ಶ್ರೀವಿಜಯದಾಸಾರ್ಯ ವಿರಚಿತ
ಸಾಧನ ಸುಳಾದಿ
(ಕ್ರೋಧ (ಸಿಟ್ಟು) ಪರಿಹಾರ, ಉತ್ತಮರಲ್ಲಿ ಸರ್ವಥಾ ಕ್ರೋಧ ಮಾಡಕೂಡದು ಇತ್ಯಾದಿ)
ರಾಗ ಸಾರಂಗ
ಧ್ರುವತಾಳ
ವೇದ ಚತುರಶಾಸ್ತ್ರ ಪುರಾಣ ಸ್ಮೃತಿ ರಹಸ್ಯ
ಓದಿಕೊಂಡು ವಾದ ಮಾಡಿ ಜೈಸಿದರೇನು
ಓದನಾದಿ ಮುಂತಾದ ದಾನ ಧರ್ಮಂಗಳು ಅ -
ಗಾಧವಾಗಿ ನಿತ್ಯ ಮಾಡಿದರೇನೋ ಏನೊ
ಈ ಧಾರುಣಿಯೊಳಗಿದ್ದ ತೀರ್ಥ ತಿರುಗಿ
ಸಾಧು ಎನಿಸಿಕೊಂಡು ಖ್ಯಾತನಾದರೇನು
ಸಾಧಿಸಿ ನಾನಾ ವ್ರತ ದೇಹದಂಡಿಸಿ ವಿ -
ರೋಧವಾಗದ ಕರ್ಮ ಮಾಡಲೇನು ಏನೇನೊ
ಆದಿ ಮೊದಲು ವಿಡಿದು ಒಂದೊಂದು ಬಿಡದೆ ಮಹಾ
ಸಾಧನ ಮಾಡಿ ಕೇವಲ ಸಿದ್ಧನಾದರೇನು
ಹಾದಿಯಾಗದು ಕಾಣೋ ವೈಕುಂಠಕ್ಕೆ
ಕ್ರೋಧವನ್ನು ತೊರಿಯದೆ ಆಚರಣಿ ಮಾಡಿದರು
ಮಾದಿಗ ತೀರ್ಥವನ್ನು ಮಾಡಿದಂತೆ
ಈ ದೇಹಿ ದೇಹಕ್ಕೆ ಅನಾದಿ ಕಾಲದಿಂದ
ಭೇದವನ್ನು ತಿಳಿದು ಮಮತೆ ತೊರೆದು
ಮೋದ ಚೇತನದಿಂದ ಚರಿಸುವನೆ ಧನ್ಯ
ಪ್ರಾಧಾನ್ಯ ಗ್ರಹಿಸಬೇಕು ಜಡಜೀವ ಸಂಯೋಗ
ಬೋಧ ಸಹನಶಕ್ತಿ ಅನುಭವವ
ಬಾಧೆ ಬಡಿಸಿದರು ತಾಳುವದಂತಿರಲಿ
ಬೈದರೆ ಸುಮ್ಮನಿಪ್ಪ ಬಗೆ ಕೇಳೆಲೋ
ಈ ದೇಹದಿಂದ ಬಿದ್ದ ಛಾಯಕ್ಕೆ ಉಪದ್ರವ
ಆದರೆ ಗಾತ್ರಕ್ಕೆ ಕ್ಲೇಶವಹುದೆ
ಶೋಧಿಸಿ ಗುಣಿಸಿ ನೋಡು ಬಿಂಬ ಪ್ರತಿಬಿಂಬ ಭಾವ
ಭೇದಾಭೇದದಿಂದ ಒಪ್ಪುತಿದೆಕೋ
ಓದಿ ಮರುಳಾದರೇನು ಎಲೊ ಮನವೆ ಇನಿತು ಮಾತ್ರ -
ವಾದರು ಸೈರಿಸದಿರಲು ನಿನಗೆ
ವೈದಿಕ ಮಾರ್ಗವೆಂತು ದೊರಕುವದೋ
ಮಾಧವ ಮೆಚ್ಚನು ಮನೋರಥ ಸಿದ್ಧಿಸದು
