ವೇದವ್ಯಾಸ ವಿಮಲಸುಗುಣಾವಾಸ
ವೇದಾವಾಸ ನೀ ನೀರದನೀಲಾಭಾಸ ll ಪ ll
ಬದರಬಿಂಬಾಸ್ಯ ಸರಸ್ವತೀವಾಸ್ಯ
ಸದಾ ಕರುಣಿಸು ಅಭಯ-ಬೋಧವ ll ಅ ಪ ll
ವಾಸವೀಹೃದಯನಂದನ ಶುಭಾಂಗ
ವಾಸವಿಯ ಅಸ್ತ್ರಸಂಭ್ರಮದ ಬೀಜ
ಅಸಮಸಾಹಸ ವಿಷಮ ವಿಹಾರ
ದುಸ್ಸಮಯಧ್ವಾಂತದಿವಾಕರ ಜಯ ll 1 ll
ಕುರುಕುಲತಂತುವರ್ಧನ ಕಾಲಕ
ಗುರುಕುಲ ಜ್ಞಾನ ಸಂತಾನ ಪಾಲಕ
ಸುರಮುನಿನರನಿಕರಪ್ರಣತ
ಅರಿ-ದರಾಂಕಿತ ಕರತಾಮರಸ ll 2 ll
ವೇದವ್ಯಾಸ ನೀ ಭೇದಪದನ್ಯಾಸದಿ
'ಭೇದಾಭಾಸ' ಖಾತ್ರಿ ಮಾಡಿದೆ ಸೂತ್ರದಲಿ
ವೇದವಿನೋದದಿ ತ್ವತ್ತೋಷಣವನು
ಆದರದಿ ಮಾಡಿಸು ಬಾದರಾಯಣ ll 3 ll
ನಿಜಕೀಟದಲಿ ಬೀರಿದೆ ಕಟಾಕ್ಷ
ರಾಜವಂದ್ಯಪಾದರಾಜನಾಗಿಸಿದೆ
ನಿಜದ್ವಿಜಕಾಯದಲಿ ಮೋಕ್ಷವಿತ್ತೆ
ನಿಜವೀರ್ಯ ತೋರಿದ ನಿನಗಾರು ಎಣೆ ll 4 ll
ಜಯ ಜಯಕರ್ತ ದೇವಶಿಖಾಮಣೆ
ಜಯ ಜ್ಞಾನನೇತ್ರದಿ ಪುರಾಣಾರ್ಕಕರ್ತ
ಜಯ ಸೂತ್ರಕರ್ತ ನಿಗಮವ್ಯಾಕರ್ತ
ಜಯ ವಿದ್ಯೇಶವಿಟ್ಠಲ ಸರ್ವಕರ್ತ ll 5 ll
***