Showing posts with label ಶ್ರೀರಮಣಿ ಕರಕಮಲ ಪೂಜಿತ jagannatha dasa keerthane ಜಗನ್ನಾಥದಾಸರ ಕೀರ್ತನೆ prasannashreenivasa. Show all posts
Showing posts with label ಶ್ರೀರಮಣಿ ಕರಕಮಲ ಪೂಜಿತ jagannatha dasa keerthane ಜಗನ್ನಾಥದಾಸರ ಕೀರ್ತನೆ prasannashreenivasa. Show all posts

Thursday 5 August 2021

ಶ್ರೀರಮಣಿ ಕರಕಮಲ ಪೂಜಿತ jagannatha dasa keerthane ಜಗನ್ನಾಥದಾಸರ ಕೀರ್ತನೆ ankita prasannashreenivasa

 ..

kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru

ಜಗನ್ನಾಥದಾಸರ ಕೀರ್ತನೆ


ಶ್ರೀ ರಮಣಿ ಕರಕಮಲ ಪೂಜಿತ ಪದಾಂಬೋಜ

ಸರಸಿಜಾಸನ ಶಿವಾದ್ಯಮರ ಜನವಿನುತ

ಉರು ಗುಣಾರ್ಣವ ಜಗಜ್ಜನ್ಮಾದಿ ಕರ್ತ ನರ -

ಹರಿಗೆ ಪ್ರಿಯ ಜಗನ್ನಾಥದಾಸಾರ್ಯ ಶರಣು ಪ.


ಮೂಲ ಗುರು ಅಗುರು ಶ್ರೀ ಹಂಸನಾಮಕ ಶ್ರೀಶ

ಸಲಿಲ ಜಾಸನ ಸನಕ ದೂರ್ವಾಸಾದಿಗಳ

ಪೀಳಿಗೆಯಲಿ ಬಂದ ಮರುದಂಶ ಮಧ್ವನ

ಕಾಲಿಗೆ ಎರಗಿ ಶರಣಾದೆ ನಾ ಸತತ 1

ಮಧ್ವ ಕರ ಕಂಜಭವ ಕಂಜನಾಭ ನೃಹರಿ

ಮಾಧವ ಅಕ್ಷೋಭ್ಯ ಜಯತೀರ್ಥರಿಗೆ ನಮಿಪೆ

ವಿದ್ಯಾಧಿರಾಜರಿಗೆ ರಾಜೇಂದ್ರತೀರ್ಥರಿಗೆ

ಜಯಧ್ವಜರಿಗೆ ಮನೋ ಪುರುಷೋತ್ತಮರ್ಗೆ 2

ಪುರುಷೋತ್ತಮ ಕುವರ ಬ್ರಹ್ಮಣ್ಯ ತೀರ್ಥರಿಗೆ

ಸರಸೀರುಹ ನಾಭ ತೀರ್ಥಜರು ಲಕ್ಷ್ಮೀ -

ಧರರ ಪರಂಪರೆ ಜಾತ ಸ್ವರ್ಣ ವರ್ಣರ ಕರ

ಸರೋಜ ಭವ ಶ್ರೀ ಪಾದರಾಜರಿಗೆ ಶರಣು 3

ಸುಪುಣ್ಯ ಲಕ್ಷ್ಮೀ ನಾರಾಯಣ ತೀರ್ಥರಿಗೆ

ಶ್ರೀಪಾದ ರಾಜತ್ವ ಯೋಗ್ಯತಾಲಿಂಗ

ಶ್ರೀ ಭೂ ಸಮೇತ ಶ್ರೀ ರಂಗವಿಠ್ಠಲ ತಾನೆ

ಈ ಪುಣ್ಯ ಶ್ಲೋಕರಲಿ ಬಂದು ನಿಂತಿಹನು 4

ದಿನತೇಜಃ ಪುಂಜ ಬ್ರಹ್ಮಣ್ಯ ತೀರ್ಥರ

ವನಜ ಕರಜರು ವ್ಯಾಸರಾಜಸ್ವಾಮಿಗಳು

ಘನ ಮಹಾ ಹರಿಭಕ್ತ ವಾದಿಗಳ ಸಿಂಹರು

ಆ ನಮಿಪೆ ಈ ಹರಿದಾಸಯತಿಗಳಿಗೆ 5

ಪೂರ್ಣ ಪ್ರಜ್ಞಾನಂದ ತೀರ್ಥ ಮಧ್ವಾಚಾರ್ಯ

ಕ್ಷೋಣಿಯ ಸಜ್ಜನರ ಉದ್ಧಾರಕಾಗಿ

ಘನ ಮೂಲ ಗ್ರಂಥಗಳ ಸಹ ಪ್ರಾಕೃತದಲ್ಲೂ

ಅನಘ ಲಕ್ಷ್ಮೀಶನ ಸ್ತೋತ್ರ ರಚಿಸಿಹರು 6

ಪೂರ್ಣಪ್ರಜ್ಞರ ಜ್ಞಾನ ವಂಶಸ್ಥಯತಿಗಳು

ಕನ್ನಡದಿ ನುಡಿದಿರುವ ಕೀರ್ತನೆ ಪದ್ಯಗಳು

ಘನ ತರವು ಆ ರೀತಿ ಆದ್ಯ ಹರಿದಾಸರುಗಳು

ಕನ್ನಡದಿ ನುಡಿದಿಹರು ಹರಿ ಪ್ರೀತಿಗಾಗಿ 7

ಸರ್ವದಾ ಶರಣಾದೆ ಎನ್ನ ಕಾಯುವ ತಂದೆ

ದೇವ ಋಷಿ ನಾರದ ಪುರಂದರ ದಾಸರಲಿ

ಶ್ರೀ ವ್ಯಾಸರಾಜರಲಿ ಉಪದೇಶ ಕೊಂಡಿಹರು

ನಿರ್ವಾಜ್ಯ ಭಕ್ತಿಮಾನ್ ಕಾರುಣ್ಯ ಶರಧಿ 8

ವಿಷ್ಣು ಸರ್ವೋತ್ತಮ ತದಂತರ ರಮಾದೇವಿ

ವನು ರುಹಾಸನ ವಾಣಿ ತದಧೌ ಎಂದು

ತಾನೆ ನೇರಲ್ಲರಿತು ಲೋಕಕ್ಕೆ ಪೇಳಿದ

ಘನ ದಯಾನಿಧಿ ಭೃಗುವೇ ವಿಜಯದಾಸಾರ್ಯ 9

ವಿಜಯ ದಾಸಾರ್ಯರ ರಾಜೀವ ಪದಯುಗಕೆ

ನಿಜ ಭಕ್ತಿ ಪೂರ್ವಕ ಶರಣಾದೆ ಸತತ

ವಿಜಯರಾಯರ ಗುರು ಪುರಂದರ ದಾಸಾರ್ಯರು

ವಿಜಯರಾಯರ ಶಿಷ್ಯ ಗೋಪಾಲದಾಸರು 10

ಪರಮ ಭಾಗವತರು ಹರಿ ಭಕ್ತಾಗ್ರಣಿ ಕರುಣಿ

ಹರಿ ಶಿರಿ ಒಲಿದಿಹ ದಾಸ ಮಹಂತ

ವರ ವಾಯು ಗೋಪಾಲದಾಸರೊಳು ಸರ್ವದಾ

ಸುಪ್ರಚುರನಾಗಿಹನು ಶರಣು ಗುರುವರ್ಯ 11

ಕ್ಷಿಪ್ರಪ್ರಸಾದರು ವ್ಯಾಪ್ತೋಪಾಸಕರು

ಶ್ರೀಪತಿ ವೆಂಕಟ ಕೃಷ್ಣನಲಿರತರು

ಆಪತ್ತುಗಳ ಕಳೆದು ಕಾಮಿತಾರ್ಥಗಳೀವ

ಕೃಪಾಳು ಇವರಲ್ಲಿ ನಾ ಶರಣು ಶರಣಾದೆ 12

ಈ ನಮ್ಮ ಗುರುಗಳು ಗೋಪಾಲದಾಸಾರ್ಯರಲಿ

ಘನ ವಿದ್ವಾಂಸರು ಬ್ಯಾಗವಟ್ಟ ಮನೆಯವರು

ಶ್ರೀನಿವಾಸಾಚಾರ್ಯ ಶರಣಾಗಿ ಜಗತ್ತಲ್ಲಿ

ಜಗನ್ನಾಥ ದಾಸರು ಎಂದು ಜ್ವಲಿಸಿಹರು 13

ಬ್ಯಾಗವಟ್ಟಿ ಗ್ರಾಮ ಮಾನವಿ ಎಂಬುವ

ನಗರದ ಸಮೀಪವು ನವಾಬನಾಡಳಿತ

ಆಗ್ರಾಮ ಶಾನಭೋಗ ನರಸಿಂಹಾಚಾರ್ಯರು

ಭಾಗವತ ಧರ್ಮವ ಆಚರಿಸುವವರು 14

ಹಣದಿಂದ ಶ್ರೀಮಂತರೋ ಬಡವರೋ ಹೇಗೋ

ಗುಣದಿಂದ ಇವರು ಶ್ರೀಮಂತರು ಖರೆಯು

ಜ್ಞಾನಿವರ್ಯರು ಇವರು ಸುರವೃಂದದವರು

ಮನುಜ ಲೋಕದಿ ಜನ್ಮ ಹರಿಯ ನಿಯಮನದಿ 15

ಜ್ಞಾನ ಭಕ್ತಿ ವೈರಾಗ್ಯ ಸಂಪನ್ನರು

ಶಾನುಭೋಗಿ ಉದ್ಯೋಗವ ತ್ಯಜಿಸಿ

ಜ್ಞಾನಿ ತಿಮ್ಮಣ್ಣದಾಸಾರ್ಯರಲಿ ಉಪದೇಶ

ಅನುಗ್ರಹನಾಮಾಂಕಿತ ಹೊಂದಿದರು ಮುದದಿ 16

ನರಸಿಂಹಾಚಾರ್ಯ ಲಕ್ಷ್ಮಕ್ಕ ದಂಪತಿಯ

ಪುತ್ರರತ್ನನು ಬುದ್ಧಿರ್ಮಾ ಶ್ರೀನಿವಾಸ

ಸೂರಿ ವರ ವರದೇಂದ್ರ ತೀರ್ಥರ ಮುಖದಿಂದ

ಪರಾಪರ ವಿದ್ಯೆಯ ಕಲಿತನು ತೀವ್ರ 17

ವರದೆಂದ್ರರಲಿ ಓದಿ ದೊಡ್ಡ ಪಂಡಿತನಾಗಿ

ನರಸಿಂಹದಾಸರು ತಂದೆ ದಿನ ಚರಿಪ

ಹರಿದಾಸ ಪದ್ಧತಿ ಕೀರ್ತನಾರಾಧನ

ಹರುಷದಲಿ ನೋಡಿ ಮುದಪುಳಕ ನಾಗುವನು 18

ಗೃಹಸ್ಥ ಆಶ್ರಮ ಧರ್ಮ ಚೆನ್ನಾಗಿ ಆಚರಿಸುತ್ತ

ಅಹರಹ ಸಚ್ಛಾಸ್ತ್ರ ಪಾಠ ಪೇಳುತ್ತ

ಬಹುಕೀರ್ತಿ ಶ್ರೀನಿವಾಸಾಚಾರ್ಯರು ಹೊಂದಿ

ಮಹಿಯಲ್ಲಿ ಪ್ರಖ್ಯಾತರಾಗಿ ಜ್ವಲಿಸಿಹರು 19

ವಾರಿಜಾಸನ ಪಿತನು ಪೂರ್ಣಪ್ರಜ್ಞರ ಹೃಸ್ಥ

ಶಿರಿಪ್ರಸನ್ನ ಶ್ರೀನಿವಾಸನಿಗೆ ಪ್ರಿಯತರರು

ಪುರಂದರ ವಿಜಯಗೋಪಾಲದಾಸಾರ್ಯರ

ಚರಣರತ ಜಗನ್ನಾಥದಾಸಾರ್ಯ ಶರಣು 20

- ಪ್ರಥಮೋಧ್ಯಾಯ ಸಂಪೂರ್ಣಂ -

***

..

kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru

ಶ್ರೀರಮಣ ಕರಕಮಲ ಪೂಜಿತ ಪದಾಂಬೋಜ

ಸರಸಿಜಾಸನ ಶಿವಾದ್ಯಮರ ಜನವಿನುತ

ಉರುಗುಣಾರ್ಣವ ಜಗಜ್ಜನ್ಮಾದಿ ಕರ್ತ ನರ-

ಹರಿಗೆ ಪ್ರಿಯ ಜಗನ್ನಾಥದಾಸಾರ್ಯ ಶರಣು ಪ.


