Audio by Mrs. Nandini Sripad
ಶ್ರೀ ಪ್ರಾಣೇಶದಾಸಾರ್ಯ ವಿರಚಿತ ಬ್ರಹ್ಮಸೂತ್ರಭಾಷ್ಯ ಸುಳಾದಿ
CLICK ಬ್ರಹ್ಮ ಸೂತ್ರ ಸುಳಾದಿ
ರಾಗ ಭೈರವಿ
ಧ್ರುವತಾಳ
ಶ್ರೀವಿಷ್ಣುವಿನ ದಿವ್ಯ ಶ್ರವಣ ಮನನ ಧ್ಯಾನ
ಈ ವಿಧವಾದ ವಿಚಾರವನೂ
ಈ ವಸುಧಿಯೊಳು ತ್ರಿವಿಧಾಧಿಕಾರಿಗಳು
ಭಾವ ಶುದ್ಧಿಯಲ್ಲಿ ಬಹು ಬಗೆ ವಿಚಾರಿಸಿ
ಶ್ರೀವರ ಕರುಣಿಸಿ ತನ್ನಪರೋಕ್ಷವಿತ್ತು
ಸ್ಥಾವರಚೇತನ ಜಗಕೆ ಜನ್ಮಾದಿಕರ್ತಾ
ಜೀವ ಭಿನ್ನನು ಕಾಣೋ ಸರ್ವೇಶ
ಪಾವನವಾದ ನಾಲ್ಕು ವೇದ ಭಾರತ ವರ
ಭಾವುಕ ಪಂಚರಾತ್ರ ಮೂಲರಾಮಾಯಣ
ಈ ವಿಧವಾದ ಶಾಸ್ತ್ರಕಗಮ್ಯ
ಆ ಉಪಕ್ರಮ ಉಪಸಂಹಾರ ಅಭ್ಯಾಸ
ಕೇವಲವಾದ ಉಪಪತ್ತಿ ಮೊದಲಾದ ಲಿಂಗದಿಂದ
ಯಾವದ್ವೇದಾರ್ಥವ ವಿಚಾರಿಸೆ
ಆವಾವ ಬಗೆಯಿಂದ ಹರಿಯೇ ಸರ್ವೋತ್ತಮ
ಭಾವಜ್ಞ ಜನರೆಲ್ಲ ತಿಳಿದು ನೋಡಿ
ಈ ವಿಧವಾದ ಈಕ್ಷತೇ ಕರ್ಮನೆನಿಸುವ
ಈ ವಾಸುದೇವಗೆ ಸಮಸ್ತವಾದ ಶಬ್ದವಾಚ್ಯ -
ತ್ವವ ಪೇಳದ ಪಾಪಿಗೆ ಏನೆಂಬೇ
ದೇವೇಶನಾದ ಪ್ರಾಣೇಶವಿಟ್ಠಲನ
ಈ ವಿಧ ತಿಳಿವುದು ಕಾವ ಕರುಣಿ ॥ 1 ॥
ಮಟ್ಟತಾಳ
ಸಕಲ ಶಬ್ದಗಳು ನಾಲ್ಕು ವಿಧವೈಯ್ಯಾ
ಪ್ರಕಟದಿಂದ ತತ್ರ ಪ್ರಸಿದ್ಧ ಕೆಲವು
ಯುಕುತಿವಂತರು ಕೇಳಿ ಅನ್ಯತ್ರ ಪ್ರಸಿದ್ಧ
ಅಖಿಳ ಚತುರ್ವಿಧ ವಚನಗಳಿಂದ ಪ್ರಾಣೇಶವಿಟ್ಠಲ
ಅಕಳಂಕತ್ವದಲಿ ವಾಚ್ಯ ಪರಮ ವಾಚ್ಯ ॥ 2 ॥
ತ್ರಿವಿಡಿತಾಳ
ಈ ಶಬ್ದಗಳಿಗೆಲ್ಲ ಯುಕ್ತ ಸಮಯ ಶ್ರುತಿ
ದೋಷಿ ನ್ಯಾಯಾಪೇತ ಶ್ರುತಿಗಳಿಂದ
ಈಸೇಸು ವಿರೋಧವು ಹರಿ ವಾಚ್ಯತ್ವದಲ್ಲಿ
ಸೂಸಿ ಬಂದರು ವೇದವ್ಯಾಸದೇವಾ