ಕ್ರೋಧ ತೊರೆದು ಹರುಷವಾಗುವ ತನಕ
ಮೇದಿನಿಯೊಳಗೊರ್ವ ನಾನಾರತ್ನಗಳಿಂದ
ವೇದಿ ರಚಿಸಿ ಗಂಗಾಮೃತ್ತಿಕೆ ಹರಹಿ
ಮಾಧುರ್ಯ ನಿಗಮ ಮಂತ್ರ ಘೋಷಣೆ
ವಾದ್ಯ ಭವ್ಯ ನಾದದಿಂದಲಿ ದೈತ್ಯ ಖರ್ಜುರವ
ಪದಾರ್ಥ ಕಾಲ ದಿವಸ ಮಾನ್ಯ ಇಲ್ಲದಂತೆ
ಸಾಧಿಸಿ ಹಾಕಿದರು ಫಲಪಲ್ಲೈಸೆ
ಭೂದೇವ ತತಿಗಳು ನಿತ್ಯ ಕೊಂಡಾಡಿ ಆ -
ರಾಧನೆ ಮಾಡುವರೆ ಬಿಡು ಕೋಪವ
ಬೀದಿ ಬೀದಿ ತಿರುಗಿ ತತ್ವ ಕಂಡಲ್ಲಿ ಅನು -
ವಾದ ಮಾಡಿದರೇನು ಬರಿದೆ ನಿನಗೆ
ಪಾದ ಮಸ್ತಕ ಪೂರ್ಣ ವಿಜಯವಿಟ್ಠಲ
ಮೈದೋರುವನೂ ನಾ ನುಡಿದದ್ದು ಬಿಡಲಾಗಿ ॥ 1 ॥
ಮಟ್ಟತಾಳ
ಎಲ್ಲ ರೋಗವನ್ನು ಕಳಕೊಂಡು ನಾಲಿಗೆ
ಮುಳ್ಳೂರಿ ಕೊಂಡ ತೆರದಂತಾಯಿತಲ್ಲೊ
ಹೊಲ್ಲೆ ಮನಸು ಕೇಳು ಹಿತವಾದ ಮಾತು
ಅಲ್ಲಿಗಲ್ಲಿಗೆ ಸರ್ವವು ತೊರೆದು ಈ ಕೋಪವನೆ
ಚೆಲ್ಲಿ ಬಿಡದಲಿಪ್ಪ ಭಾಗ್ಯವಾವದು ಕೇಳು
ಬಲ್ಲಿದತನವಲ್ಲ ಇದು ಬಂದಾಶ್ರಯಿಸೆ
ಎಲ್ಲ ತಿರುಗಿ ಬಂದು ಸೇರಿಕೊಳ್ಳುತಲಿಹವು
ಬಲ್ಲವರನ ಬಲ್ಲ ವಿಜಯವಿಟ್ಠಲರೇಯ
ಸೊಲ್ಲು ಲಾಲಿಸನೊ ಕೋಪವುಳ್ಳವ ತುತಿಸೆ ॥ 2 ॥
ತ್ರಿವಿಡಿತಾಳ
ಪಿತ್ರಕಾನನದೊಳಗೆ ಪ್ರಖ್ಯಾತವಾಗಿದ್ದ
ಉತ್ತಮ ಭೂರುಹ ಜನಿಸಲಾಗಲದಕೆ
ಪತ್ರ ಕುಸುಮ ಫಲ ನೋಡಲು ಒಂದೊಂದು
ಚಿತ್ರ ವಿಚಿತ್ರ ರಮ್ಯವಾಗಿದೆ
ತತ್ವಜ್ಞಾನಿ ಬಂದು ನೀಕ್ಷಿಸಿದ ಮೇಲೆ
ಸ್ತೋತ್ರವ ಮಾಡಿ ಫಲ ತೆಗೆದುಕೊಂಡು
ತುತ್ತುಮಾಡಿ ಸವಿದುಂಡು ಜಗದೊಳು
ಕೀರ್ತನೆ ಮಾಡುವನೆ ಎಲೇ ಮನಸೇ
ಹತ್ತಿಲಿ ಸೇರದಲೆ ಅಸೂಯನಾಗಿ, ದೂ -
ರತ್ತ ಪೋಗುವನೊ ಪ್ರೀತಿಯ ಬಡನೊ
