Audio by Mrs. Nandini Sripad
ಶ್ರೀ ಕಲ್ಲೂರು ಸುಬ್ಬಣ್ಣಾಚಾರ್ಯರ ಕೃತಿ
(ವ್ಯಾಸವಿಟ್ಠಲ ಅಂಕಿತ)
ರಾಗ ಶಂಕರಾಭರಣ ರೂಪಕತಾಳ
ಇಂದಿರಾ ಪಾಲಿಸು ಎನ್ನ ಇಂದಿರಾ ॥ ಪ ॥
ಇಂದಿರಾದೇವಿಯೆ ನಿನ್ನ । ಪಾದ
ಪೊಂದಿದೆ ಸಲಹಬೇಕೆನ್ನ ॥ ಆಹಾ ॥
ಕಂದರ್ಪ ಇಂದ್ರ ಫಣೀಂದ್ರ ಗರುಡ ಕಂದು
ಕಂಧರ ಬ್ರಹ್ಮಾದಿವಂದ್ಯಳೆ ಪಾಲಿಸು ॥ ಅ ಪ ॥
ಶ್ರೀ ಮಾಯೆ ಜಯ ಕೃತಿ ಶಾಂತಿ । ದುರ್ಗೆ
ಭೂಮಿ ಶ್ರೀದೇವಿ ಜಯಂತಿ । ಲಕ್ಷ್ಮೀ
ರಮೆ ದಕ್ಷಿಣೆ ಗುಣವಂತಿ । ಸತ್ಯ
ಭಾಮೆ ರುಗ್ಮಿಣಿ ಮಹಾಕಾಂತಿ ॥ ಆಹಾ ॥
ಈ ಮಹಾನಂತ ರೂಪ ನಾಮಗಳುಳ್ಳ
ಕೋಮಲಗಾತ್ರಿಯೆ ಕಾಮಜನನಿ ಕಾಯೆ ॥ 1 ॥
ಶ್ರೀಭಾಗ ಮಹಾ ಪ್ರಳಯದಲ್ಲಿ । ಪದ್ಮ
ನಾಭಾಗೆ ಬಹು ಭಕ್ತಿಯಲ್ಲಿ । ದಿವ್ಯ
ಆಭರಣಗಳಾಕಾರದಲ್ಲಿ । ಮಿಕ್ಕ
ವೈಭವನೇಕ ರೂಪಾದಲ್ಲಿ ॥ ಆಹಾ ॥
ಸ್ವಾಭಿಮಾನದಿ ಬಹು ಶೋಭನ ಪೂಜೆಯ
ಲಾಭಗಳೈದಿದ ಶೋಭನವಂತಳೆ ॥ 2 ॥
ದೇಶಕಾಲಾದಿಗಳಲ್ಲಿ । ಜೀವ
ರಾಶಿ ವೇದಾಕ್ಷರದಲ್ಲಿ । ಇದ್ದು
ವಾಸುದೇವನ ಬಳಿಯಲ್ಲಿ । ಸರಿ
ಸೂಸಿ ವ್ಯಾಪ್ತಿ ಸಮದಲ್ಲಿ ॥ ಆಹಾ ॥
ಲೇಸಾಗಿ ಒಪ್ಪುತ್ತ ಈಶ ಕೋಟಿಯೊಳು
ವಾಸಾಳೆ ಎನ್ನಭಿಲಾಷೆ ಸಲ್ಲಿಸಬೇಕು ॥ 3 ॥
ಆನಾದಿಯಿಂದಲಿ ಬಂದ । ಮೋಹಾ
ಜ್ಞಾನ ಕಾಮ ಕರ್ಮದಿಂದ । ಹೇತು
ನಾನಾ ಜನ್ಮದಿ ಬಹು ನೊಂದ । ದ್ದೆಲ್ಲ
ಏನ ಪೇಳಲಿ ಭವಬಂಧಾ ॥ ಆಹಾ ॥
ನೀನೆ ಕಳೆದು ದಿವ್ಯ ಜ್ಞಾನ ಭಕುತಿಯಿತ್ತು
ಪ್ರಾಣಪತಿಯ ಪಾದವನ್ನು ತೋರಿಸಬೇಕು ॥ 4 ॥
ನಿತ್ಯ ಭಾಗ್ಯವು ನಿನಗೊಂದೆ । ಅಲ್ಲ
ರತ್ನಾಕರನು ನಿನ್ನ ತಂದೆ । ತಾಯಿ
ರತ್ನಗರ್ಭಳು ಕೇಳು ಮುಂದೆ । ಪತಿ
ಗತ್ಯಂತ ಪ್ರಿಯಳಾದೆ ಅಂದೆ ॥ ಆಹಾ ॥
ಸತ್ಯಬೋಧರು ಮಾಳ್ಪ ಅತ್ಯಂತ ಪೂಜೆಯಿಂ
ಯುಕ್ತ ಶಿರಿಯೆ ನಿನಗೆತ್ತ ಕತ್ತಲು ಕಾಣೆ ॥ 5 ॥
ಲೋಕಜನನಿಯು ಎಂದು ನಿನ್ನ । ಕೀರ್ತಿ
ಸಾಕಲ್ಯವಾಗಿದೆ ಘನ್ನ । ಎನ್ನ
ಸಾಕಲಾರದೆ ಬಿಡಲಿನ್ನ । ಮುಂದೆ
ಯಾಕೆ ಭಜಿಸುವುದು ನಿನ್ನ ॥ ಆಹಾ ॥
ಸಾಕಾರವಾಗಿನ್ನು ಬೇಕಾದ ವರಗಳ
ನೀ ಕರುಣಿಸಿ ಎನ್ನ ಜೋಕೆ ಮಾಡಲಿಬೇಕು ॥ 6 ॥
ಆವ ಜನ್ಮದ ಪುಣ್ಯ ಫಲದಿ । ನಿನ್ನ
ಸೇವೆ ದೊರಕಿತೊ ಈ ಕ್ಷಣದಿ । ಬಹು
ಪಾವನನಾದೆ ಈ ದಿನದಿ । ಎನ
ಗೀವ ಭವ್ಯ ಕೇಳು ಮನದಿ ॥ ಆಹಾ ॥
ಶ್ರೀವ್ಯಾಸವಿಠಲನ್ನ ಸೇವಿಪ ಯತಿಗಳ ಸ -
ಹಾವಾಸವನೆ ಇತ್ತು ಭಾವಶುದ್ಧನ ಮಾಡು ॥ 7 ॥
*******