ಶ್ರೀನಿವಾಸಾಚಾರ್ಯ ಪಂಡಿತೋತ್ತಮರು

ಅನಿಮಿಶಾಂಶರು ಹೌದು ಭುವಿಯಲ್ಲಿ ಹುಟ್ಟಿ

ಮಾನುಷಾನ್ನವನುಂಡು ಕರ್ಮವಾತಾವರಣ

ಸನ್ನಿವೇಶದ ಬಲದಿ ಗರ್ವಕೊಳಗಾದರು 1

ಆದಿತೇಯರು ಭೂಮಿಯಲ್ಲಿ ಜನ್ಮವ ತಾಳೆ

ಜಾತಾಪರೋಕ್ಷಿಗಳು ಶಕ್ತ್ಯಾತ್ಮನಾ

ವ್ಯಕ್ತ್ಯಾತ್ಮನಾ ಅಪರೋಕ್ಷ ಪ್ರಕಾಶವು

ಒದಗಿ ಗುರುಗಳು ಅನುಗ್ರಹವು ಮಾಡಿದರೆ 2

ದೇವತಾ ಕಕ್ಷದಲಿ ದೊಡ್ಡ ಮಟ್ಟದವರು

ವಿಶ್ವಾಮಿತ್ರರಿಗೆ ಉತ್ತಮರು ನಾರದಗೆ

ಆವರರೆನಿಸುವ ಭೃಗುಋಷಿಯೇ ವಿಜಯಾರ್ಯರು

ತಾವೆ ಬಂದರು ಶ್ರೀನಿವಾಸರ ಬಳಿಗೆ 3

ಪೂರ್ವದಲೆ ಕೇಳಿಹರು ಈ ವಿಜಯದಾಸರು

ದೇವಾಂಶ ಅಪರೋಕ್ಷ ಜ್ಞಾನಿಗಳು ಎಂದು

ಈ ವಿಧದಿ ಪೇಳುವುದು ಪುಸಿ ಎಂದು ನೆನೆದರು

ಗರ್ವಮೌಢ್ಯದಿ ಶ್ರೀನಿವಾಸ ಆಚಾರ್ಯ 4

ಕನ್ನಡ ನುಡಿ ಹಾಡಿ ಕುಣಿಕುಣಿವ ಈ ದಾಸ

ಜ್ಞಾನಿಯೆ ? ಅರಿತವನೇ ಬ್ರಹ್ಮವಿದ್ಯೆ ಎಂದು

ಹೀನಮಾತ್ಸರ್ಯದಿ ಮನಸೋತು ಅವಹೇ -

ಳನ ಮಾಡಿದರು ವಿಜಯಾರ್ಯರಲ್ಲಿ 5

ತಾಳುವ ತನ್ನಲ್ಲಿ ಮಾಡುವ ಅಪರಾಧ

ತಾಳಹರಿ ತನ್ನ ಭಕ್ತರಲಿ ಮಾಡುವುದು

ಮಾಲೋಲ ನಿಯಮನದಿ ಸ್ವೋತ್ತಮಾಪರಾಧ

ಫಲವು ಕಂಡಿತು ಶ್ರೀನಿವಾಸರಲಿ ಬೇಗ 6

ರಾಜಯಕ್ಷ್ಮವೋ ಗುಲ್ಮ ಮತ್ತೇನು ರೋಗವೋ

ರಾಜವೈದ್ಯರು ಸಹ ನಿರ್ಣಯಿಸಲಶಕ್ಯ

ಭೋಜನ ಅರುಚಿ ಉದರ ಶೂಲಿ ತನು ಕುಗ್ಗಿ

ಲಾಜವೂ ಸಹ ಜೀರ್ಣ ಆಗದ ಮಾಂದ್ಯ 7

ಇಂದಿರೇಶಗೆ ಪ್ರಿಯ ಮಹಾತ್ಮ ಸ್ವೋತ್ತಮರಲ್ಲಿ

ಗೈದ ಅಪರಾಧ ಫಲವೆಂದರಿಯದೆ

ವೈದ್ಯಕ್ಕೆ ಹಣ ವೆಚ್ಚ ಮಾಡಿ ಕ್ಷೇತ್ರಗಳಿಗೆ

ಪೋದರು ದೈವಾನುಗ್ರಹ ಪಡೆಯಲಿಕ್ಕೆ 8

ವಾದೀಂದ್ರ ಸನ್ನುತ ರಾಘವೇಂದ್ರಾರ್ಯರ

ವೃಂದಾವನದಲ್ಲಿ ಸೇವೆ ಮಾಡಿದರು

ಮುಂದು ಯಾತ್ರೆ ಗೈದು ಘಟಿಕಾದ್ರಿ ಹನುಮಗೆ

ದುಗ್ಧಾಭಿಷೇಕ ಹರಿವಾಯುಸ್ತುತಿಯಿಂದ 9

ಮಂತ್ರಾಲಯ ವೆಂಕಟಗಿರಿ ಘಟಿಕಾದ್ರಿ

ಇಂಥಾ ಸುಪುಣ್ಯ ಕ್ಷೇತ್ರಗಳಿಗೆ ಪೋಗಿ

ಮಂತ್ರಾಲಯ ಮತ್ತೂ ಬಂದು ಶ್ರೀ ರಾಘ-

ವೇಂದ್ರ ತೀರ್ಥರ ಪಾದ ಭಜಿಸಿ ನಮಿಸಿದರು 10

ಹರಿವಾಯುಸ್ತುತಿ ಪುರಶ್ಚರಣ ಆದರದಿ

ಚರಿಸೆ ಭಾರತೀಶನು ಮತ್ತು ಗುರು ರಾಘವೇಂದ್ರರು

ಅರುಪಿದರು ಸ್ವಪ್ನದಿ ವಿಜಯವಿಠಲ ದಾÀಸ

ಆರ್ಯರಲಿ ಶರಣಾಗು ಕ್ಷಮೆ ಬೇಡು ಎಂದು 11

ಶ್ರೀನಿವಾಸ ಆಚಾರ್ಯರು ಎಚ್ಚರಿತು

ತಾನು ವಿಜಯಾರ್ಯರಲಿ ಗೈದ ಅಪರಾಧ

ನೆನೆದು ಬಹು ವ್ಯಾಕುಲ ಪಶ್ಚಾತ್ತಪ್ತರು ಆಗಿ

ಕ್ಷಣದಿ ಹೊರಟರು ವಿಜಯದಾಸರ ಬಳಿಗೆ 12

ದೀನ ಕರುಣಾಕರರು ವಿಜಯ ದಾಸಾರ್ಯರು

ಘನದಯದಿ ಶ್ರೀನಿವಾಸಾಚಾರ್ಯರ ಕ್ಷಮಿಸಿ

ತನ್ನ ಶಿಷ್ಯ ಗೋಪಾಲದಾಸಾರ್ಯರು

ಅನುಗ್ರಹ ಮಾಡುವ ಗುರುಗಳು ಎಂದರು 13

ಪರಮ ಗುರುವರ್ಯ ಶ್ರೀ ವಿಜಯದಾಸಾರ್ಯರ

ನಿವ್ರ್ಯಾಜ ಪ್ರೀತಿ ಅಪ್ಪಣೆಯ ತಾ ಕೊಂಡು

ಗುರುಗಳು ಗೋಪಾಲದಾಸಾರ್ಯರಲಿ ಪೋಗಿ

ಶರಣಾಗಿ ಶ್ರೀನಿವಾಸರು ನಮಿಸಿದರು 14

ತನ್ನಲ್ಲಿ ಗುರುಗಳು ಕಳುಹಿಸಿದವರೆಂದು

ದೀನ ಆಚಾರ್ಯರು ನಿಜ ಶರಣರೆಂದು

ಚೆನ್ನಾಗಿ ಆತನ ಪರಿಸ್ಥಿತಿ ಅರಿತು

ಅನುಗ್ರಹಿಸಿದರು ಗೋಪಾಲವಿಠಲರು 15

ಅನ್ನ ಫಲಹಾರಗಳ ಕೊಳ್ಳದ ವ್ಯಾಧಿಯಲಿ

ಸಣ್ಣ ಬಡವಾದಂಥ ಗಾತ್ರದಿಂದ

ಸನ್ನಮಿಸಿದ ಶ್ರೀನಿವಾಸಾಚಾರ್ಯನ್ನ

ಮನೆಯಲ್ಲಿ ಉಪಚರಿಸಿ ಆದರಿಸಿದರು 16

ಗುರುಗ ಶಿರಿ ವಿಜಯ ವಿಠಲ ತನ್ನೊಳಿಪ್ಪ

ಶಿರಿ ಗೋಪಾಲ ವಿಠsÀಲ ಶ್ರೀನಿವಾಸ

ಸರಸಿಜ ಭವಾಂಡ ದೊರೆ ಶ್ರೀ ಜನಗ್ನಾಥನ್ನ

ಸ್ಮರಿಸಿ ಅರ್ಚಿಸಿ ನೈವೇದ್ಯ ಮಾಡಿದರು 17

ನಿವೇದಿತಾನ್ನ ಜೋಳದ ರೊಟ್ಟಿ ಕೊಟ್ಟು

ದ್ರವ ಮಾತ್ರ ಕೊಳ್ಳುವ ರೋಗಿ ಆಚಾರ್ಯಗೆ

ದೇವರ ಅನಿಲನ ಪರಮ ಗುರುಗಳ ನೆನೆದು

ಸವಿದು ಉಣ್ಣುವುದೆಂದು ಹಿತದಿ ಪೇಳಿದರು 18

ಶ್ರೀನಿವಾಸಾಚಾರ್ಯ ಉಣ್ಣಲು ರೋಗವು

ದಿನದಿನದಿ ಕ್ರಮದಿಂದ ನಿವಾರಣ ಆಯ್ತೂ

ಧ್ಯಾನ ಪೂಜಾ ಅನುಸಂಧಾನ ಕ್ರಮಗಳು

ಚೆನ್ನಾಗಿ ಆಚಾಯರಾಕರ್ಷಿಸಿದವು 19

ಶ್ರೀನಿವಾಸಾಚಾರ್ಯರ ರೋಗಮೋಚನಕೆ

ಧ್ಯಾನಿಸಿ ಜಪಿಸಿ ಶ್ರೀ ಧನ್ವಂತರಿ ಮಂತ್ರ

ಬಿನ್ನಪವ ಮಾಡಿದರು ಕೀರ್ತನಾ ರೂಪದಿ

ದೀನದಯಾಳು ಗೋಪಾಲದಾಸಾರ್ಯ 20

ಆಹ್ನಿಕ ಜಪ ಗುರು ಪರಮಗುರು ನಮನ

ವಿಘ್ನವಿಲ್ಲದೆ ಆಚಾರ್ಯರು ಚರಿಸಿದರು

ಘನರೋಗ ಹೋಯಿತು ತ್ರಾನ ಇನ್ನೂ ಬೇಕು

ಶ್ರೀನಿಧಿ ನೋಡಿದನು ಕೃಪಾದೃಷ್ಟಿಯಿಂದ 21

ಶ್ರೀ ನಿಧಿಃ ಸರ್ವಭೂತಾನಾಂ ಭಯಕೃದ್ಭಯನಾ -

ಶನನು ವಿಜಯದಾಸಾರ್ಯ ರೂಪದಲಿ

ತಾನೆ ಸ್ವಪ್ನದಿ ಪೇಳ್ದ ಗೋಪಾಲದಾಸರಿಗೆ

ದಾನ ಕೊಡು ಆಯುಷ್ಯ ಚತ್ವಾರಿವರ್ಷ 22

ಶಿರಿವಿಜಯವಿಠ್ಠಲ ವಾಯು ಗುರು ಇಚ್ಛಾನು -

ಸಾರದಿ ಶ್ರೀನಿವಾಸಾಚಾರ್ಯನಲಿ ವಾತ್ಸಲ್ಯ

ಕಾರುಣ್ಯ ತೋರಿಸಿ ತಮಗಿದ್ದ ಆಯುಸ್ಸಲಿ

ಎರೆದರು ಧಾರೆಯ ನಲವತ್ತು ವರ್ಷ 23

ಏನೆಂಬೆ ಈ ನಮ್ಮ ಗುರುಗಳ ಔದಾರ್ಯ

ದೀನಕರುಣಾಂಬುಧಿ ಗೋಪಾಲದಾಸರ

ದಾನಕ್ಕೆ ಎಣೆಯುಂಟೆ ಎಲ್ಲಾದರೂ ಯಾರೂ

ತನ್ ಆಯುಷ್ಯವ ಕೊಡುವರೆ ಅನ್ಯರಿಗೆ 24

ರೋಗಕಳೆದು ಆಯುರ್ದಾನವ ಕೊಂಡ ಈ

ಬ್ಯಾಗವಟ್ಟ ಶ್ರೀನಿವಾಸಾಚಾರ್ಯ

ಜಗನ್ನಾಥವಿಠ್ಠಲ ದಾಸರಾಯರು ಎಂದು

ಜಗತ್ತಲ್ಲಿ ಖ್ಯಾತರಾಗುವ ಬಗೆ ಮಾಡಿದರು 25

ಗುರುಹಿರಿಯರಲಿ ಮಾಳ್ಪ ಉದಾಸೀನ ಎಷ್ಟು

ಭಾರಿತರ ಆಪತ್ತು ಕೊಡುವುದು ಎಂದು

ಗುರು ಅನುಗ್ರಹದಿಂದ ಸೌಭಾಗ್ಯಲಾಭವು

ಅಪಮೃತ್ಯು ಪರಿಹಾರ ಎಂದು ತಿಳಿಯುತ್ತೆ 26

ವಾರಿಜಾಸನ ಪಿತನು ಪೂರ್ಣಪ್ರಜ್ಞರ ಹೃತ್‍ಸ್ಥ

ಶಿರಿಪ್ರಸನ್ನ ಶ್ರೀನಿವಾಸನಿಗೆ ಪ್ರಿಯತರರು

ಪುರಂದರ ವಿಜಯಗೋಪಾಲ ದಾಸಾರ್ಯರ

ಚರಣರತ ಜಗನ್ನಾಥ ದಾಸಾರ್ಯ ಶರಣು 27

- ದ್ವಿತೀಯ ಕೀರ್ತನೆ ಸಂಪೂರ್ಣಂ -

***

kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru

ಶ್ರೀ ರಮಣಿ ಕರಕಮಲ ಪೂಜಿತ ಪದಾಂಬೋಜ

ಸರಸಿಜಾಸನ ಶಿವಾದ್ಯಮರ ಜನವಿನುತ

ಉರುಗುಣಾರ್ಣವ ಜಗಜ್ಜನ್ಮಾದಿಕರ್ತ ನರ-

ಹರಿಗೆ ಪ್ರಿಯ ಜಗನ್ನಾಥದಾಸಾರ್ಯ ಶರಣು ಪ.


