Showing posts with label ವಾಮನ ವಟು vijaya vittala ankita suladi ವಾಮನ ಸುಳಾದಿ VAAMANA VATU VAMANA SULADI. Show all posts
Showing posts with label ವಾಮನ ವಟು vijaya vittala ankita suladi ವಾಮನ ಸುಳಾದಿ VAAMANA VATU VAMANA SULADI. Show all posts

Monday 9 December 2019

ವಾಮನ ವಟು vijaya vittala ankita suladi ವಾಮನ ಸುಳಾದಿ VAAMANA VATU VAMANA SULADI


Audio by Mrs. Nandini Sripad

ಶ್ರೀ ವಿಜಯದಾಸಾರ್ಯ ಕೃತ  ವಾಮನ ಸುಳಾದಿ 

 ರಾಗ ನಾಟ 

 ಧ್ರುವತಾಳ 

ವಾಮನ ವಟು ಇಂದ್ರಾನುಜ ಉಪೇಂದ್ರನೆ
ಭೂಮಿ ಸುರಾಗ್ರಣಿ ಬಾಲ ಬ್ರಹ್ಮಚಾರಿ
ಹೇಮ ಯಜ್ಞೋಪವೀತ ಹೇಮ ಮೇಖಳ ಪೊಳೆವ
ಹೇಮ ಕೌಪೀನಧರ ಕ್ಷೇತ್ರರಮಣಾ
ವ್ಯೋಮಗಂಗಾ ಜನಕ ಹಸ್ತ ಛತ್ರ ಕಮಂಡಲ
ಸೋಮ ಸನ್ನಿಭ ಪೂರ್ಣ ಗುಣಗಣ ನಿಲಯಾ
ಕಾಮಿತ ಫಲವೀವ ಕರುಣಾನಿಧಿ
ಸಾಮಗಾಯನ ಪ್ರೀತ ಸುಜನರ ಮನೋರಥ
ಸಮಸ್ತ ಲೋಕನಾಥ ಗರುಡ ವರೂಥ
ಭೀಮ ದೈತ್ಯಹರಣ ವಿಜಯವಿಠ್ಠಲ ನಿ -
ಸ್ಸೀಮ ಮಹಿಮ ಸುರ ಸ್ತೋಮವಿನುತಪಾದ ॥ 1 ॥

 ಮಟ್ಟತಾಳ 

ಬಲಿರಾಯನು ಬಹಳ ಬಲವಂತನಾಗಿ
ಬಲರಾತಿ ಮಿಕ್ಕ ಬಲಿಷ್ಠರಾದವರ
ಕಲಹದೊಳೋಡಿಸಿ ಛಲದಲ್ಲಿ ಅವರ
ಬಲು ಪದವಿಗಳನು ಶೆಳೆದು ತೆಗೆದುಕೊಂಡು
ಬಿಲ್ಲುಗಾರರಿಗೆ ವೆಗ್ಗಳನಾಗಿ ಚರಿಸಿ
ಇಳಿಯೊಳಗಾರಿಗೆ ಅಳುಕದಲಿರುತಿರಲು
ಜಲಜಮಗನ ಜನಕ ವಿಜಯವಿಠ್ಠಲ ತ -
ನ್ನೊಳಗೆ ನಿರಂತರ ನಿಲಿದೊಲಿದು ನೆನೆವಾ ॥ 2 ॥

 ರೂಪಕತಾಳ 

ಮನದೊಳು ಬಲಿರಾಯಾ ಮನಸಿಜನಯ್ಯನ
ನೆನೆಸುತ್ತ ಸಕಲ ಲೋಕವನೆ ಗೆದ್ದು
ಎನಗಾರು ಸರಿಯೆಂದು ಬಲು ಗರ್ವದಲಿ ಇರೆ
ಅನಿಮಿಷಪತಿ ಪಲಾಯನವಾಗಿ ಪೋಗಲು
ದನುಜ ಬಲ್ಲಿದನೆಂದು ದಕ್ಷನ ತನುಜೆ
ಮನೋವ್ಯಥೆಯಿಂದ ಕ್ಲೇಶ ಬಡುತ್ತ
ಶಣಿಸಿ ದೈತ್ಯನ ಕೂಡ ಗೆಲುವ ಮಗನ ಪಡಿವೆಂ -
ದೆನುತ ರೋಷದಲಿ ಪತಿ ಆಜ್ಞಾದಲ್ಲಿ
ವನಜನಾಭನ ಧ್ಯಾನವೇ ಮಾಡಿದಳು ತನ್ನ
ಮನದ ಬಯಕೆಯನು ಸಲ್ಲಿಸು ಎನುತಲಿ
ಫಣಿಶಾಯಿ ವಿಜಯವಿಠಲ ವಾಮನ ದೇವ
ಮುನಿಕಶ್ಯಪ ಅದಿತಿದೇವಿಗೆ ಒಲಿದಾ ॥ 3 ॥

 ಝಂಪೆತಾಳ 

ಶಕ್ರನ ಸೌಭಾಗ್ಯ ಇಂದ್ರಸೇನನು ಬಿಡದೆ
ಆಕ್ರಮಿಸಿ ತ್ರಿಲೋಕ ಮಧ್ಯದಲಿ ಬಲು ಪ -
ರಾಕ್ರಮನಾಗಿ ತಾನಲ್ಲದಲೆ ಮತ್ತೋರ್ವ
ಚಕ್ರವರ್ತಿಯೇ ಇಲ್ಲವೆಂದು ಹಿಗ್ಗೀ
ಶುಕ್ರನ್ನ ಶಿಷ್ಯನಿರೆ ಯಾಗದಲ್ಲಿ ಉ -
ರುಕ್ರಮನೇ ಉಪೇಂದ್ರನಾಗಿ ಬಂದು
ತಾ ಕ್ರೀಡೆಯಾಡಿದಂತೆ ಬಾಲಕನಾಗಿ
ಆಕ್ರಮ ಮಾಡಿ ಬಲಿಯ ಮೆಚ್ಚಿಸೀ
ಸಕ್ರಿಯ ಸಕಲೇಶ ವಿಜಯವಿಠ್ಠಲನು ತ್ರಿ - 
ವಿಕ್ರಮಾವತಾರ ಧರಿಸಿದನು ಸುರರೊಲಿಯೇ ॥ 4 ॥

