Showing posts with label ಹರಿಮಾಡಿದಂತೆ gopala vittala ankita suladi ಶ್ರೀಹರಿ ಕರ್ತೃತ್ವ ಸುಳಾದಿ HARI MAADIDANTE SRIHARI KARTAVYA SULADI. Show all posts
Showing posts with label ಹರಿಮಾಡಿದಂತೆ gopala vittala ankita suladi ಶ್ರೀಹರಿ ಕರ್ತೃತ್ವ ಸುಳಾದಿ HARI MAADIDANTE SRIHARI KARTAVYA SULADI. Show all posts

Sunday 8 December 2019

ಹರಿಮಾಡಿದಂತೆ gopala vittala ankita suladi ಶ್ರೀಹರಿ ಕರ್ತೃತ್ವ ಸುಳಾದಿ HARI MAADIDANTE SRIHARI KARTAVYA SULADI




Audio by Mrs. Nandini Sripad

ಶ್ರೀ ಗೋಪಾಲದಾಸಾರ್ಯ ವಿರಚಿತ   ಶ್ರೀಹರಿ ಕರ್ತೃತ್ವ ಸುಳಾದಿ 

(ಸಕಲ ಕರ್ಮವಿಚಾರ ತಿಳಿದು ನೋಡಿ ಮಾಡು , ಅಂದರೆ ಶ್ರೀಹರಿ ಕರ್ತನೆಂದು ತಿಳಿದು ಫಲರಾಹಿತ್ಯನಾಗಿ ಮಾಡುವದು. ಶ್ರೀಹರಿಯಂಘ್ರಿ ವಿನಾ ಇನ್ನೊಂದು ಬೇಡಬಾರದು.) 

 ರಾಗ ಮಧ್ಯಮಾವತಿ 

 ಧ್ರುವತಾಳ 

ಹರಿ ಮಾಡಿದಂತೆ ಎಲ್ಲ ಮಾಡುವೆನಯ್ಯಾ ನಾನು
ಹರಿ ನೋಡಿಸಿದದೆಲ್ಲ ನೋಡುವೆನಯ್ಯಾ ನಾನು
ಹರಿ ಕೇಳಿಸಿದರಿನ್ನು ಕೇಳುವೆನಯ್ಯಾ ನಾನು
ಹರಿ ಉಂಡರಾಯಿತಿನ್ನು ಉಣುವೆನಯ್ಯಾ ನಾನು
ಹರಿ ನುಡಿಸಲಾಗಿನ್ನು ನುಡಿವೆನಯ್ಯಾ ನಾನು
ಹರಿ ಪಿಡಿದರೆ ನಾನು ಪಿಡಿವೆನಯ್ಯಾ ನಾನು
ಹರಿ ಕೊಡಿಸಿದಡೆ ಆನು ಕೊಡುವೆ ಏನಾದದ್ದು
ಹರಿ ನಡಿಸಿದಾಡಾನು ನಡಿವೆ ನಾನಾ ಕಡಿಗೆ
ಹರಿ ನಿಂತಡಾಯಿತೆ ನಿಲ್ಲುವೆನಯ್ಯಾ ನಾನು
ಹರಿಯು ಮನಸು ಮಾಡೆ ಮನಸು ಮಾಡುವೆ ನಾನು
ಹರಿಯು ದ್ವೇಷವು ಮಾಡೆ ಆನು ದ್ವೇಷವು ಮಾಳ್ಪೆ
ಹರಿ ಮೋಹಿತನಾಗೆ ಆನು ಮೋಹಿಪೆನಯ್ಯಾ
ಹರಿ ಜಾಗ್ರತನಾಗೆ ಆನು ಜಾಗ್ರತನಾಹೆ
ಹರಿ ಮರದಡಾಯಿತೆ ಮರವುವೆನಯ್ಯಾ ನಾನು
ಹರಿ ನೆನಿಸಲ್ಯೆನಗೆ ನೆನಪು ಆಗುವದು
ಹರಿ ಕಾಮನ ಮಾಡೆ ಆನು ಕಾಮನ ಮಾಳ್ಪೆ
ಹರಿ ಇಚ್ಛಿಗೊಂದಕನ್ನ ಪ್ರತಿಕೂಲನಲ್ಲ ನಾನು
ಹರಿ ಪೂರ್ಣಶಕ್ತಿ ಗುಣಶರಧಿ ಕಾಣಯ್ಯಾ ನಿರುತ
ಹರಿ ನಿರ್ದೋಷ ಜ್ಞಾನಾನಂದ ಪರಿಪೂರ್ಣ ದೇವ
ಹರಿ ಪೂರ್ಣಕಾಮಾ ಆನು ಅತ್ಯಂತ ಅಲ್ಪ ನೀರಾ
ಹರಿಯು ಹೋದಾಗೆ ಯೆಲ್ಲ ತೃಣವು ಪೋಗುವದಯ್ಯಾ
ಹರಿಯೆ ಸ್ವಾತಂತ್ರ ಆನು ಅಸ್ವಾತಂತ್ರ
ಹರಿ ಸರ್ವವ್ಯಾಪ್ತ ಮೂರ್ತಿ ಗೋಪಾಲವಿಟ್ಠಲ
ಹರಿಯೆ ಭಕುತರ ಮನದ ಸಿರಿಯೇ ಹೇ ಎನ್ನ ಧೊರಿಯೆ ॥ 1 ॥ 