ವಿಜಯದಾಸರಲಿ ಗೋಪಾಲದಾಸರಲಿ

ನಿಜ ಗುರುಭಕ್ತಿ ವರ್ಧಿಸಿ ಹರಿದಾಸ

ನಿಜಪಂಥದಿ ತನ್ನ ಸೇರಿಸೆ ಅನುಗ್ರಹಿಸೆ

ನಿಜಭಾವದಲಿ ಆಚಾರ್ಯ ಬೇಡಿದರು 1

ನರಸಿಂಹ ದಾಸರಾಗಿಹ ತಂದೆಮುಖದಿಂದ

ವರಗಾಯತ್ರಿ ಮಂತ್ರ ಉಪದಿಷ್ಟರಾಗಿ

ವರದೇಂದ್ರರಲಿ ಮೂಲಟೀಕಾದಿ ಗ್ರಂಥಗಳು

ಮಂತ್ರೋಪದೇಶವು ಕೊಂಡವರು ಮೊದಲೇ 2

ಶ್ರೀನಿವಾಸಾಚಾರ್ಯರ ಕೋರಿಕೆಯ

ಮನ್ನಣೆಮಾಡಿದರು ದಾಸಾರ್ಯರು

ಘನ ಮಹಾಸಚ್ಛಾಸ್ತ್ರ ತತ್ತ್ವ ವಿಷಯಗಳ

ಕನ್ನಡಮಾತಲ್ಲಿ ಬೋಧಿಸಿದರು 3

ಪ್ರಣವಹರಿ ಜಾಗ್ರದಾದ್ಯವಸ್ಥಾ ಪ್ರಣಯನ

ಕೃಷ್ಣರಾಮ ನಾರಸಿಂಹ ವರಾಹ

ವಿಷ್ಣು ಪರಂಜ್ಯೋತಿ ಪರಂಬ್ರಹ್ಮ ವಾಸುದೇವ

ಏನೆಂಬೆ ಶ್ರೀಶ ಗುಣಕ್ರಿಯಾ ರೂಪಮಹಿಮೆ 4

ಗಾಯತ್ರಿ ನಾಮ ಆಮ್ನಾಯ ಗಾಯನ ಮಾಡಿ

ದಯದಿ ಜಗವೆಲ್ಲ ರಕ್ಷಿಸುವ ಸ್ವಾಮಿ

ಹಯಗ್ರೀವ ಗಾಯತ್ರಿ ಮಂತ್ರ ಪ್ರತಿಪಾದ್ಯನು

ನಾರಾಯಣ ವಾಸುದೇವ ವೈಕುಂಠ 5

ತ್ರಾತಹಯ ಶೀರ್ಷನೆ ಗಾಯತ್ರಿ ನಾಮನು

ಭೂತಪೂರ್ಣ ವಾಗ್ವಶಿ ಶರೀರವ್ಯಾಪ್ತ

ಪೃಥ್ವಿ ಆಶ್ರಯ ಪ್ರಾಣಾಧಾರ ಹೃದಯನು

ತ್ರಿಧಾಮ ಪಾದತ್ರಯ ಜಗತ್ಪಾದ ಸದೃಶ 6

ಜ್ಞಾನ ಸುಖಬಲಪೂರ್ಣ ಸರ್ವ ಆಧಾರನು

ದಿನಪತೇಜಃ ಪುಂಜಚೇಷ್ಟಕ ಸ್ಫೂರ್ತಿದನು

ವನಜಜಾಂಡದ ಸರ್ವಕರ್ತನೂ ದೇವ

ಭಜನೀಯ ಧ್ಯಾತವ್ಯ ಶ್ರೀ ನಾರಾಯಣನು 7

ವರ್ಣಗಳು ನಿತ್ಯವು ವರ್ಣಾಭಿಮಾನಿಗಳೊಳ್

ವರ್ಣಪ್ರತಿಪಾದ್ಯಹರಿ ಶ್ರೀ ಸಹ ಇಹನು

ಪೂರ್ಣ ಸುಗುಣಾರ್ಣವನು ನಿರ್ದೋಷ ಸರ್ವಜಗತ್

ಜನ್ಮಾದಿ ಕರ್ತನು ನಿಗಮೈಕವೇದ್ಯ 8

ಶಬ್ದಗಳು ಸರ್ವವೂ ಮುಖ್ಯ ವೃತ್ತಿಯಲಿ

ಮಾಧವನ್ನಲ್ಲಿಯೇ ವಾಚಕವಾಗಿವೆಯು

ವೈದಿಕ ಶಬ್ದಗಳು ಹರಿಗೇವೆ ಅನ್ವಯವು

ಸಂಸ್ತುತ್ಯ ದ್ರಷ್ಟವ್ಯ ಅನುಪಮೈಕಾತ್ಮ 9

ಸತ್ಯಜ್ಞಾನಾನಂತ ಆನಂದಮಯ ಹರಿಯೆ

ಶ್ರೋತವ್ಯ ಮಂತವ್ಯ ನಿಧಿ ಧ್ಯಾಸಿತವ್ಯ

ವ್ಯಾಪ್ತನು ಸರ್ವತ್ರ ಸರ್ವದಾ ಸರ್ವಕ್ಕೂ

ಆಧಾರ ಅಕ್ಷರನು ಕ್ಷರಾಕ್ಷರೋತ್ತಮನು 10

ರಾಜಿಸುತಿಹ ನಮ್ಮ ದೇಹಾಖ್ಯ ರಥದಲ್ಲಿ

ರಾಜರಾಜೇಶ್ವರನು ಶ್ರೀ ಹ್ರೀ ಸಮೇತ

ಯುವರಾಜ ವಾಯುದೇವನ ಸೇವೆಕೊಳ್ಳುತಿಹ

ರಾಜೀವೇಕ್ಷಣ ಹರಿ ಪ್ರಾಣನಾಮ 11

ಪ್ರಸ್ಥಾನತ್ರಯ ವೈದಿಕಶಾಸ್ತ್ರ ವಿಷಯಗಳು

ಇತಿಹಾಸ ಭಾಷಾತ್ರಯ ಪುರಾಣಗಳು

ಪ್ರತಿರಹಿತ ಸರ್ವೋತ್ತಮ ಸ್ವಾಮಿ ಶ್ರೀಶನ್ನ

ಚಿಂತಿಸಿ ಕಾಣಲುಬಗೆ ತೋರಿಸುತಿವೆ 12

ಆಚರಿಸಿ ಜ್ಞಾನ ಪೂರ್ವಕ ವಿಹಿತ ಕರ್ಮ

ಅಚ್ಚಭಕ್ತಿಯಿಂದ ಚಿಂತಿಸಿ ಸ್ತುತಿಸೆ

ಅಚ್ಚುತ ಸ್ವತಂತ್ರನು ಮುಖ್ಯ ಕಾರಣ ವಿಷ್ಣು

ಪ್ರೋಚ್ಯ ಸುಖವೀವನು ತೋರಿತಾ ಒಲಿದು 13

ಮಧ್ವಮತ ಸಿದ್ಧಾಂತ ಪದ್ಧತಿ ಅನುಸರಸಿ

ಸದನು ಸಂಧಾನ ಭಕ್ತಿ ಉನ್ನಾಹದಿ

ಮಾಧವನ ಗುಣಕ್ರಿಯಾ ರೂಪಗಳ ಕೊಂಡಾಡಿ

ಪದವಾಕ್ಯ ಶ್ಲೋಕ ಪದ್ಯಗಳ ನುಡಿಯುವುದು 14

ಒಂದೊಂದು ಕೀರ್ತನೆ ಪದ್ಯ ಗ್ರಂಥಗಳಲ್ಲೂ

ಇಂದಿರೇಶನು ತತ್ತತ್ ಪ್ರತಿಪಾದ್ಯ ಇಹನು

ಪದ್ಯ ಕೀರ್ತನೆ ಗ್ರಂಥ ವಿಷಯ ಶ್ರೀಹರಿಯ

ಮಂತ್ರ ಚಿಂತಿಸಿ ಅರ್ಪಿಸಬೇಕು ರಚನೆ 15

ಬೃಹತೀ ಸಹಸ್ರಸ್ವರ ವ್ಯಂಜನಾಕ್ಷರ ವಾಚ್ಯ

ಶ್ರೀಹರಿ ಅಹರ್ನಿಶಿ ಕಾಯುವ ದಯಾಳು

ಅಹರಹ ಸದುಪಾಸ್ಯ ಬ್ರಹ್ಮ ಶಿವ ಈಡ್ಯನು

ದೇಹ ಒಳಹೊರಗಿಪ್ಪ ಸರ್ವಾಂತರ್ಯಾಮಿ 16

ಸ್ವತಃ ಅವ್ಯಕ್ತನು ಸರ್ವದಾ ಸರ್ವತ್ರ

ಸ್ವತಂತ್ರ ಪೂರ್ಣಜ್ಞಾನ ಆನಂದರೂಪ

ಸ್ವಪ್ರಯತ್ನದಿ ಅಲ್ಲ ಮುಮುಕ್ಷುಗಳಿಗಪರೋಕ್ಷ

ಮೋದಮಯ ಶ್ರೀಹರಿಯ ಪ್ರಸಾದದಿಂದಲೇ 17

ಜ್ಞಾನಿಗೆ ಪ್ರತ್ಯಕ್ಷ ಹರಿಯ ಅವ್ಯಕ್ತತ್ವ

ಅನ್ಯರಿಗೆ ವೇದ್ಯ ಸೂಕ್ಷ್ಮತ್ವಾನುಮಾನದಿ

ತನ್ಮಾತ್ರ ತೇಜಸ್ಸು ಭೌತಿಕವು ಎಂಬಂಥ

ಅಗ್ನಿಯ ಸೂಕ್ಷ್ಮತ್ವ ಸ್ಥೂಲತ್ವವೋಲ್ಲ 18

ಎಲ್ಲೆಲ್ಲೂ ಎಂದೆಂದೂ ಏಕಪ್ರಕಾರದಲ್ಲಿ

ಳಾಳಕನು ಅವ್ಯಕ್ತರೂಪ ಇರುತಿಹನು

ಇಲ್ಲ ಇವಗೆ ಎಂದೂ ಎಲ್ಲೂ ಪ್ರಾಕೃತರೂಪ

ಒಲಿದು ಕಾಣುವ ತನ್ನ ಇಚ್ಛೆಯಿಂದಲೇ 19

ಮೂಲರೂಪದಿ ಸೂಕ್ಷ್ಮತ್ವ ಅವತಾರಗಳಲಿ

ಸ್ಥೂಲತ್ವವೆಂಬುವ ವಿಶೇಷವು ಇಲ್ಲ

ಇಳೆಯಲ್ಲಿ ಕೃಷ್ಣಾದಿ ರೂಪಗಳ ಕಂಡದ್ದು

ಮಾಲೋಲನಿಚ್ಛೆಯೇ ಪುರುಷಯತ್ನದಿ ಅಲ್ಲ 20

ಅರೂಪಮ ಕ್ಷರಂಬ್ರಹ್ಮ ಸದಾವ್ಯಕ್ತಂ

ಆತ್ಮಾವರೇ ದ್ರಷ್ಟವ್ಯ ಎಂದು

ಈ ರೀತಿ ಅವ್ಯಕ್ತತ್ವ ಅಪರೋಕ್ಷತ್ವ

ಎರಡು ಪೇಳುವ ಶ್ರುತಿ ವಿರೋಧವು ಇಲ್ಲ 21

ಆರಾಧನಾದಿ ಪ್ರಯತ್ನಕ್ಕೂ ಅವ್ಯಕ್ತ

ಉರುಸುಖಮಯ ಅಪ್ರಾಕೃತ ಅವಿಕಾರಿ

ಪರಮಪುರುಷ ಹರಿಯ ಇಚ್ಛಾಪ್ರಸಾದದಿಂ

ಅಪರೋಕ್ಷ ಮೋಕ್ಷಗಳು ಲಭ್ಯಯೋಗ್ಯರಿಗೆ 22

ವನಜನಾಭನ ರೂಪ ಗುಣಮಹಿಮೆ ಕೇಳಿ

ಅನುಭವಕೆ ಬರುವಂಥ ಮನನ ಸುಧ್ಯಾನ

ಅನಘ ಹರಿಯಲಿ ಭಕ್ತಿ ಸುಖಬಾಷ್ಪ ಸುರಿಸೆ

ತನ್ನಿಚ್ಚೆಯಿಂದಲೆ ಅಪರೋಕ್ಷವೀವ 23

ಬ್ರಹ್ಮಪುರ ವನರುಹ ವೇಷ್ಮವ್ಯೋಮಸ್ಥ

ದೇಹ ಸರ್ವಾಂಗಸ್ಥ ಸರ್ವನಾಡಿಸ್ಥ

ಬಹಿರಂತರ ಸರ್ವಮೂರ್ತಾ ಮೂರ್ತಸ್ಥ

ಮಹಾಮಹಿಮ ಹರಿಯು ಸರ್ವತ್ರ ಪ್ರಸಿದ್ಧ 24

ಸರ್ವತ್ರ ವ್ಯಾಪ್ತನು ಸತ್ತಾದಿ ದಾತನು

ಸರ್ವದೊಳು ಸದಾಪೂರ್ಣ ಅಖಿಳ ಸಚ್ಛಕ್ತ

ಸರ್ವೇಶ ಸರ್ವಾಧಾರನಾಗಿಹ ಸ್ವಾಮಿ

ದೇವಿ ಲಕ್ಷ್ಮೀರಮಣ ವಿಷ್ಣು ನರಸಿಂಹ 25

ಉಗ್ರವೀರನು ಮಹಾವಿಷ್ಣು ತೇಜಃಪುಂಜ

ಸುಪ್ರಕಾಶಿಪ ಸರ್ವತೋಮುಖ ನೃಸಿಂಹ

ಅರಿಗಳಿಗೆ ಭೀಷಣನು ಭಕ್ತರಿಗೆ ಇಷ್ಟಪ್ರದ

ಸಂರಕ್ಷಕ ನಮೋ ಮೃತ್ಯುಗೇ ಮೃತ್ಯು 26

ಪ್ರೋದ್ಯರವಿನಿಭದೀಪ್ತ ವರ್ತುಲ ನೇತ್ರತ್ರಯ

ಹಸ್ತದ್ವಯ ಆಜಾನು ಮಹಾಲಕ್ಷ್ಮಿಯುತನು

ಸುದರ್ಶಿನಿ ಶಂಖಿಯುತ ಕೋಟ್ಯಾರ್ಕಾಮಿತತೇಜ

ಉತ್ಕøಷ್ಟ ಅಖಿಳ ಸಚ್ಛಕ್ತ ನರಸಿಂಹ 27

ಇಂಥಾ ವಿಷಯಗಳ ಜಿಜ್ಞಾಸ ಉಪದೇಶ

ಹಿತಮಾತ ಗೋಪಾಲದಾಸಾರ್ಯರಿಂದ

ಮುದದಿಂದ ಶ್ರೀನಿವಾಸ ಆಚಾರ್ಯರು ಕೊಂಡು

ಪಾದಕೆರಗಿ ಹರಿ ಅಂಕಿತ ಬೇಡಿದರು 28

ವಾರಿಜಾಸನ ಪಿತನ ಪೂರ್ಣ ಪ್ರಜ್ಞರ ಹೃತ್‍ಸ್ಥ

ಶಿರಿ ಪ್ರಸನ್ನ ಶ್ರೀನಿವಾಸನಿಗೆ ಪ್ರಿಯತರರು

ಪುರಂದರ ವಿಜಯ ಗೋಪಾಲದಾಸಾರ್ಯರ

ಚರಣರತ ಜಗನ್ನಾಥ ದಾಸಾರ್ಯ ಶರಣು 29

- ತೃತೀಯ ಕೀರ್ತನೆ ಸಂಪೂರ್ಣಂ -

***

kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru

ಶ್ರೀ ರಮಣಿ ಕರಕಮಲ ಪೂಜಿತ ಪದಾಂಬೋಜ

ಸರಸಿಜಾಸನ ಶಿವಾದ್ಯಮರ ಜನವಿನುತ

ಉರುಗುಣಾರ್ಣವ ಜಗಜ್ಜನ್ಮಾದಿಕರ್ತ ನರ-

ಹರಿಗೆ ಪ್ರಿಯ ಜಗನ್ನಾಥದಾಸಾರ್ಯ ಶರಣು ಪ.


