Audio by Mrs. Nandini Sripad
ಶ್ರೀವಿಜಯದಾಸಾರ್ಯ ವಿರಚಿತ ಶ್ರೀಪುರಂದರದಾಸರ ಸ್ತೋತ್ರ ಸುಳಾದಿ
ರಾಗ ಪಂತುವರಾಳಿ
ಧ್ರುವತಾಳ
ಆವ ಜನುಮದಲ್ಲಿ ಸ್ನಾನ ಮಾಡಿದಿನೊ
ಆವ ಜನುಮದಲ್ಲಿ ದಾನವ ಮಾಡಿದಿನೊ
ಆವ ಜನುಮದಲ್ಲಿ ಮೌನ ಮಾಡಿದಿನೊ
ಆವ ಜನುಮದಲ್ಲಿ ಗಾನ ಮಾಡಿದಿನೊ
ಆವ ಜನುಮದಲ್ಲಿ ದ್ಯುಸರಿತು ಮಿಂದಿನೊ
ಆವ ಜನುಮದಲ್ಲಿ ಯಾತ್ರೆ ಚರಿಸಿದೆನೊ
ಆವ ಜನುಮದಲ್ಲಿ ವೇದ ಓದಿದಿನೊ
ಆವ ಜನುಮದಲ್ಲಿ ಧರ್ಮದಿ ನಡೆದಿನೊ
ಆವ ಜನುಮದಲಿ ಗುರು ಸೇವೆ ಮಾಡಿದಿನೊ
ಆವ ಜನುಮದಲಿ ಸಂತರಲ್ಲಿದ್ದಿನೊ
ಆವ ಜನುಮದಲ್ಲಿ ಯಾಗವ ರಚಿಸಿದೆನೊ
ಆವ ಜನುಮದಲ್ಲಿ ಸತ್ಕರ್ಮ ಚರಿಸಿದಿನೊ
ಆವ ಜನುಮದಲಿ ವಾಯುಮತ ಪೊಂದಿದಿನೊ
ಆವ ಜನುಮದಲಿ ಶ್ರವಣವ ಕೇಳಿದಿನೊ
ಆವ ಜನುಮಗಳಲಿ ಧ್ಯಾನಂಗಳೈದಿದೆನೊ
ಆವ ಜನುಮದಲ್ಲಿ ಆವಾವದರ್ಚಿಸಿದಿನೊ
ನಾ ವಂದದರೊಳಗೆ ಗೆರೆಗೊಯ್ಯಲರಿಯೆ
ಆವ ಕರ್ಮವೊ ಮತ್ತಾವಾವ ನಡತಿಯೊ
ಆವದಾವದೊ ಎನಗೆ ಈ ಪುಣ್ಯ ಫಲಿಸಿತು
ಪಾವನ ನಾನಾದೆ ದಾಸರಿಂದ
ಕೈವಲ್ಯನಾಥ ಸಿರಿ ವಿಜಯವಿಟ್ಠಲರೇಯ
ಭಾವ ಬಲ್ಲನೊ ಮಹಿಮ ಕಾವನು ಪ್ರತಿದಿನ ॥ 1 ॥
ಮಟ್ಟತಾಳ
ನರಸಿಂಹ ವೈಕುಂಠ ನರಹರಿ ಯೋಗೇಂದ್ರ
ಸಿರಿ ಸುಲಭ ಸೊಬಗುವರದ ಅಚಲಾನಂದ
ಅರವಿಂದನಾಭ ಹರಿವ್ಯಾಸ ಕೃಷ್ಣ ವರದಾನಿ ಚನ್ನ
ಸಿರಿಪತಿ ಚಲುವ ಶ್ರೀಕರ ಶೃಂಗಾರ ಸುಂ -
ದರ ಬೋಧಪತೆ ಗುರು ಅಚ್ಯುತ ಚ -
ತುರ ಮಧ್ವಪತಿ ಗರುಡವಾಹನ ಮುದ್ದು
ಪರಿಪೂರ್ಣಾನಂತ ದಾರಿಪನ ಶ್ರೀ -
ಧರ ಪಾಂಡುರಂಗ ಚರಿತಾನಂದಾ ವಿ -
ಸ್ತರವಾದ ಬಲು ಪರಿ
