Audio by Mrs. Nandini Sripad
ಶ್ರೀ ಗೋಪಾಲದಾಸಾರ್ಯ ವಿರಚಿತ ಶ್ರೀಹರಿ ಮಹಿಮಾ ಸ್ತೋತ್ರ ಸುಳಾದಿ
( ಶ್ರೀಹರಿಯೇ ಸರ್ವೋತ್ತಮ , ರುದ್ರಾದಿಗಳು ಕಿಂಕರರು ಎಂಬ ಹರಿಯ ಅನೇಕ ಅವತಾರ ಮಹಿಮಾ ವರ್ಣನಪೂರ್ವಕ , ಮುಖ್ಯ ಕಾರಣ ಶ್ರೀಹರಿಯೇ ಎಂಬ ಹರಿಯ ಮಹಿಮಾ ಸ್ತೋತ್ರ . )
ರಾಗ ಪೂರ್ವಿಕಲ್ಯಾಣಿ
ಧ್ರುವತಾಳ
ಹರಿಯೇ ಸರ್ವೋತ್ತಮ ಹರಿಯೇ ಮೂಲದೈವ
ಹರಿ ಕ್ಷರಾಕ್ಷರದಿಂದ ವಿದೂರ ದೂರಾ
ಹರಿ ಜಗದ್ವ್ಯಾಪಕ ಸಕಲರಿಂದಲ್ಲಿ ಭಿನ್ನ
ಹರಿ ಮೂಲರೂಪ ಅವತಾರ ಅತ್ಯಂತ ಐಕ್ಯ
ಹರಿ ಚಿದಾನಂದ ಚಿನುಮಯ ಚಿದ್ರೂಪ
ಹರಿ ಸತ್ಯಸಂಕಲ್ಪ ಉತ್ಪತ್ತಿ ನಾಶ ದೂರ
ಹರಿ ನಿರ್ಜಿತ ಮಾಯಾ ಲೋಕ ಮೋಹಕ ದೇವ
ನಿರಾಶ್ರಯಾನಂದ ಗೋಪಾಲವಿಟ್ಠಲ
ಸರಸಿಜ ಜಾಂಡದ ದೊರೆ ಸುರತರುವೆ ॥ 1 ॥
ಮಟ್ಟತಾಳ
ಪಂಚ ಮುಖನ ಕುರಿತು ಕೃಷ್ಣ ತಪಸು ಮಾಡಿ
ಪಂಚ ಬಾಣನ ಪೆತ್ತ ನೆಂಬಿರೆಲಲಾಹಾ
ವಂಚಕ ಶ್ರೀಹರಿ ಪ್ರಳಯದಿ ವಟದೆಲಿಯ
ಮಂಚದ ಮೇಲೊರಗಿ ತದನಂತರದಿ ವಿ -
ರಿಂಚಿಯನು ಪಡೆದ ವರವಾರದು ಪೇಳೊ
ಕೆಂಚೆ ಲಕುಮಿಯರಸ ಉಪನಯನವಿಲ್ಲದೆ
ಮುಂಚೆ ಮಕ್ಕಳ ಪಡದದು ಜಗವರಿಯದೆ ಮರಳೆ
ಪಂಚ ಏಕದಶಕ ಸಾಹಸ್ರ ಸ್ತ್ರೀಯರ ಪತಿ
ಪಾಂಚಾಲಿಯ ವರದ ನಿತ್ಯ ಬ್ರಹ್ಮಚಾರ್ಯೆಂದು
ಪಂಚತ್ವವ ಐದಿದ ತರುಳ ಪರೀಕ್ಷಿತಗೆ
ಪಂಚ ಪ್ರಾಣಗಳಿತ್ತ ಅಪ್ರಾಕೃತ ದ್ವಿ -
ಪಂಚೇಂದ್ರಿಯಗಳು ಶ್ರೀಹರಿಗೆ ಜನನ
ಪಂಚತ್ವವು ನಾಶ ಪ್ರಾರಬ್ಧ ಆಗಾಮಿ
ಸಂಚಿತಗಳ ದೂರ ಶುಕ್ಲ ಶೋಣಿತದ ಪ್ರ -
ಪಂಚ ಎಂದಿಗೆ ಇಲ್ಲ ನರ ಪಂಚಾನನ
ಮಿಂಚುತಲಿದೆ ಮಹಿಮೆ ಅನಂತ ವೇದಾವಳಿಗೆ
ವಂಚನಿಯನು ತೋರಿದ ಅಸುರ ಮೋಹನಾರ್ಥ
ಪಂಚಮುಖ ಹನುಮಂತನಪಿತ ಗೋಪಾಲವಿಟ್ಠಲನ
ವಂಚನಿಲ್ಲದೆ ಸ್ಮರಿಸಲು ಸಂಚಿತಾಗಾಮಿ ತರಿವಾ ॥ 2 ॥