ಹರಿದಾಸ ಶ್ರೇಷ್ಠವರ ಕರುಣಿ ಪುರಂದರಾರ್ಯ

ಗುರುಮಹಂತರು ಕೃಪಾನಿಧಿಯು ವಿಜಯಾರ್ಯ

ಈರ್ವರನು ಸಂಸ್ಮರಿಸಿ ಗೋಪಾಲದಾಸರು

ಪರಮ ದಯ ತೋರಿದರು ಆಚಾರ್ಯರಲ್ಲಿ 1

ಹರಿದಾಸ ಪಂಥದಲಿ ಆಚಾರ್ಯರು ಸೇರಿ

ಹರಿವಾಯು ಸೇವೆಯು ಸಜ್ಜನೋದ್ಧಾರ

ಧರೆಯಲ್ಲಿ ಮಹತ್ಕಾರ್ಯ ಆಗುವುದು ಎಂದು

ಅರಿವರು ಗೋಪಾಲದಾಸರು ಮೊದಲೇ 2

ಹರಿದಾಸಗೋಷ್ಠಿಯು ವೆಂಕಟಾಚಲ ಯಾತ್ರೆ

ಚರಿಸೆ ವೆಂಕಟ ರಮಣನಾಲಯದಲ್ಲಿ

ಶ್ರೀ ಶ್ರೀನಿವಾಸನು ಈ ಆಚಾರ್ಯಗೆ

ನೇರವಾಗಿ ತಾನೆ ಕೊಟ್ಟಿಹ ಪ್ರಸಾದ 3

ನೆನೆದರು ಈಗ ಗೋಪಾಲದಾಸಾರ್ಯರು

ತನ್ನ ರೂಪದಿ ಅಂದುಬಂದು ವಾತ್ಸಲ್ಯದಿ

ಅನ್ನ ನಾಮಾವೆಂಕಟಕೃಷ್ಣ ಜಗದೀಶ

ಅನ್ನ ಕೊಟ್ಟು ಒಲಿದಿಹನು ಆಚಾರ್ಯಗೆ 4

ಪುರಂದರ ದಾಸಾರ್ಯರು ಒಲಿದು ದಯದಿ ತಾನೆ

ಯಾರಿಗೆ ತಿಮ್ಮಣ್ಣಾರ್ಯರದ್ವಾರ ಉಪದೇಶ

ಅನುಗ್ರಹ ನಾಮಾಂಕಿತವ ಇತ್ತರೋ ಆ

ನರಸಿಂಹ ದಾಸಾರ್ಯರ ಪುತ್ರರು ಇವರು 5

ಹರಿದಾಸರ ಪುತ್ರರಿವರು ಯೋಗ್ಯರು ಎಂದು

ಹರಿದಾಸಪದ್ಧತಿ ಆರಾಧನಾಕ್ರಮ

ಶಾಸ್ತ್ರ ಜಿಜ್ಞಾಸೆ ಅನುಸಂಧಾನ ರೀತಿಯೂ

ಅರುಪಿದರು ಆಚಾರ್ಯರಿಗೆ ದಾಸಾರ್ಯ 6

ನೆರೆದಿದ್ದರೂ ಗೋಪಾಲದಾಸಾರ್ಯರ

ಪರಮಪ್ರೀತಿ ಪಾತ್ರ ಈಮಹಂತರು

ವರದ ಗೋಪಾಲರು ತಂದೆ ಗೋಪಾಲರು

ಗುರು ಗೋಪಾಲದಾಸಾದಿ ಸೂರಿಗಳು 7

ಭಾರತೀಪತಿ ಅಂತರ್ಗತ ಹರಿ ಶ್ರೀಶ

ಗುರುಗಳ ಒಳಗಿದ್ದು ಜ್ಞಾನೋಪದೇಶ

ಹರಿದಾಸತ್ವದ ವರನಾಮಾಂಕಿತವ

ಕಾರುಣ್ಯದಿ ಈವ ಅಧಿಕಾರಿಗಳಿಗೆ 8

ವನರುಹೇಕ್ಷಣ ಯಜ್ಞನಧಿಷ್ಠಾನ ಯಜ್ಞನ

ವನಜಪಾದ ದ್ವಯವು ಮನವಾಕ್ಕಿಲಿಹುದು

ಅನಿಲ ಸೋಕಿದ ತೂಲರಾಶಿಯಂದದಲಿ

ಏನು ಮೈಲಿಗೆಯಾದರು ಸುಟ್ಟು ಪೋಪುವು 9

ತುಳಸಿದಳ ನಿರ್ಮಾಲ್ಯ ಹರಿಗೆ ಅರ್ಪಿತವಾದ್ದು

ಜಲಸ್ನಾನ ತರುವಾಯ ಧ್ಯಾನ ಸ್ನಾನ

ಜಲಜನಾಭನ ದಿವ್ಯನಾಮ ಸಂಕೀರ್ತನೆ

ಎಲ್ಲ ಮೈಲಿಗೆ ದೋಷ ಪರಿಹರಿಸುವುವು 10

ಶೀಲ ತನುಮನದಿಂದ ಗುರು ಪರಮಗುರುದ್ವಾರ

ಮಾಲೋಲ ಪ್ರಿಯತಮ ಜಗದೇಕ ಗುರುವೆಂದು

ಗಾಳಿದೇವನು ಮಧ್ವ ಭಾವಿಬ್ರಹ್ಮನ ಸ್ಮರಿಸಿ

ಕಾಲಿಗೆ ಎರಗಿ ಶ್ರೀಹರಿಯ ಚಿಂತಿಪುದು 11

ವಾಯುದೇವನ ಒಲಸಿಕೊಳ್ಳದ ಜನರಿಗೆ

ಭಯಬಂಧ ನಿವೃತ್ತಿಯು ಸದ್ಗತಿಯು ಇಲ್ಲ

ಮಾಯಾಜಯೇಶನ ಪರಮ ಪ್ರಸಾದವು

ವಾಯು ಒಲಿದರೆ ಉಂಟು ಅನ್ಯಥಾ ಇಲ್ಲ 12

ಬಲಜ್ಞಾನಾದಿಗಳಲ್ಲಿ ಹ್ರಾಸ ಇಲ್ಲವು ಇವಗೆ

ಎಲ್ಲ ಅವತಾರಗಳು ಸಮವು ಅನ್ಯೂನ

ಶುಕ್ಲ ಶೋಣಿತ ಸಂಬಂಧವು ಇಲ್ಲವೇ ಇಲ್ಲ

ಇಳೆಯಲಿ ಜನಿಸಿಹ ಹನುಮ ಭೀಮ ಮಧ್ವ 13

ಮಾತರಿಶ್ವ ಸೂತ್ರ ಪವಮಾನ ಮುಖ್ಯ ಪ್ರಾಣ

ತ್ರೇತೆಯಲಿ ಹನುಮ, ದ್ವಾಪರದಲಿ ಭೀಮ

ಈತನೇ ಕಲಿಯುಗದೆ ಮಧ್ವಾಭಿದಾನದಿ

ಬಂದಿಹನು ಸಜ್ಜನರ ಉದ್ಧಾರಕಾಗಿ14

ರಥನಾಭಿಯಲಿ ಅರವೋಲ್ ಪ್ರಾಣನಲಿ ಸರ್ವವೂ

ಪ್ರತಿಷ್ಠಿತವು ಜೀವರ ದೇಹಕಾಧಾರ

ತತ್ವದೇವಾದಿಗಳ ವರಿಷ್ಟ ಚೇಷ್ಟಕನು

ಈ ವಾಯುವೇ ಬ್ರಹ್ಮಧಾಮನಾಗಿಹನು 15

ಬ್ರಹ್ಮಧಾಮನು ಜೀವೋತ್ತಮ ವಾಯು ಆದುದರಿಂದ

ಬ್ರಹ್ಮ ಸುಗುಣಾರ್ಣವ ಸರ್ವೋತ್ತಮ ವಿಷ್ಣೂನ

ಅಹರ್ನಿಶಿ ಸ್ಮರಿಪುದು ಈ ಬ್ರಹ್ಮಧಾಮನಲಿ

ಬ್ರಹ್ಮಪ್ರಸಾದ ಆಕಾಂಕ್ಷಿ ಅಧಿಕಾರಿ 16

ಬ್ರಹ್ಮ ಗುಣಪೂರ್ಣ ಹರಿಗೋಪಾಲ ವೆಂಕಟನೆ

ಬ್ರಹ್ಮಾಂಡ ಸರ್ವವ ಪಾಲಿಸುವ ಪ್ರಭುವು

ಅಹೋರಾತ್ರಿ ಏಳುದಿನ ಗಿರಿ ಎತ್ತಿ ಮಳೆ ತಡೆದ

ಮಹಾದ್ರಿಧೃಕ್ ಅನ್ನಾದ ಅನ್ನದ ಜಗನ್ನಾಥ 17

ಗೋವರ್ಧನಗಿರಿ ಎತ್ತಿ ಜನ ಪಶು ಕಾಯ್ದ

ಶ್ರೀವರ ಗೋಪಾಲ ವಿಠ್ಠಲ ರುಕ್ಮಿಣೀಶ

ದಿವ್ಯ ಮಂದಿರದಲ್ಲಿ ಭೀಮರತಿಯ ತೀರದಲಿ

ದೇವ ನಿಂತಿಹ ಶ್ರೀನಿವಾಸ ಜಗನ್ನಾಥ 18

ಶ್ರೀನಿವಾಸ ವೆಂಕಟನೆ ಗೋಪಾಲ ವಿಠ್ಠಲನು

ತನ್ನ ಭಕ್ತನಿಗೊಲಿದು ಪಂಢರೀಪುರದಿ

ತಾನೆ ಬಂದು ಅಲ್ಲೇ ನಿಂತು ಭಕ್ತರು ಮಾಳ್ಪ

ಗಾನ ಸೇವಾ ಕೇಳುತ ಪಾಲಿಸುತಿಹನು 19

ಸರ್ವಕ್ಷರ ಉತ್ತಮನು ಸರ್ವೇಶ

ಸರ್ವ ಐಶ್ವಯಾದಿ ಸಚ್ಛಕ್ತಿ ಪೂರ್ಣ

ಶಿವ ಸುರಪುರಿಗೆ ಸುಖಜ್ಞಾನಾದಿಗಳನೀವ

ದೇವಿ ಶ್ರೀ ಲಕ್ಷ್ಮೀಶ ಠಲಕ ವಿಠ್ಠಲನು 20

ಜಡಭವ ಅಂಡದ ಸೃಷ್ಟ್ಯಾದಿ ಕರ್ತನಿವ

ತಟಿತ್ಕೋಟಿ ಅಮಿತ ಸ್ವಕಾಂತಿಯಲಿ ಜ್ವಲಿಪ

ಜಡಜ ಭವಪಿತ ಡರಕ ಜಗನ್ನಾಥ ವಿಠ್ಠಲನು

ನೋಡಲಿಕೆ ಕಾಣುವ ಅವನಿಚ್ಛೆ ದಯದಿ 21

ಜಲದಲ್ಲಿ ಜಲರೂಪ ಜಲಜೇಕ್ಷಣನಿಹನು

ಜಲದಲ್ಲಿ ನೀ ಮುಳುಗಿ ಮೇಲೇಳುವಾಗ

ಜ್ವಲಿಸುವ ಶಿರೋಪರಿ ಜಗನ್ನಾಥ ವಿಠ್ಠಲನು

ಒಳನಿಲುವ ಹೊರಕಾಂಬ ಎಲ್ಲರ ಸ್ವಾಮಿ 22

ಇಂಥಾಸುವಾಕ್ಯ ಧಾರಾನುಗ್ರಹವ

ಹಿತದಿ ಗೋಪಾಲದಾಸಾರ್ಯರು ಎರೆಯೆ

ಮುದ ಬಾಷ್ಪ ಸುರಿಸುತ್ತ ಶ್ರೀನಿವಾಸಾಚಾರ್ಯ

ಭಕ್ತಿಯಲಿ ನಮಿಸಿದರು ಗುರುಚರಣಗಳಿಗೆ 23

ವಾಸುದೇವನ ಒಲಿಸಿಕೊಂಡ ಐಜೀಯವರು

ಈಶಾನುಗ್ರಹ ಪಡೆದ ದಾಸಾರ್ಯರುಗಳು

ಆ ಸಭೆಯಲಿ ಇದ್ದ ಹರಿಭಕ್ತ ಭೂಸುರರು

ಆಶೀರ್ವದಿಸಿದರು ಆಚಾರ್ಯರನ್ನು 24

ಉತ್ಕøಷ್ಟ ನಿಗಮಘೋಷಗಳು ಮಂಗಳಧ್ವನಿ

ಹರಿನಾಮ ಕೀರ್ತನ ಸುಸ್ವರ ಸಂಗೀತ

ದಾರಿಯಲಿ ಎದುರ್ಗೊಂಡ ಶುಭಕರ ಶಕುನವು

ಹೊರಟರಾಚಾರ್ಯ ವಿಠ್ಠಲ ದರ್ಶನಕೆ 25

ವಾರಿಜಾಸನ ಪಿತನು ಪೂರ್ಣಪ್ರಜ್ಞರ ಹೃತ್‍ಸ್ಥ

ಶಿರಿ ಪ್ರಸನ್ನ ಶ್ರೀನಿವಾಸನಿಗೆ ಪ್ರಿಯತರು

ಪುರಂದರ ವಿಜಯಗೋಪಾಲ ದಾಸಾರ್ಯರ

ಚರಣರತ ಜಗನ್ನಾಥ ದಾಸಾರ್ಯ ಶರಣು 26

- ಚತುರ್ಥ ಕೀರ್ತನೆ ಸಂಪೂರ್ಣಂ -

***

kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru

ಶ್ರೀ ರಮಣಿ ಕರಕಮಲ ಪೂಜಿತ ಪದಾಂಬೋಜ

ಸರಸಿಜಾಸನ ಶಿವಾದ್ಯಮರ ಜನವಿನುತ

ಉರುಗುಣಾರ್ಣವ ಜಗಜ್ಜನ್ಮಾದಿಕರ್ತ ನರ-

ಹರಿಗೆ ಪ್ರಿಯ ಜಗನ್ನಾಥದಾಸಾರ್ಯ ಶರಣು ಪ.


