ಮೋದಭರಿತ ಕೇಶವನೆ ಈ ಜಗಕಾದಿ
ಕರ್ತನೆಂಬೋದು ಖರೆ
ಸಾಧಿಸಿಕೊಂಬುವ ವಿಬುಧರ ಕೈವಶ
ನಾಗುತಿಪ್ಪನೆಂಬೋದು ಖರೆ ಪ
ಪೊಡವಿಯೊಳಗೆ ನಾರಾಯಣ ತಾನು ಬಿಡದೆ
ಇಪ್ಪನೆಂಬೋದು ಖರೆ
ಮೃಡನುತನಿಗೆ ಮನೆ ಸಕಲವಾದ ಈ
ಜಡಜಂಗಮವೆಂಬೋದು ಖರೆ 1
ಅಘದೂರನ ಮಹ ಉದರದೊಳಗೆ ಈ
ಜಗವು ಇಪ್ಪದೆಂಬೋದು ಖರೆ
ಖಗನಗ ಮೃಗ ಸರ್ವಗನಿಗೆ ಎಂದಿಗು ವಿಗಡವಿಲ್ಲ
ವೆಂಬೋದು ಖರೆ 2
ಉಂಬುವಲ್ಲಿ ಉಡುವಲ್ಲಿ ನಮ್ಮ ಹರಿ
ಇಂಬಾಗಿಹನೆಂಬೋದು ಖರೆ
ಕೊಂಬುವಲ್ಲಿ ಕೊಡುವಲ್ಲಿ ಸರ್ವರಲ್ಲಿ ತುಂಬಿ
ಇಪ್ಪನೆಂಬೋದು ಖರೆ3
ಎಲ್ಲೆಲ್ಹುಡುಕಲು ಇಲ್ಲ ನಮ್ಮ ಹರಿ ಇಲ್ಲದ
ಸ್ಥಳ ಇಲ್ಲೆಂಬೋದು ಖರೆ
ಬಲ್ಲಿದರಿಗೆ ಪ್ರತಿಮಲ್ಲ ಈತಗೆಣೆ ಇಲ್ಲೇ
ಇಲ್ಲವೆಂಬೋದು ಖರೆ 4
ವಾನರ ವಂದಿತ ಶ್ರೀನಿವಾಸನಿಗೆ ಹೀನತೆ
ಇಲ್ಲೆಂಬೋದು ಖರೆ
ಶ್ರೀನಿಧಿ ಪರನೆಂದ್ಹೊಗಳುವಲ್ಲಿ ಅನುಮಾನ
ವಿಲ್ಲವೆಂಬೋದುಖರೆ 5
ವೇದತಂದು ವೇದನಿಗಿತ್ತಾತನೆ ಭೂಧರನೆಂಬೋದು ಖರೆ
ಮೋದದಿ ಬೇರನು ಮೆದ್ದು ಕ್ರೂರ ವಟುವಾದನು
ಈತನೆಂಬೋದು ಖರೆ 6
ಪರಶುಧಾರಿ ರಘುರಾಮ ಕೃಷ್ಣವರ
ಬದ್ಧರೂಪನೆಂಬೋದು ಖರೆ
ತುರಗ ರೂಢ ಬಹುರೂಪನಾಗುವುದು
ಧರೆಯೊಳು ನಿಜವೆಂಬೋದು ಖರೆ 7
ಸುಪ್ತಿ ಸ್ವಪ್ನ ಜಾಗ್ರತಿಗಳು ಜೀವಕೆ ಕ್ಲಿಪ್ತ
ಮಾಳ್ಪನೆಂಬೋದು ಖರೆ
ಆಪ್ತನಾಗಿ ಎಡೆಬಿಡದೆ ಸರ್ವರಲಿ
ವ್ಯಾಪಿಸಿರುವನೆಂಬೋದು ಖರೆ 8
ಜನನ ಮರಣಗಳು ಜೈಸಿದವನು ರಾಮನು
ಎನಿಸಿದನೆಂಬೋದು ಖರೆ
ಗುಣದೂರನು ಆ ದನುಜವರಿಯ ರಾವಣನ
ಕೊಂದನೆಂಬೋದು ಖರೆ 9
ದನುಜರೊಂದಿಗೆ ದ್ವೇಷ ಮಾಡಿ ಸುಮನಸರ
ಪೊರೆವನೆಂಬೋದು ಖರೆ
ಇನಿತು ಲೀಲೆ ತೋರಲು ಅವನಿಗೆ ಕಾರಣವೆ
ಇಲ್ಲೆಂಬೋದು ಖರೆ 10
ನಿಗಮಗಳೆಲ್ಲವು ಈತÀನ ಗುಣಗಳ ಪೊಗಳು
ತಲಿಹ ವೆಂಬೋದು ಖರೆ
ಅಗಣಿತ ಮಹಿಮನ ನಾಮವೆ ಸ್ಮøತಿವರ್ಣಗಳು
ಸ್ವರಗಳೆಂಬೋದು ಖರೆ 11
ಅತಿವಿಮಲನಿಗಿವರೆನಿಪರಹಿತದಲಿ ಪ್ರತಿಬಿಂಬರು
ಯಂಬೋದು ಖರೆ
ಚತುರಾನನÀ ಭಾರತಿಧವ ಭವ ಶಚಿ ಪತಿಗಳು
ನಿಜವೆಂಬೋದು ಖರೆ 12
