ಶ್ರೀ ಕಂಚಿ ವರದರಾಜ ಸ್ತೋತ್ರ
ವರದಾ ನೀ ಪೊರೆಯೆಂದು ಕರೆಯಲಾಕ್ಷಣ ಬಂದು
ನೆರೆವೆ ಬಂದು ನೆರೆವೆ ಅಭೀಷ್ಟವ ಗರೆವೆ ll ಪ ll
ನಿರುತ ನಿನ್ನಯ ಚರಣಶರಣರ
ಪೊರೆವೆ ಕಾರ್ಯ ಧುರಂಧರನೆ ಸಿರಿ ll ಅ ಪ ll
ಮಡುವಿನೊಳ್ ಮಕರಿ ಕಾಲ್ಪಿಡಿದು ಸೆಳೆಯೆ ಜವ-
ಜಡಿಯೆ ಜವಜಡಿಯೆ ತುತಿಸಿ ನಿನ್ನ ಕರೆಯೆ
ಮಡದಿಯೊಡನುಡಿಯದಲೆ ಸಂಗಡಿ-
ಗೆಡಬಲದವರ ಕಡೆಗೆ ನೋಡದೆ
ತಡೆಯದಲೆ ತಡಿಗೊದಗಿ ಕರಿಯ
ತೊಡರು ಬಿಡಿಸಿದೆ ಕಡುದಯಾನಿಧೆ ll 1 ll
ತೊಡೆಯಿಂದ ನಡೆಯೆಂದು ನುಡಿದು ಕೆಡಹೆ ಧ್ರುವ
ಮಿಡುಕೆ ಧ್ರುವಮಿಡುಕೆ ಕಂದನು ನಿನ್ನ ಹುಡುಕೆ
ಪೊಡವಿಯಡಿಯುಂಗುಟದಲೊತ್ತುತ
ದೃಢವ್ರತದಿ ತಪಜಡಿದುಮಾಡಲು
ತಡೆಯದಲೆ ನೀನೊಲಿದು ಶೀಘ್ರದಿ
ಕೆಡದಪದವಿಯನೊಡನೆ ನೀಡಿದೆ ll 2 ll
ಕಡುಬಾಧೆಬಡಿಸಿ ನಿನ್ನೊಡೆಯನೆಲ್ಲಿಹನೆಂದು
ನುಡಿಯೆ ಎಂದು ನುಡಿಯೆ ಕಂಬವ ತೋರಿ ಜಡಿಯೆ
ಸಿಡಿಲಿನಂದದಿ ಘುಡುಘುಡಿಸಿ ಕೆಂ-
ಗಿಡಿಗಳುಗುಳುತ ಹಿಡಿದು ಅಸುರನ
ಕೆಡಹಿ ಬಗೆದು ಒಡಲ ಭಂಗಿಸಿ
ದೃಢಭಕುತನಂ ಗಡನೆ ಉಳುಹಿದೆ ll 3 ll
ಮುಡಿ ಹಿಡಿದೆಳೆತಂದು ನಡುಸಭೆಯಲಿ ಉಟ್ಟ
ಉಡುಗೆ ಉಟ್ಟ ಉಡುಗೆ ಸೆಳೆಯೆ ಬಾಲೆನಡುಗೆ
ಒಡೆಯರೈವರ ದೃಢತಿಳಿದು ನಿ-
ನ್ನಡಿಗಳಿಗೆ ಮೊರೆಯಿಡಲು ಪಾರ್ಥರ
ಮಡದಿಗಕ್ಷಯ ಉಡುಗೆ ತೊಡಿಸಿದ
ಬಡವಬಲ್ಲಿದರೊಡೆಯ ಮಾನದ ll 4 ll
ಬಡತನದಲಿ ಭಂಗಬಡುತಲಿರಲು ವಿಪ್ರ-
ಮಡದಿ ವಿಪ್ರಮಡದಿ ಕಳುಹಲು ಬರೆ ದೃಢದಿ
ಮಡದಿರುಗ್ಮಿಣಿಯೊಡನೆ ಪಾರ್ವನ
ಅಡಿಗಳಿಗೆ ಪೊಡಮಡುತ ತಂದೊ-
ಪ್ಪಿಡಿಯ ಅವಲಿಯ ಕೊಡಲು ಭುಂಜಿಸಿ
ಕಡುಸಂಪದವ ಸಂಗಡಲೆ ನೀಡಿದೆ ll 5 ll
ಅಜಮಿಳವನದಲಂತ್ಯಜ ವಿವಸ್ತ್ರಳಕಂಡಂ-
ಗಜನ ಕಂಡಂಗಜನ ಬಾಣಕೆ ಸಿಲುಕಿ ಸ್ವಜನ
ಯಜನೆ ಭಜನೆಯ ತ್ಯಜಿಸಿ ಕುಪ್ರಜೆ
ಸೃಜಿಸೆ ದ್ವಿಜನಿಗೆ ಕುಜರೆಬರೆ ಭಾ-
ನುಜನ ಪ್ರಜೆಗಳಿಗಂಜಿ ನಿಜ ಆ-
ತ್ಮಜನ ಕರೆಯಲು ದ್ವಿಜನ ಸಲಹಿದೆ ll 6 ll
ಈ ಪರಿಯಲಿ ಬಲು ಆಪನ್ನ ಶರಣರ
ನೀ ಪೊರೆದೆ ಶರಣರ ಪೊರೆದೆ ಸುಕೀರ್ತಿಯ ಮೆರೆದೆ
ಪಾಪಿ ನಾ ಬಲು ಎನ್ನ ಅವಗುಣ
ರಾಪುಮಾಡದೆ ನೀ ಪೊರೆ ಜಗ-
ದ್ವ್ಯಾಪಿ ಗುರುಗೋಪಾಲವಿಟ್ಠಲ ದ-
ಯಾಪಯೋಭ್ಧಿಸುರಾಪಗಾಪಿತ ll 7 ll
***