ಗಂಗಾಪೂಜೆ
ನೀರು ತುಂಬುವ ಹಬ್ಬ. ಗಂಗಾ ಪೂಜೆಯ ಈ ಸಂಜೆಯ ಸಮಯದಲಿ ಹರಿಪಾದೋದ್ಭವಿ, ತ್ರಿಪಥಗಾಮಿನಿ, ಎಲ್ಲರ ಪಾಪವಿನಾಶಿನಿ, ಶ್ರೀಮದಾಚಾರ್ಯರ ಮಾತಿನಂತೆ ಉಡುಪಿಯ ಮಧ್ವಸರೋವರದಲ್ಲಿ ಸನ್ನಿಧಾನಯುಕ್ತಳಾದ, ಶ್ರೀ ಶ್ರೀಪಾದರಾಜ ಗುರುಸಾರ್ವಭೌಮರಿಗೆ ನರಸಿಂಹತೀರ್ಥದಲ್ಲಿಯು, ಶ್ರೀ ವಿಜಯಪ್ರಭುಗಳಿಗೆ ತುಂಗೆಯಲ್ಲಿಯೂ ಸನ್ನಿಧಾನವನ್ನು ತೋರಿದ ಪರಮ ಪವಿತ್ರಳಾದ ಗಂಗಾದೇವಿಯನ್ನು ಭಕ್ತಿಯಿಂದ ಪೂಜೆ ಮಾಡೋಣ.
ಶ್ರೀಮತ್ಪುರಂದರದಾಸಾರ್ಯರು ಕಾಶಿಯ ಮಾಹತ್ಮ್ಯವನ್ನು ಹೇಳುತ್ತ....
ಬಲಿಯ ಬಳಿ ಮೂರಡಿಯ ಭೂದಾನವನೆ ಬೇಡಿ
ನೆಲನಳಿಯೆ ಈರಡಿಗೆ ಸಾಲದಿರೆ ಬ್ರಹ್ಮಾಂಡ
ಬಲಪದದ ನಖದಿ ಸೀಳಲ್ಕೆ ಬಹಿರಾವರಣ
ಜಲಸುರಿಯೆ ಅಂಗುಟದಲಿ
ಸಲೆ ತೀರ್ಥವೆಂದಜ ಕಮಂಡಲದೊಳಗೆ ಧರಿಸಿ
ತೊಳೆದನಾ ಚರಣಗಳ ಬಲು ಗಂಗೆ ಬರಲು ಜಡೆ-
ತಡೆಯೊಳಿಟ್ಟಾ ಶಿವ ಭಗೀರಥನ ಯತ್ನದಿಂ-
ದಿಳಿದಿಹಳು ಕಾಶಿಯಲ್ಲಿ ॥
ಪರಮನಿರ್ಮಲ ಶುಭ್ರತರದ ಭಾಗೀರಥಿಯ
ನಿರಜೆ ನೀಲಾಭೆ ಯಮುನೆಯ ಮಧ್ಯದಲಿ ಕಾರ್ತ-
ಸ್ವರ್ಣವರ್ಣದಿಂದಲ್ಲಿ ಗುಪ್ತಗಾಮಿನಿಯಾದ
ಸರಸ್ವತಿಯ ಸಂಗಮದಲಿ ॥
***
ಎಂದು ತಾಯಿ ಗಂಗೆಯನ್ನು ಸ್ತುತಿಸುತ್ತಾರೆ. ಪರಮಾತ್ಮನ ಪಾದದಿಂದ ಉದಿಸಿದವಳು ಎಂದು ನೆನೆಯುವುದರಿಂದ ಗಂಗಾದೇವಿಯು ನಮ್ಮ ಪಾಪಗಳನ್ನು ಕಳೆಯುತ್ತಾಳೆ ಎನ್ನುವುದು ಸೂಕ್ಷ್ಮ. ನೆನೆದ ಮಾತ್ರಕ್ಕೇ ಪಾಪಗಳು ಹೋಗುತ್ತವಾ ಎಂದು ಪ್ರಶ್ನೆ ಬಂದರೆ ಭಕ್ತಿಯಿಂದ ಎನ್ನುವುದು ಉತ್ತರ.
ಪರಮಾತ್ಮನು ತ್ರಿವಿಕ್ರಮನಾಗಿ ಬೆಳೆದು ನಿಂತಾಗ ಪಾದದಿಂದ ನೀರು ಹುಟ್ಟಿಬಂದಾಗ ಆ ಜಲವನ್ನೇ ತೀರ್ಥವನ್ನಾಗಿ ಬ್ರಹ್ಮದೇವರು ತಮ್ಮ ಕಮಂಡಲದಲ್ಲಿ ತುಂಬಿಸಿಕೊಂಡರು ಎಷ್ಟು ಅದ್ಭುತವಲ್ಲವೆ. ನಮ್ಮ ನಾರದಾವತಾರಿಗಳ ಸಾಹಿತ್ಯ ಓದುವುದೇ ಸುಖ...
***