ಇತ್ತ ಲಾಲಿಸು ಕೋಪ ಹಳಿ ನೂಕು ಸುಡು ನು -
ಗ್ಗೊತ್ತು ಕಾಲಲಿ ಮೆಟ್ಟು ಕುಟ್ಟು ಕಳಿಯೋ
ಕತ್ತರಿಸಿ ಕಡಿಗೆ ಹಾಕು ಹಿಟ್ಟು ಗಳಿಯೋ
ಮುತ್ತೊ ಕೆಡಹೊ ಕಟ್ಟೋ ಕೊರಿಯೊ ಕೊಲ್ಲೋ ಅರಿಯೋ
ಕಿತ್ತು ಮುರಿಯೋ ಹೊಡಿಯೊ ಹರದಿಕ್ಕು ಅದರ ಅ -
ನರ್ಥ ಮಾಡೆಲೊ ಗುದ್ದು ಎಳಿಯೊ ಶಳಿಯೊ
ಹೊತ್ತು ಬೀಸು ಹೊಯ್ಯೊ ಚಿವಿಟೊ ತಿವಿಯೊ
ಕಿತ್ತು ಬೇರು ಅಟ್ಟು ಹಾರಿಸು ಮುಣಗಿಸು
ಅರ್ತಿಯ ಕೊಡು ಶೋಷಿಸು ಹೂಳು ಬಳಲಿಸು
ಹತ್ತಿಲಿ ಇರದಂತೆ ಎಬ್ಬಟ್ಟಿ ಬಲು ಆ -
ವರ್ತಿ ಘೋರಿಸು ನಾನಾ ಉಪದ್ರವ
ಇತ್ತದಲ್ಲದೆ ಇದು ತೊಲಗುವದಲ್ಲವೋ
ಎತ್ತ ಪೋದರೆ ಏನು ನಿಶ್ಚಯ ಕಾಣೊ
ಚಿತ್ತವೆ ಇದು ಮಾತ್ರ ಜೈಸಿದರೆ ನಿನಗೆ
ಉತ್ತಮ ಲೋಕ ಇದ್ದಲ್ಲೇ ಉಂಟು
ಸುತ್ತದಿರು ಕಂಡಲ್ಲಿ ಕ್ರೋಧವಶವಾಗಲು
ಕತ್ತೆ ಮರಿಗೆ ಮುದ್ದು ಕೊಟ್ಟಂತೆವೋ
ಚಿತ್ತಜಪಿತ ನಮ್ಮ ವಿಜಯವಿಟ್ಠಲರೇಯನ
ಭೃತ್ಯಜನ ಮೆಚ್ಚದು ಪುಣ್ಯ ಹೆಚ್ಚದು ಸಿದ್ಧ ॥ 3 ॥
ಅಟ್ಟತಾಳ
ಅಲಂಕಾರ ವಸನ ಭೂಷಣ ಗಂಧ ಪರಿಮಳ
ಬಲು ಪುಷ್ಪ ಧರಿಸಿದ್ದ ಮುತ್ತೈದಿ ಪತಿವ್ರತೆ
ಮಲ ಮಲಿನವಾಗಿ ಇದ್ದರೆ ಅವಳನ್ನು
ಒಳಿತೆಂದು ಸ್ಪರಶ ಮಾಡಲಿ ಬಹುದೆ ಕೇಳು
ಕಾಲ ಕಾಲ ನಿರ್ನಯ ಇದರಂತೆ ತಿಳಿನೀನು
ಒಳಗೆ ಕೋಪವ ತಾಳಿ ಇದ್ದರಾದಡೆ ನಿ -
ರ್ಮಳ ಇಲ್ಲ ಎಂದಿಗೆ ಅವಳಂತೆ ಕಾಣೆಲವೊ
ಸುಲಭ ಜ್ಞಾನಕೆ ಪ್ರತಿಕೂಲ ಅಜ್ಞಾನಕ್ಕೆ
ನಿಲವರ ಅನುಕೂಲ ಪಾಪ ಮಾಡಿಸುವದು
ಕುಲಕೋಟಿಗೆ ಮುಂದೆ ಹಿತವಾಗದು ಮಂದ
ಘಳಿಗಿ ಒಂದೊಂದಕ್ಕೆ ಬಹುಜನ್ಮ ಮಾಡಿದ