ರೂಪಕತಾಳ
ಶ್ರೀಧವ ಹರಿಯ ಮತ್ಸ್ಯಾವತಾರಗಳು
ಮೇದಿನಿ ವೊಳಗೆ ಪ್ರಾಕೃತವೆಂಬಿರಿ
ಶ್ರೀದೇವ ವದನದಿ ವಿಶ್ವ ತೋರಿಸಿದಾಗ
ಛೇದಿಸದೆ ಪ್ರಾಕೃತ ಶರೀರವಾದರೆ
ಛೇಧ ಭೇದವ ತೋರಿದ ಅಸುರ ಮೋಹನಾರ್ಥ
ಛೇದ್ಯ ಭೇದ್ಯ ಆ ದೇಹ ಪ್ರಾಕೃತ ವಾದಡೆ ಅಜ್ಞಾನ
ಖೇದಕ್ಕೆ ಕಾರಣ ಪೂರ್ಣತ್ವಕ್ಕೆ ಹಾನಿ
ವೇದಾವಳಿಗಳು ಪೂರ್ಣನೆಂದು ಪೊಗಳಲಿವಕೊ
ಸಾಧು ಜೀವರಿಗೆ ಈ ಪರಿಜ್ಞಾನ ಸಲ್ಲದು
ಮೋದತೀರ್ಥರ ಉಕ್ತಿ ವಿರೋಧ ಈ ಪರಿಜ್ಞಾನ
ಆದಿ ನವವಿಧ ದ್ವೇಷದೊಳು ಇದು ಒಂದನ್ನ
ಯಾದವ ಕೃಷ್ಣನು ತಪಸು ಮಾಡಿದ್ದು ಸತ್ಯ -
ವಾದರೆ ಪ್ರಾಕೃತ ಶರೀರ ಅದರಂತೆ
ವೇದಾಂತ ವೇದ್ಯ ಗೋಪಾಲವಿಟ್ಠಲರೇಯಾ
ಭೇದನಲ್ಲವೊ ಮೂಲ ಅವತಾರಕ್ಕೆ ಐಕ್ಯ ॥ 3 ॥
ಝಂಪಿತಾಳ
ಹಿರಣ್ಯಕಶ್ಯಪನ ಸಂಹಾರ ಮಾಡಿ ನರಸಿಂಹ
ಇರುತಿರಲು ಆಗ ಹರ ಶರಭ ರೂಪದಿ ಬಂದು
ನರಹರಿಯ ಕೂಡ ಯುದ್ಧವ ಮಾಡಿ ಜಯಿಸಿದ
ಹರನೆ ಸರ್ವೋತ್ತಮನೆಂದು ನುಡಿವಿ
ಶರಭಂಜೆಯ ಪೇಳುವದು ಒಂದೇ ಪುರಾಣದಲ್ಲಿ
ದುರುಳ ತಾಮಸ ಜೀವರ ಗೋಸುಗ
ನರಸಿಂಹ ಜಯ ಪೇಳುವ ಪುರಾಣವು ಸಪ್ತ
ವರವೇದ ಶಾಸ್ತ್ರ ಸರ್ವತ್ರದಲ್ಲಿ
" ಹರಿಗುಂಹರಂತ್ರ ಮನುಯಂತ್ರ ದೇವಾ "
ಅರಿಯೊ ಈ ವೇದಾರ್ಥ ಮರಳೆ ಮರಳೆ
ಆರಿಗೆ ಆ ಪರಿ ಸಮರ್ಥಿಯನುಳ್ಳರೆ ತನ್ನ
ಶರಣನ ಕೊಲ್ಲುತಿರೆ ನೋಡುತಿಹನೆ
ನರಹರಿ ಧ್ವನಿಗೆ ಸರಸಿಜಾಂಡವು ನಡುಗೆ
ಹರ ಮೌನ ಧರಿಸನೆ ಆ ಕಾಲದಲ್ಲಿ
ಕರ ಸಾಹಸ್ರವು ಅಷ್ಟೇ ಚರಣ ಆನನ ಪಂಚ
ಮೆರೆವ ದ್ವಯ ಪಕ್ಷ ಸಾವಿರ ಆಯುಧ
ಧರಿಸಿದ ಘೋರ ಶರಭನ್ನ ನರಹರಿಯು
ಪರಮ ಅನಾಯಾಸದಿ ಸಂಹಾರ ಮಾಡಿದ
ಧರಿಯಲ್ಲಿ ರುಧಿರವು ವ್ಯಾಪಿಸಲು
ದುರುಳಜನ ಮರ್ದನ ಗೋಪಾಲವಿಟ್ಠಲರೇಯಗೆ
ಸರಿಯಿಲ್ಲ ಸರಿಯಿಲ್ಲ ಸರ್ವೋತ್ತಮ ॥ 4 ॥
ತ್ರಿವಿಡಿತಾಳ