ಗುರುಗಳು ಏಕಾಂತದಲ್ಲಿ ಇತ್ತ ಉಪದೇಶ

ಮರೆಯದೇ ಅನುಸರಿಸಿ ಭೀಮರತಿಯನ್ನು

ಸೇರಿ ವಿಹಿತದಿ ಸಂಕಲ್ಪಾದಿಗಳ ಮಾಡಿ

ನೀರಲ್ಲಿ ಇಳಿದರು ಶ್ರೀನಿವಾಸಾಚಾರ್ಯ 1

ಸರ್ವ ಜಗತ್ಪಾಲ ಶ್ರೀ ಪಾಂಡುರಂಗವಿಠ್ಠಲನು

ಪ್ರವಾಹ ಸುಳಿಯಿಂದ ಬಡುಗಾತ್ರ ಭಕ್ತನ್ನ

ಕಾಯ್ವುದಕೆ ಗಂಡಾ ಶಿಲಾ ನಿರ್ಮಿಸಿದ ಅಲ್ಲಿ

ದೇವಗುರು ಸ್ಮರಣೆಯಿಂ ಇಳಿದರಾಚಾರ್ಯ 2

ನರಸಿಂಹ ವಿಠ್ಠಲದಾಸರು ತಂದೆಯ

ಗುರುಗಳು ಗೋಪಾಲ ವಿಠ್ಠಲ ದಾಸರ

ಪರಮ ಗುರುಗಳು ವಿಜಯ ವಿಠ್ಠಲ ದಾಸರ

ಪುರಂದರ ದಾಸರಾಜರ ಸ್ಮರಿಸಿದರು 3

ತೀರ್ಥಾಭಿಮಾನಿಗಳ ಭಾರತೀಪತಿಯ

ಪದುಮೆ ಪದ್ಮೇಶ ಫಂಡರಿ ನಾಥ ಹರಿಯ

ಮೋದ ಚಿನ್ಮಯ ಜಗನ್ನಾಥನ ಸ್ಮರಿಸುತ್ತ

ಉದಕ ಪ್ರವಾಹದೊಳು ತನುವ ಅದ್ದಿದರು 4

ಸೀನಪ್ಪ ಶ್ರೀನಿವಾಸ ಶ್ರೀನಿವಾಸಪ್ಪ ಈ

ಶ್ರೀನಿವಾಸಾಚಾರ್ಯ ಒಂದು ಸಲ ಮುಳುಗೇಳೆ

ತನುಗತ ಒಳ ಹೊರಗಿನ ಕಲುಷ ಕಳೆದವು

ಪುನಃ ಮುಳಗೇಳಲು ಸುಪವಿತ್ರರಾದರು 5

ಪುನಃ ಮುಳುಗಿ ಎದ್ದು ಅ ಘ್ರ್ಯವ ಅರ್ಪಿಸಲು

ಇನನ ಮಂಡಲದಿ ವರವಾಯು ಅಧಿಷ್ಠಾನದಲಿ

ಶ್ರೀ ನಾರಾಯಣ ಸರ್ವಜನ ಹಿತಕರನ

ಆನಂದ ಚಿನ್ಮಾತ್ರ ವಪುಷನ್ನ ಸ್ಮರಿಸಿದರು 6

ಋಕ್ಸಾಮ ವೇದಗಳಿಂದ ವಾಣೀವಾಯು

ಸುಖಪೂರ್ಣ ನಾರಾಯಣನ ಸ್ತುತಿಸುವರು

ಆಕಳಂಕ ಉನ್ನಾಮ ಸಾಮ ನಾಮ ಹೀಂಕಾರ

ಶ್ರೀಕೃತಿಪತಿ ಪ್ರದ್ಯುಮ್ನಾದಿ ಸ್ವರೂಪ 7

ಸಪ್ತಕಾಲದಿ ಸಪ್ತಸಾಮ ಪ್ರತಿಪಾದ್ಯನು

ಸಪ್ತಸ್ವರೂಪನು ಆದಿತ್ಯಾಂತಸ್ತ

ಪ್ರದ್ಯುಮ್ನ ವಾಸುದೇವ ವರಾಹ ನಾರಾಯಣ

ಅನಿರುದ್ಧ ನರಸಿಂಹ ಸಂಕರುಷಣ 8

ಪರಮಗುರು ವಿಜಯ ದಾಸಾರ್ಯರ ಪ್ರೇರಣೆಯಿಂದ

ಗುರುಗಳು ಗೋಪಾಲದಾಸಾರ್ಯರು

ಅರುಪಿದ ಅನುಸಂಧಾನ ಕ್ರಮದಿಂದಲೇ

ಗುರುತಮ ಸಮೀರನಲಿ ಹರಿಯ ಸ್ಮರಿಸಿದರು 9

ಸೂರ್ಯನೊಳಿಪ್ಪ ಸಮೀರ ಅಧಿಷ್ಠಾನಸ್ಥ

ಸೂರಿಜನ ಪ್ರಾಪ್ಯ ಋಕ್ ಸಾಮಾದಿಸ್ತುತ್ಯ

ಸೂರ್ಯತೇಜಃ ಪುಂಜ ಸ್ಫೂರ್ತಿದ ಜಗತ್ಕರ್ತ ಶ್ರೀ

ಶ್ರೀನಾರಾಯಣಗಘ್ರ್ಯ ಅರ್ಪಿಸಲು ಒಲಿದ 10

ಝಗಝಗಿಪ ತೇಜಸ್ಸು ಶಿರೋಪಕಂಡರು

ಮೂಗಿನಿಂದೊಂದಡಿ ಶಿರದ ಮೇಲೆ

ಜಗನ್ನಾಥವಿಠ್ಠಲ ಎಂದು ಪ್ರಜ್ವಲಿಸಿತು

ಹೇಗೆ ವರ್ಣಿಸುವೆ ಆ ಅದ್ಭುತ ದೃಶ್ಯ 11

ಸರ್ವ ಜಗದ್ರಕ್ಷಕ ವಿಠ್ಠಲನು ತತ್ಕಾಲ

ಪ್ರವಾಹವ ತಡೆಯಲು ನಿರ್ಮಿಸಿದ ಶಿಲೆಯು

ಪ್ರಜ್ವಲಿಪ ಈ ದಿವ್ಯ ಹರಿನಾಮ ಅಂಕಿತಕ್ಕೆ

ಐವತ್ತು ಅಂಗುಲ ಹಿಂದೆ ನಿಂತಿತ್ತು 12

ಕ್ಷಣಮಾತ್ರದೊಳಗೆ ಈ ತಟಿತ್ಕೋಟಿ ನಿಭಜ್ಯೋತಿ

ಫಣೆಮುಂದೆ ನಿಂತಿತು ಆಗ ಆಚಾರ್ಯ

ಚೆನ್ನಾಗಿ ನೋಡಿದರು ಹರಿ ಇಚ್ಛಾಶಕ್ತಿಯಿಂ

ಶ್ರೀನಿವಾಸ ವಿಜಯ ಗೋಪಾಲ ವಿಠ್ಠಲನ 13

ಶ್ರೀ ಶ್ರೀನಿವಾಸನೇ ವಿಜಯ ವಿಠ್ಠಲನಾಗಿ

ಶ್ರೀ ಶ್ರೀನಿವಾಸ ಗೋಪಾಲ ವಿಠ್ಠಲನಾಗಿ

ಶ್ರೀ ಶ್ರೀನಿವಾಸ ಶ್ರೀ ಜಗನ್ನಾಥ ವಿಠ್ಠಲನಾಗಿ

ಶಿರಿ ಜಗನ್ನಾಥ ದಾಸಾರ್ಯರು ನೋಡಿದರು 14

ಶ್ರೀ ಶ್ರೀನಿವಾಸನೆ ಪ್ರಸನ್ನನು ಆಗಿ

ತೋರಿಹನು ಜಗನ್ನಾಥ ವಿಠಲನೆನಿಸಿ

ತಿರುಪತಿ ಶ್ರೀನಿಧಿಯೇ ಪಂಡರಿ ವಿಠ್ಠಲನು

ಸೂತ್ರ ನೋಡಿ ನಸ್ಥಾನ ತೋಪಿ 15

ಶ್ರೀ ರುಕ್ಮಿಣೀಪತಿ ಪರಂಜ್ಯೋತಿ ಪರಂಬ್ರಹ್ಮ

ಉರು ಅಖಿಳ ಸಚ್ಛಕ್ತ ಜಗನ್ನಾಥ ವಿಠ್ಠಲ

ಶಿರಿ ಜಗನ್ನಾಥದಾಸರ ಹೃದಯ ¥ದ್ಮದೊಳು

ಸೇರಿದನು ಜ್ವಲಿಸುತಿಹ ಸರ್ವೋತ್ತಮ ಅಲ್ಲಿ 16

ಎಂಟು ಅಕ್ಷರ ಮೂಲಮಂತ್ರದಿ ನಾರಾಯಣನ

ವಿಠ್ಠಲ ಹಯಗ್ರೀವ ವೆಂಕಟೇಶಾದಿ

ಷಡಕ್ಷರಿ ವಿಷ್ಣು ರಾಮ ಕೃಷ್ಣಾದಿಗಳ

ಕ್ರೋಡ ನರಸಿಂಹಾದಿಗಳನು ಜಪಿಸಿದರು 17

ಗುರು ಪರಮ ಗುರು ಪೇಳ್ದ ರೀತಿಯಲಿ ಜಪಚರಿಸಿ

ಶ್ರೀ ರುಕ್ಮಿಣಿ ವಿಠ್ಠಲ ಮಂದಿರಕೆ ಪೋಗಿ

ಪುರಂದರಾರ್ಯರ ನಮಿಸಿ ಗುರು ಪರಮ ಗುರುಗಳ

ಸ್ಮರಿಸಿ ಒಳಪೊಕ್ಕರು ವಿಠ್ಠಲನ್ನ ನೋಡೆ 18

ಶ್ರೀ ಮಧ್ವರಮಣ ನಿನ್ನ ಅದ್ವಿತೀಯ ಮಹಿಮೆ

ಈ ಮಹೋತ್ತಮ ಕೃತಿ ಪುರಂದರದಾಸರದು

ಅಮಲ ಭಕ್ತಿಯಲ್ಲಿದನ್ನ ಅರ್ಥ ಅರಿತು ಪಠಿಸಿ

ಶ್ರೀಮಂದಿರದೊಳು ಪ್ರವೇಶ ಮಾಡಿದರು 19

ತ್ರಿಜಗದೀಶನ ಪಾದ ಪದ್ಮಗಳ ನೋಡುತ್ತ

ನಿಜಭಕ್ತಿ ಭಾವದಲಿ ಸಾಷ್ಟಾಂಗ ನಮಿಸಿ

ಅಜ ಭವೇಂದ್ರಾದಿ ಸುರವಂದ್ಯನ್ನ ಕೇಶಾದಿ

ರಾಜೀವ ಪಾದಾಂತ ದರುಶನ ಮಾಡಿದರು 20

ಜ್ವಲಿಸುವ ಕಿರೀಟ ಸುಳಿಗುರುಗಳು ಫಣಿಯ ತಿಲಕ

ಬಿಲ್ಲುವೋಲ್ ಸುಂದರ ಭ್ರೂ ಮುಖಕಮಲ

ಜಲಜೇಕ್ಷಣ ಮುಗುಳುನಗೆಯು ತಟಿದಂದಿ

ಪೊಳೆವ ಕುಂಡಲಕರ್ಣ ಕಂಬುಗ್ರೀವ 21

ವನಮಾಲೆ ಎಳೆ ತುಳಸಿದಳ ಹಾರ ಕೊರಳಲ್ಲಿ

ಘನಬಾಹು ವಿಸ್ತಾರವಕ್ಷ ಶ್ರೀವತ್ಸ

ಸ್ವರ್ಣಮಣಿ ಗ್ರೈವೇಯ ಕೌಸ್ತುಭ ರತ್ನವು

ಕಣ್ಣಾರ ಕಾಣಲಾನಂದ ಸೌಂದರ್ಯ 22

ಮೂರುಗೆರೆ ಉದರದಲಿ ವನರುಹ ನಾಭಿಯು

ಕರಗಳು ಕಟಿಯಲ್ಲಿ ಶಂಖಾರವಿಂದ

ಪುರುಟಮಣಿ ಗಣಸೂತ್ರ ಪೀತಾಂಬರ ಉಡಿ

ಸ್ಫುರದ್ರತ್ನ ನೂಪುರ ಸಮಪಾದದ್ವಯವು 23

ತಟಿತ್ಕೋಟಿನಿಭ ತನ್ ಕಾಂತಿಯಲಿ ಜ್ವಲಿಸುವ

ಸಾಟಿಯಿಲ್ಲದ ಸುಂದರಾಂಗ ಶ್ರೀರಮಣ

ವಿಠ್ಠಲ ಕೃಪಾನಿಧಿ ಶರಣಜನ ಪಾಲನ್ನ

ಹಾಡಿ ಸ್ತುತಿಸಿದರು ಜಗನ್ನಾಥ ದಾಸಾರ್ಯ 24

ಫಣಿಪಶಾಯಿಯ ಅನಂತ ಪದ್ಮನಾಭನು ತನ್ನ

ಆನಂದಲೀಲೆಯಲಿ ಜಗವ ಪಡೆಯುವನು

ಆನಂದಲೀಲೆಯಲಿ ಅವತಾರ ರೂಪಗಳ

ತಾನೇ ಪ್ರಕಟಿಸಿ ಸಜ್ಜನರ ಪಾಲಿಸುವ 25

ದೇಶಗುಣಕಾಲ ಅಪರಿಚ್ಛಿನ್ನನು ಅನಂತನು

ಶ್ರೀಶಸರ್ವೇಶ ಚಿನ್ಮಯನು ಅನಘ

ಐಶ್ವರ್ಯ ಪೂರ್ಣಜಗದೇಕ ಪಾಲಕನು

ಅಸಮ ಸರ್ವೋತ್ತಮನು ಸುಖಮಯನು ಸುಖದ 26

ಮೀನ ಕೂರ್ಮ ಸ್ತ್ರೀ ಅಜಿತ ಧನ್ವಂತರಿ ಕ್ರೋಢ

ಶ್ರೀನಾರಸಿಂಹ ವಟುಭೃಗು ರಾಮರಾಮ

ಕೃಷ್ಣ ಜಿನಸುತ ಕಲ್ಕಿ ಠಲಕ ವೆಂಕಟರಮಣ

ಆನಂದಚಿತ್ತನು ಅನಂತ ಅವತಾರ 27

ದಾಸೋಹಂ ತವ ದಾಸೋಹಂ ಎಂದು

ದಾಸವರ್ಯರು ಬಿನ್ನೈಸಿ ಸ್ತುತಿಸಿದರು

ನಸುನಗುತ ವಾತ್ಸಲ್ಯದಿಂದ ವಿಠ್ಠಲನು

ವಿಶೇಷಾಪರೋಕ್ಷ ಅನುಗ್ರಹಿಸಿದನುದಯದಿ 28

ಸೌದಾಮಿನಿಗಮಿತ ವಿದ್ಯುತ್ ಕಾಂತಿಯಿಂದ

ದಿಕ್ಕು ವಿದಿಕ್ಕುಗಳ ರಂಜಿಸುವ ರೂಪ

ದಿಂದ ಪಾಲ್ಗಡಲಲಿ ಆವಿರ್ಭವಿಸಿದ ಶ್ರೀ

ಇಂದಿರೆಯೆ ರುಕ್ಮಿಣಿ ಸೌಂದರ್ಯಪೂರ್ಣೆ 29

ಮಾಯಾ ಜಯಾ ಕೃತಿಶಾಂತಿ ಸೀತಾಲಕ್ಷ್ಮಿ

ತೋಯ ಜಾಲಯ ಚಿತ್ಪ್ರಕೃತಿ ಭೂದುರ್ಗಾ

ತೋಜಯಾಕ್ಷಿ ವೇದವತಿ ದಕ್ಷಿಣಾ ಶ್ರೀ

ಜಯಂತಿ ಸತ್ಯಾರುಕ್ಮಿಣಿ ಸುಂಧುಕನ್ಯಾ 30

ಸರ್ವ ಜಗಜ್ಜನನಿಯು ಸರ್ವ ವಿಧದಲಿ ಹರಿಯ

ಸೇವಿಸುತಿಹಳು ಸದಾ ನಿತ್ಯಾವಿಯೋಗಿನಿ

ದೇವದೇವೋತ್ತಮ ರಾಜರಾಜೇಶ್ವರನು ವಿಠ್ಠಲನು

ದೇವಿ ಶ್ರೀ ರಾಜರಾಜೇಶ್ವರಿಯು ರುಕ್ಮಿಣಿಯು 31

ಜ್ವಲಿಸುವ ಮುತ್ತು ನವರತ್ನದಿ ಕಿರೀಟ

ಒಳ್ಳೆ ಪರಿಮಳ ಹೂವು ಮುಡಿದಂತ ತುರುವು

ಫಾಲದಲಿ ಶ್ರೇಷ್ಠತಮ ಕಸ್ತೂರಿ ತಿಲಕವು

ಪೊಳೆವ ಪೂರ್ಣೇಂದು ನಿಭ ಮೂಗುಬೊಟ್ಟು 32

ಅಂಬುಜಾಕ್ಷಿ ದಿವ್ಯ ಮುತ್ತಿನ ತೋಡುಗಳು

ಗಂಭೀರ ಸೌಭಾಗ್ಯದ ಕೃಪಾನೋಟ

ಕಂಬುಕಂಠದಿ ಮಂಗಳ ಸೂತ್ರ ಕರಯುಗದಿ

ಅಂಬುಜ ವರಕೊಡುವ ಅಭಯ ಹಸ್ತಗಳು 33

ಕಂಧರದಲಿ ಪರಿಮಳ ಕಮಲ ಮಾಲಾ

ಪೀತಾಂಬರ ದಿವ್ಯ ಕುಪ್ಪಸ ಮೇಲ್ಪಟ್ಟೆ

ವಸ್ತ್ರವು ಸ್ವರ್ಣಸರ್ವಾಭರಣ ಭೂಷಣವು

ಪಾದ ಉಂಗುರ ಪೆಂಡೆ ಕಂಡು ನಮಿಸಿದರು 34

ಜಗನ್ನಾಥ ವಿಠ್ಠಲನೂ ಜಗನ್ಮಾತೆ ರುಕ್ಮಿಣಿಯೂ

ಜಗನ್ನಾಥದಾಸರಿಗೆ ಔತಣ ಮಾಡಿದ್ದು

ಜಗತ್ತಲ್ಲಿ ಭಕ್ತಜನರೆಲ್ಲ ಪೇಳ್ತಿಹರು

ಜಗದೀಶ ಪಂಢರೀ ವಿಠ್ಠಲನ ಮಹಿಮೆ 35

ಕೇಶವ ನಾರಾಯಣ ಮಾಧವ ಗೋವಿಂದ

ಶ್ರೀಶ ವಿಷ್ಣು ಮಧುಸೂದನ ತ್ರಿವಿಕ್ರಮ

ಈಶ ವಾಮನ ಶ್ರೀಧರ ಹೃಷಿಕೇಶ

ರಮೆಯರಸ ಪದ್ಮನಾಭ ದಾಮೋದರ 36

ಸಂಕರುಷಣ ವಾಸುದೆವ ಪ್ರದ್ಯುಮ್ನ ನಮೋ

ಅಕಳಂಕ ಅನಿರುದ್ಧ ಪುರುಷೋತ್ತಮ

ನಿಷ್ಕಳ ಅಧೋಕ್ಷಜ ನರಸಿಂಹ ಅಚ್ಯುತ

ಶ್ರೀಕರ ಜನಾರ್ದನ ಉಪೇಂದ್ರ ಹರಿಕೃಷ್ಣ 37

ರಮಾಪತಿ ರಮಾಯುತನು ಶ್ರೀಹರಿಯ ರೂಪಗಳ

ಬ್ರಹ್ಮವಾಯು ವಾಣೀಭಾರತಿ ಉಮೇಶ

ಉಮಾ ತತ್ವದೇವದಿಕ್ಪಾಲಕರು ಗಂಗಾ

ಕರ್ಮಮಾನಿ ಪುಷ್ಕರಾದಿಗಳೊಳ್ ತಿಳಿದರು 38

ಭೋಜನ ಪದಾರ್ಥದಲು ತದ್ಗತ ಶಬ್ದಂಗಳಲು

ಭೋಜ್ಯಗಳ ಬಡುಸುವರಲ್ಲೂ ಕ್ಷೇತ್ರದಲ್ಲೂ

ಭೋಜಭಿಮಾನಿಗತ ಖಂಡಾಖಂಡಗನು

ಭಜನೀಯ ಸ್ಥೂಲಭುಕ್ ಅವ್ಯಯನ ಕಂಡರು 39

ಕರುಣಾಬ್ಧಿ ಶ್ರೀ ಹರಿಯ ಔದಾರ್ಯ ಏನೆಂಬೆ

ಶ್ರೀ ಶ್ರೀನಿವಾಸನು ಅಂದು ತಿರುಪತಿಯಲ್ಲಿ

ಶಿರಿ ವಿಜಯಾರ್ಯರ ರೂಪದಿ ಪ್ರೇರಿಸಿ

ಧಾರೆಯೆರಿಸಿದ ಆಯಸ್ ಗುರುಗಳ ಕೈಯಿಂದ 40

ಶ್ರೀ ಶ್ರೀನಿವಾಸನ ಮಹಾದ್ವಾರಕೆದುರಾಗಿ

ಹಾರೆ ಕಲ್ಲುಮಂಟಪ ಆಗ್ನೇಯ ದಿಕ್ಕು

ಎರಡನೆಯದೋ ಮೂರನೆಯದೋ ಅಂಕಣದ ಖೋಲಿ

ಹರಿದಾಸರು ಇದ್ದ ಮುಖಾಮಿ ಬಿಡಾರ 41

ಎಳೆಕೆಂಪು ರೋಜ ಊದಾವರ್ಣದಿ ಅಂಚು

ಬಿಳಿರೇಷ್ಮೆ ವಸ್ತ್ರವ ಮೇಲ್ ಹೊದ್ದುಕೊಂಡು

ಮಲಗಿ ಚಲಿಸದೆ ನಿತ್ರಾಣನಾಗಿದ್ದವಗೆ

ಒಲಿದು ಆಯುರ್ದಾನ ಮಾಡಿಸಿದ ಕರುಣಿ 42

ಗುರುಗಳು ಗೋಪಾಲದಾಸರ ರೂಪದಿಂದ ಬಂದು

ಶಿರಿವರನು ತಾನೇನೆ ಅನ್ನಪ್ರಸಾದ

ಕರದಲ್ಲಿ ಇತ್ತನು ಅವನೇವೆ ಇಂದು

ಶಿರಿಸಹ ಅಮೃತಾನ್ನ ಔತಣವನ್ನಿತ್ತ 43

ಶಿರಿಯ ವಾತ್ಸಲ್ಯ ದಯೆ ಏನೆಂದು ಪೇಳಲಿ

ಚಾರು ದೇಷ್ಣಾಹ್ವಯ ತನ್ನಸುತ ಈಗ

ವರಗೋಪಾಲದಾಸರು ಅವರ ಶಿಷ್ಯ

ರಿವರೆಂದು ಪ್ರೀತಿಯಲಿ ಔತಣ ಮಾಡಿಹಳು 44

ಈ ರೀತಿ ಹರಿಶಿರಿ ಇತ್ತ ಔತಣ ಮತ್ತು

ಹರಿಯ ಕೈಯಿಂದ ಹರಿಗರ್ಪಿತ ಮಾಲಾದಿ

ಹರಿ ಪ್ರಸಾದವ ಕೊಂಡು ಫಂಡರಿಪುರದಿಂದ

ಹೊರಡಲಾದರು ಜಗನ್ನಾಥದಾಸಾರ್ಯ 45

ನರಸಿಂಹಾದಾಸಾರ್ಯರಾದ ತನ್ನ ತಂದೆಗೆ

ಗುರುಗಳು ಪುರಂದರ ದಾಸಾರ್ಯರೆಂದು

ಪರಮಗುರು ವಿಜಯ ದಾಸಾರ್ಯರ ಗುರುಯೆಂದು

ಚರಣ ವಂದಿಸಿ ಹೊರಡೆ ಅಪ್ಪಣೆ ಕೊಂಡರು 46

ಪರಮಗುರು ವಿಜಯದಾಸಾರ್ಯರ ಸ್ಥಳಕೆ

ಸ್ಮರಣೆ ಪೂರ್ವಕ ಮನಸಾ ಪೋಗಿ ಸನ್ನಮಿಸಿ

ಗುರುಗಳ ಚರಣ ಆಕಾಂಕ್ಷಿಗಳು ತ್ವರಿತದಿ

ಹೊರಟರು ಶ್ರೀ ಜಗನ್ನಾಥನ್ನ ಸ್ಮರಿಸುತ್ತ 47

ವಾರಿಜಾಸನ ಪಿತನು ಪೂರ್ಣ ಪ್ರಜ್ಞರ ಹೃತ್‍ಸ್ಥ

ಶಿರಿ ಪ್ರಸನ್ನ ಶ್ರೀನಿವಾಸನಿಗೆ ಪ್ರಿಯತರರು

ಪುರಂದರ ವಿಜಯ ಗೋಪಾಲದಾಸಾರ್ಯರ

ಚರಣರತ ಜಗನ್ನಾಥ ದಾಸಾರ್ಯ ಶರಣು 48

- ಇತಿ ಪಂಚಮ ಕೀರ್ತನೆ ಸಂಪೂರ್ಣಂ -

***

kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru

ಶ್ರೀ ರಮಣಿ ಕರಕಮಲ ಪೂಜಿತ ಪದಾಂಬೋಜ

ಸರಸಿಜಾಸನ ಶಿವಾದ್ಯಮರ ಜನವಿನುತ

ಉರುಗುಣಾರ್ಣವ ಜಗಜ್ಜನ್ಮಾದಿಕರ್ತ ನರ-

ಹರಿಗೆ ಪ್ರಿಯ ಜಗನ್ನಾಥದಾಸಾರ್ಯ ಶರಣು ಪ.