ಘಾಸಿ ಇಲ್ಲದಂತೆ ಪ್ರಬಲ ಬಾಧಕ ಪೇಳಿ
ಘಾಸಿಯ ಬಿಡಿಸಿದ ವಿರೋಧವ
ಈ ಸೊಲ್ಲು ಪುಶಿಯಲ್ಲ ವೇದವಚನ ಸಿದ್ಧ
ಲೇಶ ಸಂದೇಹವಗೊಳಸಲ್ಲದು
ತಾಸು ತಾಸಿಗೆ ಇದನೆ ಸ್ಮರಿಸಿ ಅಧಿಕಾರಿಗಳು
ದೋಷರಹಿತ ಜ್ಞಾನಾನಂದಪೂರ್ಣ
ಶ್ರೀಶನೊಬ್ಬನೆ ಎಂದು ತಿಳಿದು ಪಾಡಿರೊ ನಿತ್ಯ
ಈಶ ಪ್ರಾಣೇಶವಿಟ್ಠಲ ನೋಳ್ಪ ಕರುಣದಿ ॥ 3 ॥
ಅಟ್ಟತಾಳ
ಸ್ವರ್ಗಾದಿಗಳಲ್ಲಿ ಗತಿ ಅಗತಿ ಮುಖ್ಯ
ದುರ್ಗಮ ದುಃಖಗಳ ತಿಳಿದು ನಿರ್ವೇದದಿ
ಭಾರ್ಗವಿರಮಣನ ಅತಿಶಯ ಮಹಿಮೆಗಳ
ನಿರ್ಗತದಲಿ ತಿಳಿದು ಹರುಷದಿ ತನು ಉಬ್ಬಿ
ನಿರ್ಗಮವಿಲ್ಲದ ಭಕುತಿ ಸಂಪಾದಿಸಿ
ದುರ್ಗತಿ ಮಾರ್ಗವ ದೂರದಿ ಬಿಟ್ಟಪ -
ವರ್ಗಪ್ರದಾ ತನ್ನ ಯೋಗ್ಯತೆಯನುಸರಿಸಿ
ನಿರ್ಗಮಿಸದಲೆ ಧೇನಿಸಿದರೆ ಕರುಣಾಬ್ಧಿ
ಸರ್ಗದಿ ವಿಮಲ ತನ್ನಪರೋಕ್ಷ
ಮಾರ್ಗವನೀವನು ಮಿಗೆ ಕಡಿಮೆ ಆಗದೆ
ಸ್ವರ್ಗಾಪವರ್ಗದಿ ಪ್ರಾಣೇಶವಿಟ್ಠಲ ವಾ -
ಲಗೈಸಿಕೊಂಬನು ಕರುಣಾದಿಂದೀ ಬಗೆ ॥ 4 ॥
ಆದಿತಾಳ
ಈ ತರುವಾಯದಿ ಅಖಿಳ ಜನರಕರ್ಮ
ವ್ರಾತವ ಕಳೆವನು ವಧುನವ ಮೊನೆ ಮಾಡಿ
ಈ ತರುಣೀಶನು ಸಕಲ ಜೀವರದೇಹ
ಘಾತ ವಿಕ್ರಾಂತಿ ಭೇದದಿ ಅರ್ಚಿರಾದಿ
ನೀತಮಾರ್ಗದಿಂದ ನೀರಜಭವನಿಂದ
ಪ್ರೀತಿಯಿಂದಲಿ ತನ್ನ ಸೇರಿಸಿಕೊಂಬನು
ವೀತಲಿಂಗರ ಮಾಡಿ ವಿಧಿಮುಖರೆಲ್ಲರ
ಈ ತರುವಾಯ ದಿನಭುಂಜಿಸಿರಭೋಗ
ಜಾತವ ಕೊಡುತಲಿ ಜನನ ಮರಣನೀಗೆ
ವಾತಜನಕ ನಮ್ಮ ಪ್ರಾಣೇಶವಿಟ್ಠಲ
ಈ ತೆರದಲಿ ಜೀವಜಾತರ ಪಾಲಿಪಾ ॥ 5 ॥
ಜತೆ
ದೋಷರಹಿತ ಗುಣಪೂರ್ಣನೆಂದರಿದರೆ
ವಾಸುದೇವ ವೊಲಿವ ಪ್ರಾಣೇಶವಿಟ್ಠಲ ॥
******