 ತ್ರಿವಿಡಿತಾಳ 

ದಾನವನಲ್ಲಿಗೆ ಮುದ್ದು ಮೋಹನ ಪೋಗಿ
ದಾನವ ಬೇಡಿದ ಮೂರು ಪಾದಾ
ಕ್ಷೋಣಿಯ ಕೊಡು ಎಂದು ಕಪಟ ವೇಷದಲ್ಲಿ
ಏನೆಂಬೆ ವಟುವಿನ ಮಹಾಮಹಿಮೆ
ಮಾನವನಂತೆ ಲೀಲೆ ತೋರಿ ಕರ ವಡ್ಡಿ - 
ದಾನೊ ಪಿತಾಮಹನಯ್ಯಾ ನಮ್ಮಯ್ಯ
ಕಾಣುವರಾರು ಈತನ ಮಹತ್ತಣು ರೂಪಾ
ಏಣಿಸಲಳವೇ ಲಕುಮಿಗಾದರೂ
ಬಾಣಸುರನ ಜನಕ ಮಾತು ಕೇಳುತ ವಿಪ್ರ
ಏನು ಬೇಡಿದನೆಂದು ನಸುನಗುತ
ತಾ ನೀರಿನಲಿ ತನ್ನ ಸತಿಯ ಸಹಿತನಾಗಿ
ಕ್ಷೋಣಿಯ ತ್ರಿಪದಾ ಧಾರಿಯೆರಿಯೇ
ಧೇನು ಭಕ್ತರಿಗೆಲ್ಲ ವಿಜಯವಿಠ್ಠಲ ತಾನೆ
ಆನಂದದಲಿ ಕೈಕೊಂಡಾ ಭಕ್ತಿಗೆ ಮೆಚ್ಚಿ ॥ 5 ॥

 ಅಟ್ಟತಾಳ 

ಒಂದು ಚರಣ ಬೊಮ್ಮಾಂಡ ಖರ್ಪರದಲ್ಲಿ
ಒಂದು ಚರಣ ಪಾತಾಳ ಲೋಕದಲ್ಲಿ
ಸಂದೇಹವಿಲ್ಲದೆ ವ್ಯಾಪಿಸಿದವು ಮ -
ತ್ತೊಂದು ಪಾದಕೆ ಭೂಮಿ ಸಾಲದಾಯಿತೆಂದು
ಇಂದ್ರಸೇನಗೆ ವಾಮನದೇವ ನುಡಿಯಿಂದ
ಬಂಧಿಸಿ ಸಮಯಬದ್ಧ ಮಾಡಲು ಬಲಿ
ಇಂದಿರಾಪತಿ ಈತನೆಂದು ತಿಳಿದು ವೇಗ
ವಂದಿಸಿ ತನ್ನಯ ಶಿರವನು ನೀಡಲು
ಅಂದು ಗೋವಿಂದನು ಅರಸನ ತಲೆಮೆಟ್ಟಿ
ಒಂದು ಚರಣದಲ್ಲಿ ಪಾತಾಳಕಟ್ಟಿದ
ಮುಂದೆ ನಖದಿಂದ ಬೊಮ್ಮಾಂಡ ಭೇದಿಸಿ
ಮಂದಾಕಿನಿ ಪೆತ್ತಾ ನಿರುತ ನಿರ್ಭೀತಾ
ಇಂದ್ರವಂದಿತ ಸಿರಿ ವಿಜಯವಿಠ್ಠಲ ಕೃಪಾ -
ಸಿಂಧು ಸಿಂಧುರ ಪಾಲಾ ಸಿಂಧುತನುಜೆ ಪತಿ ॥ 6 ॥

 ಆದಿತಾಳ 

ಕಾಯವನಿತ್ತವಗೆ ನಾರಾಯಣನು ಒಲಿದು ಕಲ್ಪ
ಆಯುವನಿತ್ತು ಸರ್ವದ ಐಶ್ವರ್ಯದಲ್ಲಿ ಇಟ್ಟು
ಕಾಯಿದಾ ತಾನವನ ಮನಿಯ
ಸ್ಥಾಯವಾಗಿ ಬಾಗಿಲೊಳು ಈಯಬಲ್ಲ ದೇವ ತನ್ನ
ಮಾಯಾದಿಂದ ಜನರ ಮೋಹಿಸಿ ಶ್ರೀಯರಸ
 ವಿಜಯವಿಠ್ಠಲ ನಾಯಕ ಶಿರೋಮಣಿ
ಶ್ರೇಯಸ್ಸುನೀವ ತನ್ನ ಗಾಯನ ಮಾಡುವರಿಗೆ ॥ 7 ॥

 ಜತೆ 

ಇಂದ್ರಂಗೆ ಸುರ ಪದವಿ ಕೊಡಿಸಿ ಬಲಿಗೆ ಒಲಿದಾ
ಕಂದರ್ಪಪಿತ ನಮ್ಮ ವಿಜಯವಿಠ್ಠಲ ವಟು ॥
*********