ವಿಠ್ಠಲನ ಮಂದಿರದಿ ತಪ್ಪದೇ ಪ್ರತಿದಿನ

ಪಠಿಸಿ ಅರ್ಪಿಸುತ್ತಿದ್ದ ವಿಶ್ವ ವಿಷ್ಣು

ವಷಟ್ಕಾರ ಮೊದಲಾದ ಸಹಸ್ರನಾಮಗಳ

ದಿಟ ಜ್ಞಾನ ಭಕ್ತಿಯಿಂ ಮಾರ್ಗದಿ ಸ್ಮರಿಸಿದರು 1

ತನ್ನ ಹೊರ ಒಳಗೆ ಶ್ರೀಹರಿಯ ತಿಳಿಯುತ್ತ

ಕಾಣುವುದು ಎಲ್ಲವೂ ಅನಘಹರಿ ಆವಾಸ್ಯ

ತನಗೆ ಯದೃಚ್ಛದಿ ಲಭಿಸುವುವು ಹರಿಕೊಡುವುವು

ಎನ್ನುತ ಅನಪೇಕ್ಷಿ ನಿರ್ಭಯದಿ ನಡೆದರು 2

ಮಾರ್ಗಸ್ಥ ಅಕ್ಷೋಭ್ಯ ಜಯಮುನಿಗಳಲಿ

ಪೋಗಿ ಬಾಗಿ ಶಿರಸ್ಸಾಷ್ಠಾಂಗ ನಮಸÀ್ಕರಿಸಿ ಮುಂದು

ಪೋಗಿ ಕೃಷ್ಣಾ ತೀರ ಹನುಮನ್ನ ವಂದಿಸಿ

ಚೀಕಲಪರಿವಿಗೆ ನಮಿಸಿ ಕರಮುಗಿದರು 3

ಗುರು ಗುಣಸ್ತವನಾದಿ ಗ್ರಂಥಗಳ ರಚಿಸಿರುವ

ಸೂರಿವಾದೀಂದ್ರರ ನಮಿಸಿ ಅಪ್ಪಣೆಯಿಂ

ಶ್ರೀರಾಘವೇಂದ್ರ ತೀರ್ಥರ ನಮಿಸಿ ಶರಣಾಗಿ

ಸ್ತೋತ್ರ ಅರ್ಪಿಸಿದರು ಕವಿತಾರೂಪದಲಿ 4

ಹರಿಶಿರಿ ಹನುಮ ಶಿವಗುರು ಅನುಗ್ರಹಕೊಂಡು

ದಾರಿಯಲ್ಲಿರುವಂಥ ಕ್ಷೇತ್ರ ಮೂರ್ತಿಗಳ

ದರುಶನ ಮಾಡಿ ಗೋಪಾಲ ದಾಸಾರ್ಯರು

ಇರುವ ಸ್ಥಳ ಸೇರಿದರು ಜಗನ್ನಾಥದಾಸರು 5

ಗುರುಗಳ ನೋಡಿ ಆನಂದ ಬಾಷ್ಪವ ಸುರಿಸಿ

ಚರಣಪದ್ಮಗಳಲ್ಲಿ ನಮಿಸಿ ಶರಣಾಗಿ

ಘೋರ ವ್ಯಾಧಿಹರಿಸಿ ಅಪಮೃತ್ಯು ತರಿದಂಥ

ಕಾರುಣ್ಯ ನಿಧಿ ಉದ್ಧಾರಕರು ಎಂದರು 6

ರಾಜೀವಾಲಯಪತಿ ವಿಜಯ ಗೋಪಾಲನು

ಭಜತರ ರಕ್ಷಿಸುವ ಕರುಣಾಸಮುದ್ರ

ಈ ಜಗನ್ನಾಥನೇ ನಿನಗೆ ಒಲಿದಿಹನು

ಭುಜಗಾದ್ರಿವಾಸ ಫಂಡರಿ ವಿಠ್ಠಲ 7

ನಿಜಭಕ್ತಾಗ್ರಣಿ ಗೋಪಾಲ ದಾಸಾರ್ಯರು

ನಿಜಭಾವದಲಿ ಈ ರೀತಿಯಲಿ ಹೇಳೆ

ಐಜೀ ಮಹಾತ್ಮರು ಸೂಚಿಸಿದರು ಹರಿಯ

ಭೋಜನ ಜಗನ್ನಾಥದಾಸಗೆ ಮಾಡಿಸಿದ್ದು 8

ಜಗನ್ನಾಥದಾಸರು ನಡೆದ ವೃತ್ತಾಂತವ

ಮುಗಿದು ಕರಗದ್ಗದ ಕಂಠದಲಿ ಪೇಳೆ

ಚಕಿತರಾದರು ಅಲ್ಲಿ ನೆರೆದಿದ್ದ ಸಜ್ಜನರು

ಉದ್ಘೊಷ ಜಯ ಜಯ ಶಬ್ದ ಮಾಡಿದರು 9

ಉತ್ತನೂರಿಗೆ ವೇಣಿ ಸೋಮಪುರದಿಂ ಪೋಗಿ

ಮತ್ತೂ ವೇಣಿ ಸೋಮಪುರವನ್ನು ಯೈದಿ

ಸತ್ತತ್ವ ಬ್ರಹ್ಮ ಜಿಜ್ಞಾಸವೂ ಭಾಗ -

ವತ ಧರ್ಮ ಆಚರಿಸಿದರು ಮುದದಿಂದ 10

ಗೋಪಾಲಕೃಷ್ಣ ಪ್ರಿಯ ಐಜೀಮಹಂತರು

ಗೋಪಾಲದಾಸಾರ್ಯ ªರದ ಗುರುತಂ

ಗೋಪಾಲ ದಾಸಾರ್ಯರುಗಳ ಸಮೇತದಿ

ಭೂಪಾಲ ಪ್ರಮುಖರು ಸಾಧುಜನಗುಂಪು 11

ಶಿರಿ ವಾಸುದೇವ ಪ್ರಿಯವಾಸತತ್ವಜ್ಞರ

ಗುರುಗಳು ಗೋಪಾಲದಾಸರ ಅನುಗ್ರಹದಿ

ವರದ ಗುರುತಂದೆ ಗೋಪಾಲರು ಮತ್ತೆಲ್ಲರಿಗೂ

ಕರಮುಗಿದು ಹೊರಟರು ಅಪ್ಪಣೆಕೊಂಡು 12

ಗದ್ವಾಲ ಮಾರ್ಗದಿ ಮಂತ್ರಾಲಯ ಪೋಗಿ

ಮಧ್ವಮತ ದುಗ್ಧಾಬ್ಧಿ ಚಂದ್ರ ಶ್ರೀ ರಾಘ

ವೇಂದ್ರ ವಾದೀಂದ್ರರ ನಮಿಸಿ ಅಲ್ಲಿಂದ

ಯೈದಿಹರು ಪರಮಗುರುಗಳು ಇದ್ದ ಸ್ಥಳವ 13

ಪರಮ ಗುರುಗಳು ವಿಜಯವಿಠ್ಠಲ ದಾಸಾರ್ಯರ

ಚರಣಾರವಿಂದದಿ ಶರಣಾಗಿ ಅವರ

ಕರದಿಂದ ನರಸಿಂಹ ವಿಜಯವಿಠ್ಠಲನ

ಸುಪ್ರಸಾದವ ಕೊಂಡು ಮಾನವಿಗೆ ಹೋದರು 14

ಮನುತೀರ್ಥ ತಟದಲಿ ಮನೆಯಲ್ಲಿ ವಾಸಿಸುತ

ಹನುಮಂತಸ್ಥ ನರಹರಿ ಜಗನ್ನಾಥನ್ನ

ಹನುಮನ್ನ ಪೂಜಿಸುತ ಗುರುಗಳ ಸ್ಮರಿಸುತ್ತ

ಜ್ಞಾನಾರ್ಥಿ ವಿದ್ಯಾರ್ಥಿಗಳಿಗೆ ಒದಗಿಹರು 15

ಇಷ್ಟರಲ್ಲೇ ಜಗನ್ನಾಥದಾಸರ ಕೀರ್ತಿ

ಅಷ್ಟದಿಕ್ಕಲ್ಲು ಪ್ರಖ್ಯಾತಿಯ ಹೊಂದಿ

ಇಷ್ಟಾರ್ಥ ಸಿದ್ಧಿಗೆ ಬರುವರಾದರು ಜನರು

ಕೃಷ್ಣನ ಒಲಿಮೆ ಈ ದಾಸರಲಿ ಪೂರ್ಣ 16

ಮಾಧ್ವ ಮೂಲಗ್ರಂಥ ಟೀಕಾಟಿಪ್ಪಣಿಗಳು

ಸಾಧು ಹರಿದಾಸರ ಕೀರ್ತನೆಗಳು

ವೇದವ್ಯಾಸೋದಿತ ಪುರಾಣ ಇತಿಹಾಸ

ವಿದ್ಯಾರ್ಥಿಗಳಿಗೆಲ್ಲ ಪಾಠ ಪ್ರವಚನವು 17

ಯೋಗಿವರ ಪ್ರಾಣೇಶವಿಠ್ಠಲ ದಾಸಾರ್ಯರು

ಭಾಗವತ ವರ ಶ್ರೀಶ ವಿಠ್ಠಲದಾಸಾರ್ಯ

ನಿಗಮ ವೇದ್ಯನ ಭಕ್ತಜನರು ಬಹುಮಂದಿಯು

ಬಾಗಿ ದಾಸಾರ್ಯರಿಗೆ ಶಿಷ್ಯ ಜನರಾದರು 18

ಪ್ರಾಣೇಶ ದಾಸರಿಗೆ ಶರಣಾದೆ ಎಂದೆಂದು

ಪ್ರಾಣದೇವನು ಇವರೊಳ್ ಪ್ರಸನ್ನನಾಗಿಹನು

ಪ್ರಾಣದೇವಾಂತಸ್ಥ ಶ್ರಿಹರಿ ಕೇಶವನ

ಕಾಣುತ ಭಜಿಸುವ ಭಾಗವತರೆಂದು 19

ಜಗನ್ನಾಥದಾಸರ ಶಿಷ್ಯ ಸಜ್ಜನರಿಗೆ

ಭಾಗವತ ವರಶ್ರೀಶ ಶ್ರೀದವಿಠ್ಠಲಾದಿ

ಭಗವದ್ದಾಸರಿಗೆ ನಮಿಪೆ ಶ್ರೀ ಹರಿವಾಯು

ಝಗಝಗಿಪ ಇವರುಗಳೊಳ್ ಸಂತತ ಎಂದು 20

ನೋಡಬೇಕಾಗಿದ್ದ ಕ್ಷೇತ್ರಗಳಿಗೆ ಪೋಗಿ

ನಾಡಿನಲಿ ಭಾಗವತ ಧರ್ಮವ ಬೆಳೆಸೆ

ಬೇಡುವ ಯೋಗ್ಯರಿಗೆ ಉಪದೇಶ ಕೊಡೆ ಶಿಷ್ಯ

ರೊಡಗೂಡಿ ಹೊರಟರು ಜಗನ್ನಾಥದಾಸರು 21

ಕರ್ಜಗಿ ಕ್ಷೇತ್ರದಲ್ಲಿ ಇರುವ ವರದಾ ನದಿಯು

ಸಜ್ಜನ ಸಮೂಹವು ಬಹಳ ಅಲ್ಲುಂಟು

ಶ್ರೀ ಜಗನ್ನಾಥನ್ನ ಭಜಿಸುತ್ತ ದಾಸರು

ಕರ್ಜಗಿ ಜಮೀನ್ದಾರ ಮನೆಯಲ್ಲಿ ಕುಳಿತರು 22

ಸಾಧ್ವಿ ಶಿರೋಮಣಿ ಆ ಗೃಹಸ್ಥನ ಪತ್ನಿ

ಪಾದ ನಮಿಸಿ ಪತಿಗೆ ಬಿನ್ನಹ ಮಾಡಿದಳು

ಇಂದು ಲೌಕಿಕ ವಿಷಯಲಾಂಪಟ್ಯ ನಿಲ್ಲಿಸಿ

ವಂದಿಸಿ ದಾಸರಿಗೆ ಪೂಜೆ ನೋಡೆಂದು 23

ಅಹರ ಆರಾಧಿಸುವ ಕ್ರಮದಿ ದಾಸಾರ್ಯರು

ಸಾಯಾಹ್ನ ಸಾಮವಾಪ್ರತಿಪಾದ್ಯ ನರಸಿಂಹನ

ವಿಹಿತದಿ ಅರ್ಚಿಸಿ ಕೀರ್ತನೆಗಳರ್ಪಿಸಿ

ಮಹಾಹರ್ವ ಭಜಿಸುವರು ಶಿಷ್ಯರ ಸಮೇತ 24

ಅಂದು ಈ ಗೃಹಸ್ಥನು ಹೆಂಡತಿ ಕೋರಿಕೆಯಂತೆ

ಬಂದು ಕುಳಿತನು ದಾಸಾರ್ಯರ ಮುಂದೆ

ಅಂದೇ ಆ ವಿಪ್ರನ ಅನಿಷ್ಠ ಪ್ರಾರಬ್ಧವು

ಚಂದದಿ ಪೋಪುವದೆಂದರಿತರು ದಾಸಾರ್ಯ 25

ಪೂಜಾ ಆರಂಭ ಆಗಲಿಕೆ ಇರುವಾಗ ಆ

ದ್ವಿಜನ ನೋಡಿ ಪ್ರಾಣೇಶ ದಾಸಾರ್ಯ

ಗರ್ಜಿಸಿದರು ಇನ್ನಾದರೂ ಒಳ್ಳೆ

ಋಜುಮಾರ್ಗ ಹಿಡಿ ಹರಿಯ ಒಲಿಸಿಕೊಳ್ಳೆಂದು 26

ವಾಗ್ವಜ್ರಧಾರೆಯು ಪರಿಣಮಿಸಿ ವಿಪ್ರನ

ತೀವ್ರ ಆ ಕ್ಷಣದಲ್ಲೆ ಮನ ಕಲುಷ ಕಳೆದು

ಶ್ರೀವರನ ಪ್ರಿಯತರ ಜಗನ್ನಾಥದಾಸರಿಗೆ

ಸುವಿನಯದಿ ನಮಿಸಿ ಉದ್ಧರಿಸಿ ಎಂದ 27

ಪ್ರಾಣೇಶ ದಾಸರಿಗು ಜಗನ್ನಾಥದಾಸರಿಗು

ತನ್ನ ಕೃತಜ್ಞತೆಯನ್ನು ಚೆನ್ನಾಗಿ ತಿಳಿಸಿ

ಮನ ಶುದ್ಧಿ ಭಕ್ತಿಯಿಂದಲಿ ಪೂಜೆ ನೋಡಲು

ಹನುಮಂತ ದೇವರು ಕುಳಿತಿದ್ದು ಕಂಡ 28

ಶ್ರದ್ಧೆ ಭಕ್ತಿಯಿಂದ ಗೃಹಸ್ಥನುದಾಸರ

ಪಾದಕೆರಗಿ ತನ್ನನ್ನು ಹರಿದಾಸ

ವೃಂದದಲಿ ಸೇರಿಸಬೇಕೆಂದು ಪ್ರಾರ್ಥಿಸಿ

ಶ್ರೀದವಿಠ್ಠಲನಾಮ ಅಂಕಿತವ ಕೊಂಡ 29

ಜಗನ್ನಾಥದಾಸಾರ್ಯ ಪರಮ ದಯಮಾಡಿ

ಆ ಗೃಹಸ್ಥಗೆ ಶ್ರೀದವಿಠ್ಠಲಾಂಕಿತವು

ಭಕುತ ಜನರಿಗೆ ಫಲಮಂತ್ರಾಕ್ಷತೆ ಕೊಟ್ಟು

ಶ್ರೀಕರನ ಸ್ಮರಿಸಿ ಸವಣೂರಿಗೆ ಹೊರಟರು 30

ವಾರಿಜಾಸನ ಪಿತನು ಪೂರ್ಣ ಪ್ರಜ್ಞರ ಹೃತ್‍ಸ್ಥ

ಶಿರಿ ಪ್ರಸನ್ನ ಶ್ರೀನಿವಾಸನಿಗೆ ಪ್ರಿಯತರರು

ಪುರಂದರ ವಿಜಯ ಗೋಪಾಲದಾಸಾರ್ಯರ

ಚರಣರತ ಜಗನ್ನಾಥ ದಾಸಾರ್ಯ ಶರಣು 31- ಇತಿ ಷಷ್ಠ ಕೀರ್ತನೆ ಸಂಪೂರ್ಣಂ -

***

 ..ಶ್ರೀ ರಮಣಿ ಕರಕಮಲ ಪೂಜಿತ ಪದಾಂಬೋಜ

ಸರಸಿಜಾಸನ ಶಿವಾದ್ಯಮರ ಜನವಿನುತ

ಉರುಗುಣಾರ್ಣವ ಜಗಜ್ಜನ್ಮಾದಿಕರ್ತ ನರ-

ಹರಿಗೆ ಪ್ರಿಯ ಜಗನ್ನಾಥದಾಸಾರ್ಯ ಶರಣು ಪ.