 ಮಟ್ಟತಾಳ 

ಕರ್ತು ನಾನೆಂದರೆ ಹರಿಯ ಹೊರತಾಗಿನ್ನು
ವ್ಯರ್ಥ ನೋಡುವ ಏನು ಮಾಡಿದ ಕರ್ಮವು
ಮೃತ್ಯು ತನಗೆ ತಾನು ತಂದುಕೊಂಡವನಾಹಾ 
ಆರ್ತಿ ಅವನಿಗೆ ನಾಶವಾಗದಿನ್ನು
ಕರ್ತು ನಾನಲ್ಲವೆನೆ ಸಾಧನಕೆ ಫಲವೇನು
ಪ್ರತ್ಯಕ್ಷಕೆ ಬಾಧೆ ಮಿಥ್ಯಾಜ್ಞಾನಿಯು ಆವ
ಕತೃತ್ವವೆಂಬೋದು ಜೀವನಿಷ್ಟವು ನೋಡು
ಶ್ರುತ್ಯರ್ಥಗಳಲ್ಲಿ ಸಿದ್ಧವಾಗಿದೆ ನೋಡು
ಮರ್ತು ಹರಿಯ ಮಹಿಮೆನರಿಯದೆ ಜೀವನು
ಸ್ಫೂರ್ತಿಯಿಲ್ಲದ ಅಪಕೀರ್ತಿವಂತನಾಹ
ಕರ್ತು ಕಾರ್ಯತಾ ವಿಷ್ಣು ಗೋಪಾಲವಿಟ್ಠಲನ್ನ 
ಅರ್ತವ ಧನ್ಯನೊ ಕರ್ತುನೆಂಬದರೊಳಗೆ ॥ 2 ॥ 

 ರೂಪಕತಾಳ 

ಪೃಥಿವಿ ಮೇಲೆ ಒಂದು ರಥವೇರಿ ಬರಲಾಗಿ
ರಥ ಬರುತಿದೆ ನೋಡು ಎಂಬರು ಜನರೆಲ್ಲ
ರಥ ರಥಿಕರಿಬ್ಬರಿಗಾವಾಧಾರವು ಎಂಬ
ಮತಿ ಮನದಲ್ಲಿ ಉಳ್ಳರಾಗಿದ್ದರು ಸರಿಯೆ
ಪೃಥಿವಿಯೆ ರಥ ಹತ್ತು ಬಾಹದನರ್ಯಾತಕ್ಕೆ
ಪ್ರತಿತ ತೋರಿದರ್ಥ ಯತಾರ್ಥವೆನಬೇಡಿ
ಮತಿ ಎರಡು ಪ್ರಕಾರ ಕರ್ತೃತ್ವದೊಳಗಾಗಿ
ಸ್ಥಿತಿ ಅರಿತು ನೋಳ್ಪರು ಜ್ಞಾನಿಗಳು
ಖತಿಗೊಳದಿರಿ ಇನ್ನು ಕರ್ತೃತ್ವವೆಂಬದು
ಜಿತವಾಗಿ ಜೀವ ಜಡಗಳಿಗನಾದಿ ಸಿದ್ಧ
ಮತಿ ಉಳ್ಳ ಕರ್ತೃತ್ವ ಚೇತನ ನಿಷ್ಟವು ಇನ್ನು
ಮತಿರಹಿತ ಕರ್ತೃತ್ವ ಜಡದ ಸ್ಥಿತಿ
ಸತತ ಜಡ ಚೇತನಕೆ ಕರ್ತನೆನಿಸಿ ಹರಿಯು
ಗತಿ ಅರಿತು ಅವರವರ ಪಥದಲಿಡುವ
ಪತಿತಪಾವನ ರಂಗ ಗೋಪಾಲವಿಟ್ಠಲ 
ಚತುರ ಕ್ರೀಡೆಯು ಮಾಳ್ಪ ಸರ್ವರೊಳಗೆ ನಿಂತು ॥ 3 ॥ 

