗಳಲ್ಲಿ ಅರಸಿದರು
ಉತ್ತಮ ಲೋಕಕ್ಕೆ ನೆಲೆಯಾಗದು
ಹತ್ತು ನೂರಾರು ಕೋಟಿ ಪಿಪಿಲಿಕಾ ಕೂಡಿಡಲು
ಉತ್ತಮ ಗಜಕೆ ಸರಿ ಎನಿಸುವದೆ
ತತ್ತಳ ಗೊಳದಿರು ಚನ್ನಾಗಿನ್ನು ವಿಷ್ಣು -
ತತ್ವವ ವಿಚಾರಿಸು ಸುಜನರೊಡನೆ
ಹತ್ತಿ ಬಾಹೊ ದೋಷ ದೂರಾಗಿ ನಿಂದಾವು
ಚಿತ್ತ ಮಾರ್ಗದಲ್ಲಿ ನಲಿದಾಳ್ಪದು
ಹತ್ತಾರು ಕಳೆಗೊಡಿದ ಲಿಂಗದಲ್ಲಿ ಪ್ರಥಮಾವರ್ಕ
ಸತ್ತುವ ಭಾಗದಲ್ಲಿ ನಿನ್ನ ವಾಸಾ
ನಿತ್ಯದಲ್ಲಿ ನೀನು ನಿಜಪ್ರಕಾಶ ವೊಡಗೊಡಿ
ಎತ್ತ ನೋಡಿದರತ್ತ ಪೋಪಾದೇನು
ಹೊತ್ತು ಹೊತ್ತಿಗೆ ವಿಷಯ ಧ್ಯಾನವನ್ನು ಮಾಡಿ ಸಂ -
ಪತ್ತೆ ಪೋಗಾಡದಿರು ಒಲಿದು ಕೇಳು
ಇತ್ತ ಲಾಲಿಸುವದು ಬಿನ್ನೈಸುವೆನು ಮಹಾ
ಕತ್ತಲಿಯೊಳು ಪುಟ್ಟಿ ಬಿದ್ದು ಕಣ್ಣು ಮುಚ್ಚಿ
ಸುತ್ತ ತಿರುಗಿದಂತೆ ಎಲ್ಲದೆ ಎಂದಿಗೂ
ಉತ್ತಮತ್ವವೆ ಇಲ್ಲ ವಿಚಾರಿಸೂ
ಕೀರ್ತಿ ಮೊದಲಾದ ಗುಣವ ಗಳಿಸಿ ಭ -
ರಿತವಾಗಿರು ಭಕುತಿ ಪೂರ್ಣದಿಂದ
ತತ್ವವಿಗ್ರಹ ನಮ್ಮ ವಿಜಯವಿಟ್ಠಲರೇಯನ
ತುತ್ತಿಸಿಕೊಳುತ ಅನಂದ ವನಧಿಯೋಳಿರು ॥ 1 ॥
ಮಟ್ಟತಾಳ
ಚಂಚಲನಾಗದಿರು ಚತುರತನದಲ್ಲಿರು
ಪಂಚೇಂದ್ರಿಯಗಳಲಿ ಪರಮ ಪ್ರೀತಿಯಿಂದ
ಸಂಚರಿಸುತ್ತಿರು ಸಾಧ್ಯಸಿದ್ದನಾಗಿ
ಕೊಂಚೆಯಿಲ್ಲವೋ ಕಾಣೊ ಕೋಟಿಗಾದರು ಒಂದೆ
ಕಾಂಚನಮಯವಾದ ಮಾಣಿಕ ಸಮ ಮಾತೂ
ವಂಚಕತನ ಬಿಡು ವೇದಸ್ಮೃತಿ ಗುಣಿಸು
ಅಂಚಿಗಂಚಿಗೆ ಗುರುಗಳ ಸ್ಮರಿಸು ಸತತ ತೃಣ -
ಗುಂಚಿಕೆಯನು ಬಯಸದೆ ಗುಪ್ತದಿ ನಿನ್ನೊಳಗೆ
ಪಂಚಪರಣಕೊಡಿಯ ವಿಜಯವಿಟ್ಠಲರೇಯನ
ಲಾಂಛನವನು ಧರಿಸಿ ಲಲಿತ ದಾಸನಾಗು ॥ 2 ॥
ತ್ರಿವಿಡಿತಾಳ
ಸ್ವಸ್ಥದಲ್ಲಿರು ನೀನು ಸಕಲಕಾಲದಲಿ ಸ -
ಮಸ್ತ ಗುಣ ಸಂಪೂರ್ಣ ಸುಖವೀರ್ಯಸಾರ
ವಿಸ್ತಾರ ಮಹಿಮ ವಿಶೇಷ ಪ್ರಬಲ ಚತುರ -
ಮಸ್ತಕ ಜನಕ ಜಗಜೀವನ ಜಿತತಮ
ದುಸ್ತರವಾದ ಭವಾಂಬುಧಿ ತಾರ ಪರ -