ಸ್ವರ್ಣಪುರಿಯಲಿ ಜಗತ್ ಪ್ರಖ್ಯಾತ ಸ್ವಾಮಿಗಳು

ಘನಮಹಿಮ ಸೂರಿವರ ಸತ್ಯಬೋಧಾರ್ಯರ

ಸನ್ನಮಿಸಿ ಈ ಮಹಾಮೂರ್ತಿಗಳಾಹ್ವಾನದಿ

ದಿನ ಕೆಲವು ನಿಂತರು ಜಗನ್ನಾಥ ಆರ್ಯ 1

ಮೂರ್ಜಗವು ಅರಿವುದು ಸತ್ಯ ಬೋಧರ ಮಹಿಮೆ

ವಾಜಿ ಮುಖ ಕೋಡ ನೃಹರಿ ರಾಮಪ್ರಿಯರು

ಪ್ರಜ್ವಲಿಪ ಸೂರ್ಯನ್ನ ರಾತ್ರಿಯಲಿ ತೋರಿಹರು

ಭಜಕರ ಸುರಧೇನು ನಿವ್ರ್ಯಾಜ ಕರುಣೆ 2

ಶಿಷ್ಯರ ಸಹ ಜಗನ್ನಾಥದಾಸರು ತಮ್ಮ

ನಿಯಮಗಳ ತಪ್ಪದೇ ಭಾಗವತಧರ್ಮ

ಕಾಯ ವಾಙ್ಮನ ಶುದ್ಧಿಯಲಿ ಜ್ಞಾನ ಭಕ್ತಿ

ಸಂಯುತದಿ ಮಾಳ್ಪುದು ಕಂಡರು ಮುನಿಗಳು 3

ಹರಿದಾಸವರ ಜಗನ್ನಾಥದಾಸಾರ್ಯರಲಿ

ಹರಿಯ ಒಲಿಮೆ ಅಪರೋಕ್ಷದ ಮಹಿಮೆ

ನೇರಲ್ಲಿ ತಾ ಕಂಡು ಬಹುಪ್ರೀತಿ ಮಾಡಿದರು

ಹರಿಪ್ರಸಾದದ ಸವಿಯ ಅರಿತ ಆ ಗುರುಗಳು 4

ಸ್ವರ್ಣಪುರಿಯಿಂದ ಜಗನ್ನಾಥದಾಸಾರ್ಯರು

ದಿಗ್ವಿಜಯದಿಂದಲಿ ಶಿಷ್ಯ ಜನಗುಂಪು

ಸೇವಕರ ಸಹ ಊರು ಊರಿಗೆ ಪೋದರು

ಆ ಎಲ್ಲ ಕ್ಷೇತ್ರದಲು ಧರ್ಮ ಪ್ರಚಾರ 5

ಧರ್ಮ ಪ್ರಚಾರ ಹರಿಭಜನೆ ಪೂಜಾದಿಗಳು

ನಮಿಸಿ ಬೇಡುವವರ ಅನಿಷ್ಟ ಪರಿಹಾರ

ಕರ್ಮಜ ದಾರಿದ್ರ್ಯಾದಿಗಳ ಕಳೆದು ಸಂಪದವ

ಧರ್ಮ ಆಚರಣೆ ಬುದ್ಧಿಯ ಒದಗಿಸಿದರು 6

ಸುರಪುರಾದಿ ಬಹು ಸ್ಥಳದಲ್ಲಿ ಪ್ರಮುಖರು

ಹರಿಭಕ್ತರು ಮಂಡಲೇಶ್ವರರು ಇವರ

ಚರಣಕೆರಗಿ ಬಹು ಅನುಕೂಲ ಕೊಂಡರು

ಹರಿವಾಯು ಒಲಿಮೆ ಎಷ್ಟೆಂಬೆ ದಾಸರಲಿ 7

ವರಪ್ರದ ವರದಾ ತೀರದಲಿ ಸಶಿಷ್ಯ

ಧೀರೇಂದ್ರ ಯತಿವರ್ಯರ ಕಂಡು ನಮಿಸಿ

ಆ ರಿತ್ತಿ ಕ್ಷೇತ್ರದಲಿ ವಾಸಮಾಡಿಹರು

ಧೀರೇಂದ್ರ ತೀರ್ಥರ ಅನುಗ್ರಹ ಕೊಂಡು 8

ಸೂರಿಕುಲ ತಿಲಕರು ಉದ್ದಾಮ ಪಂಡಿತರು

ಧೀರೇಂದ್ರ ಗುರುಗಳು ಕಾರುಣ್ಯ ಶರಧಿ

ಊರೊಳಗೆ ಹನುಮನ ಗುಡಿ ಇಹುದು ಪಾಶ್ರ್ವದಿ

ಇರುವ ರಸ್ತೆಯ ಮೇಲೆ ದಾಸರ ಮನೆಯು 9

ಸೋದಾಪುರ ಪೋಗೆ ತ್ರಿವಿಕ್ರಮ ದೇವರ

ಮಂದಿರದ ಧ್ವಜಸ್ತಂಭದಲ್ಲಿ

ವಾದಿರಾಜರು ಹಂಸಾರೂಢರಾಗಿರುವವರ್ಗೆ

ವಂದಿಸಿ ತ್ರಿವಿಕ್ರಮರಾಯಗೆ ನಮಿಸಿದರು 10

ಬದರಿಯಿಂದಲಿ ಈ ಸರಥ ತ್ರಿವಿಕ್ರಮನ

ಭೂತರಾಜರ ಕೈಯಿಂದೆತ್ತಿ ತರಿಸಿ

ಸೋದಾಪುರದಲ್ಲಿ ಪ್ರತಿಷ್ಠೆ ಮಾಡಿಹರು

ವಾದಿರಾಜರು ಭಾವಿಸಮೀರ ಲಾತವ್ಯ 11

ಜಗನ್ನಾಥದಾಸರು ತ್ರಿವಿಕ್ರಮಗೆ ವಂದಿಸಿ

ಅಗಾಧ ಸುಪವಿತ್ರೆ ಧವಳಗಂಗಾಸ್ನಾನ

ಭಕುತಿಯಿಂ ಮಾಡಿ ಶಿವಹನುಮ ಕೃಷ್ಣರಿಗೆ

ಬಾಗಿ ಅಶ್ವತ್ಥಸ್ಥರಿಗೆ ನಮಿಸಿದರು 12

ಬಯಲಲ್ಲಿ ವೃಂದಾವನಗಳಲಿ ಗುರುಗಳಿಗೆ

ವಿನಯದಿ ವಂದಿಸಿ ಭೂತನಾಥಗೆ ಬಾಗಿ

ಶ್ರೀವ್ಯಾಸ ದೇವನಿಗೆ ಸನ್ನಮಿಸಿ ವೇದ

ವೇದ್ಯರಿಗು ವಾದಿರಾಜರಿಗು ನಮಿಸಿದರು 13

ಚತುದ್ರ್ವಾರ ಗೃಹದಲ್ಲಿ ಪಂಚವೃಂದಾವನವು

ಮಧ್ಯ ವೃಂದಾವನದಿ ಶ್ರೀವಾದಿರಾಜರು

ವೃಂದಾವನ ಮಹಿಮೆ ಚೆನ್ನಾಗಿ ತಿಳಿಯದಕೆ

ಭಕ್ತಿ ಶ್ರದ್ಧೆಯಲಿ ನೋಡಿ ವೃಂದಾವನಾಖ್ಯಾನ 14

ಹರಿಹರ ಕ್ಷೇತ್ರವು ಮದ್ದೂರು ಅಬ್ಬೂರು

ಪುರುಷೋತ್ತಮ ಬ್ರಹ್ಮಣ್ಯರ ವಂದಿಸಿ

ಶ್ರೀರಂಗನಾಥನಿಗೆ ಎರಗಿ ಮಹಿಷೂರು

ಗರಳುಂಡ ಈಶ್ವರನ ಕ್ಷೇತ್ರಕ್ಕೆ ಪೋದರು 15

ಕೇಶವನ ಪೂಜಿಸುತ ಪರ್ವತ ಗುಹೆಯಲ್ಲಿ

ವಾಸಮಾಡುವ ಮಹಾ ಕರುಣಾಂಬುನಿಧಿಯು

ದಾಸಜನಪ್ರಿಯ ಶ್ರೀ ಪುರುಷೋತ್ತಮರಂಘ್ರಿ

ಬಿ¸ಜಯುಗಳದಿ ನಾ ಶರಣು ಶರಣಾದೆ 16

ಮಹಿಷೂರು ರಾಜ್ಯದ ಸರ್ಕಾರಿನಲ್ಲಿ

ಮಹೋನ್ನತ ಸ್ಥಾನ ವಹಿಸಿದಧಿಕಾರಿ

ಮಹಾಪಂಡಿತರುಗಳ ಸಭೆಯನ್ನು ಕೂಡಿಸಿ

ವಿಹಿತದಿ ದಾಸರ ಪೂಜೆ ಮಾಡಿದನು 18

ನಿರ್ಭಯದಿ ದಾಸರು ಘನತತ್ವ ವಿಷಯಗಳ

ಸಭ್ಯರಿಗೆ ತಿಳಿಯದಿದ್ದವು ಸಹ ವಿವರಿಸಿದ

ಸೊಬಗನ್ನು ಕಂಡು ವಿಸ್ಮಿತರು ಆದರು ಆ

ಸಭೆಯಲ್ಲಿ ಕುಳಿತಿದ್ದ ದೊಡ್ಡ ಪಂಡಿತರು 19

ಭಾಗವತ ಧರ್ಮದ ಪದ್ಧತಿ ಅನುಸರಿಸಿ

ಭಗವಂತನ ಭಜನೆ ಸಭ್ಯರ ಮುಂದೆ

ಆಗ ದಾಸರ ಅಪರೋಕ್ಷದ ಮಹಿಮೆ

ರಂಗನೇ ಸಭ್ಯರಿಗೆ ತೋರಿಸಿಹನು 20

ದಾಸರು ಶಿಷ್ಯರೊಡೆ ಯಾತ್ರೆ ಮಾಡಿದ್ದು

ಮೈಸೂರು, ಕೊಂಗು, ಕೇರಳ, ಚೋಳ, ಪಾಂಡ್ಯ

ದೇಶಗಳು ಎಲ್ಲೆಲ್ಲೂ ಮರ್ಯಾದೆ ಸ್ವೀಕರಿಸಿ

ಈಶಾರ್ಪಣೆ ಸರ್ವ ವೈಭವವೆನ್ನುವರು 21

ಶ್ರೀಪಾದರಾಜರ ನಮಿಸಿ ವೆಂಕಟಗಿರಿ

ಸುಪವಿತ್ರ ಘಟಿಕಾದ್ರಿ ಶ್ರೀಕಂಚಿ ಉಡುಪಿ

ಶ್ರೀಪನ ಇಂಥಾ ಕ್ಷೇತ್ರಗಳಿಗೆ ಪೋಗಿ

ಸ್ವಪುರಕ್ಕೆ ತಿರುಗಿದರು ಪೂಜ್ಯ ದಾಸಾರ್ಯ 22

ಶ್ರೀಪಾದರಾಜರು ಪವಿತ್ರ ವೃಂದಾವನದಿ

ಶ್ರೀಪತಿ ನರಹರಿ ಶಿಂಶುಮಾರನ್ನ

ರೂಪಗುಣ ಕ್ರಿಯಾಮಹಿಮೆ ಧ್ಯಾನಿಸುತ ಇಹರು

ತಿರುಪತಿ ಮಾರ್ಗ ನರಸಿಂಹ ತೀರ್ಥದಲಿ 23

ಪುರುಷೋತ್ತಮರ ಸುತ ಬ್ರಹ್ಮಣ್ಯರ ಕುವರ

ಶ್ರೀಕೃಷ್ಣ ಪ್ರಿಯತರ ವ್ಯಾಸಯತಿರಾಜ

ಸೂರಿಕುಲ ಶಿರೋರತ್ನ ಶ್ರೀಪಾದರಾಜರಲಿ

ಭಾರಿ ವಿದ್ಯೆ ಕಲಿತು ಪ್ರಖ್ಯಾತರಾದರು 24

ಹರಿರೂಪ ಗುಣಕ್ರಿಯ ಮಹಿಮೆಗಳ ಚೆನ್ನಾಗಿ

ಪರಿಪರಿ ಸುಸ್ವರ ರಾಗದಲಿ ಕೀರ್ತನೆ

ಸಂರಚಿಸಿ ಪಂಡಿತರು ಪಾಮರರು ಸರ್ವರಿಗು

ವರ ಸಾಧು ತತ್ವ ಬೋಧಿಸಿಹರು ದಾಸರು 25

ವಾರಿಜಾಸನ ಪಿತನು ಪೂರ್ಣ ಪ್ರಜ್ಞರ ಹೃತ್‍ಸ್ಥ

ಶಿರಿ ಪ್ರಸನ್ನ ಶ್ರೀನಿವಾಸನಿಗೆ ಪ್ರಿಯತರರು

ಪುರಂದರ ವಿಜಯ ಗೋಪಾಲದಾಸಾರ್ಯರ

ಚರಣರತ ಜಗನ್ನಾಥ ದಾಸಾರ್ಯ ಶರಣು 26

- ಇತಿ ಸಪ್ತಮ ಕೀರ್ತನೆ ಸಂಪೂರ್ಣಂ -

***

ಶ್ರೀ ರಮಣಿ ಕರಕಮಲ ಪೂಜಿತ ಪದಾಂಬೋಜ

ಸರಸಿಜಾಸನ ಶಿವಾದ್ಯಮರ ಜನವಿನುತ

ಉರುಗುಣಾರ್ಣವ ಜಗಜ್ಜನ್ಮಾದಿಕರ್ತ ನರ-

ಹರಿಗೆ ಪ್ರಿಯ ಜಗನ್ನಾಥದಾಸಾರ್ಯ ಶರಣು ಪ.