 ಝಂಪೆತಾಳ 

ಆತ್ಮ ಪರಮಾತ್ಮನ ವಿವೇಕ ಜ್ಞಾನವು
ಸೋತ್ತಮರ ಕರುಣದಿಂದಾಗಬೇಕು
ಸೋತ್ತಮರ ಪ್ರಾಸಾದವೆಂಬುವದು ಗತಿಗಿನ್ನು
ಮತ್ತೆ ತ್ರಿರಾವರ್ತಿ ಆಗಬೇಕು
ಉತ್ತಮ ಮಧ್ಯಮ ಅಧಮವಾಗಿ ಪ್ರಸಾದದಿಂ
ಉತ್ತಮವಾದ ಗತಿ ಪೊಂದಿಸುವದು
ಆತ್ಮ ತನ್ನ ಸ್ವರೂಪ ಜ್ಞಾನ ನೀವನೊ
ಮತ್ತದೆ ಅಧಮ ಪ್ರಾಸಾದವೆನ್ನು
ಸತ್ವ ಕರ್ಮಗಳಲ್ಲಿ ಪ್ರವರ್ತನ ಮಾಳ್ಪಾ
ಮತ್ತೆ "ಏನಂ ಮೋಚಯಾಮಿ" ಎಂದು
ನಿತ್ಯ ಅನಿತ್ಯ ಜ್ಞಾನ ಆವಾಗ ಪುಟ್ಟುವದು
ಮತ್ತೆ ಅವನೀಗೆ ಯಾತನೆ ಸಲ್ಲ
ಸೋತ್ತಮ ಗುರು ಉಪದೇಶವೆಂಬವದು ಅವನಿಗೆ
ಮತ್ತೆ ಅಶರೀರ ವಾಕ್ಯದಿ ಆಹುದು
ಪ್ರತ್ಯಕ್ಷ ಪೇಳರು ಅವನಿಗೆ ಇದು ನೋಡು
ವಾಚಾ ಪ್ರಸಾದವೆಂದು ಕರೆಸೋದು
ಸತ್ಯಸಂಕಲ್ಪ ಗೋಪಾಲವಿಟ್ಠಲ ತನ್ನ
ಭಕತರ ಬಲ ಮಾಡದವರಿಗೊಲಿಯಾ ॥ 4 ॥ 

 ತ್ರಿವಿಡಿತಾಳ 

ಒಂದು ಕರ್ಮವು ಮಾಡೆ ಅವರಿಗೆ ಅದರಲ್ಲಿ
ಇಂದಿರೆ ಅಜಭವ ಪರಿವಾರ ಸಹವಾಗಿ
ನಿಂದು ತನಗೆ ಕರ್ಮ ಮಾಡಿಸಿದರೆಂಬ
ಚಂದದ ಸ್ಮೃತಿಯಿನ್ನು  ಬಂದು ವೊದಗಿದರೆ
ಸಂದೇಹಸ್ಥನಾಗಾ ಸಂಸಾರಕೆ ದೂರಾ
ಬಂಧ ಮೋಚಕ ಅದೆ ಮಧ್ಯಮ ಪ್ರಸಾದ
ಸಂದರ್ಶನ ಪೂರ್ವ ಸ್ವಚ್ಛಾದಕಿಂತಲಿ
ಹಿಂದಾಗುವವು ಸಂಚಿತಾಗಾಮಿ ಕರ್ಮವು
ಮಂದಮತಿಯು ನಾಶ ಮೊದಲಿಕಿಂತ
ಹಿಂದಾಗ ಈ ಮೇಲೆ ಹರಿಯ ದರುಶನದಲ್ಲ್ಯಾ -
ನಂದಾಭರಿತನಾಗಿ ಸಂಚರಿಸುವಾ
ಮುಂದೆ ಮಂದಮತಿಯ ಸಮಾಧಿ ಸಾಧನ
ಪೊಂದಿ ಕೂಡ್ರುವನಾಹ ಜಡನಂದದಿ
ನಿಂದಿರದ ಬಾಹಿರ ಸ್ಮೃತಿ ಭೇರಿ ತಾಡಣವಾಗೆ
ಒಂದೇ ಅವನ ವ್ಯಾಪಾರ ವೃತ್ತಿನಾಶಾ
ಸಂದೇಹವಿಲ್ಲದಕೆ ಸದ್ಗುರು ಪ್ರಸಾದ
ಛಂದವಗಾಯಿತೆಂದು ಅರಿವದು
ವೃಂದಾರ ಕೇಂದ್ರ ಶ್ರೀಗೋಪಾಲವಿಟ್ಠಲ 
ಒಂದು ಮಾತ್ರವು ಇಟ್ಟು ಸಕಲ ಸುಖ ಕೊಡುವ ॥ 5 ॥ 