ವಸ್ತುವೆ ವಲ್ಲವ ವಲ್ಲಭ ನಾನಾ -
ವಸ್ಥಾ ಪ್ರೇರಕ ಸರ್ವರೂಪ ಅಭೇದನೆ
ಪ್ರಸ್ತುತ ಭಕುತರ ಜೀವ ಜನಾರ್ದನ
ಹಸ್ತಿವರದ ಕಂಬು ಚಕ್ರ ಗದಾ ಪದುಮ ಸು -
ಹಸ್ತ ಚೇತನಾಚೇತನ ನಿತ್ಯಾನಿತ್ಯ ಸ್ವಾಮಿ
ಪ್ರಸ್ತಾರ ಉದ್ದಾರ ಉದಧಿಶಯನ ಉದಯ -
ಅಸ್ತಾದ್ರಿ ಪ್ರಕಾಶನಿಲಯ ನಿಶ್ಚಿಂತಕಾಯ
ದುಸ್ತರ್ಕವಾದ ಜೀವಿಗಳಿಗೆ ಅನುದಿನ
ಶಾಸ್ತನಾಗಿಪ್ಪ ಹರಿ ಪರನೆ ಎಂದು
ಈ ಸ್ತವನದಿಂದ ಕೀರ್ತನೆ ಮಾಡಿ ಭ -
ಯಸ್ತನಾಗಿದ್ದ ಮಾರ್ಗವನೆ ಬಿಟ್ಟು
ಕಸ್ತೂರಿ ಮಟ್ಟಿಯ ಬೀದಿಗಿಕ್ಕದೆ ತಿಳಿದು
ಮಸ್ತಕದಂತೆ ಪೊಂದಿರು ಚಿತ್ತವೆ
ಹಸ್ತಾನಂತ ಉಳ್ಳ ವಿಜಯವಿಟ್ಠಲರೇಯನ
ಸ್ವಸ್ಥಾನದಲಿ ಇದ್ದು ಶುಭಯೋಗ ಯೋಚಿಸು ॥ 3 ॥
ಅಟ್ಟತಾಳ
ಸುಖ ಬಯಸು ನೀನು ಸುಖ ಕಾರಣ ಮಾಡು
ಆಖಿಳ ಬಗೆಯಲ್ಲಿ ಸುಸಖನಾಗಿಪ್ಪ ಹರಿಯ
ನಖಶಿಖ ಪರಿಯಂತ ಮುಖದಿಂದ ಕೊಂಡಾಡಿ
ದುಃಖದಿಂದ ಕಡೆಬೀಳು ಮಖಜ್ಜನು ಉದ್ದರಿಸಿ
ಮಖ ಮಿಕ್ಕಾದರಿಂದ ಸುಖ ಇಂಥಾದ್ದೆ ಇಲ್ಲ
ನಿಖಿಳ ಭುವನೇಶ ವಿಜಯವಿಟ್ಠಲನ್ನ
ಅಖಂಡ ಸ್ಮರಣಿಯ ಪಖದಲ್ಲಿ ಧರಿಸೋ ॥ 4 ॥
ಆದಿತಾಳ
ವ್ಯಾಪಾರ ನಿನಗಿದೆ ಎಲೊ ಚಿತ್ತವೇ ಕೇಳು
ಭೂಪಾರದೊಳಗೆ ಎಲ್ಲಿದ್ದರು ತೊಲಗದೆ
ಆ ಪಾರಮಾರ್ಥಿಕನಾಗಿ ವಖ್ಖಣಿಸಿ
ದೀಪಕ್ಕಂಜಿಸುವಂತೆ ತತ್ವವಿಚಾರದಿ
ಪಾಪ ರಹಿತನಾಗಿ ಭವವೆಂದೆಂಬೊ ಮಹಾ -
ಕೂಪಾರದಿಂದಲಿ ಅತಿ ವೇಗ ಯೋಗದಿಂದ
ನೀ ಪಾರಂಗತನಾಗು ಮುಕ್ತರಿಗೆ ಬಾಗು
ಕೋಪರಾಗಿಷ್ಟನಾಗಿ ಹರಿ ಪೂಜೆ ಮಾಡಿದರೆ
ತಾಪರ ಮನದಲ್ಲಿ ಪೊಕ್ಕಂತೆ ಎಂದಿಗೂ
ಕೋಪ ರಾಹಸ್ಯ ಪಥಕೆ ಪ್ರತಿಬಂಧಕವಹುದು
ರೂಪ ರತದಿಂದ ಬಳಲುವದು ಬಿಡದು ಬಿಡದು
ಸೂಪಾರವಾದ ಶಯನ ವಿಜಯವಿಟ್ಠಲರೇಯನ
ನೀ ಪಾರಂಪಾರವಾಗಿ ನಿಶ್ಚಯ ತತ್ವವೆನ್ನು ॥ 5 ॥
ಜತೆ
ಚಿತ್ತವೆ ಚಿತ್ತೈಸು ವಿಜಯವಿಟ್ಠಲರೇಯನ
ಚಿತ್ತವಿಡಿದು ಬದುಕು ನಿನಗೆ ಪರಮಲಾಭ ॥
****