ಸಾಸಿರನಾಮಗೆ ವಾಸವಾದಿಗಳು ಕೂಸುಗಳ
ಹುದೆಂಬೋದು ಖರೆ
ಸೋಸಿಲಿಂದ ಅರ್ಧಾಂಗಿ ಆದಳು ಶ್ರೀ
ಸತಿನಿಜವೆಂಬೋದು ಖರೆ 13
ಅಚ್ಯುತನಿಗೆ ನಮ್ಮ ಗುರುವರ ಮಾರುತಿ ಚೊಚ್ಚಿಲ
ಮಗನೆಂಬೋದು ಖರೆ
ಹೆಚ್ಚಿನ ಭಕುತರು ಇಲ್ಲ ವಿಧಿಹೊರತು ನಿಶ್ಚಯ
ನಿಜವೆಂಬೋದು ಖರೆ 14
ಈತನು ಪೇಳಿದ ಮಾತುಗಳನು ಹರಿ ಕೂತು
ಕೇಳ್ವನೆಂಬೋದು ಖರೆ
ಈತನ ನಂಬಿದ ಜನರ ಕಂಡು ಅತಿ
ಪ್ರೀತನಾಗ್ವನೆಂಬೋದು ಖರೆ 15
ಮುದಮುನಿಯಾಗಿ ಹನುಮನು ಈ ಜಗದೊಳಗುದಿಸಿ
ಬಂದನೆಂಬೋದು ಖರೆ
ಬುಧವರ ಪುರಂದರದಾಸರಾಗಿ ನಾರದ
ನೆಂದರೆಂಬೋದು ಖರೆ 16
ಮಧ್ವಮತವೇ ಮೂಜಗದೊಳ್
ಪರಿಶುದ್ಧವಾದುದೆಂಬೋದು ಖರೆ
ಅದ್ವೈತರನೆಲ್ಲ ಗೆದ್ದು ಪರಮ ಪ್ರಸಿದ್ಧ
ವಾದುದೆಂಬೋದು ಖರೆ 17
ಹರಿನಾಮಕೆ ಹರಿಯದ ಪಾಪಿಗಳೀಧರೆಯೊಳಿ-
ಲ್ಲವೆಂಬೋದು ಖರೆ
ಹರಿಸ್ಮರಣೆಗೆ ಸರಿಯಾದ ಪುಣ್ಯ ಮತ್ತರಸಲಿಲ್ಲ
ವೆಂಬೋದು ಖರೆ 18
ಜೀವರು ಮಾಡುವ ದ್ವಂದ್ವ ಕರ್ಮ
ಹರಿಸೇವೆಯನಿಪವೆಂಬೋದು ಖರೆ
ಕೋವಿದರೀ ತೆರಾಮನದಿ ನಿತ್ಯದಲಿ
ಭಾವಿಸುತಿಹರೆಂಬೋದು ಖರೆ 19
ಅಜನಯ್ಯನ ಪದ ಭಜಿಸುವರೆ
ನಿಜದ್ವಿಜರಹುದೆಂಬೋದು ಖರೆ
ಸುಜನರೊಂದಿಗೆ ದ್ವೇಷಮಾಡುವರೆ
ದನುಜರೆನಿಪರೆಂಬೋದು ಖರೆ 20
ವಿಧಿನಿಷೇದಗಳು ಇತರರಿಗುಂಟು
ಬುಧರಿಗಿಲ್ಲವೆಂಬೋದು ಖರೆ
ಶ್ರೀದನುಳಿದ ವರ್ಣಕರ್ಮಮಾಳ್ಪರಿಗೆ ಮೋದವೆ
ಇಲ್ಲೆಂಬೋದು ಖರೆ 21
ಮುಕ್ತಿಮಾರ್ಗಕೆ ಎಲ್ಲಕಿಂತ ಹರಿಭಕ್ತಿಯ
ವರವೆಂಬೋದು ಖರೆ
ಯುಕ್ತಿಯ ವಚನಗಳಲ್ಲವು ಇವು ವೇದೋಕ್ತಿಗಳ-
ಹುದೆಂಬೋದು ಖರೆ 22
ಅರಿಯಲು ಹರಿಗುಣ ಓರ್ವಸರಸ
ಸದ್ಗುರುವರಬೇಕೆಂಬೋದು ಖರೆ
ಗುರುವಿನ ಸುಂದರ ಚರಣದ ಸ್ಮರಣೆಯು
ಪರಮಸೌಖ್ಯವೆಂಬೋದುಖರೆ 23
ಹರಿಯು ಪರನು ಮಿಕ್ಕಾದವರಾತನ ಚರಣ
ಸೇವಕರು ಖರೆ ಖರೆ
ಗುರುವಿನ ಕರುಣವೆ ಪರಮ ಸೌಖ್ಯವನು
ಗರಿಯುತಲಿರುವದು ಖರೆ ಖರೆ 24
ರಘುಪತಿ ಎಂಬೋ ನಾಮ ಧ್ಯಾನದಿಂದಘ
ಹೋಗುವದು ಖರೆ ಖರೆ
ಜಗದೋದರ ಶಿರಿಗೋವಿಂದ ವಿಠಲ
ನಿಗಮಗೋಚರನು ಖರೆ ಖರೆ 25
****