ಹಂಸನಾಮಕ ಪರಂಬ್ರಹ್ಮ ವಿಧಿಸನಕಾದಿ

ವಂಶಜ ಗುರುಗಳಲಿ ಜಗದೇಕ ಗುರುವು

ದಶಪ್ರಮತಿ ಈ ಮಧ್ವ ಮುನಿಯ ಪೀಳಿಗೆ ಜಾತ

ವ್ಯಾಸಮುನಿ ಯೋಗಿವರ್ಯರಿಗೆ ಆ ನಮಿಪೆ 1

ವ್ಯಾಸರಾಯರ ಮುಖ ಕಮಲದಿಂದುಪದೇಶ

ದಾಸತ್ವ ಹೊಂದಿದರು ಪುರಂದರದಾಸಾರ್ಯ

ದಾಸಶ್ರೇಷ್ಠರು ದಯಾನಿಧಿಯು ಈ ಪುರಂದರ

ದಾಸಾರ್ಯರೇ ನಾರದರ ಅವತಾರ 2

ಪುರಂದರಾರ್ಯರ ಹಸ್ತ ಕಂಜ ಸಂಜಾತರು

ಧೀರ ಭೃಗು ಅವತಾರ ವಿಜಯದಾಸಾರ್ಯ

ಹರಿದಾಸವರ ವಿಜಯದಾಸರ ಶಿಷ್ಯರು

ಸೂರಿಸುರವರ್ಯ ಗೋಪಾಲ ದಾಸಾರ್ಯ 3

ವಿಶ್ವೋಪಾಸಕರು ವರಗಣೇಶಾಂಶರು

ಈಶಾನುಗ್ರಹಿ ಗೋಪಾಲ ದಾಸಾರ್ಯ

ಬೇಸರವಿಲ್ಲದೆ ಸ್ಮರಿಪ ಸಜ್ಜನರ ಪಾಲಿಪರು

ದಾಸತ್ವ ಜಗನ್ನಾಥದಾಸರಿಗಿತ್ತವರು 4

ಸೂರಿಕುಲತಿಲಕನು ಜಗನ್ನಾಥ ದಾಸಾರ್ಯ

ಈರೆರಡು ಮುಖ್ಯ ಜನ್ಮವ ಕೊಂಡ ಹಿಂದೆ

ಗುರುಯುಕ್ ಪುರಂದರಾರ್ಯರ ವತ್ಸ ಗುರುರಾಯ ಸೇವಾರತ

ಮದ್ರದೇಶಾಧಿಪ ಈ ರೀತಿ ಮೂರು 5

ಮಾರೀಚ ದಿತಿ ಪೌತ್ರ ಮೊದಲನೆಯದಲ್ಲಿ

ಧೀರ ಪ್ರಹ್ಲಾದನಿಗೆ ಭ್ರಾತ ಸಂಹ್ಲಾದ

ಹರಿ ಅಧೋಕ್ಷಜನ್ನೊಲಿಸಿ ಕೊಂಬ ಮಾರ್ಗವ ಅರಿತ

ನಾರದಾನುಗ್ರಹಿಯು ಉಪದೇಶ ಕೇಳಿ 6

ಹರಿಯ ಸೇವಿಸುವುದಕೆ ಶಿಷ್ಯರುದ್ಧಾರಕ್ಕೆ

ಪ್ರಾರಬ್ಧ ಕರ್ಮವು ತೇದು ಹೋಗಲಿಕೆ

ಧರೆಯಲ್ಲಿ ಪುನರ್ಜನ್ಮ ಕೊಂಡನು ಬ್ಯಾಗವಟ್ಟ

ನರಸಿಂಹ ದಾಸರ ಮಗನೆನಿಸಿಕೊಂಡು 7

ಸೂರಿಕುಲ ಶಿರೋಮಣಿ ವರದೇಂದ್ರ ಯತಿವರರು

ಶ್ರೀರಾಘವೇಂದ್ರರ ಸ್ಮರಿಪುದಿವರಲ್ಲಿ

ಭಾರಿಪಂಡಿತ ಶ್ರೀನಿವಾಸ ಇವರಲ್ಲೋದಿ

ಪೌರ ವಿದ್ಯಾರ್ಥಿಗಳಿಗೆ ಪಾಠ ಪೇಳ್ದ 9

ಗರುವಕೊಳಗಾಗಿ ಈ ಶ್ರೀನಿವಾಸಾಚಾರ್ಯ

ಕರುಣಾಶಾಲಿಗಳು ವಿಜಯದಾಸರನ್ನ

ಕ್ಷುದ್ರ ಮಾತುಗಳಾಡಿ ಸ್ವೋತ್ತಮಾಪರಾಧದಿಂ

ಘೋರವ್ಯಾಧಿ ಕೊಂಡು ಕುಗ್ಗಿದನು ತೀವ್ರ 10

ಪರಿಪರಿ ಔಷಧೋಪಚಾರಗಳು ಸೋತು

ಹರಿಗುರು ಕ್ಷೇತ್ರಾಟನ ಸೇವಾದಿಗಳು

ಹರಿವಾಯುಸ್ತುತಿ ಕ್ಷೀರ ಅಭಿಷೇಕಫಲದಿಂ

ಅರಿತನು ಅಪರಾಧ ಕ್ಷಮೆ ಬೇಡೆ ಹೊರಟ 11

ತ್ವರಿತದಲಿ ವಿಜಯಾರ್ಯರಲ್ಲಿ ಶರಣಾಗಿ

ಕರುಣದಿ ಕ್ಷಮಿಸಿ ಉದ್ಧರಿಸಬೇಕೆಂದ

ಕರುಣಿಸಮ ಚಿತ್ತರು ಶರಣನಿಗೆ ಹೇಳಿದರು

ಗುರುಗಳು ಗೋಪಾಲದಾಸರ ಕಾಣೆಂದು 12

ತನ್ನಲ್ಲಿ ಗುರುಗಳು ಕಳುಹಿಸಿ ಬಂದಿಹನು

ದೀನನು ನಿಜ ಶರಣಾಗಿಹನು ಎಂದು

ಘನಮೂಮಂತ್ರ ಸಹ ಧನ್ವಂತರಿ ಜಪಿಸಿ

ಧನ್ವಂತರಿಗೆ ಬಿನ್ನೈಸಿದರು ದಾಸರು 13

ವಿಜಯ ಗೋಪಾಲ ವೆಂಕಟ ಜಗನ್ನಾಥನ್ನ

ಪೂಜಿಸಿ ನೈವೇದ್ಯಾನ್ನ ಜೋಳದರೊಟ್ಟಿ

ಭುಜಿಪುದಕೆ ಕೊಡುತ ಹರಿಗುರುಗಳ ಸ್ಮರಿಸು

ನಿಜ ಭಕ್ತಾಯುಷ್ಪ್ರದ ಸತ್ಪತಿ ಎಂದು 14

ದ್ರವ ಮಾತ್ರ ಕೊಂಬ ಆ ರೋಗಿ ತಿಂದನು ರೊಟ್ಟಿ

ದ್ರಾವಿಕ ಆಯಿತು ರೋಗ ದಿನ ದಿನದಿ

ದೈವಾನುಗ್ರಹವಾಯ್ತು ಗುರು ಅನುಗ್ರಹದಿಂದ

ಶ್ರೀ ವೆಂಕಟ ಶೈಲಾಧಿಪನು ಒಲಿದ 15

ರೋಗ ನಿವೃತ್ತ ಆಚಾರ್ಯ ದಾಸರ ಸಹ

ಪೋಗಿ ವೆಂಕಟಗಿರಿಯಲ್ಲಿ ಶ್ರೀನಿಧಿಗೆ

ಭಕುತಿಯಿಂ ಸನ್ನಮಿಸಿ ಮಲಗೆ ನಿತ್ರಾಣದಲಿ

ಬೇಗ ಗಜವರದ ಹರಿ ಬಂದು ತಾ ಪೊರೆದ 16

ಶ್ರೀನಿಧಿಃ ಸರ್ವ ಭೂತಾನಾಂ ಭಯಕೃದ್ಭಯನಾ

ಶನನು ವಿಜಯಾರ್ಯರ ರೂಪದಲಿ ಪೇಳೆ

ದಾನ ಎರೆದರು ಗೋಪಾಲ ದಾಸಾರ್ಯರು

ತನ್ನ ಆಯುಷ್ಯದಲಿ ನಲವತ್ತು ವರ್ಷ 17

ರೊಟ್ಟಿ ಕೊಟ್ಟಾಗಲೇ ಗುರು ಪ್ರೇರಣೆಯಂತೆ

ಕೊಟ್ಟಿದ್ದರು ಆಯುಷ್ಯ ಆಚಾರ್ಯಗೆ

ದಿಟವಾಗಿ ಜಗಕೆ ತಿಳಿಸೆ ವೆಂಕಟ ಈಗ

ಕೊಡಿಸಿದನು ಆಯುರ್ದಾನದ ಧಾರೆ 18

ಘನ್ನ ಹರಿಗುರು ಭಕ್ತಿ ಶಿಷ್ಯ ವಾತ್ಸಲ್ಯವ

ಏನೆಂಬೆ ನಮ್ಮ ಗುರು ಗೋಪಾಲ ದಾಸರ

ದಾನಕ್ಕೆ ಎಣೆಯುಂಟೆ ಎಲ್ಲಾದರೂ ಯಾರೂ

ತನ್ನ ಆಯುಷ್ಯವ ಕೊಡುವರೆ ಅನ್ಯರಿಗೆ 19

ಏನೆಂಬೆ ಅನಿಮಿತ್ತ ಬಂಧು ವೆಂಕಟಪತಿಯ

ದೀನ ದಯಾಳತ್ವ ಆಚಾರ್ಯನಿಗೆ

ತಾನೇವೆ ಗೋಪಾಲದಾಸರ ರೂಪದಿತಂದು

ಅನ್ನ ಕೊಟ್ಟ ಆಯುಷ್ಯವ ಕೊಡಿಸಿದವ 20

ಶ್ರೀನಿವಾಸಾಚಾರ್ಯ ಹರಿತನ್ನ ದಾಸರಿಗೆ

ತಾನೆ ಬಂದೊಲಿವುದು ನೇರಲ್ಲಿ ಕಂಡು

ತನ್ನನ್ನು ಹರಿದಾಸರಲಿ ಓರ್ವ ಮಾಡೆಂದು

ವಿನಯದಿಂ ಗೋಪಾಲದಾಸರ ಬೇಡಿದನು 21

ವಿಜಯ ಗೋಪಾಲನ್ನ ವಿಜಯ ದಾಸರ ಸ್ಮರಿಸಿ

ನಿಜ ಶಿಷ್ಯಾಚಾರ್ಯನಿಗೆ ಉಪದೇಶಿಸಿದರು

ಅಜ ಪದಾರ್ಹನು ಮಧ್ವನಲ್ಲಿ ಜ್ವಲಿಸುವಶ್ರೀತ

ಶ್ರೀ ಜಗನ್ನಾಥ ಎಂದು ಧ್ಯಾನಿಸು ಎಂದು 22

ಪೋಗಿ ಪಂಢÀರಪುರ ಭೀಮರತಿಯಲ್ಲಿ

ಸ್ವಗುರು ಆದಿ ಹನ್ನೆರಡು ಸ್ಮರಿಸು

ಬಾಗು ಮಧ್ವಾಂತಸ್ಥ ಹರಿಗೆ ಮಜ್ಜನ ಮಾಡು

ಜಗನ್ನಾಥ ಹರಿತೋರ್ವ ಪೊಳೆವ ಹರಿನಾಮ 23

ಝಗಿ ಝಗಿಪ ತೇಜಸ್ಸು ಶಿರೋಪರಿ ಕಂಡನು

ಮೂಗಿನೊಂದೊಂದಡಿ ಶಿರದ ಮೇಲೆ

“ಜಗನ್ನಾಥ ವಿಠಲ” ನಾಮ ಪ್ರಜ್ವಲಿಸಿತು

ಜಗನ್ನಾಥ ತನ್ನಿಚ್ಛೆಯಿಂದಲೇ ತೋರ್ದ 25

ಜಡಜ ಭವಪಿತ ಡರಕ ಜಗನ್ನಾಥ ವಿಠಲನ

ನೋಡಿದರು ಜಗನ್ನಾಥದಾಸ ಆಚಾರ್ಯ

ಪೊಡವಿಗೊಡೆಯನು ವಿಜಯ ಗೋಪಾಲ ಜಗನ್ನಾಥ

ವಿಠ್ಠಲ ಪ್ರಸನ್ನನಾದನು ಶ್ರೀನಿವಾಸ 26

ವೆಂಕಟಗಿರಿನಾಥ ಪಂಢರಿ ಜಗನ್ನಾಥ

ಅಕಳಂಕ ಗುಣನಿಧಿ ವಿಠಲಪ್ರಸನ್ನ

ನಾಗಿದಾಸರು ಮೂಲ ಮಂತ್ರಾದಿಗಳಿಂದ

ಏಕಾಗ್ರ ಚಿತ್ತದಲಿ ಭಜಿಸಿ ಸ್ತುತಿಸಿದರು 27

ಪುರಂದರ ದಾಸಾರ್ಯರ ವಂದಿಸಿ ಅವರಿಂದ

ವಿರಚಿತ ಶ್ರೀಮಧ್ವ ರಮಣ ನಿನ್ನ

ಭಾರಿತತ್ವವ ಕೊಂಡ ಕೀರ್ತನೆ ಹಾಡುತ್ತ

ಶ್ರೀಕರ ವಿಠಲನ ಮಂದಿರದೊಳು ಪೊಕ್ಕರು 28

ವಿಶ್ವವಿಷ್ಣು ವಷಟ್ಕಾರಾದಿ ನಾಮನು

ದಾಸಪ್ರಿಯಜನ ವಿಠ್ಠಲ ರುಕ್ಮಿಣಿಯ

ಕೇಶವಾದಿಪಾದಾಂತ ಸಂಸ್ತುತಿಸಿ ನಮಿಸಿದರು

ದಾಸರು ಶರಣು ತಾನೆನ್ನುತ ಮುದದಿ 29

ಏನೆಂಬೆ ವಿಠ್ಠಲನ ರುಕ್ಮಿಣಿಯ ವಾತ್ಸಲ್ಯ

ಅನುಪಮ ಔತಣ ದಾಸರಿಗೆ ಮಾಡಿ

ಅನುತ್ತಮ ಪ್ರಸಾದ ಮಾಲಾದಿಗಳ ಕೊಟ್ಟು

ಅನುಗ್ರಹಿಸಿ ಕಳಿಸಿದರು ದಾಸರ ಸ್ವಪುರಕೆ30

ಮಳಖೇಡ ಕೃಷ್ಣ ಮಂತ್ರಾಲಯಕೆ ಪೋಗಿ

ಅಲ್ಲಿರುವ ಗುರು ದೇವತಾ ನಮನ ಮಾಡಿ

ಗೋಪಾಲದಾಸ ಉದ್ಧಾರಕರ ಬಳಿಬಂದು

ಕಾಲಿಗೆರಗಿದರು ಕೃತಕೃತ್ಯ ಭಾವದಲಿ 31

ವಾಸುದೇವಗೆ ಪ್ರಿಯ ಐಜಿ ಮಹಾತ್ಮರು

ವ್ಯಾಸತತ್ವಜ್ಞ ಹರಿದಾಸ ಯತಿವರರು

ಸಸೋದರ ಪರಿವಾರ ಗೋಪಾಲದಾಸಾರ್ಯರ

ಬಿಸಜಾಂಘ್ರಿ ಸನ್ನಮಸಿ ಹೊರಟರಲ್ಲಿಂದ 32

ಚೀಕಲ ಪರಿವಿಯಲಿ ಏಕಾತ್ಮ ನರಹರಿಯ

ಅಕಳಂಕ ದೃಢಭಕ್ತಿಯಿಂದ ಪೂಜಿಸುವ

ಆ ಕರುಣಿ ವಿಜಯದಾಸರ ಕಂಡು ನಮಿಸಿ

ಚಿಕ್ಕಂದಿ ಸ್ವಪುರ ಮಾನವಿಯಯೈದಿದರು 33

ಮನುತೀರ್ಥ ತಟದಲ್ಲಿ ಮೀಸಲಾಗಿವರಿಗೆ

ಅನ್ಯರಾಕ್ರಮಿಸದೇ ರಕ್ಷಿಸಲ್ಪಟ್ಟ

ಮನೆಯಲ್ಲಿ ನರಹರಿಯ ಹನುಮನ್ನ ಪೂಜಿಸುತ

ದಿನದಿನದಿ ಪ್ರವಚನ ಭಜನೆ ಮಾಡಿದರ 34

ವಾರಿಜಾಸನ ಪಿತನು ಪೂರ್ಣಪ್ರಜ್ಞರ ಹೃತ್‍ಸ್ಥ

ಶಿರಿಪ್ರಸನ್ನ ಶ್ರೀನಿವಾಸನಿಗೆ ಪ್ರಿಯತರರು

ಪುರಂದರ ವಿಜಯ ಗೋಪಾಲದಾಸಾರ್ಯರ

ಚರಣರತ ಜಗನ್ನಾಥದಾಸಾರ್ಯ ಶರಣು 35

- ಅಷ್ಟಮ ಕೀರ್ತನೆ ಸಂಪೂರ್ಣಂ -

***

ಶ್ರೀ ರಮಣಿ ಕರಕಮಲ ಪೂಜಿತ ಪದಾಂಬೋಜ

ಸರಸಿಜಾಸನ ಶಿವಾದ್ಮಮರ ಜನವಿನುತ

ಉರುಗುಣಾರ್ಣವ ಜಗಜ್ಜನ್ಮಾದಿಕರ್ತ ನರ-

ಹರಿಗೆ ಪ್ರಿಯ ಜಗನ್ನಾಥದಾಸಾರ್ಯ ಶರಣು ಪ.


ಪ್ರಾಣೇಶ ಶ್ರೀಶವಿಠ್ಠಲ ದಾಸರುಗಳಿಗೆ

ಇನ್ನು ಅನೇಕರಿಗೆ ಶಿಷ್ಯತ್ವ ಇತ್ತು

ಪುನಃ ಶಿಷ್ಯರ ಸಹ ಕ್ಷೇತ್ರಾಟನ ಮಾಡಿ

ಸ್ವರ್ಣಪುರಿಯೈದಿದರು ಸತ್ಯಬೋಧರಲಿ 1

ಕರ್ಜಗೀ ದಾಸಪ್ಪಗೆ ಶ್ರೀದಾಂಕಿತ ಕೊಟ್ಟು

ಶ್ರೀಜಗನ್ನಾಥದಾಸರು ಮುಂದು ಹೊರಟು

ಕರ್ಜಗೀ ಸಮೀಪದಲಿ ವರದಾತೀರದಲಿ

ತ್ರಿಜಗಖ್ಯಾತ ಧೀರೇಂದ್ರರ ನಮಿಸಿದರು 2

ಹರಿಹರ ಕ್ಷೇತ್ರವು ಮದ್ದೂರು ಅಬ್ಬೂರು

ಪುರುಷೋತ್ತಮ ಬ್ರಹ್ಮಣ್ಯರ ವಂದಿಸಿ

ಶ್ರೀರಂಗಪಟ್ಟಣದಿ ರಂಗನ್ನ ಸೇವಿಸಿ

ಗರಳುಂಡೇಶ್ವರನÀ ದರ್ಶನ ಮಾಡಿದರು 4

ಮಂಡಲೇಶ್ವರರೇನು ರಾಜಪ್ರಮುಖರು ಏನು

ಪಂಡಿತೋತ್ತಮರೇನು ದಿವಾನುಗಳು ಏನು

ಅಂಡಕೋಟಿ ನಾಯಕ ಹರಿಯ ದಾಸರಿವರನ್ನ

ಕೊಂಡಾಡಿ ಮರ್ಯಾದೆ ಮಾಡಿದರು ಎಲ್ಲೂ 5

ಉಡುಗೊರೆಗಳು ಕನಕರತ್ನಾಭರಣಗಳು

ನಡೆಯಬಾರದು ಎಂದು ಪಲ್ಲಕ್ಕಿ ವಾಹನವು

ಈಡುಂಟೆ ಜಗನ್ನಾಥದಾಸರಿಗೆ ಮೈಸೂರು

ಮಾಡಿದ ಮರ್ಯಾದೆ ರಂಗನ ಅನುಗ್ರಹವು 6

ಮೈಸೂರು ಕೊಂಗು ಕೇರಳ ಚೋಳ ಪಾಂಡ್ಯ

ದೇಶಗಳಿಗೆ ಪೋಗಿ ಉಡುಪಿ ಕಂಚಿ

ಶ್ರೀ ಶ್ರೀನಿವಾಸನ ಕ್ಷೇತ್ರ ಘಟಿಕಾಚಲವು

ಈಶಾನುಗ್ರಹವು ಮರ್ಯಾದೆ ಎಲ್ಲೆಲ್ಲೂ 7

ಜಯಜಯ ಜಗತ್ರಾಣ ಮಧ್ವ ನಾಮಾಭಿದ

ಪದ್ಯಾವಳಿಯು ಶ್ರೀಪಾದರಾಜರದು

ದಿವ್ಯ ಫಲಶ್ರುತಿ ಇದಕೆ ಜಗನ್ನಾಥದಾಸ

ಆರ್ಯರು ಬರೆದಿಹರು ಸಜ್ಜನರು ಪಠಿಸಿ 8

ತೀರ್ಥಾಭಿಮಾನಿಗಳ ತದಂತಸ್ಥ ಹರಿರೂಪ

ಕ್ಷೇತ್ರ ವಾರ್ತೆಗಳನ್ನು ತತ್ವ ಬೋಧಿಸುವ

ಕೀರ್ತನೆಗಳ ಮಾಡಿ ಹರಿಗರ್ಪಿಸಿದರು

ಓದಿದರೆ ಕೇಳಿದರೆ ಇಹಪರದಿ ಸುಖವು 9

ಹರಿವಾಯು ಸುರವೃಂದ ಗುರುವೃಂದ ಪ್ರೀತಿಕರ

ಭಾರಿಶುಭಫಲಪ್ರದವು ತತ್ವ ಸುವ್ವಾಲೆ

ಹರಿಕಥಾಮೃತಸಾರ ವರ್ಣಿಸಲಶಕ್ಯವು

ಉರುಮಹಾಸೌಭಾಗ್ಯಾಕಾಂಕ್ಷಿಗಳು ಓದಿ 10

ಹರಿಸಮೀರರು ತಾವೇ ಶ್ರೀಪಾದರಾಜರಲು

ಶಿರಿವ್ಯಾಸರಾಜ ಶ್ರೀವಾದಿರಾಜರಲು

ಪುರುಂದರದಾಸರಲು ನಿಂತು ಸ್ವಪ್ನದಿ ಪ್ರೇರಿಸೆ

ಹರಿಕಥಾಮೃತಸಾರ ಬರೆದ ದಾಸಾರ್ಯ 11

ಪ್ರಾರಂಭ ಹರಿಕಥಾಮೃತಸಾರ ಸ್ವಾದಿಯಲಿ

ಶಿರಿವ್ಯಾಸವಾದಿರಾಜ ವೇದವೇದ್ಯರ ಮುಂದೆ

ವರಚಿಪ್ಪಗಿರಿಯಲ್ಲಿ ವಿಜಯದಾಸರ ಮತ್ತು

ಶಿರಿಕೃಷ್ಣ ಸನ್ನಿಧಿಯಲಿ ಸುಶುಭಮಂಗಳವು 12

ಗುರು ಶ್ರೀಶವಿಠಲ ದಾಸಾರ್ಯರು ಕುಂಟೋಜಿ

ರಾಯರೆಂಬುವ ಸೂರಿಕುಲ ತಿಲಕಾಗ್ರಣಿಯು

ಹರಿಕಥಾಮೃತಸಾರ ಮಂಗಳವ ಚಿಪ್ಪ

ಗಿರಿಯಲ್ಲಿ ಮಾಡಿಹರು ನಮೋ ನಮೋ ಇವರ್ಗೆ 13

ಹರಿಕಥಾಮೃತಸಾರ ಫಲಶ್ರುತಿ ಅನೇಕವು

ಸೂರಿವರ್ಯರು ಹರಿದಾಸರು ಹಾಡಿಹರು

ಭರಿತ ರಚನೆಗಳ ಗ್ರಂಥ ಪದ್ಯಂಗಳ

ಬರೆದಿಹರು ಜಗನ್ನಾಥದಾಸಾರ್ಯಸೂರಿ 14

ಶ್ರೀ ದಪ್ರಾಣೇಶಾದಿ ದಾಸಶಿಷ್ಯರ ಕೂಡಿ

ಮೋದಮಯ ನರಹರಿ ಹನುಮಗುರುವೃಂದ

ಆರಾಧಿಸಿ ಬರುವವರ ಉದ್ಧರಿಸುತ್ತ

ಮುದದಿಂ ಕುಳಿತರು ಮಾನವೀಯಲ್ಲಿ 15

ವರುಷ ಎಂಭತ್ತೆರಡು ತಿಂಗಳು ಒಂದು

ಆರುದಿನ ಮೂವತ್ತೇಳು ಘಟಿಕ ಅರ್ಧ

ಧರೆಯಲ್ಲಿ ಹರಿ ಇಚ್ಛಾ ಸೇವಾರತರಾಗಿ

ತೆರಳಿದರು ಜಗನ್ನಾಥದಾಸ ಹರಿಪುರಕೆ 16

ಶಾಲಿಶಕ ಹದಿನೇಳು ನೂರಮೂವತ್ತೊಂದು

ಶುಕ್ಲ ಸಂವತ್ಸರ ಭಾದ್ರಪದ ಶುದ್ಧ

ಮೂಲಾನಕ್ಷತ್ರ ರವಿವಾರ ನವಮಿಯಲ್ಲಿ

ಮಾಲೋಲ ಸಹ ಜ್ವಲಿಸುತ್ತ ತೆರಳಿದರು 17

ಅಮೃತ ಸೈಷಸೇತುಃ ನರಸಿಂಹ ಸ್ತಂಭದಲಿ

ಇರುತಿಹನು ಅಲ್ಲೊಂದು ಅಂಶದಿ ಇಹರು

ಶ್ರೀ ರಾಘವೇಂದ್ರ ವೃಂದಾವನ ಶ್ರೀ ಸತ್ಯ

ಬೋಧರ ಸಾನ್ನಿಧ್ಯ ಸ್ತಂಭದ ಮುಂದೆ 18

“ಜ” ಯೆನಲು ಜಯ ಸಂಸಾರ ಭಯಹರವು

“ಗ” ಯೆನಲು ಸರ್ವಪೀಡೆ ಪರಿಹಾರ

“ನ್ನಾ” ಯೆನ್ನೆ ಸರ್ವೋತ್ತಮಸ್ವಾಮಿ ಸುಖವೀವ

“ಥ” ಎನಲು ಅನ್ನಧನವಿತ್ತು ರಕ್ಷಿಸುವ 19

ಜಯಜಯತು ಶ್ರೀ ಹಂಸವಿಧಿ ಮಧ್ವ ವ್ಯಾಸಮುನಿ

ಜಯಜಯತು ಪುರಂದರ ವಿಜಯದಾಸಾರ್ಯ

ಜಯಜಯತು ಗೋಪಾಲದಾಸಾರ್ಯ ಜಯಜಯತು

ಜಯಜಗನ್ನಾಥ ದಾಸಾರ್ಯ ಜಯಜಯತು 20

ವಾರಿಜಾಸನ ಪಿತನು ಪೂರ್ಣಪ್ರಜ್ಞರ ಹೃತ್‍ಸ್ಥ

ಶಿರಿಪ್ರಸನ್ನ ಶ್ರೀನಿವಾಸನಿಗೆ ಪ್ರಿಯತರರು

ಪುರಂದರ ವಿಜಯ ಗೋಪಾಲದಾಸಾರ್ಯರ

ಚರಣರತ ಜಗನ್ನಾಥದಾಸಾರ್ಯ ಶರಣು 21

- ನವಮ ಕೀರ್ತನೆ ಸಂಪೂರ್ಣಂ -

***