ಸಲೆ ಪುಣ್ಯ ಕೆಡಿಸೋದು ಎಚ್ಚರ ಕೆಡದಿರೂ
ಛಲ ಹಿಡಿ ಕೋಪದ ಮೇಲೆ ನಿರಂತರ
ತುಳಿದು ತಲೆ ಎತ್ತದಂತೆ ಮಾಡಲಿಬೇಕು
ಇಳಿಯ ವಲ್ಲಭ ಹರಿ ವಿಜಯವಿಟ್ಠಲನ್ನ
ಪೊಳೆವು ಬೇಕಾದರೆ ಇದನೆ ನಿರಾಕರಿಸು ॥ 4 ॥
ಆದಿತಾಳ
ಕುಪಿತ ಮಾಡುವ ಬಗೆ ಕೇಳೆಲೊ ಎಲೊ ಮನಸೆ
ಕೃಪೆಯಿಂದ ಯೋಚೆಸು ಧರ್ಮಾದಿ ಮಾರ್ಗವನ್ನು
ತಪೋನಿಷ್ಠ ಜನ ಉತ್ತಮ ಮಾತೃ ಪಿತ್ರಾದಿ
ಕೃಪಣರ ಮೇಲೆ ಸದಾ ಸಲ್ಲದು ಸರ್ವದಾ
ಉಪಕಾರ ಮಾಡುತಿರು ಅವರಿಂದೇನಾದರು
ಉಪಹತಿ ಬಂದರು ಸೈರಿಸು ಸತ್ಕೀರ್ತಿ
ಅಪರಿಮಿತವಾದ ಸಾಧನ ಇದೇ ಎನ್ನು
ಗುಪುತ ಪ್ರಮೇಯವ ನುಡಿದೆ ಆ ತರುವಾಯ ವ -
ರ್ನಿಪೆ ಮಡದಿ ಮಕ್ಕಳು ಅನುಜ ಶಿಷ್ಯಾದಿಗಳಿಗೆ
ಸಫಲಗೋಸುಗ ನಿನಗೆ ಸಲ್ಲುವದು ಕಾಣೊ
ಅಪರಾಧವೆನಿಸದು ಹರಿ ಗುರುಗಳ ಸೇವಿಗೆ
ತೃಪುತವಾಗುವರು ದೇವಾದಿ ದೇವತೆಗಳು
ಕ್ಲಿಪುತ ಕೋಪವ ಕೇಳು ಇಹ ಪರದಲ್ಲಿ ಮಾಳ್ಪ
ಶಪುತ ತನವೆ ಉಂಟು ಅನಾದಿಯಿಂದ ಪಿಡಿದು
ವಿಪರೀತ ಜನರ ಮೇಲೆ ಸ್ವಾಭಾವಿಕ ನಮಗೆ
ದಿಪುತವಾಗಿಪ್ಪುದು ಆನಂದ ಅಭಿವ್ಯಕ್ತಿ
ಅಪಜಯವೆನ್ನದಿರು ಪೂರ್ಣ ಭಕ್ತಿ ಲಕ್ಷಣ
ಕಪಿಕುಲೋತ್ತಮನ ಮತದಲ್ಲಿ ಪೊಂದಿದವಗೆ
ಜಪ ತಪ ವ್ರತ ಧ್ಯಾನ ಧರ್ಮ ಸಮಸ್ತ ಕರ್ಮ
ಉಪಕ್ರಮ ಉಪಸಂಹರಣೆ ಇದೆ ಮತ್ತೆ ಮತ್ತೆ
ತಪನ ಪ್ರಕಾಶ ನಮ್ಮ ವಿಜಯವಿಟ್ಠಲರೇಯ
ಸ್ವಪನ ಜಾಗರದಲ್ಲಿ ಕುಣಿಕುಣಿದಾಡುವಾ ॥ 5 ॥
ಜತೆ
ಬಿಡು ಬಿಡು ಕೋಪವ ಸಾರಿದೆ ಸಾರಿದೆ
ಕೊಡುವ ವಿಜಯವಿಟ್ಠಲ ಜ್ಞಾನ ಭಕುತಿ ಗತಿ ॥
*****