 ಅಟ್ಟತಾಳ 

ಉತ್ತಮ ಪ್ರಸಾದ ಮತ್ತೆ ಲಕ್ಷಣ ಕೇಳು
ಪ್ರತ್ಯಕ್ಷವು ನೋಡು ಆವಾವ ವಿಷಯದಿ
ತತ್ವ ಸಂದೇಹವಿಲ್ಲ ಪ್ರಾರಬ್ಧ ಕರ್ಮವು
ಅತ್ಯಲ್ಪವಾಗಿನ್ನು ಕಡಿಗೆ ಆಗುವದು
ಹತ್ತಿದ ಲಿಂಗವು ಅಕಾರ್ಯ ಕಾರ್ಯವು
ಎತ್ತ ನೋಡಿದರು ಹರಿಯ ರೂಪಗಳೆ ಕಾಂಬ
ಚಿತ್ತ ವ್ಯಾಕುಲನಾಗ ಅಖಂಡ ಧ್ಯಾನದಿ
ಸತ್ಯಲೋಕದಿ ವಾಸವಾಗಿ ಅನಂತರ
ಮುಕ್ತನಾಗುವ ತಾನು ಹಿಂದೆ ನಾನಾ ಜನ್ಮ
ಸುತ್ತಿ ಬಂದದನೆಲ್ಲ ನೆನೆದು ತನ್ನ ಮನೋ -
ವೃತ್ತಿ ನಾನಾ ಪರಿ ವ್ಯಭಿಚರಿಸಿದದೆಲ್ಲ
ಉತ್ತಮರ ಕೂಡ ಸುಖ ಪೇಳಿಕೊಳ್ಳುತ
ಉತ್ಕಟವಾಗಿ ತಮಗಿಂದವರರಿಗೆ
ಮತ್ತೆ ತಮ್ಮೊಡನೆ ಭಕ್ತಿಯು ವೆಗ್ಗಳವ ಮಾ -
ಡುತ್ತ ಆನಂದ ಭರಿತವಾಗುವನಾವ
ಸತ್ಯಸಂಕಲ್ಪ ಗೋಪಾಲವಿಟ್ಠಲನ್ನ 
ಭಕ್ತರಲ್ಲಿ ಭಕ್ತಿ ಮುಕ್ತಿ ಸಾಧನವೇ ॥ 6 ॥ 

 ಆದಿತಾಳ 

ಹರಿಪರನೆನ್ನು ಹರಿವಾರ್ತಿಯು ಕೇಳು ಹರಿ ಮಾತುಗಳಾಡು
ಹರಿ ಮೂರ್ತಿಯ ನೋಡು ಹರಿಪೂಜೆಯ ಮಾಡು
ಹರಿಗಡ್ಡವ ಬೀಳು ಹರಿಪರನಾಗು
ಹರಿಭಕ್ತರ ಕೂಡು ಹರಿಯನ್ನೇ ಬೇಡು
ಹರಿಯ ಹೊರತಿನ್ನು ಹರಿಗೆ ಬೀಳದಿರು
ಹರಿಯ ಮಾಯದಿನ್ನು ಹರಿ ಗುಣವ ತಿಳಿ ಹರಿಯ ಭಕುತರಿಂದ 
ಹರಿಯ ಮರೆದರಘಳಿಗೆ ಇರಸಲ್ಲ
ಹರಿಗರ್ಪಣ ಮಾಡು ಹರಿ ಮಾಡಿಸಿದ್ದೆಲ್ಲ
ಹರಿಯನ್ನು ತಿಳಿ ಗುರುಗಳಲಿನ್ನು
ಹರಿ ಧೇನಿಸಿ ಗುರುವಿನ ಗುರುತು ಮಾಡು
ಹರಿ ಸರ್ವ ಕರ್ತು ಗೋಪಾಲವಿಟ್ಠಲನ್ನ 
ಸ್ಮರಣೆಯು ಕ್ಲೇಶಹರ ಸುಖಕರ ॥ 7 ॥ 

 ಜತೆ 

ನೋಡಿ ಮಾಡು ಕರ್ಮ ಫಲದಿ ವಿರಕ್ತರಾಗಿ
ಬೇಡು ಗೋಪಾಲವಿಟ್ಠಲ ನಂಘ್ರಿಗಳ ಸೇವಾ ॥for lyrics please click
*******

ಹರಿ ಮಾಡಿದಂತೆ ಎಲ್ಲ ಮಾಡುವೆನಯ್ಯಾ ನಾನು...
ಶ್ರೀಹರಿ ಕರ್ತೃತ್ವ ಸುಳಾದಿ ,

ಶ್ರೀ ಗೋಪಾಲದಾಸರ ರಚನೆ , ರಾಗ ಮಧ್ಯಮಾವತಿ
 click below for sahitya

********