ರಾಮ ರಾವಣನ ಕೊಂದ ದೋಷವು ಬರಲಾಗ
ತಾ ಮಾಡಿದನು ಲಿಂಗ ಪೂಜೆ ತಸ್ಮಾತ್
ಉಮಾಕಾಂತನೆ ಸರ್ವೋತ್ತಮನೆಂದು ನುಡಿವಿ ನೀ
ಪ್ರೇಮದಿ ಇರಿಸಿದ ಶಿವನ ಆ ಸ್ಥಳದಲ್ಲಿ
ಭೀಮಸೇನನು ಪುರುಷಾಮೃಗ ತರಪೋಗುವಾಗ
ರೋಮಗಳು ಹನುಮಂತ ಕೊಡಲು ಒಯ್ದು
ಆ ಮೃಗವು ಅತಿ ತೀವ್ರದಿ ಬರಲಾಗಲು ಒಂದು
ರೋಮ ಬಿಸಾಟೆ ಕೋಟಿಲಿಂಗ ಕೋಟಿ ತೀರ್ಥ
ರೋಮ ರೋಮಕೆ ಕೋಟಿ ಲಿಂಗಗಳ ಮಾಡಿತು
ಶ್ರೀ ಮಾರುತಾತ್ಮಜನ ರೋಮಂಗಳು ಆ ಮ -
ಹಾಮಹಿಮ ಶ್ರೀ ರಾಮಚಂದ್ರನ ದೂತಾ
ರಾಮಗೆ ಲಿಂಗ ಪೂಜೆಯ ಮಾಳ್ಪ ಬಗೆಯಂತೊ
ಆ ಮಹಾಕಾಲದಲ್ಲಿ ಈ ಮೂಜಗಂಗಳೆಲ್ಲ
ಸಾಮಸ್ತ ಸುರಮುನಿ ಋಷಿ ಸನಕಾದಿಗಳು ಇಂದ್ರ
ಕಾಮ ಗರುಡ ರುದ್ರ ಫಣಿಪ ಆ ವಿರಿಂಚಿಯ
ತಾ ಮುದದಿ ತಿಂದು ಸರ್ವವು ಲಯವು ಮಾಡಿ ಏ -
ಕೋಮೇವದ್ವಿತೀಯನಾಗಿ ಸ್ವಾಮಿ ಮಲಗಿದ್ದಾಗ
ಯ್ಯೋಮಕೇಶನು ಆವ ಕಡೆ ಇದ್ದನೊ
ತಾಮರಸ ಪೀಠ ಫಣಿಪ ರುದ್ರಾದ್ಯರು
ರಾಮಗೆ ಕಿಂಕರರು ಜಗತ್ತಿಗೆ ಗುರುಗಳು
ರಾಮಚಂದಿರ ಗೋಪಾಲವಿಟ್ಠಲರೇಯಾ
ಕಾಮಾರಿ ವರದ ಕರುಣಾ ಸಾಗರ ॥ 5 ॥
ಅಟ್ಟತಾಳ
ವ್ಯಾಸ ಹಯಗ್ರೀವ ಹರಿ ಪರರೆನ್ನುವ -
ರಾ ಶಿರಬಾಹು ಖಂಡಿಸಿದಲೆಂಬರಿ ವೇದ -
ವ್ಯಾಸ ಹಯಗ್ರೀವ ಇರುತಿರೆ ಅವರಂತೆ
ವೇಷವ ಧರಿಸಿ ಖಳರು ಇಬ್ಬರು
ಮೋಸದಿ ಸಭೆಯೊಳು ನಿಂತು ಕೂಗಲವರ
ಸಿರ ಬಾಹು ಖಂಡಿಸಿದವು ಅವರಿಗೆ
ಈ ಶಬ್ದ ನುಡಿಯ ಯೋಗ್ಯತೆ ಇಲ್ಲದವರಿಗೆ
ಶ್ರೀಶ ರಂಗನೆ ಅವರನ್ನು ಭೇದಿಸಿದ
ವ್ಯಾಸ ಹಯಗ್ರೀವರಿಬ್ಬರಿವರು ಬೇರೆ
ಈಶನು ಭುಜವೆತ್ತಿ ಕುಣಿಯಲೆ ಉ -
ಮೇಶಗೆ ಭೃಗುಶಾಪ ಲಿಂಗವಾಗೆಂದು ರ -
ಮೇಶ ಗೋಪಾಲವಿಟ್ಠಲನೆ ಪರೇಶ
ವ್ಯಕ್ತಶಾಶ್ವತ ಶಾಶ್ವತನೊ ॥ 6 ॥
ಜತೆ
ಮುಖ್ಯ ಕಾರಣ ಅಪ್ರಾಕೃತ ನಿರಂಜನ
ಮುಖ್ಯಪ್ರಾಣಾಂತರ್ಗತ ಗೋಪಾಲವಿಟ್ಠಲ ॥
*********