ಪರಿಯಲಿ ಪೇಳಿ ಅಂಕಿತವ ಸರಸದಲಿ ಪೇಳಿ
ಪರಮ ಭಕುತಿಯಲ್ಲಿ ವಿಜಯವಿಟ್ಠಲ ನಿನ್ನ
ಸ್ಮರಣೆ ಮಾಡಿದರು ಆದ್ಯರು ನಿರ್ಮಳರಾಗಿ ॥ 2 ॥
ತ್ರಿವಿಡಿತಾಳ
ಇವರು ಈ ಪರಿಯಲ್ಲಿ ಅಂಕಿತವನು ಹಾಕಿ
ಅವನಿಯೊಳಗೆ ಸಂಚರಿಸುತ್ತಲಿರುತ್ತಿರಲು
ಭವದೂರರಾಗಿ ದಾಸರು ತಮ್ಮ ಸುತರೊಡ -
ನೆ ವಿರಚಿಸಿದರು ಪುರಂದರ ವರದ ಗುರು ಅಭಿ -
ನವ ಗುರುಮಧ್ವಪತಿ ಎಂಬಾಂಕಿತದಿಂದ
ವಿವರಣೆ ಮಾಡಿ ಲೋಕವನು ಉದ್ಧರಿಸೆ
ಅವರವರು ಎಲ್ಲಾ ಅತಿ ದಯಾಪರರಾಗಿ
ಭವಿಷ್ಯೋತ್ತರ ತಿಳಿದು ಎನಗೆ ಒಂದು
ಕವನಕ್ಕೆ ನೆಲೆಮಾಡಿ ಪೋಗಿದ್ದರದರಿಂದ
ಹವಣ ತಿಳಿದಿನೊ ಗುರುಗಳ ಕರುಣದಿಂದ
ಜವನ ಬಾಧೆಯ ಕಳೆವ ವಿಜಯವಿಟ್ಠಲನ್ನ
ಅವಸರದಲಿ ನಾ ಚರಣವ ನಂಬಿದೆನೊ ॥ 3 ॥
ಅಟ್ಟತಾಳ
ಕಳಸಜನರು ಪೋಗುತಲೊಂದು ಮನದೊಳು
ತಿಳಿದು ವಂದಾಲದೆಲೆಯನ್ನು ನಿಜ ಶಿಷ್ಯ
ಫಲುಗುಣಗಿಟ್ಟ ತೆರದಂತೆ ಎನಗೊಂದು
ಉಳಹಿ ಪೋದರು ಅಂಕಿತಕ್ಕೆ ವಿಜಯವಿ -
ಟ್ಠಲನೆಂಬೊ ನಾಮ ಶ್ರೀಹರಿ ದಯದಿಂದ
ನೆಲೆವಂತ ನಾನಾದೆ ದುರುಳರ ಜರಿದು
ಹಲವು ಬಗೆ ದೈವ ವಿಜಯವಿಟ್ಠಲನ್ನ
ಸಲೆ ಸ್ತೋತ್ರವನು ಪೇಳಲದರಿಂದ ಬಲು ಧನ್ಯ ॥ 4 ॥
ಆದಿತಾಳ
ದಾಸರು ಮೊದಲಾದ ಜ್ಞಾನಿಗಳ ಕವಿತಾ
ದೇಶದೊಳಗೆ ರವಿ ಭಾಸದಂತೊಪ್ಪುತಿರೆ
ಲೇಶ ಬುದ್ಧಿಗನು ಹರಿ ಪ್ರೇರಣೆಯಿಂದ
ದಾಸರ ದಯದಿಂದ ಕವನ ಪೇಳಿದರಿದು
ದೋಷದೊಳಗೆ ದೀಪ ಹಚ್ಚಿದೋಪಾದಿಯಲ್ಲಿ
ಭಾಸವಲ್ಲದೆ ಇದಕೆ ಕಾಣಬಾರದಧಿಕ
ಕೋಶರತ್ನವ ಘಳಿಸಿ ಅವರು ಸುಖಿಸಿದರು
ಕಾಸು ಸಂಪಾದಿಸೆ ಹರುಷವಾಯಿತೆನಗೆ
ಮೋಸ ಎನಗೆ ಯಿಲ್ಲ ವಿಜಯವಿಟ್ಟಲರೇಯ
ತಾ ಸಲಹುವೆನೆಂದಾ ದಾಸರ ಕೂಡಿಸಿ ॥ 5 ॥
ಜತೆ
ಆವಾವದೊ ಪುಣ್ಯ ಎನಗೊಂದು ತಿಳಿಯದು
ಈ ವಿಜಯವಿಟ್ಠಲನು ಒಲಿದಾ ಕಾರುಣ್ಯದಲಿ ॥
*******
ಲಘುಟಿಪ್ಪಣಿ :
ಹರಿದಾಸರತ್ನಂ ಶ್ರೀಗೋಪಾಲದಾಸರು
ಧ್ರುವತಾಳದ ನುಡಿ :
ದ್ಯುಸರಿತು = ದೇವಗಂಗಾ ;
ಗೆರೆಗೊಯ್ಯಲರಿಯೆ = ಇಂತಹ ಜನುಮದಲ್ಲಿ ಇಂತಹುದೇ ಸಾಧನ ಸಂಪೂರ್ತಿಯಾಯಿತೆಂದು ಗೆರೆಯನ್ನು ಎಳೆದು ನಿಗದಿಪಡಿಸಲಾರೆ ;
ಭಾವ = (ನನ್ನ ಸಾಧನಗಳ) ಗುಟ್ಟು - ಸಾರ ;
ಮಹಿಮೆ = ಕೀರ್ತಿ ;
ಮಟ್ಟತಾಳದ ನುಡಿ :
ಶ್ರೀಪುರಂದರದಾಸರಿಗಿಂತಲೂ ಮುಂಚೆ ಶ್ರೀಹರಿಯನ್ನು ಕೊಂಡಾಡಿದ - ಅಂಕಿತವನ್ನಿಟ್ಟು ಪ್ರಾಕೃತಭಾಷೆಯಲ್ಲಿ ಕವನದಿಂದ ಸ್ತೋತ್ರಗೈದ - ಆದ್ಯರು ಎಂದು ಹೆಸರಾದ ಹರಿದಾಸರ ಹೆಸರುಗಳನ್ನು ಈ ನುಡಿಯಲ್ಲಿ ತಿಳಿಸಿದ್ದಾರೆ.
ತ್ರಿವಿಡಿತಾಳದ ನುಡಿ :
ಪುರಂದರ ವರದ ಗುರು ಅಭಿನವ ಗುರುಮಧ್ವಪತಿ = ಪುರಂದರವಿಠಲ, ವರದಪುರಂದರವಿಠಲ, ಗುರುಪುರಂದರವಿಠಲ, ಅಭಿನವ ಪುರಂದರವಿಠಲ, ಗುರುಮಧ್ವಪತಿ ;
ಹವಣ = ಅರ್ಹತೆ ;
ಜವನ = ಯಮನ ;
ಅವಸರದಲಿ = ಸರಿಯಾದ ಸಂದರ್ಭದಲ್ಲಿ ;
ಅಟ್ಟತಾಳದ ನುಡಿ :
ಹಲವು ಬಗೆದೈವ = ನಮ್ಮಿಂದ ಇಷ್ಟೆಂದು ತಿಳಿಯಲಾಗದಂಥ ಭಾಗ್ಯಭರಿತ ;
ಆದಿತಾಳದ ನುಡಿ :
ದಾಸರು = ಶ್ರೀಪುರಂದರದಾಸರು ;
ದೋಷದೊಳಗೆ = ರಾತ್ರಿಕಾಲದಲ್ಲಿ - ಕತ್ತಲೆಯೊಳಗೆ ;
ಕೋಶರತ್ನವ ಘಳಿಸಿ = ರತ್ನಭಂಡಾರವನ್ನು ಸಂಪಾದಿಸಿ (ಶ್ರೇಷ್ಠವಾದ ಶಬ್ದರತ್ನಕೋಶದಿಂದ ರಚಿಸಲ್ಪಟ್ಟ ಕವಿತೆ ಶ್ರೀಪುರಂದರದಾಸಾರ್ಯರದೆಂಬ ಅಭಿಪ್ರಾಯ) ;
ಶ್ರೀಕೃಷ್ಣಾರ್ಪಣಮಸ್ತು
******